CONNECT WITH US  

ಮಹದಾಯಿ ಜಲೋತ್ಸವ: ಇನ್ನು ಕಾಮಗಾರಿ ಶುರುವಾಗಲಿ

ಸುಮಾರು ನಾಲ್ಕು ದಶಕಗಳಿಂದ ವಿವಾದದ ಸುಳಿಗೆ ಸಿಕ್ಕು ನಲುಗಿದ್ದ ಮಹದಾಯಿ ನದಿ ನೀರು ಹಂಚಿಕೆ ವಿವಾದ ಅಂತಿಮ ಘಟ್ಟ ತಲುಪಿದೆ. ಮಹದಾಯಿಯಿಂದ ಕರ್ನಾಟಕಕ್ಕೆ ಹನಿ ನೀರು ಕೊಡುವುದಿಲ್ಲ ಎಂಬ ಗೋವಾದ ಮೊಂಡು ವಾದದ ನಡುವೆಯೂ ನ್ಯಾಯಾಧಿಕರಣ ಕುಡಿಯುವ ನೀರಿಗೆ 4 ಟಿಎಂಸಿ ಅಡಿ ಸೇರಿದಂತೆ ಒಟ್ಟು 13.5ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. ಈ ನಿಟ್ಟುಸಿರಿನ ನಡುವೆಯೇ ನಮ್ಮ ಪಾಲಿನ ನಿರೀಕ್ಷಿತ ಪ್ರಮಾಣದ ನೀರು ಸಿಕ್ಕಿಲ್ಲ ಎಂಬ ಬೇಸರ, ನೋವು, ಹಕ್ಕೊತ್ತಾಯ ಮುಂದುವರೆದಿದೆ. ಮಹದಾಯಿ ನ್ಯಾಯಾಧಿಕರಣ 2010ರಲ್ಲಿ ರಚನೆಗೊಂಡಿದ್ದು 8 ವರ್ಷಗಳಲ್ಲಿ ನದಿ ನೀರು ಹಂಚಿಕೆ ತೀರ್ಪು ನೀಡಿದೆ. 

ತೀರ್ಪಿನಿಂದ ನಮ್ಮ ಪಾಲಿನ ನೀರು ದಕ್ಕಿದೆ ಎಂಬ ಸಂತಸದ ಜತೆಗೆ ಸಿಕ್ಕ ನೀರಿನ ಬಳಕೆಗೆ ಯುದೊœàಪಾದಿ ಕಾರ್ಯದ ಸವಾಲು ಎದುರಾಗಿದೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಜನಿಸುವ ಮಹದಾಯಿ 29 ಕಿಮೀ ರಾಜ್ಯದಲ್ಲಿ ಹರಿದು ಗೋವಾ ಸೇರುತ್ತದೆ. ಅಲ್ಲಿ 52 ಕಿಮೀ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಸರಾಸರಿ ಅಂದಾಜಿನಂತೆ 200 ಟಿಎಂಸಿ ಅಡಿಯಷ್ಟು ನೀರು ಸಮುದ್ರ ಪಾಲಾಗುತ್ತಿದೆ. ಮಹದಾಯಿಯನ್ನು ಮಲಪ್ರಭಾ ಜಲಾಶಯಕ್ಕೆ ಸೇರಿಸಬೇಕೆಂಬ ಒತ್ತಾಯ 1976ರಲ್ಲೇ ಮೊಳಗಿತ್ತು. ಗೋವಾ ಇದನ್ನು ವಿರೋಧಿಸುತ್ತ ತನ್ನ ರಾಜಕೀಯ ಪ್ರಭಾವದಿಂದ ಕೇಂದ್ರದ ಮೇಲೆ ಒತ್ತಡ ತಂದು ತಡೆಯೊಡ್ಡುತ್ತಲೇ ಬಂದಿತ್ತು. 2006ರಲ್ಲಿ ಕೇಂದ್ರ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸೌಹಾರ್ದ ಇತ್ಯರ್ಥಕ್ಕೆ ಯತ್ನ ಮಾಡಿತ್ತಾದರೂ ಗೋವಾ ಒಪ್ಪಿರಲಿಲ್ಲ. ಬದಲಾಗಿ ಮಹದಾಯಿ ನ್ಯಾಯಾಧಿಕರಣ ರಚಿಸುವಂತೆ ಸುಪ್ರೀಂ ಕೋರ್ಟ್‌ ಕದ ತಟ್ಟಿತ್ತು.    

ಮಹದಾಯಿ ನದಿ ನೀರು ವಿವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಮ್ಮದೇ ಹಳ್ಳಗಳಾದ ಕಳಸಾ-ಬಂಡೂರಿಯಿಂದ ಸುಮಾರು 7.56 ಟಿಎಂಸಿ ಅಡಿಯಷ್ಟು ನೀರು ಪಡೆಯುವ ಯೋಜನೆಯನ್ನು 2002ರಲ್ಲಿ ಆರಂಭಿಸಿತ್ತಾದರೂ ಗೋವಾ ಅದಕ್ಕೂ ಕಲ್ಲು ಹಾಕುವ ಕೆಲಸ ಮಾಡಿತ್ತು. ಮಹದಾಯಿ, ಕಳಸಾ-ಬಂಡೂರಿ ಯೋಜನೆಗಳ ನೀರು ಪಡೆಯಬೇಕೆಂಬ ಧ್ವನಿ 80ರ ದಶಕದಿಂದ ಇದ್ದರೂ 2000ದ ಇಸ್ವಿಯಿಂದ ಹೋರಾಟ ತನ್ನದೇ ಸ್ವರೂಪ ಪಡೆದಿತ್ತು. ವಿಶೇಷವಾಗಿ ಮಹದಾಯಿ ನ್ಯಾಯಾಧಿಕರಣ ರಚನೆ ನಂತರದಲ್ಲಿ ಹೋರಾಟದ ತೀವ್ರತೆ ಹೆಚ್ಚಿತ್ತು. ಮಹದಾಯಿ ನದಿ ನೀರು ಫ‌ಲಾನುಭವಿ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಹೋರಾಟ ತನ್ನದೇ ಪ್ರಭಾವ ಬೀರಿತ್ತಾದರೂ ರೈತ ಬಂಡಾಯಕ್ಕೆ ಹೆಸರಾದ ನರಗುಂದ-ನವಲಗುಂದದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. 2016ರಲ್ಲಿ ನ್ಯಾಯಾಧಿಕರಣದಿಂದ ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಾಂತರ ಅರ್ಜಿ ತಿರಸ್ಕಾರ ಸಂದರ್ಭದಲ್ಲಿ ಆಕ್ರೋಶದ ಕಟ್ಟೆಯೊಡೆದು ಹೋರಾಟ ಹಿಂಸಾರೂಪ ತಾಳಿತ್ತು. ಪೊಲೀಸರ ಲಾಠಿ ಪ್ರಹಾರ ರಾಜ್ಯ-ರಾಷ್ಟ್ರದ ಗಮನವನ್ನೇ ಸೆಳೆದಿತ್ತು. ಮಹದಾಯಿಗಾಗಿ ನರಗುಂದ-ನವಲಗುಂದಲ್ಲಿ ನಿರಂತರವಾಗಿ ಮೂರು ವರ್ಷಗಳಿಂದ ಹೋರಾಟ ನಡೆಯುತ್ತಿರುವುದು ದಾಖಲೆಯಾಗಿದೆ. 

ಮಹದಾಯಿ ನದಿಯಿಂದ ರಾಜ್ಯದ ನ್ಯಾಯಯುತ ಪಾಲು ಸುಮಾರು 45 ಟಿಎಂಸಿ ಅಡಿಯಷ್ಟಾಗಿದ್ದರೂ ರಾಜ್ಯ ಸರ್ಕಾರ 36.5 ಟಿಎಂಸಿ ಅಡಿಯಷ್ಟು ನೀರಿನ ಪಾಲು ನೀಡಬೇಕೆಂದು ನ್ಯಾಯಾಧಿಕರಣದ ಮುಂದೆ ವಾದಿಸಿತ್ತು. ಆದರೆ, ನ್ಯಾಯಾಧಿಕರಣ 13.5 ಟಿಎಂಸಿ ಅಡಿಯಷ್ಟು ನೀರು ಹಂಚಿಕೆ ಮಾಡಿ ತೀರ್ಪು ನೀಡಿದೆ. ಇದರಲ್ಲಿ 8.02 ಟಿಎಂಸಿ ಅಡಿ ನೀರು ವಿದ್ಯುತ್‌ ಉತ್ಪಾದನೆಗೆಂದು ಇದ್ದು, ವಿದ್ಯುತ್‌ಗೆ ಬಳಕೆಯಾದ ನೀರು ಮತ್ತೆ ಗೋವಾಕ್ಕೆ ಸೇರುತ್ತದೆಯೇ ವಿನಃ ರಾಜ್ಯದ ಬಳಕೆಗೆ ಬಾರದು. ನ್ಯಾಯಾಧಿಕರಣದಿಂದ ನಿರೀಕ್ಷಿತ ಫ‌ಲ ದೊರೆತಿಲ್ಲ ಎಂಬ ನೋವು ರಾಜ್ಯದ ಮಹದಾಯಿ ಪ್ರದೇಶ ವ್ಯಾಪ್ತಿಯಲ್ಲಿ ವ್ಯಕ್ತವಾಗಿದೆ. ರಾಜ್ಯ ಸರ್ಕಾರ ನ್ಯಾಯಾಧಿಕರಣದ ತೀರ್ಪಿನ ಬಗ್ಗೆ ಸೂಕ್ತ ರೀತಿಯ ಆಕ್ಷೇಪಣೆ ಸಲ್ಲಿಸಬೇಕು. ಹೆಚ್ಚಿನ ನೀರಿನ ಪಾಲು ಪಡೆಯಲು ಮುಂದಾಗಬೇಕು. ಜತೆಗೆ ನ್ಯಾಯಾಧಿಕರಣದಿಂದ ಹಂಚಿಕೆಯಾದ ನೀರಿನ ಬಳಕೆಗೆ ಯುದ್ದೋಪಾದಿ ಕಾರ್ಯ ಕೈಗೊಳ್ಳಬೇಕು.


Trending videos

Back to Top