CONNECT WITH US  

ಸುರೇಶ್‌ ಸಂಕಲನ

ರೂಪತಾರಾ: ಬೈಗುಳಕ್ಕೆ ಹೆದರಿ ಹಿಂದೆ ಸರಿದಿದ್ದರೆ ಚಿತ್ರರಂಗಕ್ಕೆ ಬರುತ್ತಲೇ ಇರಲಿಲ್ಲ

ಆ ಚಿರಯುವಕನಿಗೆ ಹಳ್ಳಿಯೆಂದರೆ ಪ್ರಾಣ. ವ್ಯವಸಾಯ ಮಾಡೋದು ಅಂದರೆ ಪಂಚಪ್ರಾಣ. ಆದರೆ, ವ್ಯವಸಾಯ ಮಾಡುವ ವಿಚಾರದಲ್ಲಿ ಅವರ ತಂದೆ ಜತೆ ವಿಪರೀತ ಜಗಳ. ಕಾರಣ, ಅವರ ತಂದೆಗೆ ಇಸ್ಪೀಟ್‌ ಹುಚ್ಚು. ಆ ಹಳ್ಳಿಯ ದಾರೀಲಿ ಸಿಕ್ಕ ಸಿಕ್ಕವರೆಲ್ಲರೂ, ಆ ಯುವಕನಿಗೆ ನಿಮ್ಮಪ್ಪ ಇಸ್ಪೀಟ್‌ ಆಡಿ ಆಸ್ತಿನೆಲ್ಲಾ ಕಳ್ಕೊತ್ತಾನಲ್ಲೋ ಅನ್ನೋರು.

ಅದೊಂದು ದಿನ ತನ್ನ ಚಿಕ್ಕಪ್ಪನೊಂದಿಗೆ ತಮ್ಮದೇ ಹೊಲ ಉಳುಮೆ ಮಾಡುವಾಗ, ಪಕ್ಕದ ಜಮೀನು ಮಾಲೀಕ ಬಂದು, "ಇದು ನನ್ನ ಹೊಲ. ಇಲ್ಲಿ ಉಳುಮೆ ಮಾಡಬೇಡಿ. ನಿಮ್ಮಪ್ಪ ಹತ್ತು ಸಾವಿರಕ್ಕೆ ಎರಡು ಎಕರೆ ಹೊಲವನ್ನು ನನಗೆ ಮಾರಿದ್ದಾನೆ ಅಂದಾಗ, ಉಳುಮೆ ಮಾಡೋಕೆ ಬಂದ ಹುಡುಗನಿಗೆ ಶಾಕ್‌. ಕಟ್‌ ಮಾಡಿದರೆ, ಅಪ್ಪನೊಂದಿಗೆ ಜಗಳ ಶುರುವಾಗಿದೆ.

ಆಗ ಅವರಪ್ಪ, "ನಮ್ಮಪ್ಪನ ಆಸ್ತಿ ಮಾರೊತ್ತೀನಿ. ಅದನ್ನ ಕೇಳ್ಳೋಕೇ ನೀನ್ಯಾರೋ, ಇಷ್ಟವಿದ್ದರೆ ಇರು, ಇಲ್ಲವಾದರೆ ಮನೆಬಿಟ್ಟು ಹೋಗು' ಅಂದಿದ್ದಾರೆ. ಆ ಮಾತಿಗೆ ತನ್ನ ಊರೇ ಬಿಟ್ಟು ಬಂದ ಆ ಹುಡುಗ, ಇಂದು ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ಸಂಕಲನಕಾರ ಎನಿಸಿಕೊಂಡಾಗಿದೆ. ರಾಜ್ಯ, ರಾಷ್ಟ್ರ ಪ್ರಶಸ್ತಿಗಳಿಗೆ ಭಾಜನರಾಗಿ ಹೆಮ್ಮೆಯ ಕನ್ನಡಿಗ ಎನಿಸಿಕೊಂಡಿದ್ದಾರೆ. ಅಂದಹಾಗೆ, ಅವರು ಬೇರಾರೂ ಅಲ್ಲ, ಹಿರಿಯ ಸಂಕಲನಕಾರ ಸುರೇಶ್‌ ಅರಸ್‌.

ಅಣ್ಣ ಸಾಯೋಕೆ ಬಿಡಲಿಲ್ಲ, ಬದುಕಿಸಿದರು!: "ನಾನು ಹುಟ್ಟಿದ್ದು ಮೈಸೂರು ಜಿಲ್ಲೆಯ ಹೆಗ್ಗಡೆ ದೇವನಕೋಟೆ ತಾಲೂಕಿನ ಕೋಳಗಾಲ ಎಂಬ ಹಳ್ಳಿಯಲ್ಲಿ. ತಂದೆ ಚಾಮರಾಜೇ ಅರಸ್‌, ತಾಯಿ ದೇವಾಜಮಣಿ. ನನಗೂ ಎಲ್ಲಾ ಹಳ್ಳಿಗರಿಗೆ ಇದ್ದಂತೆ ಬಾಲ್ಯದಲ್ಲಿ ಕಷ್ಟದ ದಿನಗಳಿದ್ದವು. ಬಾಳ ಹಾದಿಯ ತುಂಬ ಮುಳ್ಳಿನ ಕೊಂಬೆಗಳೇ. ಆ ಮುಳ್ಳಿನ ಮನೆಯನ್ನು ಮೊಗ್ಗಾಗಿ ಪರಿವರ್ತಿಸಿ, ಅದನ್ನು ಹೂವಾಗಿ ಅರಳಿಸುತ್ತಲೇ ನನ್ನ ಬದುಕನ್ನು ಅನಾವರಣಗೊಳಿಸಿಕೊಂಡಿದ್ದೇನೆ.

ಅಪ್ಪನ ಇಸ್ಪೀಟ್‌ ಹುಚ್ಚು, ವಿಪರೀತ ಬೇಸರ ತರಿಸಿದ್ದರಿಂದ ಮನಸು ಅಲ್ಲಿರಲು ಒಪ್ಪದಿದ್ದರಿಂದ ಹಲವು ಸವಾಲುಗಳಿಗೆ ಎದೆಯೊಡ್ಡಿ, ಮುನ್ನಡೆದೆ. ಅಂದು ಧೈರ್ಯ ಮಾಡಿ, ಬೆಳಗಿನ ಬಸ್‌ ಹತ್ತಿಕೊಂಡು ಬೆಂಗಳೂರಿಗೆ ಬರದೇ ಇದ್ದಿದ್ದರೆ, ಇಂದು ನಾನೊಬ್ಬ ಸಂಕಲನಕಾರ ಆಗುತ್ತಿರಲಿಲ್ಲ. ಯಶಸ್ವಿ ನಿರ್ದೇಶಕರ ಜತೆ ಕೆಲಸ ಮಾಡುತ್ತಿರಲಿಲ್ಲ. ಹಲವು ಪ್ರಶಸ್ತಿಗಳಿಗೆ ಪುರಸ್ಕೃತನಾಗುತ್ತಿರಲಿಲ್ಲ. ಇಂದು ನಾನು ಉಸಿರಾಡುತ್ತಿದ್ದೇನೆ ಅಂದರೆ, ಅದು ಭಾರತೀಯ ಚಿತ್ರರಂಗದ ಎಲ್ಲಾ ನಿರ್ಮಾಪಕ, ನಿರ್ದೇಶಕರು ತೋರಿದ ಪ್ರೀತಿ ಮತ್ತು ಅವಕಾಶದಿಂದ.

ನಾನು ಬೆಂಗಳೂರಿಗೆ ಬಂದಾಗ, ಅದಾಗಲೇ ಅಣ್ಣ ಸುಂದರ್‌ ಕೃಷ್ಣ ಅರಸ್‌ ಸಿನಿಮಾ ರಂಗದಲ್ಲಿ ತೊಡಗಿ, ಗುರುತಿಸಿಕೊಂಡಿದ್ದರು. ನಾನು ಅವರ ಜತೆಗಿದ್ದು, ಸಿನಿಮಾ ರಂಗ ಪ್ರವೇಶಿಸಿದೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಒಂದು ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಅದರಲ್ಲಿ ಅಣ್ಣ ನಟಿಸುತ್ತಿದ್ದರು. ಆಗ ನನಗೆ ಜ್ವರ ಬಂದಿತ್ತು. ಊಟಕ್ಕೆ ಬ್ರೇಕ್‌ ಬಿಟ್ಟಾಗ, ಅಲ್ಲಿದ್ದ ಕಾಸ್ಟೂಮ್‌ ರೂಮ್‌ಗೆ ಹೋಗಿ ಮಲಗಿದ್ದೆ. ಬ್ರೇಕ್‌ ನಂತರ ಚಿತ್ರೀಕರಣ ಶುರುವಾಗಿದೆ. ಬೇರೆ ಯಾರೋ ಕ್ಲಾಪ್‌ ಮಾಡುತ್ತಿದ್ದರು. ಆದರೆ, ಆ ಶಾಟ್‌ ಮಾತ್ರ ಓಕೆ ಆಗುತ್ತಿರಲಿಲ್ಲ.

ನಾಲ್ಕೈದು ಬಾರಿ ಹಾಗೆ ನಡೆದಾಗ, ಅಣ್ಣನಿಗೆ ಕೋಪ ಬಂದು, "ಎಲ್ಲೋದ ಆ ರ್ಯಾಸ್ಕಲ್‌' ಕರೀರಿ ಅವನನ್ನು ಅಂದಿದ್ದಾರೆ. ಸೆಟ್‌ಬಾಯ್‌ ನಾನಿದ್ದ ಕಡೆ ಬಂದು, ಸರ್‌, ಕರೀತಾ ಇದ್ದಾರೆ, ಬರಬೇಕಂತೆ ಅಂತ ಹೇಳಿದ, ಜ್ವರ ಇದ್ದರೂ, ಅದರಲ್ಲೇ ಎದ್ದು ಹೋದೆ. ನಾನು ಹೋಗಿ ಕ್ಲಾಪ್‌ ಹಿಡಿದೆ, ಆ ಶಾಟ್‌ ಓಕೆ ಆಯ್ತು. ಕ್ಲಾಪ್‌ ಹಿಡಿಯೋದರಲ್ಲೂ ನಾಜೂಕು ಬೇಕು. ಆಮೇಲೆ ಅಣ್ಣ, ನೀನು ಸತ್ತರೂ ಪರವಾಗಿಲ್ಲ. ಈ ಸೆಟ್‌ವೊಳಗೇ ಬಿದ್ದಿರು...' ಅಂದರು. ಆ ಮಾತು ಈಗಲೂ ಮರೆತಿಲ್ಲ. ಅಣ್ಣ ಹಾಗೆ ಹೇಳಿದ್ದರೂ, ಅದು ಪ್ರೀತಿಯಿಂದ. ಅವರು ನನ್ನನ್ನು ಸಾಯಿಸಲಿಲ್ಲ.

ಬದಲಾಗಿ ಬದುಕಿಸಿದರು. ಪ್ರತಿ ಹಂತದಲ್ಲೂ ಅಣ್ಣ ಬೈದು, ಅವಮಾನಿಸುತ್ತಲೇ ಇದ್ದರು. ಕೆಲವೊಮ್ಮೆ ಸೆಟ್‌ನಲ್ಲಿ ಬೀಡಿ ಸೇದಿ, ಕ್ಯಾಮೆರಾ ಮುಂದೆ ಎಸೆಯೋರು. ರ್ಯಾಸ್ಕಲ್‌ ಆ ಬೀಡಿ ಎತ್ತಿ ಬೇರೆ ಕಡೆ ಹಾಕಿ ಕ್ಲೀನ್‌ ಮಾಡೋ ಅನ್ನೋರು. ಸಂಜೆ ಶೂಟಿಂಗ್‌ ಮುಗಿದ ಮೇಲೆ, ಅಣ್ಣ ಕೆಲವರ ಜತೆ ಹೋಗಿ ಪಾರ್ಟಿ ಮಾಡಿ ಲೇಟ್‌ ಆಗಿ ಮನೆಗೆ ಬರೋರು. ಬಾಗಿಲು ನಾನೇ ತೆಗೆಯುತ್ತಿದ್ದೆ. ಬಾಗಿಲು ತೆಗೆದ ತಕ್ಷಣವೇ, ಮತ್ತೆ ಬೈಗುಳ ಶುರುವಾಗುತ್ತಿತ್ತು. ಯಾಕೆಂದರೆ, ಅಣ್ಣನಿಗೆ ಕೆಲವರು ನಾನು ವೇಸ್ಟ್‌ ಅಂತ ಇಲ್ಲಸಲ್ಲದ ಆರೋಪ ಮಾಡುತ್ತಿದ್ದರು. ಅಣ್ಣ ನನಗೆ ಬೈದರು ಅಂತ ಸಿನಿಮಾ ರಂಗ ಬಿಟ್ಟಿದ್ದರೆ, ಇಂದು ನಾನು ಹೀಗೆ ಇರುತ್ತಿರಲಿಲ್ಲ. ಇಷ್ಟಕ್ಕೆಲ್ಲಾ ಅಣ್ಣ ಕಾರಣ.

ಆ ಅನುಭವ ಮರೆಯುವುದುಂಟೇ?: ನನ್ನ ಬದುಕಿನ ತಿರುವು ಅಂದರೆ ಅದು ನಿರ್ಮಾಪಕ ಟಿ.ಎನ್‌.ನರಸಿಂಹನ್‌. ಅವರಿಂದ ನನ್ನ ಅದೃಷ್ಟದ ಬಾಗಿಲು ತೆರೆದಿದ್ದು ನಿಜ. ನಾಗಾಭರಣ, ನರಸಿಂಹನ್‌ ಮತ್ತು ಲಾಯರ್‌ ಸುಜಿತ್‌ ಸೋಮಸುಂದರಂ ಈ ಮೂರು ಜನ ಒಂದು ಶುಕ್ರವಾರ ಸಂಜೆ ಬಂದರು. ಅಂದು "ಜನ್ಮ ಜನ್ಮದ ಅನುಬಂಧ' ಮತ್ತು "ಬಂಗಾರದ ಜಿಂಕೆ' ಚಿತ್ರ ಬಿಡುಗಡೆಯಾಗಿದ್ದವು. ಎರಡು ಚಿತ್ರಗಳು ಸಹ ಒಂದೇ ರೀತಿ ಇದ್ದವು. "ಬಂಗಾರದ ಜಿಂಕೆ' ಚಿತ್ರಕ್ಕೆ ಓಪನಿಂಗ್‌ ಇರಲಿಲ್ಲ.

ಪ್ರದರ್ಶನದ ನಂತರ ಜನ ಒಂದೊಂದು ರೀತಿ ಮಾತಾಡುತ್ತಿದ್ದರು. ಆ ಚಿತ್ರಕ್ಕೆ ಬೇರೆಯವರು ಸಂಕಲನ ಮಾಡಿದ್ದರು. ಆಗ ನರಸಿಂಹನ್‌, ನನ್‌ ಸಿನ್ಮಾ ನೋಡ್ತೀಯ. ನೋಡಿ, ಏನಾದ್ರೂ ಮಾಡ್ತೀಯ ಅಂದ್ರು. ಹಲಸೂರು ಬಳಿಯ ಒಂದು ಚಿತ್ರಮಂದಿರದಲ್ಲಿ ಚಿತ್ರ ನೋಡಿದೆ. ಆ ಪ್ರಿಂಟ್‌ ತಗೊಂಡು ಎಡಿಟಿಂಗ್‌ ರೂಮ್‌ಗೆ ಹೊರಟೆ. ರಾತ್ರಿ ಒಂದು ಗಂಟೆಯಾಗಿತ್ತು. ನರಸಿಂಹನ್‌ ಹಾಗು ನಿರ್ದೇಶಕರು, ಏನು ಮಾಡ್ತೀಯ ನೋಡಪ್ಪ ಅಂದ್ರು. ಸರಿ, ಅಂತ ಇಡೀ ರಾತ್ರಿ ಕುಳಿತು ಕೆಲಸ ಮಾಡಿದೆ.

ನಂತರ ಮಾರ್ನಿಂಗ್‌ ಶೋ ಸಿನಿಮಾ ನೋಡಿ, ಚೆನ್ನಾಗಿದ್ದರೆ ಓಕೆ, ಇಲ್ಲವೆಂದರೆ, ಮೊದಲಿನಂತೆ ಮಾಡಿಕೊಡ್ತೀನಿ ಅಂದೆ. ಅಲಂಕಾರ್‌ ಚಿತ್ರಮಂದರಿದಲ್ಲಿ ನರಸಿಂಹನ್‌ ಚಿತ್ರ ನೋಡಿ ಖುಷಿಯಾದರು. ಒಳ್ಳೇ ರೆಸ್ಪಾನ್ಸ್‌ ಸಿಕು¤. ಉಳಿದ ಒಂದಷ್ಟು ಪ್ರಿಂಟ್‌ ತರಿಸಿಕೊಂಡು ಕೆಲಸ ಮಾಡಿದೆ. ಚಿತ್ರ 100 ದಿನ ಪ್ರದರ್ಶನ ಕಂಡಿತು. ನನಗೆ ಗೊತ್ತಿರುವಂತೆ ಆ ಕಾಲದಲ್ಲಿ ರಿಲೀಸ್‌ ಆಗಿ ಥಿಯೇಟರ್‌ನಲ್ಲಿದ್ದ ಚಿತ್ರ ತಂದು, ರಿಪೇರಿ ಮಾಡಿ ಸಕ್ಸಸ್‌ ಆಗಿದ್ದು ಬಹುಶಃ ಅದೊಂದೇ ಇರಬೇಕು. ಅಲ್ಲಿಂದ ನರಸಿಂಹನ್‌ ಅವರ ಕೋಮಲ್‌ ಪ್ರೊಡಕ್ಷನ್‌ನ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದೆ.

1984 ರಲ್ಲಿ ಮದುವೆಯಾದೆ. ಆಗ ಜ್ಯೋತಿ ಎಡಿಟಿಂಗ್‌ ಹೆಸರಲ್ಲಿ ಸಂಕಲನ ಕೆಲಸ ಶುರುಮಾಡಿದೆ. ಶಂಕರ್‌ನಾಗ್‌ ಜತೆ "ಮಾಲ್ಗುಡಿ ಡೇಸ್‌' ಮಾಡಿದ್ದು ಮರೆಯದ ಅನುಭವ. ಶಂಕರ್‌ನಾರ್ಗ ಅವರಿಂದ ಕಲಿತದ್ದು ಸ್ವಲ್ಪವಾದರೂ, ಅವರು ನನಗೆ ಸ್ಪೆಷಲ್‌ ವ್ಯಕ್ತಿ. ರಾತ್ರಿಯಿಡೀ ಕೆಲಸ ಮಾಡಿಸಿಕೊಂಡರೂ ಸದಾ ಅದೇ ಉತ್ಸಾಹದಲ್ಲಿರುತ್ತಿದ್ದರು. "ಮಾಲ್ಗುಡಿ ಡೇಸ್‌' 39 ಎಪಿಸೋಡ್‌ ಆಯ್ತು. ಸೌಂಡ್‌ ಎಫೆಕ್ಟ್ಗೆ ಅಲ್ಲಿನ ಪರಿಕರ ಬಳಸುತ್ತಿದ್ದೆವು. ನೀರು ಸೌಂಡ್‌ಗಾಗಿ ನೀರಿನ ತೊಟ್ಟಿ ಕಟ್ಟಿಸಿದ್ದರು. ಇನ್ನಿತರೆ ಶೂ ಸೌಂಡ್‌ಗೆ ಒಂದಷ್ಟು ಶೂ ತಂದು ಹೆಜ್ಜೆ ಇಡುವಂತೆ ಸದ್ದು ಮಾಡುತ್ತಿದ್ದೆವು.

"ಮಾಲ್ಗುಡಿ ಡೇಸ್‌'ನ ಸೌಂಡ್‌ ಎಫೆಕ್ಟ್ ಕೇಳಿದ ನರಸಿಂಹನ್‌, ಖುಷಿಯಾಗಿ ಮೂರು ಲಕ್ಷ ಕೊಟ್ಟು ಎಲ್ಲರೂ ಹಂಚಿಕೊಳ್ಳಿ ಅಂದಿದ್ದರು. ಅದನ್ನು ಮರೆಯುವಂತಿಲ್ಲ. "ಮಾಲ್ಗುಡಿ ಡೇಸ್‌' ನೋಡಿ, ಮಣಿರತ್ನಂ ಅವರು, ಇದರ ಎಡಿಟರ್‌ ಅವರನ್ನು ಕಚೇರಿಗೆ ಬರಲು ಹೇಳಿ ಅಂತ ಅಸಿಸ್ಟಂಟ್‌ ಕಳುಹಿಸಿದ್ದರು. ಆಗ ನಾನು ಮುಂಬೈನಲ್ಲಿದ್ದೆ. ಅಲ್ಲಿಗೆ ಬಂದ ವ್ಯಕ್ತಿ, ಮಣಿರತ್ನಂ ಸಾರ್‌ ಕರೀತಾರೆ ಬರಬೇಕಂತೆ ಅಂದ. ಕೂಡಲೇ ಮುಂಬೈನಲ್ಲಿದ್ದ ಅವರ ಕಚೇರಿಗೆ ಹೋದೆ. ಆಗ ನನ್ನ ಯಾವ ಸಿನಿಮಾ ನಿಮಗೆ ಇಷ್ಟ ಆಯ್ತು ಅಂದರು.

ನಾನು ಅದಕ್ಕೆ ಸರ್‌, ಯಾವ ಚಿತ್ರ ಇಷ್ಟ ಆಗಿಲ್ಲ ಅಂತ ಹೇಳ್ತೀನಿ ಅಂದೆ. ಸರಿ, ಹೇಳಿ ಅಂದರು. "ಅಂಜಲಿ' ಚಿತ್ರದ ಎಂಡ್‌ ನನಗೆ ಇಷ್ಟ ಆಗಲಿಲ್ಲ ಅಂದೆ. ಅಲ್ಲಿ ಪಾಸಿಟಿವ್‌ ಅಂಶ ಇರಬೇಕಿತ್ತು ಅಂದೆ. ಎಲ್ಲವೂ ಸರಿಯಾಗಿದೆಯಲ್ಲ, ಮೆಂಟಲಿ ರಿಟೈರ್ಡ್‌ ಆದ ಮಗು ಸಾಯೋ ಮುನ್ನ ಅಮ್ಮ ಅಂತ ಕರೆದರೆ ತಾಯಿಗೆ ಖುಷಿ. ಆದರೆ, ಅಮ್ಮ ಅನ್ನೋದನ್ನು ತೋರಿಸದೆ ಸಿನಿಮಾ ಎಂಡ್‌ ಆಗುತ್ತೆ. ಅಲ್ಲಿ ಮಗು ಅಮ್ಮ ಅಂತ ಹೇಳಿದ್ದರೆ ಚೆನ್ನಾಗಿರುತ್ತಿತ್ತು. ಅಂತ ಕೆಲ ಉದಾಹರಣೆ ಕೊಟ್ಟೆ. ಅವರು ಒಪ್ಪಿಕೊಂಡರು. ತಕ್ಷಣ ಒಂದು ಸಿನಿಮಾಗೆ ಅಗ್ರಿಮೆಂಟ್‌ ಮಾಡಿಸಿಕೊಂಡು ಅಡ್ವಾನ್ಸ್‌ ಕೊಟ್ಟರು.

ಮಣಿರತ್ನಂ ಅವರ ಏಳೆಂಟು ಚಿತ್ರಗಳಿಗೆ ಕೆಲಸ ಮಾಡಿದ್ದೆನೆ. "ರೋಜ' ಇಷ್ಟವಾದ ಚಿತ್ರ. ಆ ಚಿತ್ರದಲ್ಲಾದ ಎರಡು ಘಟನೆ ಹೇಳಲೇಬೇಕು. ಮುಖ್ಯವಾಗಿ ಚಿನ್ನ ಚಿನ್ನ ಆಸೈ ಹಾಡು ಚಿತ್ರೀಕರಿಸುವ ಮುನ್ನ, ಹೊಸ ಪ್ರಯೋಗ ಮಾಡಬೇಕು ಅಂತ ಪ್ರಯತ್ನ ನಡೆಯುತ್ತಿತ್ತು. ಆಗ ನಾನು ನಿರ್ದೇಶಕರಿಗೆ ಸರ್‌, ಈ ಹಾಡಲ್ಲಿ ನಾಯಕಿಯ ಮುಗ್ಧತೆ ತೋರಿಸಬೇಕು. ನಾಟಿ ಮಾಡುವ ಆಸೆ, ಚಂದ್ರನ ಮುಟ್ಟೋ ಆಸೆ ಅಂದಾಗ, ಆ ಶಾಟ್ಸ್‌ನೆಲ್ಲ ತೆಗೆದರೆ ಚೆನ್ನಾಗಿರುತ್ತೆ ಅಂದೆ. ಆಗ ಪ್ಯಾಡ್‌ ಹಿಡಿದು ಒಂದು ನೂರು ಶಾಟ್ಸ್‌ ಬರೆದರು. ಒಂದಷ್ಟು ಶಾಟ್ಸ್‌ ಆ ಹಾಡಲ್ಲಿ ಬಳಕೆಯಾಯ್ತು.

ಇನ್ನೊಂದು ದೇಶದ ಧ್ವಜ ಸುಟ್ಟಾಗ ಅದನ್ನು ಆರಿಸಲು ನಾಯಕ ಹೋರಾಡ್ತಾನೆ. ಆ ಮಧ್ಯೆ ಒಂದು ಹಾಡು ಬರುತ್ತೆ. ಸುಮಾರು 500 ಮಕ್ಕಳು ದೇಶ ಗೀತೆ ಹಾಡುವ ಹಾಡದು. ನನಗೆ ಆ ಸಾಂಗ್‌ ಅಲ್ಲಿ ಹಾಕುವುದು ಇಷ್ಟ ಇರಲಿಲ್ಲ. ಬೇಡ ಅಂದೆ. ಮಣಿರತ್ನಂ ಇಲ್ಲ, ಚೆನ್ನಾಗಿರುತ್ತೆ ಅಂದರು. ಸಾಂಗ್‌ ಬರೆಸಿದ್ದೇನೆ. ನಿರ್ಮಾಪಕರು ಓಕೆ ಮಾಡಿದ್ದಾರೆ. ಮಕ್ಕಳಿಗೂ ಹೇಳಿದ್ದಾಗಿದೆ. ಈಗ ಕ್ಯಾನ್ಸಲ್‌ ಮಾಡೋಕೆ ಆಗಲ್ಲ ಅಂದ್ರು. ಶೂಟ್‌ ಮಾಡೋಣ ಆಮೇಲೆ ಬೇಡ ಅನಿಸಿದರೆ ತೆಗೆಯೋಣ ಅಂದ್ರು. ನಾನು ಸರ್‌, ಫೈಟ್‌ ಹಿನ್ನಲೆಯಲ್ಲಿ ಪಲ್ಲವಿ, ಚರಣ ಹೀಗೆ ಬಳಸೋಣ ಚೆನ್ನಾಗಿರುತ್ತೆ ಅಂತ ಐಡಿಯಾ ಕೊಟ್ಟೆ. ಅದು ವಕೌìಟ್‌ ಆಯ್ತು.

ಅವಮಾನ ಸಾಧನೆಯ ದಾರಿ: ಆಗ ನೆಗೆಟಿವ್‌ ಕೆಲಸ. ತುಂಬಾ ಸುಲಭವಾಗಿರಲಿಲ್ಲ. ಬಾಲ ಅವರು ಐದಾರು ಲಕ್ಷ ಅಡಿ ಶೂಟ್‌ ಮಾಡಿಕೊಂಡು ಬರೋರು. ಒಂದು ಶಾಟ್‌ ಅನ್ನು 30, 40 ಸಲ ತೆಗೆಯೋರು. ಅವರು ಎಡಿಟಿಂಗ್‌ಗೆ ಬರುತ್ತಿರಲಿಲ್ಲ. ಆದರೆ, ತೆಗೆದ ಶಾಟ್ಸ್‌ ಬಗ್ಗೆ ನೆನಪಿರುತ್ತಿತ್ತು. ನಾನು ಒಂದು ರೌಂಡ್‌ ಎಡಿಟ್‌ ಮಾಡಿ ಹೇಳಿದಾಗ, ಆ ಸೀನ್‌ಗೆ ಯಾವ ಶಾಟ್‌ ಬಳಸಿದ್ದೀರಿ ಅಂತ ಕೇಳ್ಳೋರು. 32 ನೇ ಶಾಟ್‌ ಅಂದಾಗ, ಇಲ್ಲಾ, 22 ನೇ ಶಾಟ್‌ ಚೆನ್ನಾಗಿತ್ತಲ್ಲ ಅನ್ನೋರು. ಅದು ಯಾಕೆ ಬಳಸಿಲ್ಲ ಅನ್ನೋಕೆ ನಾನು ಬಲವಾದ ಕಾರಣ ಹೇಳಬೇಕಿತ್ತು.

ಅದು ಸರಿ ಎನಿಸಿದಾಗ, ನನ್ನ ಕೆಲಸ ಮೆಚ್ಚೋರು. ಅದೊಂದು ಮರೆಯದ ಸಂಗತಿ. ಈ ಸಿನಿಮಾ ಜರ್ನಿಯಲ್ಲಿ ಅದೆಷ್ಟೋ ಅನುಭವಗಳಾಗಿವೆ. ಹೆಸರಾಂತ ನಿರ್ದೇಶಕರ ಜತೆ ಬಹುಭಾಷೆಯ ಚಿತ್ರಗಳಲ್ಲಿ ಕೆಲಸ ಮಾಡಿದ್ದು ಹೆಮ್ಮೆ ಎನಿಸಿದೆ. ನಾನು ಅವಮಾನ ಸಹಿಸಿಕೊಂಡೇ ಮೇಲಕ್ಕೆ ಬಂದವನು. ನನ್ನ ಜತೆ ಕೆಲಸ ಮಾಡಿದವರನ್ನು ನಾನು ಶಿಷ್ಯರು ಅಂತ ಕರೆಯಲ್ಲ. ಅವರು ನನ್ನ ಸ್ನೇಹಿತರು. ಅವರಿಗೆ ಎಷ್ಟೋ ಬಾರಿ ಬೈದಿದ್ದನೇ, ಕತ್ತರಿಯಿಂದ ಹೊಡೆದಿದ್ದೂ ಇದೆ. ಆದರೆ, ಅದೆಲ್ಲವೂ ಅವರು ಕೆಲಸ ಕಲಿಯಲಿ ಎಂಬ ಕಾರಣಕ್ಕಷ್ಟೇ. ಬೇರೆ ಯಾವ ಉದ್ದೇಶವೂ ಇಲ್ಲ.

ನನ್ನ ಈ ಯಶಸ್ಸಿನ ಹಿಂದೆ ನನ್ನ ಸೋದರತ್ತೆಯರಿದ್ದಾರೆ. ಪ್ರೀತಿ ತೋರಿ, ಬೆಳೆಯಲು ಸಹಕರಿಸಿದ್ದಾರೆ. ನನ್ನ ಚಿಕ್ಕಮ್ಮ ಹಿಂದಿ ಕಲಿಸಿ, ಬದುಕಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನರಸಿಂಹನ್‌ ಅವರ ಪತ್ನಿ ಪದ್ಮಿನಿ ಅವರು ನನ್ನ ಯಶಸ್ಸಿಗೆ ಹಿಂದೆ ನಿಂತು ಕಾರಣರಾಗಿದ್ದಾರೆ. ಇನ್ನು, ನನ್ನ ಹೆಂಡತಿ ನನ್ನೆಲ್ಲಾ ಕಾಟ ಸಹಿಸಿಕೊಂಡು ನಾನು ಬೆಳೆಯೋಕೆ ಕಾರಣರಾಗಿದ್ದಾರೆ. ಉಳಿದಂತೆ ಬರಗೂರು ರಾಮಚಂದ್ರಪ್ಪ, ಬಾಲಚಂದರ್‌, ಮಣಿರತ್ನಂ, ನಾಗಾಭರಣ ಹೀಗೆ ಹಲವು ನಿರ್ದೇಶಕರ ಸಹಕಾರವೂ ಇದೆ.

ನಾನೊಬ್ಬ ಒಳ್ಳೇ ಸಂಕಲನಕಾರ ಅಂತ ಎಲ್ಲರೂ ಪ್ರೀತಿಯಿಂದ ಹೇಳುತ್ತಾರೆ. ಅಷ್ಟೇ ಪ್ರೀತಿಯಿಂದ ನೀವೇಕೆ ನಿರ್ದೇಶನ ಮಾಡಬಾರದು. ಒಳ್ಳೆಯ ಸಂಕಲನಕಾರ, ಒಳ್ಳೆಯ ನಿರ್ದೇಶಕ ಆಗಬಹುದಲ್ಲವೇ? ಅಂದಿದ್ದಾರೆ. ಆದರೆ, ನನಗೆ ನಿರ್ದೇಶನ ಇಷ್ಟವಿಲ್ಲ. ನನ್ನ ಪ್ರಕಾರ ಒಳ್ಳೇ ಸಂಕಲನಕಾರ ಒಳ್ಳೇ ನಿರ್ದೇಶಕ ಆಗುತ್ತಾನೆ ಅನ್ನೋ ನಂಬಿಕೆ ನನಗಿಲ್ಲ. ನಾನು ಬೂಟ್‌ ಪಾಲಿಷ್‌ ಮಾಡುವನಾಗುತ್ತೇನೆ ಹೊರತು, ಬೂಟ್‌ ಪಾಲಿಷ್‌ ಮಾಡಿಸಿಕೊಳ್ಳುವನಾಗಲು ಬಯಸಲ್ಲ.

ಕನ್ನಡ, ತಮಿಳು, ತೆಲುಗು, ಹಿಂದಿ, ಬೆಂಗಾಲಿ ಮಲಯಾಳಂ ಭಾಷೆಯ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಂಕಲನ ಮಾಡಿದ್ದೇನೆ. ರಾಜ್ಯ, ರಾಷ್ಟ್ರ ಪ್ರಶಸ್ತಿಗಳು ಸಿಕ್ಕಿವೆ. ಕರ್ನಾಟಕ ರಾಜ್ಯ ಸರ್ಕಾರ ಡಾ.ವಿಷ್ಣುವರ್ಧನ್‌ ಜೀವಮಾನ ಸಾಧನೆ ಗೌರವ ನೀಡಿದೆ. ರಾಜ್ಯೋತ್ಸವ ಪ್ರಶಸ್ತಿಯೂ ಕೊಟ್ಟಿದೆ. ಇದರೊಂದಿಗೆ ಸಾರ್ವಜನಿಕರ ಮನದಾಳದ ಪ್ರೀತಿಯೂ ಸಿಕ್ಕಿದೆ. ಇದು ಹೀಗೆಯೇ ಇರಬೇಕೆಂಬ ಆಸೆ ನನ್ನದು.


Trending videos

Back to Top