CONNECT WITH US  

ಅಸ್ಥಿರ ಅಸ್ತಿತ್ವ : ಇನ್ನಾದರೂ ಆಡಳಿತ ಮಾಡಿ

ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದ್ದರೂ ಇನ್ನೂ ಸಂಪೂರ್ಣವಾಗಿ ಆಡಳಿತದಲ್ಲಿ ತೊಡಗಿದಂತೆ ಕಂಡುಬರುತ್ತಿಲ್ಲ. ಮೈತ್ರಿ ಪಕ್ಷಗಳ ನಡುವಣ ಹೊಂದಾಣಿಕೆಯ ಕೊರತೆ ರಾಜ್ಯದ ಆಡಳಿತದ ಮೇಲೆ ನೇರ ಪರಿಣಾಮವನ್ನು ಬೀರುತ್ತಿದೆ. ಇದಕ್ಕೆ ಸರಿಹೊಂದುವಂತೆ 104 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಇನ್ನೂ ಸರಕಾರ ರಚಿಸುವ ಗುಂಗಿನಲ್ಲೇ ಇದೆ. ಈ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಈವರೆಗೂ ರಾಜ್ಯದ ಮೂರೂ ಪ್ರಮುಖ ಪಕ್ಷಗಳ ನಾಯಕರ ವರ್ತನೆ, ನಡವಳಿಕೆಗಳನ್ನು ನೋಡಿ ಜನರು ರೋಸಿ ಹೋಗಿದ್ದಾರೆ. ಚುನಾವಣಾ ಫ‌ಲಿತಾಂಶ ಘೋಷಣೆಯಾದಂದಿನಿಂದಲೂ ಮೂರೂ ಪಕ್ಷಗಳಿಗೂ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದೇ ಆಡಳಿತ ನಡೆಸುವುದಕ್ಕಿಂತ ಪ್ರಾಮುಖ್ಯವಾದ ಹಾಗೂ ದೊಡ್ಡ ಕೆಲಸವಾಗಿದೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣಚವನ ಸ್ವೀಕರಿಸಿದಾಗ ಆರಂಭವಾದ ಈ ಕಸರತ್ತು ಈಗಲೂ ಮುಗಿದಿಲ್ಲ. ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ರಚನೆಯಾದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಬಹುಮತಕ್ಕೆ ಅಗತ್ಯವಿರುವ ಸಂಖ್ಯೆಗಿಂತ ಹೆಚ್ಚಿನ ಶಾಸಕರನ್ನು ಹೊಂದಿದ್ದರೂ ನಿಶ್ಚಿಂತೆಯಿಂದೇನೂ ಇರಲಿಲ್ಲ. ತಮ್ಮ ಬುಟ್ಟಿಯಿಂದ ಕಪ್ಪೆಗಳು ಯಾವಾಗ ಬಿಜೆಪಿ ಬುಟ್ಟಿಗೆ ಜಿಗಿಯುತ್ತವೆಯೋ ಎಂಬ ಆತಂಕ ಇಂದಿಗೂ ಕಾಡುತ್ತಲೇ ಇದೆ. ಈ ಕಾರಣದಿಂದಾಗಿಯೇ ಇನ್ನೂ ಮೈತ್ರಿ ಸರಕಾರ ಪೂರ್ಣ ಪ್ರಮಾಣದ ಸಚಿವ ಸಂಪುಟವನ್ನು ಹೊಂದಿಲ್ಲ. ಎರಡೂ ಪಕ್ಷಗಳಲ್ಲಿ ಸಚಿವ ಸ್ಥಾನಾಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಹಾಗೂ ಹಲವು ಗುಂಪುಗಳಿರುವುದು ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಲೇ ಇದೆ. ಪ್ರಬಲ ವಿಪಕ್ಷವಾಗಿ ಆಡಳಿತಾರೂಢ ಮೈತ್ರಿ ಸರಕಾರದ ವಿರುದ್ಧ ಹರಿಹಾಯಲು ಬೊಗಸೆ ತುಂಬಾ ಅವಕಾಶಗಳು ಸಿಕ್ಕರೂ ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ಆಸಕ್ತಿ ವಹಿಸುತ್ತಿಲ್ಲ. 

ಕುಮಾರಸ್ವಾಮಿ ಹೊಸದಾಗಿ ಮಂಡಿಸಿದ್ದ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಿದ್ದೇ ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದ ಯೋಜನೆಗಳೂ ಮುಂದುವರಿಯಲಿವೆ ಎಂದು ಸಾರಿದ್ದರು. ರಾಜ್ಯದ ಬೊಕ್ಕಸ ಖಾಲಿಯಾಗಿದ್ದರೂ ಜೆಡಿಎಸ್‌ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಸಾಲ ಮನ್ನಾ ಸೇರಿ ಹತ್ತು ಹಲವು ಯೋಜನೆಗಳನ್ನು ಘೋಷಿಸಿದ್ದರು. ಆದರೆ ಇಂದಿಗೂ ಸಾಲ ಮನ್ನಾ ಸಹಿತ ಹೊಸ ಸರಕಾರದ ಯಾವೊಂದೂ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಇನ್ನು ಸಿದ್ದರಾಮಯ್ಯ ಸರಕಾರ ಘೋಷಿಸಿದ್ದ ಯೋಜನೆಗಳ ಅನುಷ್ಠಾನದ ಗೊಂದಲಗಳಂತೂ ಬಗೆಹರಿದಿಲ್ಲ. ಈ ಆರ್ಥಿಕ ವರ್ಷ ಮುಗಿಯಲು ಕೇವಲ ನಾಲ್ಕು ತಿಂಗಳುಗಳಷ್ಟೇ ಬಾಕಿ. ಆದರೂ ಸರಕಾರ ಮಾತ್ರ ಆಮೆಗತಿಯಲ್ಲಿದೆ. ಅಧಿಕಾರಿ ವರ್ಗವನ್ನು ಕೇಳುವವರೇ ಇಲ್ಲ. 

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ, ಆಸ್ತಿಪಾಸ್ತಿ ಹಾನಿ ಸಂಭವಿಸಿದ್ದರೆ ಉತ್ತರ ಕರ್ನಾಟಕದಲ್ಲಿ ವ್ಯಾಪಕ ಬರಗಾಲ ಕಾಣಿಸಿಕೊಂಡು ರೈತರು ಚಿಂತಾಕ್ರಾಂತರಾಗಿದ್ದಾರೆ. ಇದರಿಂದಾಗಿ ರೈತರು ಪ್ರತಿನಿತ್ಯ ಎಂಬಂತೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದ್ಯಾವುದರ ಗೊಡವೆಯೂ ಇಲ್ಲದಂತೆ ಆಡಳಿತ ಮತ್ತು ವಿಪಕ್ಷಗಳು ಪರಸ್ಪರ ರಾಜಕೀಯ ಕೆಸರೆರಚಾಟದಲ್ಲಿ ಮುಳುಗಿವೆ. ರೆಸಾರ್ಟ್‌ ರಾಜಕಾರಣ, ಶಾಸಕರ ಖರೀದಿ, ರಾಜೀನಾಮೆ ಮತ್ತಿತರ ವಿಚಾರಗಳ ಕುರಿತಾಗಿನ ಆಡಿಯೋ ಸಂಭಾಷಣೆ, ವಿಡಿಯೋಗಳು ಬಿಡುಗಡೆಯಾಗಿ, ಅದರ ತೇಪೆ ಹಾಕುವುದರಲ್ಲೇ ಮುಳುಗಿರುವ ಯಾವೊಬ್ಬ ನಾಯಕರಿಗೂ ರಾಜ್ಯದ ಅಭಿವೃದ್ಧಿ, ಜನರ ಸಮಸ್ಯೆಗಳ ಬಗೆಗೆ ಪರಿಹಾರ ಹುಡುಕಲು ಪುರಸೊತ್ತಿಲ್ಲ. ತುರ್ತಾಗಿ ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳ ಕುರಿತಂತೆ ಸಚಿವರು ಕೇವಲ ಹೇಳಿಕೆಗಳಿಗೆ ಸೀಮಿತರಾಗಿದ್ದಾರಷ್ಟೇ. ಇವೆಲ್ಲದರ ಹೊರತಾಗಿ ಅಧಿಕಾರಿಗಳ ಅದರಲ್ಲೂ ಹಿರಿಯ ಅಧಿಕಾರಿಗಳ ವರ್ಗಾವಣೆ ದಂಧೆ ಮಾತ್ರ ಅವರವರ ಆಸಕ್ತಿಗೆ ತಕ್ಕಂತೆ ನಡೆಯುತ್ತಲೇ ಇದೆ. ವರ್ಗಾವಣೆ ನಿರೀಕ್ಷೆಯಲ್ಲಿರುವ ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯತ್‌ ಮಟ್ಟದ ನೌಕರರು ಹಾಗೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಮನಸ್ಸೇ ಇಲ್ಲ. 

ಈ ಎಲ್ಲ ಲೋಪಗಳನ್ನು ಎತ್ತಿ ಹಿಡಿಯಬೇಕಿದ್ದ ಬಿಜೆಪಿಯೂ ನಿಷ್ಕ್ರಿಯವಾಗಿರುವುದು ಬೇಸರ ತರುವ ಸಂಗತಿ. ಬರಗಾಲಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪಕ್ಷಗಳ ಮುಖಂಡರು ತಂಡ ಮಾದರಿಯಲ್ಲಿ ವಾಸ್ತವಾಂಶ ಕಲೆ ಹಾಕುತ್ತಿದ್ದರೂ ಅದನ್ನು ಸರಕಾರದ ವಿರುದ್ಧ ಹೋರಾಟದ ಅಸ್ತ್ರವನ್ನಾಗಿ ರೂಪಿಸಿ ಜನರಿಗೆ ಹೇಗೆ ನ್ಯಾಯವನ್ನು ಒದಗಿಸುತ್ತಾರೋ ಕಾದು ನೋಡಬೇಕಿದೆ. ಇದನ್ನು ಹೊರತುಪಡಿಸಿದಂತೆ ವಿಪಕ್ಷ ಆರು ತಿಂಗಳಲ್ಲಿ ಗಟ್ಟಿ ಹೋರಾಟ ಮಾಡಿದ್ದು ಕಡಿಮೆ. ಆಡಳಿತ ಮತ್ತು ವಿಪಕ್ಷಗಳು ತಮ್ಮ ಈ ಎಲ್ಲ ರಾಜಕೀಯ ಪ್ರಹಸನಗಳಿಗೆ ಕೂಡಲೇ ಅಂತ್ಯ ಹಾಡಿ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳತ್ತ ಗಮನ ಹರಿಸಬೇಕು. ತುರ್ತು ಮತ್ತು ಆದ್ಯತೆಯನ್ನು ಆಳುವವರಿಗೆ ಜನರು ಹೇಳಿಕೊಡುವಂತಾಗಬಾರದು. ಈ ಅಂಶವನ್ನು ಸರಕಾರ ಗಮನದಲ್ಲಿಟ್ಟುಕೊಳ್ಳುವುದು ಒಳಿತು.


Trending videos

Back to Top