CONNECT WITH US  

ಆಡಿಯೋ ರಾದ್ಧಾಂತ ಜನರು ಗಮನಿಸುತ್ತಿದ್ದಾರೆ

ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರಸಕ್ತ ರಾಜಕೀಯ ಚದುರಂಗದಾಟದಲ್ಲಿ ಮೊದಲು ಬಿಜೆಪಿ ಉರುಳಿಸಿದ ದಾಳಕ್ಕೆ ಸಮ್ಮಿಶ್ರ ಸರ್ಕಾರದ ದೋಸ್ತಿಗಳು ಕಂಗಾಲಾಗಿದ್ದವು. ರೆಸಾರ್ಟ್‌ ಯಾತ್ರೆ, ಶಾಸಕರಿಬ್ಬರ ಬಡಿದಾಟ, ಅತೃಪ್ತರ ಮುಂಬೈ ಯಾತ್ರೆ ಕಾಂಗ್ರೆಸ್‌ ಪಾಲಿಗಂತೂ ತಲೆತಗ್ಗಿಸುವಂತೆ ಮಾಡಿತ್ತು. ಆದರೆ, ಆಟದ ಕೊನೆ ಘಳಿಗೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಉರುಳಿಸಿದ ದಾಳ ಬಿಜೆಪಿಯನ್ನು ಸಂಕಷ್ಟ‌ಕ್ಕೆ ಸಿಲುಕಿಸಿರುವಂತೆ ಕಂಡುಬರುತ್ತಿದೆ.

ಅದಕ್ಕೆಲ್ಲಾ ಕಾರಣವಾಗಿರುವುದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಫೋಟಿಸಿದ ಆಡಿಯೋ ಬಾಂಬ್‌.  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರದೆನ್ನಲಾದ ಮಾತುಗಳು, ಶಾಸಕರ ಖರೀದಿ ಆರೋಪ, ಬಳಿಕ ಎರಡೂ ಕಡೆಗಳ ಪರಸ್ಪರ ಸವಾಲು-ಜವಾಬುಗಳು ಒಂದು ನಿರ್ಣಾಯಕ ಹಂತದತ್ತ ಹೊರಳುತ್ತಿದೆ ಎಂಬಂತೆ ಭಾಸವಾಗುತ್ತಿದೆ. ಅದರಲ್ಲೂ, ವಿಧಾನಸಭೆಯ ಸ್ಪೀಕರ್‌ ರಮೇಶ್‌ ಕುಮಾರ್‌ ಹೆಸರು ತಳಕು ಹಾಕಿಕೊಂಡಿದ್ದು, ಕರ್ನಾಟಕದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 

ವಿಧಾನಸಭೆಗೆ, ಸಭಾಧ್ಯಕ್ಷರ ಹುದ್ದೆಗೆ ಅದರದೇ ಆದ ಪಾವಿತ್ರ್ಯತೆ ಇದೆ. ರಮೇಶ್‌ ಕುಮಾರ್‌ ಅವರೂ ವಿಧಾನಸಭಾಧ್ಯಕ್ಷರಾದ ಮೇಲೆ ಆ ಹುದ್ದೆಗೆ ಗೌರವ ಇಮ್ಮಡಿಯಾಗಿದೆ. ಯಾಕೆಂದರೆ ಅವರ ವ್ಯಕ್ತಿತ್ವ, ಸಂಸದೀಯ ವ್ಯವಹಾರಗಳ ಮೇಲೆ ಅವರಿಗಿರುವ ಅಪಾರ ಜ್ಞಾನ, ಕಳಕಳಿ ಇವುಗಳೆಲ್ಲವೂ ಆ ಹುದ್ದೆಗೆ ಮೆರುಗು ನೀಡಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಕೆಸರೆರಚಾಟ, ಆಡಿಯೋ-ವಿಡಿಯೋ ಅಸ್ತ್ರ-ಪ್ರತ್ಯಸ್ತ್ರಗಳ ನಡುವೆ ವಿಧಾನಸ‌ಭಾಧ್ಯಕ್ಷರ ಹೆಸರು ಬೆರೆತುಕೊಂಡಿರುವುದು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗಿದೆ.

ಈ ಬಗ್ಗೆ ಸೋಮವಾರದ ವಿಧಾನಸಭೆ ಕಲಾಪದಲ್ಲಿ ರಮೇಶ್‌ ಕುಮಾರ್‌ ಭಾವುಕರಾಗಿದ್ದು ಒಂದೆಡೆಯಾದರೆ, ಅಭೂತಪೂರ್ವ ಚರ್ಚೆಗೆ ಕಾರಣವಾಗಿ, ರಾಜ್ಯ ವಿಧಾನಸಭೆಯ ಘನತೆ, ಪರಂಪರೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹಲವು ಹಿರಿಯ ಕಿರಿಯ ಸದಸ್ಯರು ಧ್ವನಿಗೂಡಿಸಿದರು. 
ತಮ್ಮ ಸ್ಥಾನದ ಪಾವಿತ್ರ್ಯತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಮೇಶ್‌ ಕುಮಾರ್‌ ಅವರು ಸರ್ಕಾರಕ್ಕೆ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ.  ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆ ನಡೆಸುವಂತೆ ವಿಪಕ್ಷದ ಸಲಹೆ ನಡುವೆ ಎಸ್‌ಐಟಿ ತನಿಖೆಗೆ ಸರ್ಕಾರ ಮುಂದಾಗಿದೆ. 

ಒಟ್ಟಾರೆ ಪ್ರಕರಣದಲ್ಲಿ ಈಗ ಬಿಜೆಪಿ ಸುತ್ತ ಸಮ್ಮಿಶ್ರ ಸರ್ಕಾರದ ವ್ಯೂಹ ಗಟ್ಟಿಯಾದಂತೆ ಕಾಣುತ್ತಿದೆ. ಯಾಕೆಂದರೆ, ಒಂದೆಡೆ ಆಡಿಯೋ ಬಾಂಬ್‌ ಹಿನ್ನೆಲೆಯಾಗಿರುವ ಅತೃಪ್ತ ಕಾಂಗ್ರೆಸ್ಸಿಗರು ಮತ್ತು ಅವರನ್ನು ಬಿಜೆಪಿ "ಆಪರೇಷನ್‌' ನಡೆಸುತ್ತಿದೆ ಎನ್ನುವ ಆರೋಪಕ್ಕೆ ಕಾಂಗ್ರೆಸ್‌ ಶಾಸಕಾಂಗ ಪಕ್ಷ ನಾಯಕ ಸಿದ್ದರಾಮಯ್ಯಅಲ್ಪ ವಿರಾಮ ನೀಡುವತ್ತ ಮುಂದಾಗಿದ್ದಾರೆ. ನಾಲ್ವರು ಅತೃಪ್ತರ ಅನರ್ಹತೆ ಕೋರಿ ವಿಧಾನಸಭಾಧ್ಯಕ್ಷರಿಗೆ ಪತ್ರ ನೀಡಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ ಯತ್ನ ಬಿಜೆಪಿಯನ್ನು ಕಟ್ಟಿಹಾಕುವುದೇ ಆಗಿದೆ. ಅದು ಅತೃಪ್ತರನ್ನು ಅನರ್ಹತೆ ಬದಲಿಗೆ ಕಾಂಗ್ರೆಸ್‌ ತೆಕ್ಕೆಗೆ ಸೇರಿಸಿಕೊಳ್ಳುವುದೋ ಅಥವಾ ಪಾಠ ಕಲಿಸುವುದೋ ಎಂಬುದು ಚರ್ಚಾ ವಿಷಯ. ಕುಮಾರಸ್ವಾಮಿ ಸ್ಫೋಟಿಸಿದ ಆಡಿಯೋ ಬಾಂಬ್‌ ಈಗ ಕಾಂಗ್ರೆಸ್‌ ಪಾಲಿಗಂತೂ "ಆಪರೇಷನ್‌' ಹೆದರಿಕೆಯಿಂದ ಬಚಾವ್‌ ಮಾಡಿದಂತಿದೆ. ಬಿಜೆಪಿ ಕೂಡಾ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ತನ್ನ ಬತ್ತಳಿಕೆಯಲ್ಲಿದ್ದ ಹಳೆಯ ಸಿ.ಡಿ. ಬಾಂಬ್‌ ದಾಳ ಉರುಳಿಸಿದೆ. ಸ‌ಭಾಧ್ಯಕ್ಷರಿಗೆ ಸಲ್ಲಿಸಿ ತನಿಖೆಗೆ ಒತ್ತಾಯಿಸಿದೆ. ಆದರೆ, ಅದು ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ಕೊಡುತ್ತದೆಯೇ ಅಥವಾ ಕುಮಾರಸ್ವಾಮಿ ಅವರಿಗೆ ಮುಜುಗರ ಉಂಟು ಮಾಡುತ್ತದೆಯೇ? ಈ ಬಗ್ಗೆ ಸಭಾಧ್ಯಕ್ಷರು ತಳೆಯಲಿರುವ ನಿಲುವಿನ ಬಗ್ಗೆ ರಾಜ್ಯ ರಾಜಕಾರಣ ಕಾತರವಾಗಿದೆ.  ಒಟ್ಟಾರೆಯಾಗಿ ಸಿಡಿ ಪ್ರಕರಣಗಳಿಂದಾಗಿ ರಾಜಕಾರಣಿಗಳು ನಾಚಿಕೆಪಡುವಂತಾಗಿದೆ. ಇಂತಹ ಪ್ರಹಸನಗಳಿಗೆ ರಮೇಶ್‌ ಕುಮಾರ್‌ ಕಾನೂನು ರೀತಿಯ ಸಾಂವಿಧಾನಿಕ ಉತ್ತರ ನೀಡಿ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. 

ದುರಂತವೆಂದರೆ ಈ ರಾಜಕೀಯ ಹಗ್ಗಜಗ್ಗಾಟ, ತಂತ್ರ-ಪ್ರತಿತಂತ್ರಗಳ ನಡುವೆ ತಮ್ಮ ಜವಾಬ್ದಾರಿಯನ್ನೇ ಈ ರಾಜಕೀಯ ಪಕ್ಷಗಳು ಮರೆತುಬಿಟ್ಟಿವೆ. ರಾಜ್ಯದ ಜನರು ಬರದಿಂದ ಕಂಗಾಲಾಗಿದ್ದಾರೆ, ಗುಳೆ ಪ್ರಮಾಣ ಎಷ್ಟು ವಿಪರೀತವಾಗುತ್ತಿದೆ ಎಂದರೆ ಹಳ್ಳಿಹಳ್ಳಿಗಳೇ ಖಾಲಿಯಾಗಲಾರಂಭಿಸಿವೆ. ಆದರೆ, ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ವೇದಿಕೆಯಾಗಬೇಕಿದ್ದ ವಿಧಾನಸಭೆಯು ಕಾಂಗ್ರೆಸ್‌- ಜೆಡಿಎಸ್‌- ಬಿಜೆಪಿಯ ಕದನಭೂಮಿಯಾಗಿ ಬದಲಾಗಿರುವುದು ನಿಜಕ್ಕೂ ಬೇಸರದ ಸಂಗತಿ. ಜನರೂ ಕೂಡ ದಿನನಿತ್ಯದ ಈ ಸರ್ಕಸ್‌ಗಳಿಂದ ಬೇಸತ್ತು ಹೋಗಿದ್ದಾರೆ. ಇನ್ನಾದರೂ ಈ ಪ್ರಕರಣಗಳಿಗೊಂದು ತಾರ್ಕಿಕ ಅಂತ್ಯ ದೊರಕಿ, ಆಡಳಿತ ಮತ್ತು ಪ್ರತಿಪಕ್ಷಗಳು ಜನರತ್ತ ದೃಷ್ಟಿ ಹರಿಸುವಂತಾಗಲಿ. ತಮ್ಮನ್ನು ಮತದಾರರು ಗಮನಿಸುತ್ತಿದ್ದಾರೆ ಎಂಬ ಪ್ರಜ್ಞೆ  ರಾಜಕಾರಣಿಗಳಿಗೆ ಬರುವಂತಾಗಲಿ. ರಾಜ್ಯ ರಾಜಕಾರಣ ದೇಶಾದ್ಯಂತ ನಗೆಪಾಟಲಿಗೀಡಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ರಾಜ್ಯದ ಅಭಿವೃದ್ಧಿ ಪಥದಲ್ಲಿ ಬಹುದೊಡ್ಡ ಕಂದಕಗಳು ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ. 


Trending videos

Back to Top