CONNECT WITH US  

ಫ್ರಾನ್ಸ್‌  ಫೈನಲ್‌: "ಪ್ರೀತಿಯ ನಗರ'ದಲ್ಲಿ ಮೇರೆ ಮೀರಿದ ಸಂಭ್ರಮ

ಪ್ಯಾರಿಸ್‌: ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಸೆಮಿಫೈನಲ್‌ ಪಂದ್ಯದಲ್ಲಿ ನೆರೆ ರಾಷ್ಟ್ರವಾದ ಬೆಲ್ಜಿಯಂ ವಿರುದ್ಧ ಫ್ರಾನ್ಸ್‌ 1-0 ಗೋಲಿನಿಂದ ಜಯ ಗಳಿಸಿ ಫೈನಲ್‌ಗೆ ಲಗ್ಗೆಯಿಡುತ್ತಿದ್ದಂತೆಯೇ ಪ್ಯಾರಿಸ್‌ನಲ್ಲಿ ಬೀದಿಗಿಳಿದ ಜನರು "ವಿವೇ ಲಾ ಫ್ರಾನ್ಸ್‌' ಘೋಷಣೆ ಮೊಳಗಿಸಿದರು. ತೀರಾ ಅಪರಿಚಿತರೂ ಸ್ನೇಹಿತರಂತೆ ಜತೆಗೂಡಿ ಕುಣಿದು ಕುಪ್ಪಳಿಸಿದರು.

"ಪ್ರೀತಿಯ ನಗರ'ದಲ್ಲಿ (ಪ್ಯಾರಿಸ್‌-ಸಿಟಿ ಆಫ್ ಲವ್‌) ಫ‌ುಟ್‌ಬಾಲ್‌ ಜ್ವರ ಮೇರೆ ಮೀರಿತ್ತು. ಜನ ಫ್ರೆಂಚ್‌ ಕ್ರಾಂತಿಯಲ್ಲಿ ಹಾಗೂ ನೆಪೋಲಿಯನ್‌ ಯುದ್ಧಗಳಲ್ಲಿ ಪ್ರಾಣ ಕಳೆದುಕೊಂಡವರ ಗೌರವಾರ್ಥ ನಿರ್ಮಿಸಿದ "ಆರ್ಕ್‌ ಡಿ ಟ್ರಯಂಫೆ' ಸಮೀಪ ಜಮಾಯಿಸಿದರು. 2006ರ ಬಳಿಕ ಮೊದಲ ಬಾರಿಗೆ ತಮ್ಮ ತಂಡ ಫೈನಲ್‌ಗೆ ಏರಿದ್ದನ್ನು ಸಂಭ್ರಮಿಸಿದರು. 
ಯಾರ ಜಂಜಾಟವೂ ಬೇಡ ಎಂಬಂತಿರುವ ಪ್ಯಾರಿಸ್‌ ಜನರ ಬಳಿ ದಾರಿ ಕೇಳಲೂ ಅಂಜುವ ಪ್ರವಾಸಿಗರೂ ಈ ಸಂಭ್ರಮದಲ್ಲಿ ಭಾಗಿಯಾದರು. ಎಲ್ಲರೂ ತಮ್ಮವರು, ಎಲ್ಲರೂ ಸೇರಿ ಸಂಭ್ರಮಿಸಬೇಕು ಎಂಬ ಭಾವನೆ ಪ್ಯಾರಿಸ್‌ ಜನರಲ್ಲಿತ್ತು. ಪ್ರವಾಸಿಗರ ಸುತ್ತ ಕುಣಿದು ಸಂಭ್ರಮಿಸಿ, ಸೆಲ್ಫಿ ತೆಗೆದುಕೊಂಡರು. ಮನೆಯೊಳಗೆ ಟೀವಿ ಮುಂದೆ ಕುಳಿತಿದ್ದವರೂ ರಷ್ಯಾದಲ್ಲಿ ಫ್ರಾನ್ಸ್‌ ಜೈತ್ರಯಾತ್ರೆಯ ಕ್ಷಣಕ್ಷಣವನ್ನೂ ವೀಕ್ಷಿಸುತ್ತ ಆನಂದಿಸುತ್ತಿದ್ದರು. 

ಜನ ಜಾತ್ರೆಯಲ್ಲಿ ಮಕ್ಕಳೂ ತಮ್ಮ ಹೆತ್ತವರ ಹೆಗಲ ಮೇಲೆ ಕುಳಿತು ಸಡಗರವನ್ನು ಕಣ್ತುಂಬಿಕೊಂಡರು. ಫ್ರಾನ್ಸ್‌ ಧ್ವಜವನ್ನು ಹಿಡಿದಿದ್ದ ಕೆಲವು ಅಭಿಮಾನಿಗಳು ಬೀದಿ ದೀಪಗಳ ಕಂಬಗಳನ್ನೇರಿದ್ದರು. ಉಳಿದವರು ಹಾಡುತ್ತ, ಕುಣಿಯುತ್ತ ಹುರಿದುಂಬಿಸಿದರು. ಟ್ರಾಫಿಕ್‌ನಲ್ಲಿ ಸಿಲುಕಿದವರೂ ಚಿಂತಿಸದೆ ತಮ್ಮ ಸ್ಮಾರ್ಟ್‌ ಫೋನ್‌ಗಳಲ್ಲಿ ಸಂಭ್ರಮದ ಕ್ಷಣಗಳನ್ನು ಸೆರೆ ಹಿಡಿಯುವುದರಲ್ಲಿ ತಲ್ಲೀನರಾದರು.

ಬಿಯರ್‌, ವೈನ್‌ನ ಹೊಳೆ
ಬಿಯರ್‌ ಹಾಗೂ ವೈನ್‌ನ ಹೊಳೆಯಲ್ಲಿ ತೇಲಾಡಿದ ಅಭಿಮಾನಿಗಳು, ನಾವು ಗೆದ್ದಿರುವುದಕ್ಕೆ ಖುಷಿಯಾಗಿದೆ. 20 ವರ್ಷಗಳ ಬಳಿಕ, ಇದು ಸಂಭ್ರಮದ ಸಮಯ ಎಂದು ಅವರು ಹೇಳುತ್ತಿದ್ದರು.  ಆರ್ಕ್‌ ಮುಂಭಾಗದ ಪ್ರಮುಖ ಬೀದಿಯಾಗಿರುವ ಚಾಂಪ್ಸ್‌ - ಎಲ್ಲಿಸೀಸ್‌ ಸಾವಿರಾರು ಅಭಿಮಾನಿಗಳ ಹಬ್ಬದಾಚರಣೆಯ ತಾಣವಾಯಿತು.  ಸಂಭ್ರಮದ ಉನ್ಮಾದದಲ್ಲಿ ಕೆಲವರು ತಮ್ಮ ಅಂಗಿಗಳನ್ನು ಕಳಚಿ, ಸಿಗ್ನಲ್‌ ಲೈಟ್‌ಗಳ ಮೇಲೆ ಕುಣಿದಾಡಿದರು.  

Trending videos

Back to Top