CONNECT WITH US  

ಸಾವಿನ ಬಾಗಿಲಲ್ಲಿದ್ದವರು ಹೇಳಿದ ಜೀವನ ಪಾಠಗಳು

ನಾನೇನೋ ಅಪಶಕುನ ನುಡಿದಂತೆ ಅಚ್ಚರಿಯಿಂದ ನೋಡಿದ ಬರ್ನೆಸ್‌...

ಹಿರಿಯರೊಬ್ಬರಿಗೆ ಕಿವಿಯಾಗುತ್ತಿರುವ ಬ್ರಾನಿ.

ಬ್ರಾನಿ ವೇರ್‌  ನರ್ಸ್‌ ಆಗಿದ್ದವರು. ಅವರು ತಮ್ಮ ವೃತ್ತಿ ಜೀವನದ ಬಹುಭಾಗವನ್ನು "ಸಾವಿನಂಚಿನಲ್ಲಿರುವ' ರೋಗಿಗಳೊಂದಿಗೆ ಕಳೆದವರು. ನಿರ್ದಿಷ್ಟವಾಗಿ ಹೇಳಬೇಕೆಂದರೆ, ವ್ಯಕ್ತಿಯೊಬ್ಬನ ಕೊನೆಯ 12 ವಾರಗಳನ್ನು ಹತ್ತಿರದಿಂದ ನೋಡಿದವರು. ಸಹಜವಾಗಿಯೇ ರೋಗಿಗಳಿಗೆ ತಮ್ಮ ಶುಶ್ರೂಶೆ ಮಾಡುವ ನರ್ಸ್‌ಗಳ ಬಗ್ಗೆ ಕೊನೆಯ ದಿನಗಳಲ್ಲಿ ಒಂದು ಬಾಂಧವ್ಯ ಬೆಳೆಯುತ್ತದೆ. ಹೀಗಾಗಿ ಅವರು ತಮ್ಮ ಜೀವನಾನುಭವಗಳನ್ನು-ಜೀವನ ಪಾಠಗಳನ್ನು ಅವರೊಂದಿಗೆ ಹಂಚಿಕೊಳ್ಳಲಾರಂಭಿಸಿದರು..

""ನಾನು ಬದುಕನ್ನು ಉತ್ಕಟವಾಗಿ ಪ್ರೀತಿಸಬೇಕೆಂದು, ಪ್ರತಿ ಕ್ಷಣವೂ ಅಡ್ವೆಂಚರಸ್‌ ಆಗಿರಬೇಕೆಂದು, ಧೈರ್ಯದಿಂದ ಮುನ್ನುಗ್ಗಬೇಕೆಂದು ಬಹಳಷ್ಟು ಬಾರಿ ಯೋಚಿಸುತ್ತೇನೆ. ಆದರೆ, ಹಾಗೆ ಬದುಕುವುದೇ ಇಲ್ಲ. ಒಂದೊಂದು ದಿನವಂತೂ ಈ ಯೋಚನೆ ತೀವ್ರವಾಗಿ ಮನಸ್ಸನ್ನು ಆವರಿಸಿಬಿಡುತ್ತದೆ. ಆದರೆ, ಮರುದಿನ ಆ ಭಾವನೆ ಇರುವುದೇ ಇಲ್ಲ. ನಿನ್ನೆಯ ದಿನ ಮಾಡಿದ್ದ ನಿಶ್ಚಯಗಳೆಲ್ಲವನ್ನೂ ಮರೆತುಬಿಡುತ್ತೇನೆ, ಮತ್ತೆ ಯಥಾರೀತಿ ಅದೇ ಹಳೆಯ ಜೀವನ ಶೈಲಿಯನ್ನು ಮುಂದುವರಿಸುತ್ತೇನೆ, ಗೋಳಾಡುತ್ತೇನೆ, ಪರದಾಡುತ್ತೇನೆ...ಏಕೆ, ನನಗೆ ಮುಕ್ತವಾಗಿ ಬದುಕಲು ಆಗುತ್ತಿಲ್ಲ?' ಎಂದು ಗೆಳೆಯ ಎಡ್ವರ್ಡ್‌ ಬರ್ನೆಸ್‌ ಕೇಳಿದ. 

ನಾನು ಕೂಡಲೇ ಅವನಿಗೊಂದು ಪ್ರಶ್ನೆ ಕೇಳಿದೆ: "ನೀನು 
ಸಾವಿನ ಬಗ್ಗೆ ದಿನಕ್ಕೆ ಎಷ್ಟು ಬಾರಿ ಯೋಚಿಸುತ್ತೀಯಾ?'. ನಾನೇನೋ ಅಪಶಕುನ ನುಡಿದಂತೆ ಅಚ್ಚರಿಯಿಂದ ನೋಡಿದ ಬರ್ನೆಸ್‌. "ಸಾವಿನ ಬಗ್ಗೆ ಯೋಚಿಸುವಷ್ಟು ವಯಸ್ಸಾಗಿಲ್ಲ ನನಗೆ! ನಾನು ಬದುಕಿನ ಬಗ್ಗೆ ಮಾತನಾಡಿದರೆ ನೀನು ಸಾವಿನ ಬಗ್ಗೆ ಕೇಳ್ತಿದೀಯಲ್ಲ' ಅಂದ. "ಸಾವನ್ನು ಗೌರವಿಸಿದಾಗ ಮಾತ್ರ ನಾವು ಬದುಕನ್ನು ಅಪ್ಪಿಕೊಳ್ಳಬಲ್ಲೆವು ಬರ್ನೆಸ್‌. ನಮ್ಮ ಬದುಕು ಶಾಶ್ವತವಲ್ಲ ಎಂದು ನಿತ್ಯ ಯೋಚಿಸಿದಾಗ ಮಾತ್ರ ನಾವು ಬದುಕನ್ನು ಉತ್ಕಟವಾಗಿ ಪ್ರೀತಿಸಬಲ್ಲೆವು' ಅಂದೆ...ಅವನು ಯೋಚನೆಯಲ್ಲಿ ಮುಳುಗಿದ. ಆದರೂ ಸಾವು ಎನ್ನುವ ಪದ ಅವನ ಮುಖವನ್ನು ಕಳೆಗುಂದಿಸಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು... 
ಅದೇ ಸಮಯದಲ್ಲೇ ನಾನು "ದಿ  ಟಾಪ್‌ ಫೈವ್‌ ರಿಗ್ರೆಟ್ಸ್‌ ಆಫ್ ದಿ ಡೈಯಿಂಗ್‌' ಎನ್ನುವ ಪುಸ್ತಕವನ್ನು ಓದಿ ಮುಗಿಸಿದ್ದೆ. ಆಸ್ಟ್ರೇಲಿಯಾದ ನರ್ಸ್‌ ಬ್ರಾನಿ ವೇರ್‌ ಬರೆದ ಪುಸ್ತಕವದು. ಆ ಪುಸ್ತಕವನ್ನು ಅವನ ಕೈಗಿತ್ತು, ಅದನ್ನು ಓದಲು ಹೇಳಿ ಕಳುಹಿಸಿದೆ...

ಬ್ರಾನಿ ವೇರ್‌ ಆಸ್ಟ್ರೇಲಿಯಾದ ದೊಡ್ಡ ಆಸ್ಪತ್ರೆಯೊಂದರಲ್ಲಿ ಹಿರಿಯ ನರ್ಸ್‌ ಆಗಿದ್ದವರು. ಅವರು ತಮ್ಮ ವೃತ್ತಿ ಜೀವನದ ಬಹುಭಾಗವನ್ನು "ಸಾವಿನಂಚಿನಲ್ಲಿರುವ' ರೋಗಿಗಳೊಂದಿಗೆ ಕಳೆದವರು. ನಿರ್ದಿಷ್ಟವಾಗಿ ಹೇಳಬೇಕೆಂದರೆ, ವ್ಯಕ್ತಿಯೊಬ್ಬನ ಕೊನೆಯ 12 ವಾರಗಳನ್ನು ಹತ್ತಿರದಿಂದ ನೋಡಿದವರು. ಸಹಜವಾಗಿಯೇ ರೋಗಿಗಳಿಗೆ ತಮ್ಮ ಶುಶ್ರೂಶೆ ಮಾಡುವ ನರ್ಸ್‌ಗಳ ಬಗ್ಗೆ ಕೊನೆಯ ದಿನಗಳಲ್ಲಿ ಒಂದು ಬಾಂಧವ್ಯ ಬೆಳೆಯುತ್ತದೆ. ಹೀಗಾಗಿ ಅವರು ತಮ್ಮ ಜೀವನಾನುಭವಗಳನ್ನು-ಜೀವನ ಪಾಠಗಳನ್ನು ಅವರೊಂದಿಗೆ ಹಂಚಿಕೊಳ್ಳಲಾರಂಭಿಸುತ್ತಾರೆ. ಬ್ರಾನಿವೇರ್‌, ಇಂಥ ನೂರಾರು ರೋಗಿಗಳೊಂದಿಗೆ ಮಾತನಾಡಿ, ಅವರೆಲ್ಲ ಕೊನೆಯ ದಿನಗಳಲ್ಲಿ ಅನುಭವಿಸುವ ವಿಷಾದಗಳ ಪಟ್ಟಿಯನ್ನು ಒಂದು ಲೇಖನದ ರೂಪದಲ್ಲಿ ಪ್ರಕಟಿಸಿದ್ದರು...ಮುಂದೆ ಆ ಲೇಖನಕ್ಕೇ ಪುಸ್ತಕದ ರೂಪ ಕೊಟ್ಟರು..

ಸಾವು ಮತ್ತು ಬದುಕಿನ ನಿಜ ಆಟ(ಹಗ್ಗಜಗ್ಗಾಟ) ನಡೆಯುವುದೇ ಆಸ್ಪತ್ರೆಗಳಲ್ಲಿ. ಅತ್ತ ಅನಂತ ಕತ್ತಲು ಮನುಷ್ಯನನ್ನು ತನ್ನೊಡಲಲ್ಲಿ ಲೀನ ಮಾಡಿಕೊಳ್ಳಲು ಅವನನ್ನು ಎಳೆಯುತ್ತಿರುತ್ತದೆೆ, ಇತ್ತ ಬದುಕೆಂಬ ಬೆಳಕಿನ ಕೈ ಅವನ ಚೇತನವನ್ನು ಉಳಿಸಲು ಹೆಣಗುತ್ತಿರುತ್ತದೆ. ಅಯ್ಯೋ ದೇವರೇ ಇದೊಂದು ಚಾನ್ಸ್‌ ಕೊಟ್ಟುಬಿಡು. ಅರ್ಧಕ್ಕೇ ಬಿಟ್ಟ ಅನೇಕ ಕೆಲಸಗಳಿವೆ. ಈ ಬಾರಿ ನಿಜಕ್ಕೂ ಬದುಕಿಬಿಡುತ್ತೇನೆ, ಒಂದೇ ಒಂದು ಚಾನ್ಸ್‌ ಎಂದು ಮನಸ್ಸು ಚೀರುತ್ತಿರುತ್ತದೆ...ಆದರೆ ಸಾವಿನ ಶಕ್ತಿ ನಿಜಕ್ಕೂ ಅಗಾಧವಾದದ್ದು...ಕೊನೆಗೆ ಬದುಕನ್ನದು ತನ್ನ ಬಳಿ ಎಳೆದುಕೊಂಡು ವಿಜಯಿಯಾಗುತ್ತದೆ. ""ಸಾವಿಗೆ ಹತ್ತಿರವಾಗುವ ದಿನಗಳಿವೆಯಲ್ಲ, ವ್ಯಕ್ತಿಯೊಬ್ಬನಿಗೆ ನಿಜಕ್ಕೂ ಬದುಕಿನ ಅನೇಕ ಪ್ರಶ್ನೆಗಳಿಗೆ ಆ ಸಮಯದಲ್ಲಿ ಉತ್ತರ ದೊರೆಯುತ್ತದೆೆ.  ಒಂದು ಸ್ಪಷ್ಟತೆ ದೊರಕಿಬಿಡುತ್ತದೆ. ಆ ಉತ್ತರಗಳಿಗೆ ನಾವೂ ಕಿವಿಯಾದರೆ "ಅನವಶ್ಯಕ' ಮತ್ತು "ಅವಶ್ಯಕಗಳ' ನಡುವಿನ ವ್ಯತ್ಯಾಸವನ್ನು ಗುರುತಿಸಿ ಬದುಕಲಾರಂಭಿಸುತ್ತೇವೆ'' ಎನ್ನುತ್ತಾರೆ ಬ್ರಾನಿ. ವಿಶೇಷವೆಂದರೆ, ಬದುಕಿನ ಅಂತ್ಯದಲ್ಲಿರುವ ಯಾವ ವ್ಯಕ್ತಿಯೂ, "ನಾನು ಇನ್ನಷ್ಟು ಸೆಕ್ಸ್‌ ಮಾಡಬೇಕಿತ್ತು' "ಮತ್ತಷ್ಟು ಹಣ ಗಳಿಸಬೇಕಿತ್ತು' ಎಂದು ಹೇಳಲಿಲ್ಲ ಎನ್ನುವುದು!

ರೋಗಿಗಳು ಕೊನೆಯ ಸಮಯದಲ್ಲಿ ಯಾವ ವಿಷಯದಲ್ಲಿ ಹೆಚ್ಚು ವಿಷಾದ ಪಟ್ಟರು ಎನ್ನುವ ಟಾಪ್‌ ಐದು ಪಟ್ಟಿಯನ್ನು ಬ್ರಾನಿ ವೇರ್‌ ದಾಖಲಿಸಿದ್ದು ಹೀಗೆ:
1 ಇನ್ನೊಬ್ಬರು ನಿರೀಕ್ಷಿಸಿದಂತೆ ಬದುಕಿಬಿಟ್ಟೆ, ನನಗನ್ನಿಸಿದಂತೆ ಬದುಕುವ ಧೈರ್ಯ ಮಾಡಬೇಕಿತ್ತು. 
"ಅತಿ ಹೆಚ್ಚು ಜನರು ಪೇಚಾಡಿದ್ದು, ಗೋಳಾಡಿದ್ದು ಇದೇ ವಿಷಯದಲ್ಲಿ. ತಮ್ಮ ಬದುಕು ಇನ್ನೇನು ಮುಗಿಯಲು ಬಂತು ಎಂದು ಅರ್ಥವಾಗುತ್ತಿದ್ದಂತೆಯೇ, ಜನರು ತಮ್ಮ ಬದುಕನ್ನು ಹಿಂದಿರುಗಿ ನೋಡಲಾರಂಭಿಸುತ್ತಾರೆ. ಆಗ ಅವರಿಗೆ ಅಪೂರ್ಣ ಕನಸುಗಳು ಕಣ್ಣೆದುರಿಗೆ ಬರಲಾರಂಭಿಸುತ್ತವೆ. ತಮ್ಮಲ್ಲಿನ ಧೈರ್ಯದ ಕೊರತೆಯಿಂದಲೇ ಈ ಕನಸುಗಳು ಅಪೂರ್ಣವಾದವು ಎಂದು ಅರಿವಾಗುತ್ತದೆ. ಆರೋಗ್ಯವೆನ್ನುವುದು ಬಹು ದೊಡ್ಡ ಸ್ವಾತಂತ್ರÂ ಎನ್ನುವುದನ್ನು, ಅದನ್ನು ಕಳೆದುಕೊಂಡವನು ಮಾತ್ರ ಅರ್ಥಮಾಡಿಕೊಳ್ಳಬಲ್ಲ.' 

2 ಕೆಲಸದಲ್ಲೇ ಕಳೆದುಹೋಯಿತು ಬದುಕು
"ನಾನು ಶುಶ್ರೂಶೆ ನೀಡಿದ ಪ್ರತಿಯೊಬ್ಬ ಪುರುಷ ರೋಗಿಯೂ ಈ ಮಾತನ್ನು ಹೇಳುತ್ತಿದ್ದ. ಅವರು ಕಚೇರಿ ಕೆಲಸದಲ್ಲಿ ಎಷ್ಟು ಕಳೆದುಹೋಗಿದ್ದರೆಂದರೆ ತಮ್ಮ ಮಕ್ಕಳ ಬೆಳವಣಿಗೆಯನ್ನು ಸರಿಯಾಗಿ ನೋಡಲಿಲ್ಲ, ಪತ್ನಿಯ ಸಾಂಗತ್ಯವನ್ನೂ ಪೂರ್ಣವಾಗಿ ಪಡೆಯಲಿಲ್ಲ. ಹೆಣ್ಣು ಮಕ್ಕಳಲ್ಲೂ ಕೂಡ ಈ ವಿಷಯದಲ್ಲಿ ವಿಷಾದವಿತ್ತಾದರೂ, ಈಗಿನ ಕಾಲದ ಹೆಣ್ಣುಮಕ್ಕಳಿಂದ  ಈ ರೀತಿಯ ಮಾತು ಹೆಚ್ಚು ಬಂದಿತು.'

3 ನನ್ನ ಭಾವನೆಗಳನ್ನು ಮುಚ್ಚಿಟ್ಟುಕೊಳ್ಳಬಾರದಿತ್ತು. 
""ಬೇರೆಯವರು ಏನೆಂದುಕೊಳ್ಳುತ್ತಾರೋ ಎಂಬ ಭಯದಲ್ಲಿ ಅನೇಕರು ತಮ್ಮ ಭಾವನೆಗಳನ್ನು ಹತ್ತಿಕ್ಕುವುದರಲ್ಲಿ ಪರಿಣತರಾಗಿಬಿಟ್ಟಿದ್ದರು. ಈ ಕಾರಣಕ್ಕಾಗಿಯೇ, ತೀರಾ 
ಸಾಮಾನ್ಯ ಬದುಕು ಅವರದ್ದಾಗಿತ್ತು. ತಮ್ಮ ಪೂರ್ಣ ಸಾಮರ್ಥ್ಯವನ್ನು ತಲುಪಲು ಅವರಿಗೆಲ್ಲ ಸಾಧ್ಯವಾಗಲೇ ಇಲ್ಲ. ಅನೇಕರು ಇದರಿಂದಾಗಿ ಹೊಟ್ಟೆ ಕಿಚ್ಚು, ದುಗುಡ, ಬೇಸರದ ಬದುಕನ್ನು ಸವೆಸಿಬಿಟ್ಟರು''

4 ಗೆಳೆಯರೊಂದಿಗೆ ಸಂಪರ್ಕದಲ್ಲಿರಬೇಕಿತ್ತು..
"ಬಹುತೇಕರು ಕೊನೆಯ ದಿನಗಳಲ್ಲಿ ತಮ್ಮ ಬಾಲ್ಯದ ಗೆಳೆಯ-ಗೆಳತಿಯರನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಆ ಸಮಯದಲ್ಲಿ ಆ ಗೆಳೆಯರನ್ನು ಹುಡುಕುವುದು ಕಷ್ಟದ ಕೆಲಸ. ಅನೇಕರು ತಮ್ಮ ಬದುಕಿನಲ್ಲಿ ಎಷ್ಟು ಬ್ಯುಸಿ ಆಗಿಬಿಡುತ್ತಾರೆ 
ಎಂದರೆ, ವರ್ಷಗಳು ಉರುಳಿದಂತೆ ಸ್ನೇಹಿತರಿಂದ ದೂರವಾಗಿಬಿಡುತ್ತಾರೆ. ಆದರೆ ಬಾಲ್ಯದ ಗೆಳೆಯರು ನಮ್ಮ ನೆನಪುಗಳೊಂದಿಗೆ ಬೆಸೆದುಕೊಂಡಿರುತ್ತಾರೆ. ಹೀಗಾಗಿ, ನಾವು ನಮ್ಮ ಜೀವನವನ್ನು ಹಿಂದಿರುಗಿ ನೋಡಿದಾಗ ಪ್ರಮುಖವಾಗಿ ನೆನಪಾಗುವುದು ಆ ಗೆಳೆಯರೇ... '

5 ನಾನು ಖುಷಿಯಾಗಿರಬೇಕಿತ್ತು
"ಅನೇಕರಿಗೆ ಸಂತೋಷವೆನ್ನುವುದು ಒಂದು ಆಯ್ಕೆ, ಅದು ನಮ್ಮ ನಿತ್ಯದ ಸಹಜ ಸ್ಥಿತಿಯಾಗಬೇಕು ಎನ್ನುವುದೇ ತಿಳಿದಿರುವುದಿಲ್ಲ. ಅವರು ಅದನ್ನು ಒಂದು ಗುರಿ ಎಂದು ಭಾವಿಸಿಬಿಡುತ್ತಾರೆ. ನಾನು ಕಾರು ಕೊಂಡರೆ ಸಂತೋಷದಿಂದಿರುತ್ತೇನೆ, ಬ್ಯಾಂಕ್‌ ಖಾತೆಯಲ್ಲಿ ಕೋಟಿ ಕೋಟಿ ಹಣ ಬಂದರೆ ಖುಷಿಯಾಗಿರುತ್ತೇನೆ...ಎಂದು ಆ ಗುರಿಯ ಬೆನ್ನತ್ತುತ್ತಾರೆ. ಅದು ಬಂದರೂ ಅವರಿಗೆ ಹೆಚ್ಚು ಖುಷಿಯೇನೂ ಆಗುವುದಿಲ್ಲ. ಆಗಲೇ ಹೇಳಿದಂತೆ ಸಂತೋಷವೆನ್ನುವುದು ಆಯ್ಕೆ. ಅದು ಸಹಜ ಸ್ಥಿತಿಯಾಗಬೇಕು ಎಂದು ಎಲ್ಲರಿಗೂ ಮನವರಿಕೆಯಾಗಬೇಕು. 

ಮೂರ್ನಾಲ್ಕು ತಿಂಗಳ ನಂತರ ಎಡ್ವರ್ಡ್‌ ಬರ್ನೆಸ್‌ ಆಫೀಸಿಗೆ ಬಂದ. ನಾನು ಬಹಳ ಉತ್ಸಾಹದಿಂದ ಕೇಳಿದೆ, "ಹೇಗಿದ್ದೀಯಾ? ಏನು ಮಾಡ್ತಿದೀಯ ಈಗ?'
ಅವ ನಗುತ್ತಾ ಅಂದ, "ಉತ್ಕಟವಾಗಿ ಬದುಕುತ್ತಿದ್ದೇನೆ!'
ನಾನು ಕೇಳಿದೆ, "ಅದ್ಹೇಗೆ?'
"ನಮ್ಮ ಬದುಕಿನ ವ್ಯಾಲಿಡಿಟಿ ಯಾವಾಗ ಬೇಕಾದರೂ ಮುಗೀಬಹುದು ಅಂತ  ನಿತ್ಯವೂ ಮನನ ಮಾಡಿಕೊಳ್ಳುವ ಮೂಲಕ!'  ಎನ್ನುತ್ತಾ ಪುಸ್ತಕವನ್ನು ತನ್ನ ಬ್ಯಾಗಿನಿಂದ ತೆಗೆದು ನನ್ನ ಮೇಜಿನ ಮೇಲಿಟ್ಟ...

ಶಾರೆನ್‌ ಬೆನೆಟ್‌,  ಲೇಖಕಿ, ಹೆಲ್ತ್‌ಕೋಚ್‌


Trending videos

Back to Top