CONNECT WITH US  

ಹೆಮ್ಮೆ ಪಡುವ ಸಾಧನೆ ಇಂಡೋನೇಶ್ಯದಲ್ಲಿ ನಡೆದ ಏಶ್ಯನ್‌ ಗೇಮ್ಸ್‌

ಎಂಟನೇ ಸ್ಥಾನದಲ್ಲಿ ದೇಶ ಮಿಂಚುವಂತೆ ಮಾಡಿದ ಸಾಹಸ ಕಡಿಮೆಯೇನಲ್ಲ. ಎಲ್ಲ ಕ್ರೀಡಾಪಟುಗಳಿಗೆ ಹ್ಯಾಟ್ಸಾಪ್‌.

ಇಂಡೋನೇಶ್ಯದಲ್ಲಿ ನಡೆದ 18ನೇ ಏಶ್ಯನ್‌ ಗೇಮ್ಸ್‌ನ ಫೀಲ್ಡ್‌ ಮತ್ತು ಟ್ರ್ಯಾಕ್‌ ವಿಭಾಗಗಳಲ್ಲಿ ಭಾರತದ ಕ್ರೀಡಾಪಟುಗಳು ಮಾಡಿದ ಅಮೋಘ ಸಾಧನೆಯಿಂದ ದೇಶ ಹೆಮ್ಮೆಪಡುತ್ತಿದೆ. 15 ಚಿನ್ನ, 24 ಬೆಳ್ಳಿ ಮತ್ತು 30 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ 2010ರಲ್ಲಿ ಚೀನಾದ ಗ್ವಾಂಗ್‌ಝೂನಲ್ಲಿ ನಡೆದ ಏಶ್ಯನ್‌ ಗೇಮ್ಸ್‌ ಸಾಧನೆಯನ್ನು ಮೀರಿಸಿದ್ದಾರೆ ನಮ್ಮ ಕ್ರೀಡಾಪಟುಗಳು. 

1951ರಲ್ಲಿ ನಡೆದ ಮೊದಲ ಏಶ್ಯನ್‌ ಗೇಮ್ಸ್‌ ಸಾಧನೆಯನ್ನು ಈ ಸಲ ಪುನರಾವರ್ತಿಸುವಲ್ಲಿ ಕ್ರೀಡಾಪಟುಗಳು ಸಫ‌ಲರಾಗಿದ್ದು, ಇದು ಅಭಿನಂದನೆಗೆ ಅರ್ಹವಾಗಿರುವ ಸಾಧನೆಯೇ ಸರಿ. ಒಟ್ಟಾರೆಯಾಗಿ ಎಂಟನೇ ಸ್ಥಾನದಲ್ಲಿ ದೇಶ ವಿರಾಜಮಾನವಾಗುವಂತೆ ಮಾಡಿದ ಸಾಹಸ ಕಡಿಮೆಯೇನಲ್ಲ. ಎಲ್ಲಾ ಕ್ರೀಡಾಪಟುಗಳಿಗೆ ಮತ್ತು ಅವರನ್ನು ತರಬೇತುಗೊಳಿಸಿದವರಿಗೆ ಹ್ಯಾಟ್ಸಾಪ್‌ ಹೇಳಲೇ ಬೇಕು. 

ಕ್ರೀಡಾಕೂಟದುದ್ದಕ್ಕೂ ಹತ್ತಾರು ಅಚ್ಚರಿಗಳನ್ನು ನೀಡಿದ್ದಾರೆ ಭಾರತೀಯರು. ಸೆಪಕ್‌ಟಕ್ರಾ, ಕುರಾಶ್‌, ಈಕ್ವೇಸ್ಟ್ರಿಯನ್‌ನಂಥ ಅಪರೂಪದ ಆಟಗಳಲ್ಲಿ ಪದಕ ಬಾಚಿದ್ದು, ನಿರೀಕ್ಷೆಯೇ ಇರದಿದ್ದ ರೋವಿಂಗ್‌, ಸೈಲಿಂಗ್‌ನಂಥ ಕ್ರೀಡೆಗಳಲ್ಲೂ ಪದಕ ಗಳಿಸಿದ್ದೆಲ್ಲ ಅಚ್ಚರಿಯ ಸಾಧನೆಗಳು. 

ಅಂತೆಯೇ ಸೌರಭ್‌ ಚೌಧರಿ, ಶಾದೂìಲ್‌ ಠಾಕೂರ್‌, ಹರ್ಷಿತಾ ತೋಮರ್‌, ಪಿಂಕಿ ಭಲ್ಲಾರ ಮತ್ತಿತರರ ಸಾಹಸವೂ ಉಲ್ಲೇಖಾರ್ಹ. ಇವರೆಲ್ಲ ಹದಿಹರೆಯದ ವಿದ್ಯಾರ್ಥಿಗಳು. ಹೀಗೆ ವಿದ್ಯಾರ್ಥಿಗಳೂ ಪದಕ ಬೇಟೆಗೆ ಇಳಿದು ಯಶಸ್ವಿಯಾಗಿರುವುದು ಭಾರತದ ಕ್ರೀಡೆ ಸರಿಯಾದ ಪಥದಲ್ಲಿ ಸಾಗುತ್ತಿದೆ ಮತ್ತು ಭವಿಷ್ಯ ಉಜ್ವಲವಾಗಿದೆ ಎನ್ನುವುದರ ಸೂಚನೆ. 18ರ ಹರೆಯದ ಹಿಮಾ ದಾಸ್‌ ಪಿ. ಟಿ. ಉಷಾ ಅವರ ಉತ್ತರಾಧಿಕಾರಿಯಂತೆ ಕಾಣಿಸುತ್ತಿದ್ದಾರೆ. ಸ್ವಪ್ನಾ ಬರ್ಮನ್‌, ದ್ಯುತಿ ಚಂದ್‌, ಜಿನ್ಸನ್‌ ಜಾನ್ಸನ್‌, ಮನ್‌ಜಿತ್‌ ಸಿಂಗ್‌, ನೀರಜ್‌ ಚೋಪ್ರಾ, ಅರ್ಪಿಂದರ್‌ ಸಿಂಗ್‌, ಮುಹಮ್ಮದ್‌ ಅನಸ್‌, ಧರುಣ್‌ ಅಯ್ಯಸಾಮಿ ಮತ್ತಿತರ ನಿರ್ವಹಣೆ ಸ್ಫೂರ್ತಿದಾಯಕ. 

ಇದೇ ವೇಳೆ ಪದಕ ನಿರೀಕ್ಷಿತವಾಗಿದ್ದ ಹಾಕಿ, ಕಬಡ್ಡಿ, ಬಾಕ್ಸಿಂಗ್‌ನಲ್ಲಿ ಭಾರತೀಯರ ನಿರ್ವಹಣೆ ತೀರಾ ನಿರಾಶದಾಯಕವಾಗಿತ್ತು.ಅದರಲ್ಲೂ ಕಬಡ್ಡಿ ಮತ್ತು ಹಾಕಿಯಲ್ಲಿ ಚಿನ್ನ ಕಳೆದುಕೊಂಡದ್ದು ಇಡೀ ದೇಶಕ್ಕೆ ಬೇಸರವುಂಟು ಮಾಡಿದೆ. ತನಗಿಂತ ಕಡಿಮೆ ಶ್ರೇಯಾಂಕದ ತಂಡಗಳಿಗೆ ಈ ಆಟಗಳಲ್ಲಿ ಭಾರತ ಶರಣಾಗಿರುವುದು ಇನ್ನೂ ಹೆಚ್ಚಿನ ನೋವು ಕೊಡುವ ಸಂಗತಿ. ಈ ಪೈಕಿ ಕಬಡ್ಡಿಯ ಸೋಲಿಗೆ ಕಬಡ್ಡಿ ಅಸೋಸಿಯೇಶನ್‌ನೊಳಗಿನ ಕಿತ್ತಾಟವೇ ಕಾರಣ. ಆಟಗಾರರ ಆಯ್ಕೆಯಲ್ಲಿ ವ್ಯಾಪಕವಾಗಿ ಅವ್ಯವಹಾರ ನಡೆದ ಆರೋಪವಿದ್ದು, ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು ಭಾರತೀಯ ಕ್ರೀಡೆಗೊಂದು ಕಪ್ಪುಚುಕ್ಕೆ. 

ಸಾಧನೆಯ ಯಶೋಗಾಥೆಯ ಜತೆಗೆ ವೇದನೆಯ ಕರುಣಾಜನಕ ಕತೆಗಳೂ ಇವೆ. ಈ ಸಲ ಸಾಧನೆ ಮಾಡಿದ ಕ್ರೀಡಾಪಟುಗಳ ಪೈಕಿ ಅನೇಕ ಮಂದಿ ತೀರಾ ಬಡ ಕುಟುಂಬಗಳಿಂದ ಬಂದವರು. ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಕುಟುಂಬದಿಂದ ಬಂದವರು ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ 125 ಕೋಟಿ ಜನರ ಪ್ರತಿನಿಧಿಗಳಾಗಿ ಪದಕಗಳಿಗೆ ಕೊರಳೊಡ್ಡಿದಕ್ಕೆ ಹೆಮ್ಮೆಪಡಬೇಕೊ ಅಥವಾ ಅವರ ಸಾಧನೆಯ ಹಿಂದಿನ ದಯನೀಯ ಸ್ಥಿತಿಯನ್ನು ನೋಡಿ ಮರುಕ ಪಡಬೇಕೋ ಎನ್ನುವುದು ಅರ್ಥವಾಗದ ವಿಚಿತ್ರ ಪರಿಸ್ಥಿತಿ ನಮ್ಮದು. ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎನ್ನುವುದು ಇಲ್ಲಿ ಮತ್ತೂಮ್ಮೆ ಸಾಬೀತಾಗಿದ್ದು, ಇದು ನಿಜವಾದ ಸ್ಫೂರ್ತಿದಾಯಕ ಕತೆ. ಸ್ವಪ್ನಾ, ಹಿಮಾ, ದ್ಯುತಿ, ಧರುಣ್‌, ಅಮಿತ್‌ ಪಂಘಲ್‌, ಸರಿತಾ ಗಾಯಕ್‌ವಾಡ್‌ ಹೀಗೆ ಈ ರೀತಿ ಸ್ಫೂರ್ತಿ ತುಂಬುವ ಹೆಸರುಗಳ ತುಂಬಾ ಇವೆ. 

ಭಾರತೀಯ ಕ್ರೀಡೆಗೊಂಡು ವೃತ್ತಿಪರತೆ ಬಂದಿದೆ ಎನ್ನುವುದು ಈ ಸಾಧನೆಯನ್ನು ಗಮನಿಸುವಾಗ ಅರಿವಾಗುತ್ತದೆ. ಈ ವೃತ್ತಿಪರತೆಯನ್ನು ಮುಂದುವರಿಸಿಕೊಂಡು ಹೋಗುವ ಹೊಣೆ ಸರಕಾರದ ಜತೆಗೆ ಸಂಬಂಧಿಸಿದ ಕ್ರೀಡಾ ಅಸೋಸಿಯೇಶನ್‌ಗಳದ್ದೂ ಹೌದು. ಕಬಡ್ಡಿ ಅಸೋಸಿಯೇಶನ್‌ನಂತೆ ಕೊನೆಗಳಿಗೆಯ ತನಕವೂ ತಂಡದ ಆಯ್ಕೆಯಲ್ಲಿ ರಾಜಕೀಯ ಮಾಡುವ ಪ್ರವೃತ್ತಿಯನ್ನು ತಡೆಯುವ ಕೆಲಸ ಮೊದಲು ಆಗಬೇಕು. ಅದೇ ರೀತಿ ಆಟಗಾರರಿಗೆ ಸೂಕ್ತವಾದ ತರಬೇತಿ ನೀಡುವುದರ ಜತೆಗೆ ಹೆಚ್ಚೆಚ್ಚು ಅಂತರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಲು ಕಳುಹಿಸಿಕೊಡಬೇಕು. ಹೀಗಾದರೆ ನಿರಂತರವಾಗಿ ವೃತ್ತಿಪರತೆಯನ್ನು ಕಾಪಿಡಲು ಸಾಧ್ಯವಾಗುತ್ತದೆ. ಅಂತೆಯೇ ಕ್ರೀಡಾಪಟುಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕೂಡಾ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಕಾರ್ಪೋರೇಟ್‌ ಸಂಸ್ಥೆಗಳೂ ಮುಂದಾಗುವುದು ಅಪೇಕ್ಷಣೀಯ. 

ಕ್ರೀಡಾಪಟುಗಳಿಗೆ ವಿವಿಧ ರಾಜ್ಯ ಸರಕಾರಗಳು ಘೋಷಿಸಿದ ನಗದು ಬಹುಮಾನ ಸಕಾಲದಲ್ಲಿ ಅವರ ಕೈಸೇರುವಂತಾಗಬೇಕು. ಬಹುಮಾನದ ಮೊತ್ತಕ್ಕಾಗಿ ಅವರನ್ನು ಅಲೆದಾಡಿಸುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. 

Author/Source: 

Trending videos

Back to Top