CONNECT WITH US  

ಪೆಟ್ರೋಲ್‌-ಡೀಸೆಲ್‌ ಪೆಟ್ಟು: ಬೆಲೆ ಇಳಿಕೆ ಅನಿವಾರ್ಯ

ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಏರಿಕೆಯಿಂದ ದೇಶ ತತ್ತರಿಸುತ್ತಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವ ಪರಿಣಾಮ ತೈಲ ದರದ ಮೇಲಾಗಿದ್ದು ಕಳೆದ ಹನ್ನೊಂದು ದಿನಗಳಿಂದ ಬೆಲೆ ಏರುಗತಿಯಲ್ಲಿದೆ. ಆಗಸ್ಟ್‌ 16ರಿಂದೀಚೆಗೆ ಪೆಟ್ರೋಲು ರೂ.2.17 ಮತ್ತು ಡೀಸೆಲ್‌ 2.62 ರೂ. ಹೆಚ್ಚಳವಾಗಿದ್ದು, ಇದರ ಬಿಸಿ ಜನಸಾಮಾನ್ಯರಿಗೆ ತಟ್ಟಲಾರಂಭಿಸಿದೆ. ಸಾಗಾಟ ವೆಚ್ಚ ಹೆಚ್ಚಳವಾಗಿ ಅಗತ್ಯ ವಸ್ತುಗಳ ಬೆಲೆ ಏರಲಾರಂಭಿಸಿದೆ. ರೂಪಾಯಿ ಮೌಲ್ಯ ಇದೇ ರೀತಿ ಕುಸಿದರೆ ಪೆಟ್ರೋಲು 100ರ ಗಡಿಗೆ ತಲುಪುವ ಸಾಧ್ಯತೆ ಗೋಚರಿಸಿದ್ದು, ಬೆಲೆ ಏರಿಕೆಯ ನಾಗಾಲೋಟಕ್ಕೆ ಕಡಿವಾಣ ಹಾಕಲು ಸರಕಾರ ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವಿದೆ. 

ಇರಾನ್‌ ಮೇಲೆ ಅಮೆರಿಕ ಹಾಕುತ್ತಿರುವ ಆರ್ಥಿಕ ಒತ್ತಡವೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಆದರೆ ಇದೇ ವೇಳೆ ಅಮೆರಿಕ, ಸೌದಿ ಸೇರಿದಂತೆ ಒಪೆಕ್‌ ರಾಷ್ಟ್ರಗಳಿಗೆ ತೈಲ ಉತ್ಪಾದನೆ ಹೆಚ್ಚಿಸಲು ಸೂಚಿಸಿದೆ. ಇದರ ಹೊರತಾಗಿಯೂ ಕಚ್ಚಾತೈಲ ಬೆಲೆ ಏರುತ್ತಿರುವುದರ ಹಿಂದಿನ ಕಾರಣ ಏನು ಎನ್ನುವುದು ನಿಗೂಢ. ಭಾರತದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಮಹಾ ಚುನಾವಣೆ ಎದುರಾಗುವ ಹೊತ್ತಿಗೆ ಅಂತಾರಾಷ್ಟ್ರೀಯ ಒತ್ತಡಗಳು ಕೆಲಸ ಮಾಡುತ್ತಿವೆಯೇ ಎನ್ನುವ ಚಿಕ್ಕದೊಂದು ಅನುಮಾನ ಮೂಡುತ್ತದೆ. ಏಕೆಂದರೆ ಯುಪಿಎ ಸರಕಾರದ ಕೊನೆಯ ವರ್ಷದಲ್ಲೂ ಇದೇ ರೀತಿ ತೈಲ ಬೆಲೆ ಏರಿಕೆಯಾಗಿತ್ತು. ಇದೀಗ ದೇಶ ಮತ್ತೂಂದು ಮಹಾ ಚುನಾವಣೆಯ ಹೊಸ್ತಿಲಲ್ಲಿದ್ದು ಈ ಸಂದರ್ಭದಲ್ಲಿ ಮತ್ತೆ ತೈಲ ಬೆಲೆ ಅಂಕೆ ಮೀರಿ ಏರುತ್ತಿದೆ. ಆಗಿನ ಸಂದರ್ಭಕ್ಕೂ ಈಗಿನ ಸಂದರ್ಭಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಈ ಅಂಶದತ್ತ ಒಂದಿಷ್ಟು ಗಮನ ಹರಿಸುವುದು ಈ ಸಂದರ್ಭದಲ್ಲಿ ಅಪೇಕ್ಷಣೀಯ. 

2017 ಜೂನ್‌ನಲ್ಲಿ ತೈಲ ಬೆಲೆ ನಿತ್ಯ ಪರಿಷ್ಕರಣೆಯಾಗುವ ಪದ್ಧತಿ ಪ್ರಾರಂಭ ಆದಂದಿನಿಂದ ಸರಕಾರಕ್ಕೆ ಲಾಭವಾಗಿದ್ದರೂ ಜನರಿಗೆ ನಷ್ಟವಾಗಿರುವುದೇ ಹೆಚ್ಚು. 2017 ಅಕ್ಟೋಬರ್‌ನಲ್ಲಿ 2 ರೂಪಾಯಿ ಇಳಿಸಿರುವುದು ಬಿಟ್ಟರೆ ಅನಂತರ ಪೈಸೆಗಳ ಲೆಕ್ಕದಲ್ಲಿ ಏರುತ್ತಲೇ ಇದೆ. 2017-18ನೇ ಸಾಲಿನಲ್ಲಿ ಪೆಟ್ರೊ ಸರಕು ಮಾರಾಟದಿಂದ ಕೇಂದ್ರ 2.29 ಲಕ್ಷ ಕೋ. ರೂ. ಮತ್ತು ರಾಜ್ಯ ಸರಕಾರಗಳು 1.84 ಲಕ್ಷ ಕೋ. ರೂ. ಕಂದಾಯ ಸಂಗ್ರಹಿಸಿವೆ. ಪ್ರಸ್ತುತ ಕೇಂದ್ರ ಪೆಟ್ರೋಲು ಮೇಲೆ 19.48 ರೂ. ಅಬಕಾರಿ ಸುಂಕ ಹೇರುತ್ತಿದೆ. ರಾಜ್ಯಗಳು 15.33 ರೂ. ವ್ಯಾಟ್‌ ಹಾಕುತ್ತಿವೆ. ಪಾಕಿಸ್ಥಾನ, ಬಾಂಗ್ಲಾದೇಶ, ಶ್ರೀಲಂಕಾಕ್ಕಿಂತಲೂ ನಮ್ಮಲ್ಲಿ ಪೆಟ್ರೋಲು ಮತ್ತು ಡೀಸೆಲ್‌ ಬೆಲೆ ಜಾಸ್ತಿಯಿರಲು ಕೇಂದ್ರ ಮತ್ತು ರಾಜ್ಯಗಳು ಹೇರುವ ಈ ಮಾದರಿಯ ತೆರಿಗೆಗಳೇ ಕಾರಣ. ಲೀಟರಿಗೆ ರೂ. 26ರಂತೆ ಆಮದಾಗುವ ಕಚ್ಚಾತೈಲ ಸಂಸ್ಕರಣಾ ಕಂಪೆನಿಗಳಿಗೆ ಹೋಗುವಾಗ ಪ್ರವೇಶ ತೆರಿಗೆ, ಲ್ಯಾಂಡಿಂಗ್‌ ಶುಲ್ಕ, ಲಾಭಾಂಶ ಇತ್ಯಾದಿಗಳನ್ನು ಸೇರಿಸಿಕೊಂಡು ರೂ. 40ರ ವರೆಗೆ ಆಗುತ್ತದೆ. ಇದೇ ತೈಲ ಪಂಪ್‌ಗ್ಳಲ್ಲಿ ಗ್ರಾಹಕರಿಗೆ ವಿತರಣೆ ಯಾಗುವಾಗ ರೂ. 80ರ ಆಸುಪಾಸಿಗೆ ತಲುಪಲು ಕಾರಣ ಕೇಂದ್ರ ಮತ್ತು ರಾಜ್ಯಗಳು ವಿಧಿಸುವ ವಿವಿಧ ರೀತಿಯ ತೆರಿಗೆಗಳು ಮತ್ತು ಉಪಕರಗಳು.

ವಿಪರೀತ ಬೆಲೆ ಏರಿಕೆಯಾದ ಸಂದರ್ಭದಲ್ಲಿ ಈ ತೆರಿಗೆಯನ್ನು ಇಳಿಸುವ ಮೂಲಕ ಜನರಿಗೆ ತುಸು ನಿರಾಳತೆಯನ್ನು ಒದಗಿಸುವ ಅವಕಾಶ ಕೇಂದ್ರ ಮತ್ತು ರಾಜ್ಯಕ್ಕೆ ಇವೆ. ಆದರೆ ಕೇಂದ್ರ ಚಾಲ್ತಿ ಖಾತೆ ಕೊರತೆ ಹೆಚ್ಚುವ ಹಾಗೂ ವಿವಿಧ ಕಲ್ಯಾಣ ಯೋಜನೆಗಳಿಗೆ ಹಣಕಾಸಿನ ಹೊಂದಾಣಿಕೆಗೆ ಕಷ್ಟವಾಗುತ್ತದೆ ಎನ್ನುವ ಕಾರಣವೊಡ್ಡಿ ತೆರಿಗೆ ಇಳಿಸಲು ಒಪ್ಪುತ್ತಿಲ್ಲ. ಇದೇ ವೇಳೆ ರಾಜ್ಯಗಳಿಗೆ ಕೂಡಾ ತೈಲದ ಮೇಲಿನ ವ್ಯಾಟ್‌ ಆದಾಯದ ಮುಖ್ಯ ಮೂಲವಾಗಿರುವುದರಿಂದ ಇಳಿಕೆಗೆ ನಿರಾಕರಿಸುತ್ತಿವೆ. ಹೀಗೆ ಎರಡೂ ಕಡೆಯ ಲೆಕ್ಕಾಚಾರದಿಂದ ಬಸವಳಿಯುತ್ತಿರುವುದು ಜನಸಾಮಾನ್ಯ. 

ಬೆಲೆ ಏರಲಾರಂಭಿಸಿದಾಗ ಪೆಟ್ರೋಲು ಮತ್ತು ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆನ್ನುವ ಬೇಡಿಕೆ ಕೇಳಿ ಬರುವುದು ಈಗ ಮಾಮೂಲಾಗಿದೆ. ಸರಕಾರ ಈ ಬೇಡಿಕೆಯನ್ನು ಸಾರಾಸಗಟು ನಿರಾಕರಿಸಿದೆ. ಆದರೆ ಈ ನಿರಾಕರಣೆ ಸಮರ್ಪಕವಲ್ಲ. ಏಕೆಂದರೆ ಜಿಎಸ್‌ಟಿ ಜಾರಿಗೆ ತರುವ ಸಂದರ್ಭದಲ್ಲಿ ಸರಕಾರ ಕ್ರಮೇಣ ತೈಲಗಳೂ ಜಿಎಸ್‌ಟಿ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ ಎಂದಿತ್ತು. ಇದೀಗ ಅದಕ್ಕೆ ಸಕಾಲ ಎನ್ನುವುದನ್ನು ಸರಕಾರ ಅರಿತುಕೊಳ್ಳಬೇಕು. ಜಿಎಸ್‌ಟಿ ಅಲ್ಲದಿದ್ದರೂ ಅಬಕಾರಿ ಸುಂಕ ಮತ್ತು ವ್ಯಾಟ್‌ ಕಡಿತಗೊಳಿಸಿಯಾದರೂ ತೈಲ ಬೆಲೆ ಕಡಿಮೆಗೊಳಿಸಿ ತಕ್ಷಣಕ್ಕೆ ಜನರಿಗೆ ನೆಮ್ಮದಿ ನೀಡುವುದು ಮೋದಿ ಸರಕಾರದ  ಪ್ರಥಮ ಆದ್ಯತೆಯ ಕರ್ತವ್ಯ.


Trending videos

Back to Top