CONNECT WITH US  

ರಚನಾತ್ಮಕ ನೆಲೆಯತ್ತ ಸಾಗುವುದು ಅವಶ್ಯ: ಅಪಾಯಕಾರಿ ಕಾನೂನು 

ಸೋಷಿಯಲ್‌ ಮೀಡಿಯಾ ಜನಪ್ರಿಯಗೊಂಡ ಬಳಿಕ ಧಾರ್ಮಿಕ ಅವಹೇಳನದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಲ್ಲದೆ ಧರ್ಮ ನಿಂದನೆಯ ಸುಳ್ಳು ಪ್ರಕರಣಗಳು ಕೂಡಾ ದಾಖಲಾಗುತ್ತಿರುತ್ತವೆ. 

ಪಂಜಾಬಿನ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ನೇತೃತ್ವದ ಸರಕಾರದ ಸಚಿವ ಸಂಪುಟ ಸಭೆ ಭಾರತೀಯ ದಂಡ ಸಂಹಿತೆಯಲ್ಲಿರುವ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವವರನ್ನು ಶಿಕ್ಷಿಸುವ ನಿಯಮಕ್ಕೆ ಹೊಸದೊಂದು ತಿದ್ದುಪಡಿ ತರಲು ಅನುಮತಿಸಿದೆ. ವಿವಿಧ ಧರ್ಮಗಳ ಧಾರ್ಮಿಕ ಗ್ರಂಥಗಳಾದ ಗುರುಗ್ರಂಥ ಸಾಹಿಬ್‌, ಭಗವದ್ಗೀತೆ, ಕುರಾನ್‌ ಮತ್ತು ಬೈಬಲ್‌ ಗ್ರಂಥಗಳಿಗೆ ಯಾರಾದರೂ ಹಾನಿ ಮಾಡಿದರೆ ಅಥವಾ ಅಪಚಾರ ಎಸಗಿದವರಿಗೆ ಜೀವಾವಧಿ ಶಿಕ್ಷೆ ವಿಧಿಸುವುದು ಈ ತಿದ್ದುಪಡಿಯ ಉದ್ದೇಶ.  

ಭಾರತೀಯ ದಂಡಸಂಹಿತೆಗೆ 295ಎಎ ಎಂಬ ಹೊಸದೊಂದು ಸೆಕ್ಷನ್‌ ಸೇರಿಸುವ ಮೂಲಕ ಸರಕಾರ ರಾಜ್ಯದಲ್ಲಿ ಧರ್ಮನಿಂದನೆ ಮಾಡಿದವರಿಗೆ ಜೀವಾವಧಿ ಶಿಕ್ಷೆ ನೀಡಲು ಮುಂದಾಗಿದೆ. ಈಗಾಗಲೇ ಭಾರತೀಯ ದಂಡಸಂಹಿತೆಯಲ್ಲಿರುವ 295ಎ ಸೆಕ್ಷನ್‌ನಲ್ಲಿ ಧರ್ಮ ನಿಂದನೆ ವಿರುದ್ಧ ಕ್ರಮ ಕೈಗೊಳ್ಳಲು ಸಾಕಷ್ಟು ಅವಕಾಶವಿದ್ದರೂ ಪಂಜಾಬ್‌ ಸರಕಾರ ಮತ್ತಷ್ಟು ಕಠಿನಗೊಳಿಸಲು ಹೊರಟಿರುವುದಕ್ಕೆ ಟೀಕೆ ವ್ಯಕ್ತವಾಗಿದೆ. 

ಯಾವುದೇ ಧರ್ಮವನ್ನು ಅವಹೇಳನ ಮಾಡುವುದು ಅಥವಾ ಧಾರ್ಮಿಕ ಗ್ರಂಥಗಳಿಗೆ ಅಪಚಾರ ಎಸಗುವುದು ಶಿಕ್ಷಾರ್ಹ ಅಪರಾಧ ಎನ್ನುವುದು ಸರಿ. ಆದರೆ ಇಂಥ ಪ್ರಕರಣಗಳಿಗೆ ಜೀವಾವಧಿಯಂಥ ಶಿಕ್ಷೆ ವಿಧಿಸಬೇಕೇ ಎಂಬುದು ಚರ್ಚೆಗೀಡಾಗಿರುವ ಅಂಶ. ಈ ಮಾದರಿಯ ಕಾನೂನು ದುರುಪಯೋಗವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಅಮರೀಂದರ್‌ ಸಿಂಗ್‌ ಸರಕಾರ ಇನ್ನಷ್ಟು ಚಿಂತನ-ಮಂಥನ ನಡೆಸುವ ಅಗತ್ಯವಿತ್ತು.  

ಹಾಗೆಂದು ಇದು ಈ ಸರಕಾರದ ಪರಿಕಲ್ಪನೆಯಲ್ಲ. ಹಿಂದಿನ ಅಕಾಲಿದಳ-ಬಿಜೆಪಿ ಮೈತ್ರಿ ಸರಕಾರ ಸಿಕ್ಖರ ಧರ್ಮಗ್ರಂಥವಾಗಿರುವ ಗುರುಗ್ರಂಥ ಸಾಹಿಬ್‌ನ ಕೆಲವು ಪುಟಗಳು ದಾರಿ ಬದಿಯಲ್ಲಿ ಸಿಕ್ಕಿದ ಬಳಿಕ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಗುರುಗ್ರಂಥ ಸಾಹಿಬ್‌ಗ ಅಪಚಾರ ಎಸಗಿದವರಿಗೆ ಕಠಿನ ಶಿಕ್ಷೆ ವಿಧಿಸುವ ಮಸೂದೆಯನ್ನು ಅಂಗೀಕರಿಸಿತ್ತು. ರಾಜ್ಯದಲ್ಲಿ ಮಂಜೂರಾದ ಈ ಮಸೂದೆಯನ್ನು ಕೇಂದ್ರ ಜಾತ್ಯತೀತ ತತ್ವಕ್ಕೆ ಇದರಿಂದ ಧಕ್ಕೆಯಾಗಬಹುದು ಎಂಬ ಅಭಿಪ್ರಾಯ ಪಟ್ಟು ವಾಪಸು ಕಳುಹಿಸಿತ್ತು. ಇದೀಗ ಹೊಸ ಸರಕಾರ ಇನ್ನೂ ಕೆಲವು ಧರ್ಮಗಳ ಗ್ರಂಥವನ್ನು ಕಾನೂನು ವ್ಯಾಪ್ತಿಗೆ ಸೇರಿಸಿಕೊಂಡು ಅದಕ್ಕೊಂದು ಜಾತ್ಯಾತೀತ ಸ್ವರೂಪ ನೀಡಿ ಜಾರಿಗೊಳಿಸಲು ಮುಂದಾಗಿದೆ. 

ದೇಶದಲ್ಲಿ ಧಾರ್ಮಿಕ ಅವಹೇಳನ ಪ್ರಕರಣಗಳು ಆಗಾಗ ನಡೆಯುತ್ತಿರುತ್ತದೆ. ಸೋಷಿಯಲ್‌ ಮೀಡಿಯಾ ಜನಪ್ರಿಯಗೊಂಡ ಬಳಿಕ ಇಂಥ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಲ್ಲದೆ ಧರ್ಮ ನಿಂದನೆಯ ಸುಳ್ಳು ಪ್ರಕರಣಗಳು ಕೂಡಾ ದಾಖಲಾಗುತ್ತಿರುತ್ತವೆ. ಯಾರನ್ನಾದರೂ ಸಿಕ್ಕಿಸಿ ಹಾಕಬೇಕೆಂದು ಉದ್ದೇಶಪೂರ್ವಕವಾಗಿ ಧರ್ಮ ನಿಂದನೆ ಕೇಸು ದಾಖಲಾಗುವುದೂ ಇದೆ. ಇಂಥ ಸಂದರ್ಭದಲ್ಲಿ ಕಾನೂನು ದುರುಪಯೋಗವಾಗುವುದಿಲ್ಲ ಎನ್ನುವುದಕ್ಕೆ ಯಾವ ಖಾತರಿಯೂ ಇಲ್ಲ. ಧರ್ಮಕ್ಕೆ ಅಪಚಾರ ಎಸಗುವವರನ್ನು ಶಿಕ್ಷಿಸಲು ಈಗಾಗಲೇ ಕಠಿನ ಕಾನೂನು ಇರುವಾಗ ಅಮರೀಂದರ್‌ ಸರಕಾರ ಹೊಸದಾಗಿ ಕಾನೂನು ರಚಿಸುವ ಅಗತ್ಯವಿರಲಿಲ್ಲ.  

ಕಾನೂನು ಈಗಿರುವ ಸ್ವರೂಪದಲ್ಲಿ ಜಾರಿಯಾದರೆ ಪಾಕಿಸ್ಥಾನದ ಧರ್ಮನಿಂದನೆ ಕಾನೂನಿನಂತಾಗಲಿದೆ ಎಂಬ ಟೀಕೆಗಳಲ್ಲಿ ಹುರುಳಿದೆ. ಪಾಕಿನಲ್ಲಿ ಧಾರ್ಮಿಕ ಗ್ರಂಥಕ್ಕೆ ಅಪಚಾರ ಎಸಗಿದರೆ ಗಲ್ಲಿಗೇರಿಸುವ, ಅನೇಕ ವರ್ಷಗಳ ತನಕ ಜೈಲಿಗೆ ತಳ್ಳುವ ಕಾನೂನು ಇದೆ. ಮೂಲಭೂತವಾದಿಗಳು ಧರ್ಮ ನಿಂದೆ ಮಾಡಿದ ಆರೋಪಕ್ಕೊಳಗಾಗಿರುವವರನ್ನು ಗುಂಡಿಕ್ಕಿ ಸಾಯಿಸಿದ ಪ್ರಕರಣಗಳು ಸಂಭವಿಸಿವೆ. ಸಚಿವರೇ ಅಲ್ಲಿ ಧರ್ಮ ನಿಂದನೆ ಆರೋಪದಲ್ಲಿ ಮೂಲಭೂತವಾದಿಗಳ ಗುಂಡಿಗೆ ಬಲಿಯಾಗಿದ್ದಾರೆ. 

ಸರಕಾರ ಎಲ್ಲ ಧರ್ಮಗಳಿಂದಲೂ ಸಮಾನ ಅಂತರ ಕಾಯ್ದುಕೊಳ್ಳಬೇಕೆನ್ನುವುದು ಜಾತ್ಯಾತೀತ ತತ್ವದ ಮೂಲ ಆಶಯ. ಅದನ್ನು ಇನ್ನಷ್ಟು ಬಲಗೊಳಿಸುವತ್ತ ಪ್ರಯತ್ನಿಸಬೇಕು. ಅಂಥ ರಚನಾತ್ಮಕ ನೆಲೆಯತ್ತ ಸಾಗುವುದು ಅತ್ಯವಶ್ಯ. 


Trending videos

Back to Top