CONNECT WITH US  

ಕೇರಳ, ಕೊಡಗಿನಲ್ಲಿ ವಿಕೋಪ ಪ್ರಕೃತಿ ಉಳಿಸಿಕೊಳ್ಳಬೇಕು 

ಕಳೆದ 12 ದಿನಗಳಿಂದ ಇಡೀ ಕೇರಳ ವರುಣನ ಆರ್ಭಟಕ್ಕೆ ಸಿಲುಕಿ ತತ್ತರಿಸಿದೆ. 14 ಜಿಲ್ಲೆಗಳ ಪೈಕಿ 12 ಜಿಲ್ಲೆಗಳು ಮುಳುಗಿದ್ದು ರಾಜ್ಯ ಕಂಡು ಕೇಳರಿಯದ ಪ್ರಳಯಕ್ಕೆ ಸಿಲುಕಿ ನಲುಗಿದೆ. ಸುಮಾರು 6 ಲಕ್ಷ ಮಂದಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯಪಡೆದಿದ್ದಾರೆ, 300ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಮುರಿದು ಬಿದ್ದ ಮನೆಗಳ ಲೆಕ್ಕ ಇನ್ನೂ ಸಿಕ್ಕಿಲ್ಲ. ಬೆಳೆ ಮತ್ತು ಕೃಷಿಗಾಗಿರುವ ಹಾನಿಯನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ.ಒಟ್ಟಾರೆ ಸುಮಾರು 21,000 ಕೋ. ರೂ.ಯ ನಾಶ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕರ್ನಾಟಕದ ಮಡಿಕೇರಿ ಜಿಲ್ಲೆಯೂ ಇದೇ ರೀತಿಯ ನಾಶನಷ್ಟಗಳಿಗೆ ಸಾಕ್ಷಿಯಾಗಿದೆ. ಇಲ್ಲಿ ಒಂದು ರಾಷ್ಟ್ರೀಯ ಹೆದ್ದಾರಿಯೇ ಸಂಪೂರ್ಣ ನಿರುಪಯುಕ್ತವಾಗಿದೆ. 

ಸೇನೆ, ವಾಯುಪಡೆ, ನೌಕಾಪಡೆ ಹೀಗೆ ಸೇನೆಯ ಮೂರೂ ಅಂಗಗಳು ರಕ್ಷಣಾ ಕಾರ್ಯಕ್ಕಿಳಿದಿವೆ. ಜತೆಗೆ ಕರಾವಳಿ ರಕ್ಷಣಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ವಿವಿಧ ಸಂಸ್ಥೆಗಳು ನೆರೆ ನೀರಿನಲ್ಲಿ ಸಿಲುಕಿದವರನ್ನು ಪಾರು ಮಾಡಲು ಶಕ್ತಿಮೀರಿ ಪ್ರಯತ್ನಿಸುತ್ತಿವೆ. ರಾಜ್ಯ ಸರಕಾರ ತನ್ನೆಲ್ಲ ಸಾಮರ್ಥ್ಯವನ್ನು ಜನರ ರಕ್ಷಣೆಗಾಗಿ ಬಳಸಿಕೊಳ್ಳುತ್ತಿದೆ. ಕೇಂದ್ರ ಸರಕಾರವೂ ನೆರವಿಗೆ ಧಾವಿಸಿದೆ. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಬಳಿಕ ಸ್ವತಹ ಪ್ರಧಾನಿಯೇ ವೈಮಾನಿಕ ಅವಲೋಕನ ನಡೆಸಿ ತಕ್ಷಣಕ್ಕೆ 500 ಕೋ. ರೂ. ಮತ್ತು ಮೃತರ ಕುಟುಂಬಗಳಿಗೆ ತಲಾ 2 ಲ. ರೂ. ಮತ್ತು ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಿದ್ದಾರಲ್ಲದೆ ಇನ್ನಷ್ಟು ನೆರವಿನ ಭರವಸೆ ನೀಡಿದ್ದಾರೆ. ಎಲ್ಲೆಡೆಗಳಿಂದ ನೆರವು ಹರಿದು ಬರುತ್ತಿದೆ. ಆದರೂ ಶತಮಾನದ ಭೀಕರ ಮಳೆಯ ಹೊಡೆತದಿಂದ ಚೇತರಿಸಿಕೊಳ್ಳಲು ಕೇರಳಕ್ಕೆ ಬಹಳ ಸಮಯ ಹಿಡಿಯಬಹುದು. 

ಸದ್ಯ ಮಳೆಯ ಅಬ್ಬರ ತಗ್ಗಿರುವುದು ತುಸು ಸಮಾಧಾನ ತಂದಿದೆ. ಆದರೆ ಇದೇ ವೇಳೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ತಲೆದೋರಿದೆ. ನೆರೆ ಬಂದಾಗಲೆಲ್ಲ ಮಲೇರಿಯಾ, ಡೆಂಗೆಯಂಥ ಸಾಂಕ್ರಾಮಿಕ ರೋಗಗಳು ಹಾವಳಿಯಿಡುವುದು ಸಾಮಾನ್ಯ ವಿಷಯ. ಅದರಲ್ಲೂ ಕೇರಳದಲ್ಲಿ ಸಾವಿರಾರು ಮನೆಗಳು ಕುಸಿದು ಹೋಗಿವೆ. ಇರಲೊಂದು ಬೆಚ್ಚನೆಯ ಮನೆ ಇಲ್ಲದಿದ್ದರೆ ರೋಗಗಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಮನೆ ನಿರ್ಮಿಸಿಕೊಡಲು ಸರಕಾರ ಮೊದಲ ಆದ್ಯತೆ ನೀಡಬೇಕು. ಪ್ರಳಯ ಸಂತ್ರಸ್ತರಿಗಾಗಿಯೇ ವಿಶೇಷ ವಸತಿ ಯೋಜನೆಯನ್ನು ಜಾರಿಗೊಳಿಸಿ, ಕ್ಷಿಪ್ರವಾಗಿ ಅನುಷ್ಠಾನಿಸುವುದು ಉತ್ತಮ. 

ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಶ ವಿದೇಶಗಳಿಂದ ನೆರವು ಹರಿದು ಬರುತ್ತಿದೆ. ಅಂತೆಯೇ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು , ಮಠ ಮಂದಿರಗಳೆಲ್ಲ ವಸ್ತು ರೂಪದ ನೆರವು ನೀಡುತ್ತಿವೆ. ಇವುಗಳು ನಿಜವಾದ ಸಂತ್ರಸ್ತರಿಗೆ ತಲುಪುವಂತೆ ಮಾಡಬೇಕು. ಅದೇ ರೀತಿ ರಸ್ತೆ ಮತ್ತು ಸೇತುವೆ ನಿರ್ಮಾಣವೂ ಸಮರೋಪಾದಿಯಲ್ಲಿ ನಡೆಯಬೇಕಾಗಿದೆ. ರಾಜ್ಯದ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ, ಇಲ್ಲವೆ ಜರಿದು ಬಿದ್ದಿವೆ. 130ಕ್ಕೂ ಹೆಚ್ಚು ಸೇತುವೆಗಳು ಹಾಗೂ 16 ಸಾವಿರ ಕಿ.ಮೀ ರಸ್ತೆ ಸಂಪೂರ್ಣ ನಾಶವಾಗಿವೆ. ಪರಿಹಾರ ಸಾಮಗ್ರಿಗಳು ಜನರಿಗೆ ತಲುಪಲು ರಸ್ತೆಗಳು ಸರಿಯಾಗುವುದು ತೀರಾ ಅಗತ್ಯ. 

ಪ್ರಕೃತಿ ಈ ಪರಿಯಲ್ಲಿ ಮುನಿಯಲು ಏನು ಕಾರಣ ಎನ್ನುವ ಆತ್ಮಾವಲೋಕನಕ್ಕೂ ಇದು ಸಕಾಲ. ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದು ನಿಜವಾಗಿದ್ದರೂ ಅಭಿವೃದ್ಧಿಯ ಹೆಸರಿನಲ್ಲಿ ನಡೆಸಿದ ಎರ್ರಾಬಿರಿ ಕಾಮಗಾರಿಯಿಂದಾಗಿ ಪ್ರವಾಹ ಉಂಟಾಗಿದೆ ಎನ್ನುವುದು ಸತ್ಯ. ಪಶ್ಚಿಮ ಘಟ್ಟವನ್ನು ಉಳಿಸಿಕೊಳ್ಳಬೇಕೆಂದು ಕಳೆದ ಕೆಲ ದಶಕಗಳಿಂದೀಚೆಗೆ ಕೂಗು ಕೇಳಿ ಬರುತ್ತಿದ್ದರೂ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮರಗಳ ಮಾರಣಹೋಮವೇ ಬೆಟ್ಟಗಳು ಕುಸಿಯಲು ಕಾರಣ ಎಂದು ಪಶ್ಚಿಮ ಘಟ್ಟ ಸಂರಕ್ಷಿಸುವ ವರದಿ ತಯಾರಿಸಿರುವ ಮಾಧವ ಗಾಡ್ಗಿಳ್‌ ಈಗಾಗಲೇ ಹೇಳಿದ್ದಾರೆ. ಕೃಷಿ ಅದರಲ್ಲೂ ಮುಖ್ಯವಾಗಿ ಭತ್ತದ ಕೃಷಿ ಲಾಭದಾಯಕ ಅಲ್ಲ ಎಂಬ ಕಾರಣಕ್ಕಾಗಿ ಗದ್ದೆಗಳೆಲ್ಲ ಸೈಟುಗಳಾಗಿದ್ದು, ಇಲ್ಲಿ ನಿರಂತರವಾಗಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇಂದಿನ ಈ ಸ್ಥಿತಿಗೆ ಈ ಕ್ಷಿಪ್ರ ನಗರೀಕರಣದ ಪಾಲೂ ದೊಡ್ಡದಿದೆ. ಮುಖ್ಯವಾಗಿ ಬೆಟ್ಟಗುಡ್ಡಗಳನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಅಗೆಯುವುದರಿಂದ ಅವು ದುರ್ಬಲವಾಗುತ್ತಿವೆ. ಪರಿಸರ ಸಂರಕ್ಷಣೆಯೆಂದರೆಗಿಡ ಮರ ಬೆಳೆಸುವುದು ಮಾತ್ರ ಅಲ್ಲ, ಬೆಟ್ಟ ಗುಡ್ಡ ಸೇರಿದಂತೆ ಪ್ರಕೃತಿಯನ್ನು ಇದ್ದಂತೆ ಉಳಿಸಿಕೊಳ್ಳುವುದು ಎನ್ನುವುದನ್ನು ಇನ್ನಾದರೂ ಅರ್ಥಮಾಡಿಕೊಳ್ಳಬೇಕು. 


Trending videos

Back to Top