CONNECT WITH US  

ಪಾಕಿಸ್ಥಾನದಲ್ಲಿ ಇಮ್ರಾನ್‌ ಖಾನ್‌ ಗೆಲುವು: ಆರ್ಥಿಕ ಸುಧಾರಣೆಯಾಗಲಿ

ಪಾಕಿಸ್ಥಾನದ ಇತಿಹಾಸದಲ್ಲಿ ಮತ್ತೂಂದು ಮಗ್ಗಲು ಹೊರಳಿದಂತಿದೆ. ಪದೇ ಪದೇ ರಾಜಕೀಯ ಸ್ಥಿತ್ಯಂತರ, ಸೇನೆ ಹಾಗೂ ರಾಜಕಾರಣಿಗಳ ಮೇಲಾಟದಿಂದ ಆರ್ಥಿಕ, ಸಾಮಾಜಿಕವಾಗಿ ಕುಸಿತ ಕಂಡಿರುವ ಪಾಕಿಸ್ಥಾನದಲ್ಲಿ, ಬುಧವಾರ ನಡೆದ ಮತದಾನದಲ್ಲಿ ಜನರು ಆಡಳಿತಾರೂಢ ಪಿಎಂಎಲ್‌ಎನ್‌ ತಿರಸ್ಕರಿಸಿ, ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ್‌ ತೆಹ್ರೀಕ್‌ ಎ ಇನ್ಸಾಫ್ (ಪಿಟಿಐ) ಗೆಲ್ಲಿಸಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ರಕ್ತಸಿಕ್ತ ರಾಜಕೀಯಕ್ಕೆ ಸಾಕ್ಷಿಯಾಗಿದ್ದ ಪಾಕಿಸ್ಥಾನದಲ್ಲಿ, ಈವರೆಗೆ ಅಧಿಕಾರಕ್ಕೆ ಬಂದ ಕೆಲವೇ ಪ್ರಜಾಪ್ರಭುತ್ವ ಸರಕಾರಗಳ ಪೈಕಿ ಇದೂ ಒಂದಾಗಲಿದೆ. 1992ರಲ್ಲಿ ವಿಶ್ವಕಪ್‌ ಗೆದ್ದಿದ್ದ ಇಮ್ರಾನ್‌ ಖಾನ್‌ಗೆ ಈ ಚುನಾವಣೆಯ ಗೆಲುವ ಅತ್ಯಂತ ಮಹತ್ವದ್ದು ಹಾಗೂ ಸವಾಲಿನದೂ ಹೌದು. ಚುನಾವಣೆಯನ್ನು ಸೇನೆಯ ಪರೋಕ್ಷ ನೆರವಿನಿಂದ ಗೆದ್ದು ಬಂದ ಇಮ್ರಾನ್‌ಗೆ, ಆಡಳಿತದಲ್ಲಿ ಸೇನೆಯ ಹಸ್ತಕ್ಷೇಪವನ್ನು ಬದಿಗೊತ್ತುವುದು ಸುಲಭದ ಮಾತಲ್ಲ. ಪನಾಮಾ ಹಗರಣದಲ್ಲಿ ಅಪರಾಧ ಸಾಬೀತಾಗಿದ್ದರಿಂದ ಸ್ವದೇಶಕ್ಕೆ ಮರಳಿ ಬಂಧನಕ್ಕೊಳಪಟ್ಟು ಜೈಲಿಗೆ ತೆರಳಿದ ಮಾಜಿ ಪ್ರಧಾನಿ ನವಾಜ್‌ ಷರೀಫ್ ತಂತ್ರ ಫ‌ಲಿಸಲಿಲ್ಲ. ಪಿಎಂಎಲ್‌ಎನ್‌ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವಂತಾಗಿದೆ.

ಇಮ್ರಾನ್‌ ಖಾನ್‌ ಭಾರತದ ಮಟ್ಟಿಗೆ ಇನ್ನೂ ಹೊಸ ವ್ಯಕ್ತಿ. ಕಳೆದ ಎರಡು ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ಥಾನದ ಸಂಬಂಧ ತಳಮಟ್ಟದಲ್ಲಿದ್ದು, ಭಾರತದ ಕಡೆಗಿರುವ ಇಮ್ರಾನ್‌ ನಿಲುವನ್ನು ಭಾರತ ಅತ್ಯಂತ ಸೂಕ್ಷ್ಮವಾಗಿ ಗಮನಿಸಲಿದೆ. ಚುನಾವಣೆ ಪ್ರಚಾರದಲ್ಲಿ ಭಾರತದ ವಿಷಯ ಹಲವು ಬಾರಿ ಭಾರತದ ವಿಚಾರ ಪ್ರಸ್ತಾಪವಾದರೂ, ಗಂಭೀರ ಚರ್ಚೆಗಾಗಲೀ, ವಿವಾದಕ್ಕಾಗಲೀ ಕಾರಣವಾಗಿರಲಿಲ್ಲ. ನವಾಜ್‌ ಷರೀಫ್ ಭಾರತದೆಡೆಗೆ ಮೃದು ಧೋರಣೆ ಹೊಂದಿರುವ ವ್ಯಕ್ತಿಯಾಗಿದ್ದರೂ, ಸೇನೆ ಮೂಗುದಾರ ಹಿಡಿದಿತ್ತು. ಆದರೆ ಭಾರತದೆಡೆಗಿನ ಇಮ್ರಾನ್‌ ನಡೆ ಇನ್ನೂ ನಿಗೂಢ.

ಇನ್ನು ಬಿಲಾವಲ್‌ ಭುಟ್ಟೋ ಜರ್ದಾರಿ ಪಾಕಿಸ್ಥಾನದ ರಾಜಕೀಯದಲ್ಲಿ ಮಹತ್ವದ ಪರ್ಯಾಯ ನಾಯಕರಾಗಿ ಹೊರಹೊಮ್ಮಬಲ್ಲವರಾಗಿದ್ದರೂ, ರಾಜಕಾರಣ ಬಗೆಗಿನ ಬದ್ಧತೆಯ ಕೊರತೆಯಿಂದಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಹಲವು ಬಾರಿ ರಾಜಕಾರಣದಿಂದಲೇ ಸದ್ದಿಲ್ಲದಂತೆ ನಾಪತ್ತೆಯಾಗುವುದು, ಹಠಾತ್ತನೆ ಹೇಳಿಕೆಗಳನ್ನು ನೀಡುವ ಮೂಲಕ ಮುನ್ನೆಲೆಗೆ ಬರುವಂತಹ ಅಸ್ಥಿರತೆಯಿಂದಾಗಿ ಜನರೂ ಬಿಲಾವಲ್‌ರನ್ನು ಗಂಭೀರವಾಗಿ ಸ್ವೀಕರಿಸಿದಂತಿಲ್ಲ. ಇನ್ನು ಉಗ್ರ ಹಫೀಜ್‌ ಸಯೀದ್‌ ಬೆಂಬಲಿಸಿದ ಪಕ್ಷವನ್ನು ಜನರು ಸಂಪೂರ್ಣವಾಗಿ ತಿರಸ್ಕರಿಸಿರುವುದು ಭಾರತದ ಮಟ್ಟಿಗೆ ಸಮಾಧಾನದ ಸಂಗತಿ.

ಚುನಾವಣೆಯಲ್ಲಿ ವ್ಯಾಪಕ ಅವ್ಯವಹಾರಗಳು, ಹಿಂಸಾಚಾರದ ವರದಿಗಳೂ ಕೇಳಿಬಂದಿದ್ದು ಪ್ರಜಾಪ್ರಭುತ್ವವಾದಿ ದೇಶಕ್ಕೆ ಗರಿಮೆಯ ಸಂಗತಿಯಲ್ಲ. ಸೇನೆಯ ಹಿಡಿತದಲ್ಲಿ ಚುನಾವಣೆ ನಡೆಯುತ್ತಿದೆ ಎಂಬ ಆರೋಪವಂತೂ ಚುನಾವಣಾ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಕೇಳಿಬಂದಿತ್ತು. ಮತದಾನದ ದಿನವೇ ಖೆÌಟ್ಟಾದಲ್ಲಿ ಬಾಂಬ್‌ ಸ್ಫೋಟ ಸಂಭವಿಸಿ 35 ಜನರು ಸಾವನ್ನಪ್ಪಿದ್ದಾರೆ.

ಇದೆಲ್ಲಕ್ಕಿಂತ ಮುಖ್ಯವಾಗಿ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡುವುದು ತುರ್ತು ಅಗತ್ಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದೇ ಪದೆ ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ಥಾನದೆಡೆಗೆ ಬೊಟ್ಟು ಮಾಡಲಾಗುತ್ತಿದೆ. ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ದು ಗತ ವೈಭವವನ್ನು ಮರಳಿಸುವ ಪ್ರಯತ್ನವಂತೂ ಆಗಲೇಬೇಕಾದ ಸನ್ನಿವೇಶವಿದೆ. ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಪಾಕಿಸ್ಥಾನದಲ್ಲಿ ಅಧಿಕಾರಕ್ಕೇರುವ ಮುಖಂಡರ ಮತ್ತೂಂದು ಆದ್ಯತೆಯಾಗಿರಬೇಕಿದೆ. ದೇಶ ಪದೇ ಪದೆ ರಾಜಕೀಯ ಸ್ಥಿತ್ಯಂತರಗಳಿಗೆ ತುತ್ತಾಗಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನವೇ ಇಲ್ಲದಂತಾಗಿದೆ. ದೇಶದ ಪ್ರಮುಖ ಆರ್ಥಿಕ ಚಟುವಟಿಕೆ  ಹತ್ತಿ ವಹಿವಾಟಂತೂ ಕರೆನ್ಸಿಯ ಮೌಲ್ಯ ಕುಸಿತದಿಂದಾಗಿ ಭಾರಿ ನಷ್ಟ ಕಂಡಿದೆ. ಹೇರಳ ಅವಕಾಶವಿದ್ದರೂ ಪ್ರವಾಸೋದ್ಯಮವಂತೂ ಹೇಳ ಹೆಸರಿಲ್ಲದಂತಾಗಿದೆ. ಇನ್ನೊಂದೆಡೆ ಇಡೀ ದೇಶ ಕ್ಷಾಮ, ಬಡತನದಿಂದ ಬಳಲುತ್ತಿದೆ. ವಿತ್ತೀಯ ಕೊರತೆ ಶೇ. 5.7ಕ್ಕೆ ಕುಸಿದಿದೆ. ಇದೇ ಕಾರಣಕ್ಕೆ ಫ‌ಲಿತಾಂಶ ನಿರೀಕ್ಷೆಯಂತೆ ಬರುತ್ತಿದ್ದಂತೆಯೇ ಪಾಕ್‌ ಷೇರು ಮಾರುಕಟ್ಟೆ ಸುಮಾರು 600 ಅಂಶಗಳಷ್ಟು ಏರಿಕೆ ಕಂಡಿತ್ತು. ಸೇನೆಯ ಹಿತಾಸಕ್ತಿಗಾಗಿ ರಕ್ಷಣಾ ವೆಚ್ಚಗಳಿಗೆ ವಿಪರೀತ ಆಸಕ್ತಿ ವಹಿಸುವ ಹಾಗೂ ಅತಿಯಾಗಿ ವೆಚ್ಚ ಮಾಡುವ ಪಾಕಿಸ್ಥಾನ, ದೇಶದ ಬಡವರ ಬಗ್ಗೆ ಕಾಳಜಿ ವಹಿಸಿದ್ದಲ್ಲಿ ನಮ್ಮ ನೆರೆಯ ದೇಶ ನಮಗೆ ಅಭಿವೃದ್ಧಿಯಲ್ಲಿ ಪೈಪೋಟಿ ನೀಡುವಂತಿರುತ್ತಿತ್ತು.

Trending videos

Back to Top