CONNECT WITH US  

ಪ್ರತ್ಯೇಕ ರಾಜ್ಯ ಬೇಡಿಕೆ: ತಾರತಮ್ಯ ನಿವಾರಣೆಯಾಗಲಿ 

ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಬೇಡಿಕೆ ಈಗ ಮರಳಿ ಜೀವ ಪಡೆದುಕೊಂಡಿದೆ. ಇದಕ್ಕೆ ಕಾರಣವಾಗಿರುವುದು ರಾಜ್ಯ ಸರಕಾರದ ನಡೆ ಎನ್ನುವುದು ಮಾತ್ರ ದುರದೃಷ್ಟಕರ ವಿಚಾರ. ಸಮ್ಮಿಶ್ರ ಸರಕಾರ ರಚನೆಯಾದ ಬಳಿಕ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬ ಬೇಗುದಿ ಆ ಭಾಗದ ನಾಯಕರಲ್ಲಿ ಮಾತ್ರವಲ್ಲ ಜನರಲ್ಲೂ ಇದೆ. ಸಂಪುಟ ರಚನೆ ಸಂದರ್ಭದಲ್ಲೂ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಯಿತು. ಕುಮಾರಸ್ವಾಮಿ ಮಂತ್ರಿಮಂಡಲದಲ್ಲಿ ಉತ್ತರ ಕರ್ನಾಟಕಕ್ಕೆ ದಕ್ಕಿದ್ದು ಬರೀ ಎಂಟು ಸ್ಥಾನಗಳು. ಈ ಭಾಗದಿಂದ ಕಾಂಗ್ರೆಸ್‌ 38 ಸ್ಥಾನಗಳನ್ನು ಗೆದ್ದಿರುವ ಹೊರತಾಗಿಯೂ ಸಂಪುಟದಲ್ಲಿ ಸಮರ್ಪಕವಾದ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವ ನೋವು ಸಹಜವಾದದ್ದೇ ಆಗಿತ್ತು. 

ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ನೋವನ್ನು ಜನರು ಕ್ರಮೇಣ ಮರೆಯುತ್ತಿದ್ದರೋ ಏನೋ. ಆದರೆ ಅನಂತರ ಮಂಡಿಸಿದ ಬಜೆಟ್‌ನಲ್ಲಿ ಮತ್ತೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಲಾಯಿತು. ನಿಜವಾಗಿ ನೋಡಿದರೆ ಬಜೆಟ್‌ ಬಳಿಕವೇ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯದ ಕೂಗು ತೀವ್ರಗೊಂಡದ್ದು. ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಮಾತ್ರವಲ್ಲ ಕರಾವಳಿಯೂ ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಿಗೆ ಅನ್ಯಾಯ ವಾಗಿದೆ ಎಂಬ ಭಾವನೆಯಿದೆ. ಬಜೆಟ್‌ನ ಎಲ್ಲ ಕೊಡುಗೆಗಳು ಜೆಡಿಎಸ್‌ ಪ್ರಬಲವಾಗಿರುವ ಜಿಲ್ಲೆಗಳಿಗೆ ಅಂದರೆ ದಕ್ಷಿಣ ಕರ್ನಾಟಕದ ಭಾಗಗಳಿಗೆ ಸೀಮಿತವಾಗಿದ್ದವು. ಎಲ್ಲಿ ತನ್ನ ಪಕ್ಷ ಗೆದ್ದಿದೆಯೋ ಅಲ್ಲಿಗಷ್ಟೇ ಯೋಜನೆ ಗಳನ್ನು ಘೋಷಿಸುವ ಮೂಲಕ ರಾಜಧರ್ಮಕ್ಕೆ ವಿರುದ್ಧವಾಗಿ ನಡೆದ ಆಪಾದನೆಯನ್ನು ಕುಮಾರಸ್ವಾಮಿ ಹೊತ್ತುಕೊಳ್ಳಬೇಕಾಯಿತು. ಮತ ಹಾಕುವಾಗ ನಿಮಗೆ ಜಾತಿ ಮತ್ತು ಧರ್ಮ ಮುಖ್ಯವಾಗುತ್ತದೆ , ಈಗ ಕೆಲಸ ಮಾಡಲು ನಾನು ಬೇಕೆ ಎಂಬ ಕುಮಾರಸ್ವಾಮಿಯವರ ಹೇಳಿಕೆ ಉತ್ತರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಉದ್ದೇಶಪೂರ್ವಕ ಎಂಬುದನ್ನು ಧ್ವನಿ ಸುವಂತಿದೆ. ಹೀಗಾಗಿ ಉತ್ತರ ಕರ್ನಾಟಕದವರ ಪ್ರತ್ಯೇಕ ರಾಜ್ಯದ ಬೇಡಿಕೆ ತಣ್ಣಗಾಗುವ ಬದಲು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಗೋಚರಿಸುತ್ತಿದೆ. 

ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕ ಹಿಂದುಳಿದಿರುವುದು ನಿಜ. ಆರು ಮುಖ್ಯಮಂತ್ರಿಗಳನ್ನು ನೀಡಿದ್ದರೂ ಈ ಭಾಗದ ಹಲವಾರು ಸಮಸ್ಯೆಗಳು ಪರಿಹಾರ ಕಂಡಿಲ್ಲ. ದಕ್ಷಿಣ ಕರ್ನಾಟಕ ನೀರಾವರಿಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಉತ್ತರ ಕರ್ನಾಟಕದವರು ಈಗಲೂ ಮಳೆಯನ್ನೇ ಅವಲಂಬಿಸಬೇಕಾಗಿದೆ. ಮಹದಾಯಿ ವಿವಾದ ವನ್ನು ಬಗೆಹರಿಸುವ ಇಚ್ಚಾಶಕ್ತಿಯನ್ನು ಆಡಳಿತ ನಡೆಸುವವರು ತೋರಿಸಿಲ್ಲ.ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಉತ್ತರ ಕರ್ನಾಟಕ ಹಿಂದುಳಿದಿದೆ. ಪ್ರತಿ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳು ಮುನ್ನೆಲೆಗೆ ಬರುತ್ತವೆಯಾದರೂ ಚುನಾವಣೆ ಮುಗಿದ ಕೂಡಲೇ ರಾಜಕೀಯ ನಾಯಕರು ಅವುಗಳನ್ನು ಮರೆತು ಬಿಡುತ್ತಾರೆ. ಈ ಸಲವಂತೂ ಈ ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಹೀಗಾಗಿ ಅಭಿವೃದ್ಧಿಯಲ್ಲಿ ತಾರತಮ್ಯವಾಗುವುದು ನಿರೀಕ್ಷಿತ. ಇಂಥ ಬೇಧಭಾವವೇ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಕಾವು ಕೊಡುತ್ತದೆ.  ರಾಜಕೀಯ ಸ್ಥಿತ್ಯಂತರವೂ ಉತ್ತರ ಕರ್ನಾಟಕ ಅಭಿವೃದ್ಧಿ ಯಲ್ಲಿ ಹಿಂದುಳಿಯಲು ಕಾರಣವಾಗಿರಬಹುದು. ರಾಜ್ಯ ರಚನೆಯಾದ ಆರಂಭದ ದಶಕಗಳಲ್ಲಿ ಉತ್ತರ ಕರ್ನಾಟಕ ಕಾಂಗ್ರೆಸ್‌ನ ಭದ್ರ ಕೋಟೆ ಯಾಗಿತ್ತು. 1990ರಲ್ಲಿ ಜನತಾ ದಳದತ್ತ ವಾಲಿತ್ತು. ಈಗ ಇಲ್ಲಿನ ಮತದಾ ರರು ಬಿಜೆಪಿಯತ್ತ ಒಲವು ಬೆಳೆಸಿಕೊಂಡಿದ್ದಾರೆ. 

ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆ. 2ರಂದು 13 ಜಿಲ್ಲೆಗಳಲ್ಲಿ ನಡೆಯುವ ಬಂದ್‌ ಯಶಸ್ವಿಯಾಗುತ್ತದೋ ಇಲ್ಲವೋ ಎನ್ನುವುದು ಮುಖ್ಯವಲ್ಲ. ಆದರೆ ಆಡಳಿತ ನಡೆಸುವವರು ತಮಗನುಕೂಲವಾಗಿರುವ ಭಾಗಗಳನ್ನು ಮಾತ್ರ ಮುದ್ದಾಡುವ ಧೋರಣೆ ಮಾತ್ರ ಅಪಾಯಕಾರಿ ಎನ್ನುವುದು ಸದ್ಯದ ಬೆಳವಣಿಗೆಯಿಂದ ಸ್ಪಷ್ಟ ವಾಗುತ್ತದೆ. ಎಷ್ಟೇ ಸ್ಥಾನಗಳು ಬಂದಿರಲಿ, ಯಾರೇ ಮತ ಹಾಕಿರಲಿ, ಆಡಳಿತ ಚುಕ್ಕಾಣಿ ಹಿಡಿದ ಬಳಿಕ ತಾನು ರಾಜ್ಯದ ಮುಖ್ಯಮಂತ್ರಿ ಎಂದು ಆ ಸ್ಥಾನದಲ್ಲಿ ರುವವರು ತಿಳಿದುಕೊಳ್ಳಬೇಕು. ಜನರಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂಬ ಭಾವನೆ ಬಲಿತುಬಿಟ್ಟರೆ ಅದು ಪಡೆದುಕೊಳ್ಳುವ ತಿರುವುಗಳು ರಾಜ್ಯದ ಹಿತಾಸಕ್ತಿಯನ್ನೇ ಬಲಿತೆಗೆದುಕೊಳ್ಳಬಹುದು.


Trending videos

Back to Top