CONNECT WITH US  

ರಂಗಿ ಹುಡುಗಿಯ ನ್ಯೂಲುಕ್‌

ಆ ಪಾತ್ರವನ್ನು ರಾಧಿಕಾ ಪಂಡಿತ್‌ ಅಥವಾ ಶ್ರುತಿ ಹರಿಹರನ್‌ ಹತ್ತಿರ ಮಾಡಿಸಬೇಕೆಂಬ ಆಸೆ ನಿರ್ದೇಶಕ ನರೇಂದ್ರ ಬಾಬು ಅವರಿಗೆ ಇತ್ತಂತೆ. ಆದರೆ, ನಿರ್ಮಾಪಕರಿಗೆ ಆ ಪಾತ್ರಕ್ಕೆ ರಾಧಿಕಾ ಚೇತನ್‌ ಒಬ್ಬರೇ ಸೂಕ್ತ ಎಂದೆನಿಸಿದೆ. ನಿರ್ಮಾಪಕರು ಹೇಳಿದರೂ, ನಿರ್ದೇಶಕರು ಅಷ್ಟೇನೂ ತಲೆ ಕೆಡಿಸಿಕೊಳ್ಳಲಿಲ್ಲವಂತೆ. ಕೊನೆಗೊಂದು ದಿನ ನಿರ್ಮಾಪಕರು ಸೀರಿಯಸ್‌ ಆಗಿ ಹೇಳಿದ್ದಾರೆ. ಆಗ ನರೇಂದ್ರ ಬಾಬು ಹೋಗಿ ರಾಧಿಕಾ ಚೇತನ್‌ ಅವರನ್ನು ಭೇಟಿ ಮಾಡಿದ್ದಾರೆ. ಪಾತ್ರದ ಬಗ್ಗೆ ಕೇಳಿದ ರಾಧಿಕಾ, ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿದ್ದಾರೆ. ಈ ರೀತಿ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರದಲ್ಲಿ ರಾಧಿಕಾ ನಟಿಸುವಂತಾಗಿದೆ.

ರಂಗಿ ತರಂಗ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಧಿಕಾ ಚೇತನ್‌, ಇತ್ತೀಚಿನ ವರ್ಷಗಳಲ್ಲಿ ಒಂದಿಷ್ಟು ಒಳ್ಳೆಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ವರ್ಷ ಅವರ ಅಭಿನಯದ ಬಿಬಿ5 ಮತ್ತು ಕಾಫಿ ತೋಟ ಚಿತ್ರಗಳು ಬಿಡುಗಡೆಯಾಗಿವೆ. ಈ ಎರಡೂ ಚಿತ್ರಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗದಿದ್ದರೂ, ಎರಡೂ ಚಿತ್ರಗಳಲ್ಲಿನ ಪಾತ್ರದ ಬಗ್ಗೆ ರಾಧಿಕಾಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ ಎಂದರೆ ತಪ್ಪಿಲ್ಲ. ಈಗ ಅವರು ಇನ್ನೆರಡು ಚಿತ್ರಗಳನ್ನು ಎದುರು ನೋಡುತ್ತಿದ್ದಾರೆ. ಈ ಪೈಕಿ ಒಂದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿಯಾದರೆ, ಇನ್ನೊಂದು ಅಸತೋಮ ಸದ್ಗಮಯ. ಅದರಲ್ಲೂ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರದ ಬಗ್ಗೆ ಸಲ್ಪ ಜಾಸ್ತಿಯೇ ಪ್ರೀತಿ ಅವರಿಗೆ. ಅದಕ್ಕೆ ಒಂದು ಕಾರಣ ಪಾತ್ರವಾದರೆ, ಇನ್ನೊಂದು ಅನಂತ್‌ನಾಗ್‌ರಂಥ ಹಿರಿಯರ ಜೊತೆಗೆ ನಟಿಸಿದ್ದು.

""ನರೇಂದ್ರ ಬಾಬು ಅವರು ಬಂದು, ಈ ಚಿತ್ರದಲ್ಲಿ ಅನಂತ್‌ನಾಗ್‌ ಅವರು ನಟಿಸುತ್ತಿದ್ದಾರೆ ಅಂದಾಗಲೇ ಚಿತ್ರದಲ್ಲಿ ನಟಿಸುವ ಅರ್ಧ ಮನಸ್ಸು ಮಾಡಿದ್ದೆ. ಕಥೆ ಮತ್ತು ಪಾತ್ರದ ಬಗ್ಗೆ ಕೇಳಿ ಡಬ್ಬಲ್‌ ಧಮಾಕಾ ಅನ್ನಿಸಿತು. ಆ ನಂತರ ಅನಂತ್‌ನಾಗ್‌ ಅವರ ಜೊತೆಗೆ ಫೋಟೋ ಶೂಟ್‌ನಲ್ಲಿ ಭಾಗವಹಿಸಿದೆ. ಇದು ಕನಸಾ, ನನಸಾ ಅನಿಸೋಕೆ ಶುರುವಾಯಿತು. ಬಿಡುವಿನ ವೇಳೆಯಲ್ಲಿ ಅನಂತ್‌ನಾಗ್‌ ಅವರ ಅನುಭವಗಳನ್ನು ಕೇಳ್ಳೋದೇ ಬಹಳ ಸಂತೋಷ. ""ಒಮ್ಮೆ ನಾನು ಚಿತ್ರೀಕರಣಕ್ಕೆ ಹೋದ ಸಂದರ್ಭದಲ್ಲಿ ಸ್ಕ್ರಿಪ್ಟ್ ತೆಗೆದುಕೊಂಡು ಹೋಗುವುದನ್ನು ಮರೆತು ಬಿಟ್ಟಿದ್ದೆ. ಆದರೆ, ಅನಂತ್‌ನಾಗ್‌ ಅವರು ಸ್ಕ್ರಿಪ್ಟ್ ತಂದಿದ್ದರು. ಅವರ ವೃತ್ತಿಪರತೆ ನೋಡಿ ಖುಷಿ ಆಗುವ ಜೊತೆಗೆ, ನನ್ನ ಬಗ್ಗೆ ಬೇಸರ ಆಯ್ತು. ಅವರಿಂದ ತುಂಬಾ ಕಲಿತಿದ್ದೇನೆ'' ಎನ್ನುತ್ತಾರೆ ರಾಧಿಕಾ.

ಈ ಚಿತ್ರದಲ್ಲಿ ಅವರು ಆಧುನಿಕ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ""ಚಿತ್ರದಲ್ಲಿ ನನ್ನದು ಸ್ವತಂತ್ರ ಮಹಿಳೆಯ ಪಾತ್ರ. ನನ್ನ ರಿಯಲ್‌ ಲೈಫ್ಗೂ ಈ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ನಿಜಜೀವನದಲ್ಲಿ ನಾನು ಹೀಗಿಲ್ಲ'' ಎನ್ನುತ್ತಾರೆ ರಾಧಿಕಾ.

ಇದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರದ ಕಥೆಯಾದರೆ, ರಾಧಿಕಾಗೆ ರಿಯಲ್‌ ಲೈಫ್ನಲ್ಲಿರುವ ಕೆಲವು ಮೌಲ್ಯಗಳು ಅಸತೋಮಯ ಸದ್ಗಮಯ ಚಿತ್ರದಲ್ಲೂ ಇರುವುದರಿಂದ, ಚಿತ್ರ ಒಪ್ಪಿಕೊಂಡಿದ್ದಾಗಿ ಅವರು ಹೇಳುತ್ತಾರೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಅವರ ಲುಕ್‌ ವಿಭಿನ್ನವಾಗಿದೆಯಂತೆ. ತಮ್ಮ ಹಿಂದಿನ ಮೂರು ಚಿತ್ರಗಳಿಗಿಂತ‌ ಈ ಲುಕ್‌ ವಿಭಿನ್ನವಾಗಿರುವುದರಿಂದ ಜನ ಮೆಚ್ಚಬಹುದು ಎಂಬ ನಂಬಿಕೆಯಲ್ಲಿ ಅವರಿದ್ದಾರೆ.

Trending videos

Back to Top