CONNECT WITH US  

ಅಕ್ಕಮ್ಮಳಾದ ವಠಾರದ ಮೀರಾ

ರೂಪತಾರಾ: ಬಾಲನಟಿಯಾಗಿ ಬಂದವರು ಕಿರುತೆರೆ-ಹಿರಿತೆರೆಗಳಲ್ಲಿ ನೆಲೆ ಕಂಡರು

ನೀವು ಕಿರುತೆರೆ ಪ್ರಿಯರಾಗಿದ್ದರೆ ಅದರಲ್ಲೂ ಟಿ.ಎನ್‌.ಸೀತಾರಾಂ ಅವರ ಧಾರಾವಾಹಿಗಳನ್ನು ನೋಡುವವರಾಗಿದ್ದರೆ ನಿಮಗೆ ಇವರ ಮುಖಪರಿಚಯವಿರುತ್ತದೆ. ತಾಯಿ ಪಾತ್ರ ಅಥವಾ ಇನ್ಯಾವುದೋ ಕಡುಬಡತನದ ಪಾತ್ರಗಳಲ್ಲಿ ಇವರನ್ನು ನೋಡಿರುತ್ತೀರಿ. ಹೀಗೆ ತಮ್ಮ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಅವಕಾಶ ಪಡೆಯುತ್ತಿರುವ ಸುಧಾ ಪ್ರಸನ್ನ ಅವರು ಕಿರುತೆರೆಗೆ ಬಂದು 18 ವರ್ಷಗಳಾಗಿವೆ.

ಈ 18 ವರ್ಷಗಳಲ್ಲಿ ಅವರು ಮಾಡಿರುವ ಧಾರಾವಾಹಿಗಳು 75ಕ್ಕೂ ಹೆಚ್ಚು. ಇಷ್ಟು ಧಾರಾವಾಹಿಗಳಲ್ಲಿ ಅವರು ವಿಭಿನ್ನವಾದ ಪಾತ್ರ ಪೋಷಣೆ ಮಾಡುತ್ತಾ ಬಂದಿದ್ದಾರೆ. ಸುಧಾ ಪ್ರಸನ್ನ ಅವರಿಗೆ ಹೊಸ ಹೊಸ ಧಾರಾವಾಹಿಗಳಲ್ಲಿ ಅವಕಾಶ ಸಿಗುತ್ತಿರುವ ಖುಷಿ ಇದೆ. ಸದ್ಯ "ಜೀವನದಿ', "ಯಾರೇ ನೀ ಮೋಹಿನಿ' ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

ಹಾಗೆ ನೋಡಿದರೆ ಸುಧಾ ಪ್ರಸನ್ನ ಅವರ ಕುಟುಂಬದ ಪ್ರತಿಯೊಬ್ಬರು ಕಲೆಯಲ್ಲಿ ತೊಡಗಿಸಿಕೊಂಡವರು ಎನ್ನಬಹುದು. ಅವರ ತಂದೆರ ಅಬ್ಬೂರು ಜಯತೀರ್ಥ ಅವರು ರಂಗ ನಿರ್ದೇಶನದ ಜೊತೆಗೆ ಸಂಗೀತದಲ್ಲೂ ತೊಡಗಿಸಿಕೊಂಡವರು. ಇವರ ತಾತ ಸೇತು ಮಾಧವರಾವ್‌ ಕೂಡಾ ಕಲೆಯನ್ನು ಆರಾಧಿಸಿದವರು. ಹಾಗಾಗಿ, ಇವರಿಗೂ ಕಲಾಸಕ್ತಿ ಬಂದು ಈಗ ನಟಿಯಾಗಿದ್ದಾರೆ.

ಬಾಲನಟಿಯಾಗಿ ಎಂಟ್ರಿ: ಸುಧಾ ಪ್ರಸನ್ನ ಅವರು ಬಾಲನಟಿಯಾಗಿ ಎಂಟ್ರಿಕೊಟ್ಟವರು. "ಕಾಬೂಲಿವಾಲಾ' ಎಂಬ ನಾಟಕದಲ್ಲಿ ಬಾಲ ನಟಿಯಾಗಿ ನಟಿಸುವ ಮೂಲಕ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಮುಂದಿನ ದಿನಗಳಲ್ಲಿ ರಂಗಭೂಮಿಯಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡರು. ಅದರ ಪರಿಣಾಮವಾಗಿ 100ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಈ ನಾಟಕಗಳು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.

ಹೀಗೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಸುಧಾ ಪ್ರಸನ್ನ ಅವರು ಕಿರುತೆರೆಗೆ ಎಂಟ್ರಿಕೊಟ್ಟಿದ್ದು 18 ವರ್ಷಗಳ ಹಿಂದೆ. "ಅಣ್ಣ ಬಸವಣ್ಣ' ಧಾರಾವಾಹಿ ಮೂಲಕ ಬಣ್ಣ ಹಚ್ಚಿದ ಸುಧಾ ಅವರು ಆ ನಂತರ ಸಾಕಷ್ಟು ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ. ಸಾಕಷ್ಟು ಧಾರಾವಾಹಿ ಮಾಡಿದ್ದರೂ ಅವರಿಗೆ ಹೆಸರು ತಂದುಕೊಟ್ಟಿದ್ದು "ವಠಾರ' ಧಾರಾವಾಹಿಯಂತೆ.

"ವಠಾರ'ದಲ್ಲಿ ಮೀರಾ ಪಾತ್ರ ಮಾಡಿದ್ದರಿಂದ ಇವರನ್ನು "ವಠಾರದ ಮೀರಾ' ಎಂದೇ ಗುರುತಿಸುತ್ತಾರಂತೆ. "ಧಾರಾವಾಹಿಯಲ್ಲಿ ನನಗೆ ಒಳ್ಳೊಳ್ಳೆ ಅವಕಾಶಗಳು ಸಿಕ್ಕಿವೆ. ಅದರಲ್ಲೂ ಶ್ರುತಿ ನಾಯ್ದು ಹಾಗೂ ಟಿ.ಎನ್‌.ಸೀತಾರಾಂ ಅವರ ಧಾರಾವಾಹಿಗಳಲ್ಲಿ ನನಗೆ ಖಾಯಂ ಪಾತ್ರ ಇರುತ್ತಿದ್ದವು. ಈ ಪಾತ್ರಕ್ಕೆ "ನೀನೇ ಸೂಕ್ತ' ಎಂದು ನನಗೆ ಪಾತ್ರ ಬರೆಯುತ್ತಿದ್ದರು' ಎಂದು ಖುಷಿಯಿಂದ ಹೇಳುತ್ತಾರೆ ಪ್ರಸನ್ನ.

ಸಿನಿಮಾದಲ್ಲೂ ನಟನೆ: ಸಾಮಾನ್ಯವಾಗಿ ಧಾರಾವಾಹಿಯಲ್ಲಿ ಹಿಟ್‌ ಆದವರು ಆ ನಂತರ ಸಿನಿಮಾಕ್ಕೆ ಬರೋದು ವಾಡಿಕೆ. ಆ ವಿಚಾರದಲ್ಲಿ ಸುಧಾ ಅವರು ಕೂಡಾ ಹೊರತಾಗಿಲ್ಲ. ಆದರೆ, ಸುಧಾ ಅವರು ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲ. "ಮಾರಿಕೊಂಡವರು', "ಮೂಡಲಸೀಮೆಯಲ್ಲಿ' ಹಾಗೂ "ಅಕ್ಕಮ್ಮನ ಭಾಗ್ಯ' ಚಿತ್ರಗಳಲ್ಲಿ ನಟಿಸಿದ್ದಾರೆ. ಇವೆಲ್ಲವೂ ಕಲಾತ್ಮಕ ಚಿತ್ರವಾಗಿದ್ದು, ನಟನೆಗೆ ಹೆಚ್ಚು ಅವಕಾಶವಿದೆಯಂತೆ.

ಅದರಲ್ಲೂ "ಅಕ್ಕಮ್ಮನ ಭಾಗ್ಯ' ಚಿತ್ರದಲ್ಲಿ ಸುಧಾ ಅವರು ಅಕ್ಕಮ್ಮ ಪಾತ್ರ ಮಾಡಿದ್ದು, ಚಿತ್ರ ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿದೆ.  "ಅಕ್ಕಮ್ಮನ ಭಾಗ್ಯ' ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ಇಡೀ ಸಿನಿಮಾ ನನ್ನ ಸುತ್ತ ಸುತ್ತುತ್ತದೆ. ಈ ತರಹದ ಪಾತ್ರ ಮಾಡಲು ನನಗೆ ಇಷ್ಟ' ಎನ್ನುತ್ತಾರೆ. ಅಂದಹಾಗೆ, ಕಮರ್ಷಿಯಲ್‌ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಸುಧಾ ಅವರಿಗೆ ಇಲ್ಲವಂತೆ.

"ನನಗೆ ಕಮರ್ಷಿಯಲ್‌ ಸಿನಿಮಾದಲ್ಲಿ ನಟಿಸುವ ಆಸಕ್ತಿ ಅಷ್ಟೊಂದು ಇಲ್ಲ. ನಮ್ಮದೂ ಸಂಪ್ರದಾಯಸ್ಥ ಕುಟುಂಬ. ಜೊತೆಗೆ ನಾನು ಹೆಣ್ಣು ಮಗಳ ತಾಯಿ. ಹಾಗಾಗಿ, ಆ ಕಡೆ ಹೆಚ್ಚು ಆಸಕ್ತಿ ತೋರಲಿಲ್ಲ' ಎಂಬುದು ಅವರ ಮಾತು. ಬಣ್ಣದ ಲೋಕದ ಇಷ್ಟು ವರ್ಷದ ಜರ್ನಿ ಅವರಿಗೆ ಖುಷಿ ಕೊಟ್ಟಿದ್ದು, ಎಲ್ಲರೂ ಗೌರವಯುತವಾಗಿ ನಡೆಸಿಕೊಂಡಿದ್ದಾರಂತೆ. 

Trending videos

Back to Top