CONNECT WITH US  

ಚರ್ಚೆ ಹುಟ್ಟು ಹಾಕಿದ ಫ‌ಲಿತಾಂಶ: ಎಚ್ಚರಿಕೆಯ ಗಂಟೆ

ಜೆಡಿಎಸ್‌ ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸಾಧನೆ ಮಾಡಿಲ್ಲ. ಹೀಗಾಗಿ,  ಆ ಪಕ್ಷದ ಜತೆ ಮೈತ್ರಿ ಮಾಡಿಕೊಂಡರೂ ಪ್ರಯೋಜನವಾಗದು ಎಂಬ ವಾದವನ್ನೂ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಇಡಬಹುದು. ಒಟ್ಟಾರೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫ‌ಲಿತಾಂಶ ರಾಜಕೀಯವಾಗಿ ಚರ್ಚೆಯಂತೂ ಹುಟ್ಟುಹಾಕಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫ‌ಲಿತಾಂಶ ಬಿಜೆಪಿಗೆ ತಕ್ಕ ಮಟ್ಟಿಗೆ ಸಮಾಧಾನ ತಂದಿದ್ದರೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ಗೆ ಒಂದು ರೀತಿಯಲ್ಲಿ ಎಚ್ಚರಿಕೆ ಗಂಟೆಯೂ ಹೌದು. ಮುಂಬೈ ಕರ್ನಾಟಕ, ಕರಾವಳಿ ಹಾಗೂ ಮಧ್ಯ ಕರ್ನಾಟಕ  ಭಾಗದಲ್ಲಿ ಕಾಂಗ್ರೆಸ್‌ ಬಲ ಕಡಿಮೆಯಾಗಿರುವುದು ಆ ಪಕ್ಷದಲ್ಲಿ ಆತಂಕ ಮೂಡಿಸಿರುವುದಂತೂ ನಿಜ. ಇಲ್ಲಿ ಜೆಡಿಎಸ್‌ ಸಹ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಇಲ್ಲಿ ಬಿಜೆಪಿ ಬಲಿಷ್ಠವಾಗಿರುವುದು ಎರಡೂ ಪಕ್ಷಗಳ ನಿದ್ದೆಕೆಡಿಸಿದೆ. ಮುಂಬೈ ಕರ್ನಾಟಕ ಹಾಗೂ ಕರಾವಳಿಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌, ತುಮಕೂರು, ಮಂಡ್ಯ, ಹಾಸನದಲ್ಲಿ ಜೆಡಿಎಸ್‌ ಪಾರುಪತ್ಯ ಸಾಧಿಸಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್‌ ಶೇ.2ರಷ್ಟು ಕಡಿಮೆ ಸ್ಥಾನ ಪಡೆದರೆ ಜೆಡಿಎಸ್‌ ಒಂದಷ್ಟು ಸೀಟು ಹೆಚ್ಚಿಸಿಕೊಂಡಿದೆ.

ಆದರೆ, ಉತ್ತರ ಕರ್ನಾಟಕ ಭಾಗದ 68 ನಗರ ಸ್ಥಳೀಯ ಸಂಸ್ಥೆಗಳು ಮತ್ತು ಕರಾವಳಿ ಹಾಗೂ ಮಲೆನಾಡು ಭಾಗದ 16 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಂದೇ ಒಂದು ಕಡೆ ಅಧಿಕಾರಕ್ಕೆ ಬರಲು ಜೆಡಿಎಸ್‌ಗೆ ಸಾಧ್ಯವಾಗಿಲ್ಲ. ಉಡುಪಿ, ಚಾಮರಾಜನಗರ ಮತ್ತು ಬಳ್ಳಾರಿ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಂದೇ ಒಂದು ಸ್ಥಾನ ಗೆದ್ದಿಲ್ಲ. ಹೀಗಾಗಿ, ಆ ಪಕ್ಷವು ಹಳೇ ಮೈಸೂರಿಗೆ ಸೀಮಿತ ಎಂಬ ಮಾತು ಈ ಚುನಾವಣೆಯಲ್ಲೂ ಸಾಬೀತಾಗಿದೆ. 

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅತಿ ಹೆಚ್ಚು ಸ್ಥಾನ ಜೆಡಿಎಸ್‌ -ಕಾಂಗ್ರೆಸ್‌ ಗೆಲ್ಲುವಂತಾಗಬೇಕಿತ್ತು. ಆದರೆ, ಎರಡೂ ಪಕ್ಷಗಳು ಸೇರಿದಂತೆ 43 ಕಡೆ ಮಾತ್ರ ಅಧಿಕಾರ ಪಡೆದಿವೆ. ಅತಂತ್ರ ಇರುವ ಇನ್ನೂ 10 ಕಡೆ  ಕಾಂಗ್ರೆಸ್‌-ಜೆಡಿಎಸ್‌ ಅಧಿಕಾರ ಪಡೆಯಬಹುದು. ಆದರೆ, ಇಷ್ಟಾದರೂ ಒಟ್ಟಾರೆಯಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಮಾತ್ರ ಮಿತ್ರಪಕ್ಷಗಳ ಪಾಲಾಗುತ್ತದೆ.

 ಈ ಚುನಾವಣೆಯಲ್ಲಿ  ಎರಡು ನಗರಸಭೆ, ಎರಡು ಪುರಸಭೆ, 1 ಪಟ್ಟಣ ಪಂಚಾಯಿತಿಗಳಲ್ಲಿ ಪಕ್ಷೇತರರು ಅಧಿಕಾರ ಹಿಡಿದಿರುವುದು ಮೂರೂ ಪಕ್ಷಗಳೂ ಗಮನಿಸಬೇಕಾದ ಅಂಶ. ಮೂರೂ ಪಕ್ಷಗಳು ತಮ್ಮ ಸಾಧನೆ ಬಗ್ಗೆ ಮೇಲ್ನೋಟಕ್ಕೆ ತೃಪ್ತಿಪಟ್ಟುಕೊಂಡರೂ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ  ಬಹುತೇಕ ಕಡೆ ಶೂನ್ಯ ಸಾಧನೆ ಮಾಡಿರುವುದು ಜೆಡಿಎಸ್‌ಗೆ ಹಿನ್ನೆಡೆಯೇ.

 ಹಳೇ ಮೈಸೂರು ಭಾಗ ಹಾಗೂ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ಗೂ  ನಿರೀಕ್ಷಿತ ಫ‌ಲಿತಾಂಶ ಬಂದಿಲ್ಲ. ಮುಂಬೈ ಕರ್ನಾಟಕ, ಕರಾವಳಿ, ಮಧ್ಯ ಕರ್ನಾಟಕದಲ್ಲಿ ಮೇಲುಗೈ ಸಾಧಿಸಿರುವ ಬಿಜೆಪಿ ಹೈದರಾಬಾದ್‌-ಕರ್ನಾಟಕ ಭಾಗದಲ್ಲಿ ಹಿನ್ನೆಡೆ ಅನುಭವಿಸಿದೆ. ಕಳೆದ ಬಾರಿ ಕೆಜೆಪಿ, ಬಿಎಸ್‌ಆರ್‌ ಪಕ್ಷದ ಸ್ಪರ್ಧೆಯಿಂದ ಬಿಜೆಪಿಗೆ ನಷ್ಟವಾಗಿದ್ದ ಕಡೆ ಈ ಬಾರಿ ಲಾಭವಾಗಿದೆ ಎಂಬುದು ಗಮನಿಸಬೇಕಾದ ಅಂಶ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫ‌ಲಿತಾಂಶದ ಆಧಾರದ ಮೇಲೆ ಲೋಕಸಭೆ ಚುನಾವಣೆ ಮೈತ್ರಿ ನಿರ್ಧರಿಸಲು ಸಾಧ್ಯವಿಲ್ಲ. ಆದರೆ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡರೆ ಎಷ್ಟರ ಮಟ್ಟಿಗೆ ಲಾಭವಾಗಬಹುದು ಎಂಬ ಪ್ರಶ್ನೆಯೂ ಇದೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ನೇತೃತ್ವ ಎಚ್‌.ಡಿ.ಕುಮಾರಸ್ವಾಮಿ ವಹಿಸಿರುವುದರಿಂದ ಅದರ ಲಾಭ ಜಾತ್ಯತೀತ ಜನತಾದಳಕ್ಕೆ ಚುನಾವಣೆಯಲ್ಲಿ ಆಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಲೋಕಸಭೆ ಚುನಾವಣೆಯಲ್ಲೂ ಇದೇ ರೀತಿ ಹಳೇ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಲಾಭ ಮಾಡಿಕೊಳ್ಳಲು ಜೆಡಿಎಸ್‌ ಪ್ರಯತ್ನಿಸಬಹುದು.

ಜೆಡಿಎಸ್‌ ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸಾಧನೆ ಮಾಡಿಲ್ಲ. ಹೀಗಾಗಿ,  ಆ ಪಕ್ಷದ ಜತೆ ಮೈತ್ರಿ ಮಾಡಿಕೊಂಡರೂ ಪ್ರಯೋಜನವಾಗದು ಎಂಬ ವಾದವನ್ನೂ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಇಡಬಹುದು. ಒಟ್ಟಾರೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫ‌ಲಿತಾಂಶ ರಾಜಕೀಯವಾಗಿ ಚರ್ಚೆಯಂತೂ ಹುಟ್ಟುಹಾಕಿದೆ.


Trending videos

Back to Top