ಸೈಕಲ್ ತುಳಿದೇ ಉ.ಪ್ರ ಚುನಾವಣೆ ಪ್ರಚಾರಕ್ಕೆ ಅಖಿಲೇಶ್ ನಿರ್ಧಾರ

ಲಕ್ನೋ: ಇಷ್ಟು ದಿನ ಅಪ್ಪನ ಜತೆ ಜಗಳವಾಡಿ ಮಂಕಾಗಿದ್ದ ಅಖೀಲೇಶ್ ಯಾದವ್, ಚುನಾವಣಾ ಆಯೋಗ ತಮಗೆ ಪಕ್ಷದ ಚಿಹ್ನೆ ಮತ್ತು ಅಧಿಕೃತ ಸಮಾಜವಾದಿ ಪಕ್ಷದ ಸ್ಥಾನಮಾನ ನೀಡಿದ ಸುದ್ದಿ ಕೇಳುತ್ತಿದ್ದಂತೆ ಹೊಸ ಹುರುಪು ಪಡೆದುಕೊಂಡಿದ್ದಾರೆ. ಹೀಗಾಗಿ ಸೈಕಲ್ ತುಳಿದೇ ಉತ್ತರ ಪ್ರದೇಶ ಚುನಾವಣೆ ಪ್ರಚಾರ ಮಾಡಲು ಅವರು ಮುಂದಾಗಿದ್ದಾರೆ. ಇದಕ್ಕಾಗಿ ಹೊಸ ಸೈಕಲ್ವೊಂದನ್ನು ಅವರು ಖರೀದಿ ಮಾಡಿದ್ದಾರೆ. ಅಖೀಲೇಶ್ ಯಾದವ್ ಅವರು ಪ್ರಚಾರಕ್ಕೆ ಎಲ್ಲಿಯೂ ವಾಹನಗಳನ್ನು ಬಳಸದೇ ಇರಲು ನಿರ್ಧರಿಸಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಕೂಡ ಸೈಕಲ್ ತುಳಿದೇ ಪ್ರಚಾರ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.
ಒಂದು ವೇಳೆ ಚುನಾವಣೆಯಲ್ಲಿ ಸಮಾಜ ವಾದಿ ಪಕ್ಷ ಆರಿಸಿ ಬಂದರೆ ಪ್ರತಿಯೊಬ್ಬರಿಗೂ ಉಚಿತವಾಗಿ ಸೈಕಲ್ ನೀಡುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೇ ಲಕ್ನೋದಲ್ಲಿ ಸೈಕಲ್ ಸ್ಮಾರಕ ಸ್ಥಾಪಿಸಿ ಪಕ್ಷದ ಚಿನ್ಹೆಯನ್ನು ಶಾಶ್ವತವಾಗಿ ಪ್ರತಿಷ್ಠಾಪಿಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.