CONNECT WITH US  

ಸೋನಾಲ್‌ ಮೊಂತೆರೋ

ಸೋನಾಲ್‌ ಮೊಂತೆರೋ - ಈ ಹೆಸರನ್ನು ನೀವು ಈ ಹಿಂದೆ ಕೇಳಿರ ಬಹುದು. ಆದರೆ, ಇತ್ತೀಚೆಗೆ ಈ ಹೆಸರನ್ನು ಸ್ವಲ್ಪ ಹೆಚ್ಚೇ ಕೇಳಿರುತ್ತೀರಿ. ಅದಕ್ಕೆ ಕಾರಣ "ಪಂಚತಂತ್ರ'. ಯೋಗರಾಜ್‌ ಭಟ್‌ ನಿರ್ದೇಶನದ "ಪಂಚತಂತ್ರ' ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಹೆಚ್ಚು ಸುದ್ದಿಯಾದವರು ಸೋನಾಲ್‌. ಸೋನಾಲ್‌ಗೆ ಚಿತ್ರರಂಗ ಹೊಸದಲ್ಲ. ಈಗಾಗಲೇ ತುಳು ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಮೂಲತಃ ಮಂಗಳೂರು ಹುಡುಗಿ ಯಾಗಿರುವ ಸೋನಾಲ್‌ ತುಳು ಚಿತ್ರ "ಎಕ್ಕಸಕ್ಕ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರು. ಆ ನಂತರ "ಜೈ ತುಳುನಾಡು', "ಪಿಲಿಬೈಲ್‌ ಯಮುನಕ್ಕ' ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಕನ್ನಡದಲ್ಲಿ "ಅಭಿಸಾರಿಕೆ', "ಮದುವೆ ದಿಬ್ಬಣ', "ಪ್ರೀತ್ಸೋರು', "ಎಂಎಲ್‌ಎ' ಹಾಗೂ "ಪಂಚತಂತ್ರ' ಚಿತ್ರಗಳಲ್ಲಿ ಸೋನಾಲ್‌ ನಟಿಸುತ್ತಿದ್ದಾರೆ. ಸೋನಾಲ್‌ಗೆ ಸಿನಿಮಾಕ್ಕೆ ಬರಬೇಕೆಂಬ ಆಸೆ ಇರಲಿಲ್ಲವಂತೆ.

ಆದರೆ, ಅವರ ತಾಯಿಗೆ ಮಗಳು ಚಿತ್ರರಂಗಕ್ಕೆ ಬರಬೇಕೆಂಬ ಆಸೆ ಇತ್ತಂತೆ. ಅದಕ್ಕೆ ಕಾರಣ ಅವರಿಗೆ ಅವರ ಅಮ್ಮನಿಗೂ ಬಂದಿದ್ದ ಸಿನಿಮಾ ಆಫ‌ರ್‌. "ನನ್ನ ಅಮ್ಮನಿಗೆ ತಮಿಳು ಸಿನಿಮಾದಿಂದ ಆಫ‌ರ್‌ ಬಂದಿತ್ತಂತೆ. ಆದರೆ ಮದುವೆ ಕಾರಣದಿಂದ ಅವರಿಗೆ ನಟಿಸಲಾಗಲಿಲ್ಲ. ಹಾಗಾಗಿ, ನಾನಾದರೂ ಚಿತ್ರರಂಗಕ್ಕೆ ಬರಬೇಕೆಂಭ ಆಸೆ ಅವರಿಗೆ. ಅದೇ ಕಾರಣದಿಂದ "ಮಿಸ್‌ ಮಂಗಳೂರು' ಸ್ಪರ್ಧೆಗೂ ಕಳುಹಿಸಿದರು' ಎಂದು ತಮ್ಮ ಸಿನಿ ಜರ್ನಿಯ ಬಗ್ಗೆ ಹೇಳು ತ್ತಾರೆ ಸೋನಾಲ್‌. ಸೋನಾಲ್‌ ತಾಯಿಯವರಿಗೆ ಸಿನಿಮಾ ಮೇಲೆ ಎಷ್ಟು ಪ್ರೀತಿ ಇತ್ತೆಂದರೆ ಮಗಳಿಗೆ ಬೇರೆ ಬೇರೆ ನಟಿಯರ ಸಿನಿಮಾಗಳನ್ನು ತೋರಿಸಿ ನಟನೆಯ ಬಗ್ಗೆ ಹೇಳುತ್ತಿದ್ದರಂತೆ. ಸದ್ಯ ಮಗಳ ಬೆಳವಣಿಗೆ ಕಂಡು ಸೋನಾಲ್‌ ತಾಯಿ ಖುಷಿಯಾಗಿ ದ್ದಾರಂತೆ.

ಸದ್ಯ ಭಟ್ರ "ಪಂಚತಂತ್ರ' ಚಿತ್ರದಲ್ಲಿ ನಟಿಸುತ್ತಿರುವ ಸೋನಾಲ್‌ ವರ್ಷದ ಹಿಂದೆಯೇ ಭಟ್ರ ಸಿನಿಮಾದಲ್ಲಿ ಕೆಲಸ ಮಾಡಬೇಕಿತ್ತಂತೆ. ಅದು "ಮುಗುಳುನಗೆ' ಚಿತ್ರದಲ್ಲಿ. ಆದರೆ, ಆ ಸಮಯದಲ್ಲಿ ಹಿಂದೆ ಸಿನಿಮಾದಲ್ಲಿ ಬಿಝಿ ಇದ್ದ ಕಾರಣ ಸೋನಾಲ್‌ ನಟಿಸಿರಲಿಲ್ಲ. ಈ ಬಾರಿ ಆಡಿಷನ್‌ನಲ್ಲಿ ಪಾಸಾಗಿ "ಪಂಚತಂತ್ರ' ತಂಡ ಸೇರಿಕೊಂಡಿದ್ದಾರೆ. ಇಲ್ಲಿ ಸಾಹಿತ್ಯ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಧ್ಯಮ ವರ್ಗದ ಸಂಪ್ರದಾಯಸ್ಥ ಕುಟುಂಬದ ಹುಡುಗಿ ಪ್ರೀತಿಯಲ್ಲಿ ಬಿದ್ದಾಗ ಆಕೆಯ ಭಾವನೆ ಹೇಗಿರುತ್ತದೆ ಎಂಬ ಅಂಶದೊಂದಿಗೆ ಇವರ ಪಾತ್ರ ಸಾಗುತ್ತದೆ. ಇನ್ನು, "ಅಭಿಸಾರಿಕೆ'ಯಲ್ಲೂ ಸೋನಾಲ್‌ಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಸದ್ಯ ಕನ್ನಡದಲ್ಲಿ ಬಿಝಿಯಾಗುತ್ತಿರುವ ಸೋನಾಲ್‌ಗೆ ತುಳು ಚಿತ್ರರಂಗದಿಂದಲೂ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ ಡೇಟ್ಸ್‌ ಹೊಂದಿಸಲು ಆಗದ ಕಾರಣ ಯಾವುದನ್ನೂ ಒಪ್ಪಿಕೊಂಡಿಲ್ಲವಂತೆ. "ನಾನು ತುಳು ಚಿತ್ರರಂಗವನ್ನು ಯಾವತ್ತೂ ಮರೆಯೋದಿಲ್ಲ. ಇವತ್ತು ನನ್ನನ್ನು ಬೇರೆ ಬೇರೆ ಚಿತ್ರರಂಗಕ್ಕೆ ಹೋಗುವಂತೆ ಮಾಡಿದ್ದು ತುಳು. ಮುಂದೆಯೂ ತುಳುವಿನಲ್ಲಿ ನಟಿಸಲಿದ್ದೇನೆ' ಎನ್ನುವುದು ಸೋನಾಲ್‌ ಮಾತು.

Trending videos

Back to Top