CONNECT WITH US  

ಸ್ವಾತಂತ್ರ್ಯೋತ್ಸವ ಭಾಷಣ: ಜನಪ್ರಿಯತೆಗೆ ಒತ್ತು

ಸ್ವಾತಂತ್ರ್ಯ ದಿನ ಕೆಂಪುಕೋಟೆಯಿಂದ ಪ್ರಧಾನಿ ಮಾಡುವ ಭಾಷಣಕ್ಕೆ ಅದರದ್ದೇ ಆದ ಮಹತ್ವವಿದೆ. ಗಣತಂತ್ರ ವ್ಯವಸ್ಥೆಯಲ್ಲಿ ಇದು ಅತಿ ಪ್ರಮುಖವಾದ ಘಟನೆ. ಸರಕಾರದ ಆದ್ಯತೆಗಳು, ಭವಿಷ್ಯದ ಯೋಜನೆಗಳು, ಎದುರಿಸಲಿರುವ ಸವಾಲು, ಸಾಗುವ ಹಾದಿ ಇತ್ಯಾದಿ ಮಹತ್ವದ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಇಲ್ಲಿ ತಮ್ಮ ಮುಂಗಾಣೆRಯನ್ನು ತೆರೆದಿಡುತ್ತಾರೆ. ಇದೇ ವೇಳೆ ಪ್ರಧಾನಿಯ ರಾಜಕೀಯ ಆದ್ಯತೆಗಳು ಏನು ಎಂಬುದರ ಹೊಳಹುಗಳು ಇಲ್ಲಿ ಕಾಣಿಸುತ್ತಿವೆ. ಈ ನಿಟ್ಟಿನಲ್ಲಿ ಹೇಳುವುದಾದರೆ ನರೇಂದ್ರ ಮೋದಿ ಮಾಡಿದ ಇಲ್ಲಿಯವರೆಗಿನ ಸ್ವಾತಂತ್ರ್ಯೋತ್ಸವ ಭಾಷಣಗಳು ಅಪಾರ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗಿದ್ದವು. ಬಹಳ ವರ್ಷಗಳ ಬಳಿಕ ಪ್ರಧಾನಿಯ ಸ್ವಾತಂತ್ರ್ಯ ದಿನದ ಭಾಷಣವನ್ನು ಕಾತುರದಿಂದ ಎದಿರು ನೋಡುವಂತೆ ಮಾಡಿದ ಕೀರ್ತಿ ಮೋದಿಗೆ ಸಲ್ಲಬೇಕು.

ಈ ಅವಧಿಯಲ್ಲಿ ಇದು ಮೋದಿಯವರ ಕೊನೆಯ ಸ್ವಾತಂತ್ರ್ಯ ಭಾಷಣ. ಹೀಗಾಗಿ ಹಿಂದಿನ ಭಾಷಣಗಳಿಗಿಂತ ಈ ಸಲದ ಭಾಷಣಕ್ಕೆ ತುಸು ಹೆಚ್ಚಿನ ಪ್ರಾಮುಖ್ಯತೆಯಿತ್ತು. 2014ರಲ್ಲಿ ಮೊದಲ ಸಲ ಸ್ವಾತಂತ್ರ್ಯ ಭಾಷಣ ಮಾಡಲು ಕೆಂಪುಕೋಟೆಯೇರಿದಾಗ ಮೋದಿ ದಿಲ್ಲಿಯ ಅಧಿಕಾರದ ಪಡಸಾಲೆಗೆ ಹೊಸಬರಾಗಿದ್ದರು. ಮೊದಲ ಭಾಷಣ ಮುಂದಿನ ಅಧಿಕಾರವಧಿಯಲ್ಲಿ ಜಾರಿಗೊಳಿಸುವ ಕಾರ್ಯಕ್ರಮಗಳಿಗೆ ಮುನ್ನುಡಿ ಆಗಿತ್ತು. ಇದೀಗ ಐದನೇ ಭಾಷಣ ಸಾಕಷ್ಟು ದೀರ್ಘ‌ವಾಗಿತ್ತು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ವರ್ಷ ನಡೆಯುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿತ್ತು. 

78 ನಿಮಿಷಗಳ ಭಾಷಣದಲ್ಲಿ ಮೋದಿ ತಮ್ಮ ಸರಕಾರದ ನಾಲ್ಕು ವರ್ಷದ ಸಾಧನೆಯನ್ನು ಬಣ್ಣಿಸಿದರು. ಸ್ವತ್ಛ ಭಾರತ ಅಭಿಯಾನ, ಪ್ರಧಾನಮಂತ್ರಿ ಫ‌ಸಲ್‌ ಬಿಮಾ ಯೋಜನೆ, ಮುದ್ರಾ ಯೋಜನೆ, ಶೌಚಾಲಯ ನಿರ್ಮಾಣ, ಎಲ್‌ಪಿಜಿ ಸಂಪರ್ಕ, ವಿದ್ಯುದೀಕರಣ ಹೀಗೆ ಸಾಲು ಸಾಲು ಕಾರ್ಯಕ್ರಮಗಳನ್ನು ಉಲ್ಲೇಖೀಸಿದರು. 2022ಕ್ಕಾಗುವಾಗ ರೈತರ ಆದಾಯ ದ್ವಿಗುಣಗೊಳಿಸುವುದು, ದೇಶವನ್ನು ಸಂಪೂರ್ಣ ಭ್ರಷ್ಟಾಚಾರ ಮುಕ್ತಗೊಳಿಸುವುದು ಇತ್ಯಾದಿ ಆಕರ್ಷಕ ಕನಸುಗಳನ್ನು ಪುನ ರುಚ್ಚರಿಸಿದರು.2022ರಲ್ಲಿ ಬಾಹ್ಯಾಕಾಶಕ್ಕೆ ಭಾರತೀಯ ವ್ಯಕ್ತಿಯನ್ನು ರವಾನಿಸುವ ಕನಸನ್ನೂ ಬಿಚ್ಚಿಟ್ಟರು. 2014ರಲ್ಲಿ ಜನರಿಗೆ ನೀಡಿರುವ ಆಶ್ವಾಸನೆಯನ್ನು ಈಡೇರಿಸಿದ್ದೇನೆ. ಜನರು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಗೊಳಿಸಿಲ್ಲ ಎಂಬ ಸಂದೇಶ ನೀಡಿದರು. 

ಆದರೆ ವಿದೇಶಾಂಗ ನೀತಿ ಸೇರಿದಂತೆ ಹಲವು ಮುಖ್ಯ ಅಂಶಗಳ ಬಗ್ಗೆ ಹೆಚ್ಚೇನೂ ಹೇಳಲಿಲ್ಲ. ಅದರಲ್ಲೂ ನೆರೆಯ ಪಾಕಿಸ್ಥಾನದ ವಿಚಾರವಾಗಿ ಏನನ್ನೂ ಹೇಳಲಿಲ್ಲ. ಸರ್ಜಿಕಲ್‌ ಸ್ಟ್ರೈಕ್‌ನ್ನು ಮಾತ್ರ ಮತ್ತೂಮ್ಮೆ ನೆನಪಿಸಿಕೊಂಡರು. ಭಾಷಣದ ಬಹುಭಾಗವನ್ನು 2014ರ ಮೊದಲಿನ ಭಾರತ ಮತ್ತು ನಂತರದ ಭಾರತವನ್ನು ಹೋಲಿಸಲು ಬಳಸಿಕೊಂಡರು. ಬಹುನಿರೀಕ್ಷೆಯ ಆಯುಷ್ಮಾನ್‌ ಭಾರತ ಯೋಜನೆ ಜಾರಿಗೊಳಿಸಲು ದಿನ ನಿಗದಿ ಮಾಡಿದರು ಹಾಗೂ ಪುರುಷರಂತೆ ಮಹಿಳೆಯರಿಗೂ ಸೇನೆಯಲ್ಲಿ ಖಾಯಂ ಕಮಿಷನ್‌ ರಚಿಸುವ ಪ್ರಸ್ತಾವ ಇರಿಸುವ ಮೂಲಕ ಮಹಿಳಾ ವರ್ಗಕ್ಕೂ ದೊಡ್ಡದೊಂದು ಕೊಡುಗೆಯನ್ನು ನೀಡಿದರು. 

ಮಹಿಳೆಯರ ಹಕ್ಕುಗಳ ಕುರಿತು ಮಾತನಾಡಿದರು. ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹೀಗೆ ಎಲ್ಲರಿಗೂ ಮೋದಿ ಭಾಷಣದಲ್ಲಿ ಸ್ಥಾನವಿತ್ತು. ಅತ್ಯಾಚಾರ ಹಾಗೂ ಮಹಿಳೆಯರ ಮೇಲಾಗುತ್ತಿರುವ ಇತರ ದೌರ್ಜನ್ಯಗಳು ಕುರಿತು ಮಾತನಾಡಿದರೂ ಇತ್ತೀಚೆಗಿನ ದಿನಗಳಲ್ಲಿ ಭಾರೀ ವಿವಾದಕ್ಕೀಡಾಗಿರುವ ಗುಂಪು ಹಲ್ಲೆಗಳ ಕುರಿತು ಏನನ್ನೂ ಹೇಳಲಿಲ್ಲ.  ಜಿಎಸ್‌ಟಿ, ನೋಟು ರದ್ದು ಇತ್ಯಾದಿ ಕಠಿನ ನಿರ್ಧಾರಗಳ ಮೂಲಕ ಕಪ್ಪುಹಣವನ್ನು ನಿಯಂತ್ರಿಸಿದ್ದೇವೆ ಎಂದು ಹೇಳಿದರೂ ವಿದೇಶದಿಂದ ಕಪ್ಪುಹಣವನ್ನು ವಾಪಾಸು ತರುವ ಭರವಸೆಯನ್ನು ಮಾತ್ರ ಉಲ್ಲೇಖೀಸಲಿಲ್ಲ. ನಾಲ್ಕು ವರ್ಷಗಳಲ್ಲಿ ಹಲವು ಸಾಧನೆಗಳನ್ನು ಮಾಡಿದ್ದರೂ ಇನ್ನಷ್ಟು ದುಡಿಯುವ ಹಸಿವೆ ನನಗಿದೆ, ನಮಗಿಂತ ಮುಂದುವರಿದಿರುವ ದೇಶಗಳನ್ನು ನೋಡುವಾಗ ಇನ್ನಷ್ಟು ಮುಂದುವರಿಯುವ ಹಂಬಲ ನನ್ನಲ್ಲಿದೆ..ಎನ್ನುವ ಮೂಲಕ 2019ರಲ್ಲೂ ನನ್ನನ್ನೇ ಚುನಾಯಿಸಿ ಎಂದು ಪರೋಕ್ಷವಾಗಿ ಮನವಿ ಮಾಡಿಕೊಂಡರು. 

ಕಳೆದ ನಾಲ್ಕು ಭಾಷಣಗಳಲ್ಲಿ ಅಭಿವೃದ್ಧಿ ಮುಖ್ಯ ಅಜೆಂಡಾ ಆಗಿದ್ದರೆ ಈ ಸಲದ ಭಾಷಣದಲ್ಲಿ ಜನಪ್ರಿಯತೆಗೆ ಹೆಚ್ಚು ಒತ್ತು ನೀಡಿದ್ದರು. ಹೀಗಾಗಿಯೇ ಈಶಾನ್ಯ ಭಾಗಕ್ಕೆ ನೀಡಿದ ಕೊಡುಗೆಗಳನ್ನು ವರ್ಣಿಸಲು ಸಾಕಷ್ಟು ಸಮಯ ತೆಗೆದುಕೊಂಡರು. ಪದೇ ಪದೇ ಸರಕಾರದ ಜನಪ್ರಿಯ ಕಾರ್ಯ ಕ್ರಮಗಳನ್ನು ಉಲ್ಲೇಖೀಸಿದರು.


Trending videos

Back to Top