CONNECT WITH US  

ನಕ್ಸಲ್‌ ಭಯ ದೂರವಾಗಲಿ

ಮತದಾನದಿಂದ ವಿಮುಖವಾಗದಿರಲಿ ಜನ

ಸಾಂದರ್ಭಿಕ ಚಿತ್ರ

ಜನರಲ್ಲಿ ಸರಕಾರಿ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸವಾಗಬೇಕು. ನಕ್ಸಲರನ್ನು ಎದುರಿಸುವ ಮಾನಸಿಕ ಧೈರ್ಯವನ್ನು ಬೆಳೆಸಬೇಕು. ನಿರಂತರವಾಗಿ ನಕ್ಸಲ್‌ ಪ್ರದೇಶಗಳ ಸಂಪರ್ಕದಲ್ಲಿಟ್ಟುಕೊಂಡು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಾದ ಕೆಲಸವಿದು. 

ನಕ್ಸಲರು ದೇಶದ ಆಂತರಿಕ ಭದ್ರತೆಗೆ ಅತಿದೊಡ್ಡ ಬೆದರಿಕೆಯಾಗಿದ್ದು, ಅವಕಾಶ ವಂಚಿತ ಮತ್ತು ವ್ಯವಸ್ಥೆಯಿಂದ ದೂರವುಳಿದ ಜನರು ನಕ್ಸಲ್‌ ಚಳವಳಿಯ ಬೆನ್ನೆಲುಬು ಆಗುತ್ತಿದ್ದಾರೆ ಎಂದು ಎಂಟು ವರ್ಷದ ಹಿಂದೆ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದರು. ಇದೀಗ ಎಂಟು ವರ್ಷಗಳ ಬಳಿಕವೂ ಅವರ ಮಾತು ಪ್ರಸ್ತುತವಾಗಿದೆ ಎನ್ನುವುದಕ್ಕೆ ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಛತ್ತೀಸ್‌ಗಢದ ನಕ್ಸಲ್‌ ಪೀಡಿತ ಪ್ರದೇಶಗಳ ಮತದಾರರು ವ್ಯಕ್ತಪಡಿಸಿದ ಅಭಿಪ್ರಾಯವೇ ಸಾಕ್ಷಿ. ಮಾಮೂಲಿಯಂತೆ ನಕ್ಸಲರು ಇಲ್ಲಿ ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು ಅಧಿಕಾರಿಗಳು ಭೇಟಿ ನೀಡಿದಾಗ ಮತ ಹಾಕುತ್ತೇವೆ, ಆದರೆ ನಮ್ಮ ಬೆರಳಿಗೆ ಶಾಯಿ ಹಚ್ಚಬೇಡಿ ಮತ್ತು ಮತದಾನವನ್ನು ರಹಸ್ಯವಾಗಿಡಿ ಎಂದಿದ್ದಾರೆ ಜನರು. 

ಇದರರ್ಥ ಜನರಿಗೆ ದೇಶದ ಪ್ರಜಾತಂತ್ರೀಯ ವ್ಯವಸ್ಥೆಯಲ್ಲಿ ಸಹಭಾಗಿಗಳಾಗುವ ಇಚ್ಛೆ ಇದೆ ಎಂಬುದು. ಆದರೆ ಇದೇ ವೇಳೆ ಅವರಿಗೆ ಭವಿಷ್ಯದ ಭಯ ಕಾಡುತ್ತಿದೆ. ಸರಕಾರವೇನೋ ಭದ್ರತೆಗಾಗಿ ಪೊಲೀಸರನ್ನೋ, ಅರೆ ಸೈನಿಕ ಪಡೆಯನ್ನೋ ನೇಮಿಸಬಹುದು. ಆದರೆ ಎಷ್ಟು  ದಿನ ಹೀಗೆ ಬಂದೂಕಿನ ರಕ್ಷಣೆಯಲ್ಲಿ ಬದುಕಬಹುದು? ನಿತ್ಯವೂ ಭಯದ ನೆರಳಿನಲ್ಲಿ ಬದುಕುವುದು ಒಂದು ರೀತಿಯ ಶಿಕ್ಷೆ. ಸರಕಾರಕ್ಕೂ ಶಾಶ್ವತವಾಗಿ ಪೊಲೀಸು ಕಾವಲು ಒದಗಿಸುವುದು ಸಾಧ್ಯವಾಗಲಿಕ್ಕಿಲ್ಲ. ಪರಿಸ್ಥಿತಿ ಸಹಜವಾಗಿದೆ ಅಥವಾ ನಕ್ಸಲರ ಬೆದರಿಕೆ ಕಡಿಮೆಯಾಗಿದೆ ಎಂದು ಅನ್ನಿಸಿದ ಕೂಡಲೇ ಭದ್ರತಾ ಪಡೆಗಳು ಅಲ್ಲಿಂದ ವಾಪಸು ಹೋಗುತ್ತವೆ. ಈ ಸಂದರ್ಭಕ್ಕೆ ಕಾದುಕೊಂಡ ನಕ್ಸಲರು ಬಳಿಕ ದಾಳಿ ಮಾಡುತ್ತಾರೆ. ಹೀಗೆ ನಕ್ಸಲ್‌ ಪೀಡಿತ ಪ್ರದೇಶಗಳ ಜನರ ಸ್ಥಿತಿ ಅತ್ತ ದರಿ ಇತ್ತ ಪುಲಿ ಎಂಬಂತಿರುತ್ತದೆ. ಇಂಥ ಸ್ಥಿತಿಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಇಲ್ಲದ ರಗಳೆಯನ್ನು ಮೈಮೇಲೆ ಎಳೆದುಕೊಳ್ಳುವುದಕ್ಕಿಂತ ಸುಮ್ಮನಿರುವುದು ಮೇಲು ಎಂದು ಭಾವಿಸಿದ್ದರೆ ಅದು ಅವರ ತಪ್ಪಲ್ಲ, ಬದಲಾಗಿ ಅವರ ಮನಸ್ಸಿನಲ್ಲಿ ನಕ್ಸಲರ ಕುರಿತಾಗಿರುವ ಭಯವನ್ನು ತಿಳಿಸುತ್ತದೆ. 

ಅಭಿವೃದ್ಧಿ ಮಂತ್ರ ಜಪಿಸು ವುದರಿಂದ ಅಥವಾ ನಕ್ಸಲ್‌ ಪೀಡಿತ ಪ್ರದೇಶಗಳಿಗೆ ನಾನಾ ಯೋಜನೆಗಳ ಹೆಸರಿನಲ್ಲಿ ಹಣ ತಂದು ಸುರಿಯು ವುದರಿಂದ ಮಾತ್ರ ಜನರ ಮನಸಿನೊಳಗಿರುವ ಈ ಭಯವನ್ನು ದೂರ ಮಾಡಲು ಸಾಧ್ಯವಿಲ್ಲ. ಇದಕ್ಕೆ ಜನರಲ್ಲಿ ಸರಕಾರಿ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮತ್ತು ಸಕಾರಾತ್ಮಕ ಭಾವನೆ ಮೂಡಿಸುವ ಕೆಲಸವಾಗಬೇಕು. ಜತೆಗೆ ನಕ್ಸಲರನ್ನು ಎದುರಿಸುವ ಮಾನಸಿಕ ಧೈರ್ಯವನ್ನು ಬೆಳೆಸಬೇಕು. ಇದು ಒಂದೆರಡು ದಿನಗಳಲ್ಲಿ ಆಗುವ ಮಾತಲ್ಲ. ನಿರಂತರವಾಗಿ ನಕ್ಸಲ್‌ ಪ್ರದೇಶಗಳ ಸಂಪರ್ಕದಲ್ಲಿಟ್ಟುಕೊಂಡು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಾದ ಕೆಲಸ ಇದು. ಸರಕಾರ ನಿಮ್ಮನ್ನು ಶೋಷಿಸುತ್ತಿದೆ. ಆ ವ್ಯವಸ್ಥೆಯ ವಿರುದ್ಧ ಬಂಡೆದ್ದು ನಿಮಗೆ ನಾವು ನ್ಯಾಯ ಕೊಡಿಸುತ್ತೇವೆ ಎನ್ನುವುದು ಜನರ ಮನಪರಿವರ್ತಿಸಲು ನಕ್ಸಲರು ಉಪಯೋಗಿಸುವ ವರಸೆ. ಸರಕಾರ ಇರುವುದು ನಿಮ್ಮ ಶೋಷಣೆಗಲ್ಲ ಬದಲಾಗಿ ಉದ್ಧಾರಕ್ಕೆ. ಸರಕಾರಿ ವ್ಯವಸ್ಥೆಯ ಜತೆಗೆ ನಿಂತರೆ ಮಾತ್ರ ಬದುಕು ಭದ್ರವಾಗಬಹುದು 

ಎನ್ನುವ ಭರವಸೆಯನ್ನು ಮೂಡಿಸುವುದು ಈ ನಿಟ್ಟಿನಲ್ಲಿ ತುರ್ತಾಗಿ ಆಗಬೇಕಾದ ಕೆಲಸ. ಛತ್ತೀಸ್‌ಗಢದಂಥ ಪುಟ್ಟ ರಾಜ್ಯದಲ್ಲಿ ನಕ್ಸಲರ ಸಮಸ್ಯೆ ಇದೆ. ಈ ಭಾಗದ ಜನರು ನಕ್ಸಲರಿಗೆ ಹೆದರಿ ಪ್ರಜಾತಂತ್ರದ ಜೀವಾಳವಾಗಿರುವ ಮತದಾನ ಪ್ರಕ್ರಿಯೆಯಿಂದ ದೂರವುಳಿದರೆ ಅಥವಾ ಅದರ ಮೇಲೆ ನಿರಾಸಕ್ತಿ ತೋರಿಸಿದರೆ ಒಟ್ಟಾರೆಯಾಗಿ ಇದರಿಂದ ಪ್ರಜಾತಂತ್ರ ವ್ಯವಸ್ಥೆಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಕಾನೂನು ಬಾಹಿರ ಪರ್ಯಾಯ ವ್ಯವಸ್ಥೆಯೊಂದು ಇಷ್ಟು ಪ್ರಬಲವಾಗಿ ಜನರನ್ನು ನಿಯಂತ್ರಿಸಲು ಸಾಧ್ಯ ಎನ್ನುವುದಾದರೆ ಅದು ನೀಡುವ ಸಂದೇಶವೇ ಬೇರೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಪ್ರಜಾತಂತ್ರದಿಂದ ಮಾತ್ರ ಅಭಿವೃದ್ಧಿ ಹಾಗೂ ಸುರಕ್ಷತೆ ಎಂಬುದನ್ನು ಜನರಿಗೆ ಒತ್ತಿ ಹೇಳಬೇಕಾದುದು ಕೂಡಲೇ ಆಗಬೇಕಾದ ಕೆಲಸ.


Trending videos

Back to Top