CONNECT WITH US  

ಭಾರತ ತಂಡದ ಪ್ರಾಬಲ್ಯ: ಐತಿಹಾಸಿಕ ಗೆಲುವು

ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್‌ ತಂಡ ಇತಿಹಾಸ ರಚಿಸಿದೆ. ಎರಡೂ ರಾಷ್ಟ್ರಗಳ ನಡುವಿನ ಕ್ರಿಕೆಟ್‌ ಸಂಬಂಧದ ಒಟ್ಟು 71 ವರ್ಷಗಳಲ್ಲಿ(1948ರಿಂದ ಆರಂಭವಾಗಿ) ಇದೇ ಮೊದಲ ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದಿದೆ ಭಾರತ. ಒಟ್ಟು 12  ಸರಣಿಗಳ ನಂತರ ಈ ಸಾಧನೆ ಸಾಧ್ಯವಾಗಿದೆ. ಅಲ್ಲದೇ ಆಸ್ಟ್ರೇಲಿಯಾ ನೆಲದಲ್ಲಿ ಸರಣಿ ಗೆದ್ದ ಮೊದಲ ಏಷ್ಯನ್‌ ಪಡೆ ಎನ್ನುವ ಗರಿಮೆಯೂ ಟೀಂ ಇಂಡಿಯಾ ಪಾಲಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ವಿರುದ್ಧದ ದುರ್ಬಲ ಪ್ರದರ್ಶನದಿಂದ ಟೀಕೆಗೆ ಒಳಗಾಗಿದ್ದ ವಿರಾಟ್‌ ಕೊಹ್ಲಿ ಪಡೆ, ವಿದೇಶಿ ನೆಲದಲ್ಲಿ ತನ್ನ ನಿಜ ಸಾಮರ್ಥ್ಯವನ್ನು ತೋರಿಸುವ ಮೂಲಕ ತಾನೇಕೆ ನಂಬರ್‌ 1 ತಂಡ ಎನ್ನುವುದನ್ನು ಸಾಬೀತುಮಾಡಿ ಟೀಕಾಕಾರರನ್ನು ಸುಮ್ಮನಾಗಿಸಿದೆ.  ಭಾರತ ಅಡಿಲೇಡ್‌ನ‌ಲ್ಲಿ ಮೊದಲ ಟೆಸ್ಟ್‌ ಮ್ಯಾಚನ್ನು 31 ರನ್‌ಗಳಿಂದ ಗೆದ್ದಿತ್ತು, ನಂತರದ ಪರ್ಥ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಭಾರತವನ್ನು 146ರನ್‌ಗಳಿಂದ ಸೋಲಿಸಿತ್ತು. ಮೆಲ್ಬರ್ನ್ನಲ್ಲಿ ಅದ್ಭುತವಾಗಿ ತಿರುಗಿಬಿದ್ದ ಭಾರತ ಕಾಂಗಾರೂ ಪಡೆಯನ್ನು 137ರನ್‌ಗಳಿಂದ ಸೋಲಿಸಿ ಸರಣಿಯಲ್ಲಿ 2-1 ಮುನ್ನಡೆ ಪಡೆಯಿತು. ಸಿಡ್ನಿಯಲ್ಲಿನ ನಾಲ್ಕನೇ ಟೆಸ್ಟ್‌ ಮಳೆಯ ಕಾರಣದಿಂದ ಡ್ರಾನಲ್ಲಿ ಪರಿಸಮಾಪ್ತಿ ಆಗಿರದಿದ್ದರೆ ಈ ಮ್ಯಾಚ್‌ನಲ್ಲೂ ಭಾರತಕ್ಕೇ ಗೆಲುವು ಶತಸಿದ್ಧವಾಗಿತ್ತು. 

ಆಸ್ಟ್ರೇಲಿಯಾ ಭಾರತದ ಎದುರು ಸರಣಿ ಸೋತಿದ್ದಷ್ಟೇ ಅಲ್ಲದೆ, ತನ್ನ ನೆಲದಲ್ಲಿ 31 ವರ್ಷಗಳ ನಂತರ ಫಾಲೋಆನ್‌ಗೆ ಒಳಗಾಗುವಂತಾಯಿತು. ಕೊಹ್ಲಿ ಪಡೆ ಪರಿಪಕ್ವ ಟೆಸ್ಟ್‌ ಟೀಂನಂತೆ ಆಡುತ್ತಾ ಬಂದಿತು. ಆರಂಭದಲ್ಲಿ ಎದುರಾದ ಅನೇಕ ತಪ್ಪುಗಳನ್ನು ಸರಿಪಡಿಸಿಕೊಂಡು ಎಲ್ಲಾ ವಿಭಾಗಗಳಲ್ಲೂ ತನ್ನ ಶಕ್ತಿ ಪ್ರದರ್ಶಿಸಿತು. ಅವಶ್ಯಕತೆಗೆ ತಕ್ಕಂತೆ ತಂಡದಲ್ಲಿ ಪರಿವರ್ತನೆ ಮಾಡಿದ್ದು ಟೀಂ ಇಂಡಿಯಾಗೆ ಗುಣಾತ್ಮಕ ಅಂಶವಾಗಿ ಪರಿಣಮಿಸಿತು. ಇನ್ನಿಂಗ್ಸ್‌ ಆರಂಭ ಭಾರತಕ್ಕೆ ಸಮಸ್ಯೆಯಾಗಿ ಕಾಡಿತ್ತಾದರೂ, ಮಯಾಂಕ್‌ ಅಗರ್ವಾಲ್‌ ಬಂದ ಮೇಲೆ ಅಜಮಾಸು ಈ ಸಮಸ್ಯೆ ಬಗೆಹರಿಯಿತು. ಮಧ್ಯಮ ಕ್ರಮಾಂಕದಲ್ಲಿ ಗಟ್ಟಿಯಾಗಿ ನಿಂತು ಆಡುವ ಆಟಗಾರರ ಕೊರತೆಯನ್ನು ಚೇತೇಶ್ವರ ಪೂಜಾರ್‌ ತುಂಬಿದರು. ತಮ್ಮ ಅದ್ಭುತ ಪ್ರದರ್ಶನದ ಮೂಲಕ ಸರಣಿ ಶ್ರೇಷ್ಠರಾದರು. ಅದೇ ರೀತಿಯಲ್ಲೇ ರಿಷಬ್‌ ಪಂತ್‌ ತಮ್ಮ ಎಂದಿನ ಭರ್ಜರಿ ಶೈಲಿಯಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳನ್ನು ಕಾಡಿದರು. 

ಭಾರತೀಯ ಬೌಲರ್‌ಗಳು ಸಾಮಾನ್ಯವಾಗಿ ಮನೆಯ ಹುಲಿಗಳೆಂಬ ಟೀಕೆ ಎದುರಿಸುತ್ತಾರೆ. ಆದರೆ ಈ ಬಾರಿ ಭಾರತದ ವೇಗಿಗಳ ಎದುರು ಆಸ್ಟ್ರೇಲಿಯನ್‌ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಚೆಲ್ಲಿದ ಪರಿ ಈ ಟೀಕೆಗಳನ್ನು ಹುಸಿಯಾಗಿಸಿದೆ. ಅದರಲ್ಲೂ 21 ವಿಕೆಟ್‌ಗಳನ್ನು ಕಿತ್ತು 
ಟೀಂ ಇಂಡಿಯಾ ಪಾಲಿಗೆ ಮ್ಯಾಚ್‌ ವಿನ್ನರ್‌ ಆದ ಜಸಿøತ್‌ ಬೂಮ್ರಾ,  ತಮ್ಮ ವಿಶಿಷ್ಟ ಶೈಲಿಯ ಬೌಲಿಂಗ್‌ನಿಂದ ಆಸ್ಟ್ರೇಲಿಯನ್‌ ಬ್ಯಾಟ್ಸ್‌ಮನ್‌ಗಳನ್ನು ವಿಪರೀತ ಕಾಡಿದರು. ನಿರಂತರ 140 ಕಿ.ಮಿ. ವೇಗದಲ್ಲಿ ಅವರು ಬೌಲಿಂಗ್‌ ಮಾಡಿದ್ದೂ ಕೂಡ ಬದಲಾದ ಭಾರತೀಯ ಕ್ರಿಕೆಟರ್‌ಗಳ ಫಿಟೆ°ಸ್‌ಗೆ ಕನ್ನಡಿ ಹಿಡಿದಂತಿದೆ. ಮೊಹಮ್ಮದ್‌ ಶಮಿ ಕೂಡ ಪ್ರಮುಖ ಸಮಯದಲ್ಲಿ ವಿಕೆಟ್‌ ಪಡೆದು ನೆರವಾದರು. ಆಸ್ಟ್ರೇಲಿಯ ಪಿಚ್‌ಗಳಲ್ಲಿನ ಆರಂಭದ ಪುಟಿತದ ಲಾಭವನ್ನು ಇಶಾಂತ್‌ ಶರ್ಮಾ ಉತ್ತಮವಾಗಿ ಬಳಸಿಕೊಂಡರು. ಇತ್ತ ಸ್ಪಿನ್ನರ್‌ಗಳ ಪ್ರದರ್ಶನವೂ ಉಲ್ಲೇಖನೀಯ. ರವೀಂದ್ರ ಜಡೇಜಾ ಮತ್ತು ಕುಲದೀಪ್‌ ಯಾದವ್‌ ಕೂಡ ಉತ್ತಮ ಪ್ರದರ್ಶನ ನೀಡಿದರು. ಅಂತಿಮ ಟೆಸ್ಟ್‌ನಲ್ಲಿ ಕುಲದೀಪ್‌ ಅವರು ತಮ್ಮ ವೃತ್ತಿ ಜೀವನದಲ್ಲಿ 2ನೇ ಬಾರಿಗೆ 5 ವಿಕೆಟ್‌ ಗೊಂಚಲು ಪಡೆದಿದ್ದು ಮತ್ತೂಂದು ವಿಶೇಷ. ಆಸ್ಟ್ರೇಲಿಯನ್‌ ಆಟಗಾರರಿಗೆ ಈ ಸರಣಿಯಲ್ಲಿ ಒಂದೂ ಶತಕ ದಾಖಲಿಸಲು ಆಗಲಿಲ್ಲ ಎನ್ನುವ ಅಂಶವೇ ಭಾರತದ ಬೌಲಿಂಗ್‌ ಪಾರಮ್ಯವನ್ನು ಸಾರುತ್ತದೆ. ಒಟ್ಟಿನಲ್ಲಿ ಈ ಗೆಲುವು ವಿರಾಟ್‌ ಕೊಹ್ಲಿಗೆ ದೊಡ್ಡ ಶಕ್ತಿ ತುಂಬಿರುವುದು ಸುಳ್ಳಲ್ಲ. ಭಾರತೀಯ ತಂಡ ಎರಡನೇ ಟೆಸ್‌ನಲ್ಲಿ  ಸೋಲುತ್ತಿದ್ದಂತೆಯೇ ಕೊಹ್ಲಿ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳು ಉದ್ಭವಿಸಿದ್ದವು. ಆ ಪ್ರಶ್ನೆಗಳಿಗೆ ಸರಣಿ ಗೆಲುವು ಉತ್ತರವಾಗಿ ಬದಲಾಗಿದೆ.  ಆದರೆ ಹಾಗೆಂದ ಮಾತ್ರಕ್ಕೆ, ಈ ಸರಣಿ ಜಯವನ್ನು 1983 ಮತ್ತು 2011ರ ವಿಶ್ವಕಪ್‌ಗಿಂತಲೂ ಮಹತ್ವದ್ದು ಎಂಬ ಧಾಟಿಯಲ್ಲಿ ಕೊಹ್ಲಿ ಮತ್ತು ಕೋಚ್‌ ಶಾಸ್ತ್ರಿ ಮಾತನಾಡಿರುವುದು ಸರಿಯಲ್ಲ. ಆದರೂ ಗೆಲುವಿನ ಸಂಭ್ರಮೋತ್ಸಾಹದಲ್ಲಿ ಬಾಯ್ತಪ್ಪಿ ಮಾತನಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅವರ ಮಾತನ್ನು ನೋಡಬೇಕಷ್ಟೆ...ಅದೇನೇ ಇರಲಿ, ಟೀಂ ಇಂಡಿಯಾಕ್ಕೊಂದು ಮಂದಹಾಸದ ಕಂಗ್ರಾಟ್ಸ್‌!

Trending videos

Back to Top