CONNECT WITH US  

ಈಗಷ್ಟೇ ಟೇಕಾಫ್ ಆಗ್ತಾ ಇದ್ದೇನೆ...

ರೂಪತಾರಾ: ಮುಂದಿನ ವರ್ಷ ಸಿನಿಮಾ ಸಂಪತ್ತು ಜೋರಾಗಿರುತ್ತೆ!

ಇದು ಎರಡು ದಶಕದ ಹಿಂದಿನ ಮಾತು. ಅದು ರಾಮನಗರ ಸಮೀಪದ ನಾರಾಯಣಪುರ ಗ್ರಾಮದ ಬಡ ರೈತಾಪಿ ಕುಟುಂಬ. ಆ ಕುಟುಂಬದ ಹುಡುಗನೊಬ್ಬ ಹೆಚ್ಚಿನ ವಿದ್ಯಾಭ್ಯಾಸ ಮಾಡುವುದಕ್ಕಾಗಿಯೇ ಬೆಂಗಳೂರು ಕಡೆ ಮುಖ ಮಾಡಿದವನು. ಬೆಳಗ್ಗೆ ಹೊತ್ತು ಅಲ್ಲಿ, ಇಲ್ಲಿ ಕೆಲಸ ಮಾಡಿ, ಸಂಜೆ ಹೊತ್ತು ಕಾಲೇಜು ಓದಿಕೊಂಡು ಬದುಕು ಸವೆಸಿದವನು. ಹಾಗೆ ಮಾಡುತ್ತಲೇ ಒಂದು ಪದವಿಯನ್ನೂ ಮುಗಿಸಿಬಿಟ್ಟ. ಡಿಗ್ರಿ ನಂತರ ಮುಂದೇನು ಎಂಬ ಪ್ರಶ್ನೆ ಎದುರಾಯ್ತು. ಆಗ ಅವರ ಮುಂದೆ ಕಂಡಿದ್ದು, ಅವರ ಇಂಗ್ಲೀಷ್‌ ಟೀಚರ್‌.

ಡಿಗ್ರಿಯಲ್ಲಿ ಶೇಕ್ಸ್‌ಪಿಯರ್‌ ಪಾಠ ಹೇಳುತ್ತಿದ್ದ ಟೀಚರ್‌, ಸಮುದಾಯ ಮತ್ತು ರಂಗ ಸಂಘಟನೆಯಿಂದ ಬಂದವರು. ಅವರ ಬಳಿ ಹೋದ ಆ ಹುಡುಗ, ಸರ್‌, "ಡಿಗ್ರಿ ಮುಗಿಯಿತು ಮುಂದೇನು ಮಾಡಬೇಕೆಂಬುದು ಗೊತಿಲ್ಲ ಅಂತ ಮುಗ್ಧವಾಗಿ ಹೇಳಿಕೊಂಡ. ಆ ಟೀಚರ್‌, ಸೀದಾ ಆ ಹುಡುಗನನ್ನು "ಅಭಿನಯ ತರಂಗ'ಕ್ಕೆ ಕರೆದು ಬಿಟ್ಟರು. ಅಲ್ಲಿಂದ ಶುರುವಾದ ಆ ಹುಡುಗನ ರಂಗಭೂಮಿ ಜರ್ನಿ, ಈಗ ಸಿನಿಮಾದವರೆಗೂ ಬಂದಿದೆ.

ಒಳ್ಳೆಯ ಪಾತ್ರಗಳ ಮೂಲಕ ನಿರ್ದೇಶಕರ ಅಚ್ಚುಮೆಚ್ಚಿನ ನಟ ಎನಿಸಿಕೊಂಡ ಆ ಹುಡುಗ ಬೇರಾರೂ ಅಲ್ಲ, ಸಂಪತ್‌. ಊರಲ್ಲಿ ಪೌರಾಣಿಕ ನಾಟಕ ನೋಡಿಕೊಂಡು, ಕೋಲಾಟ ಆಡಿಕೊಂಡು, ಹಾವಾಡಿಸೋರನ್ನ ಸೋಜಿಗದಿಂದ ಗಮನಿಸಿಕೊಂಡು, ರಾತ್ರಿ ನಡೆಯೋ ಭಜನೆ, ಕಳೆ ಕೀಳುವಾಗ ಮೊಳಗೋ ಕೂಲಿಕಾರರ ಜನಪದ ಹಾಡು ಇತ್ಯಾದಿ ಕೇಳಿಕೊಂಡ ಬಂದ ಸಂಪತ್‌, ಇಂದು ಕನ್ನಡ ಚಿತ್ರರಂಗದ ಅಪ್ಪಟ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ತಮ್ಮ ಸಿನ್ಮಾ ಪಯಣ ಕುರಿತು ಸ್ವತಃ ಸಂಪತ್‌ ಮಾತನಾಡಿದ್ದಾರೆ.
 
ನಾನು ಇದುವರೆಗೆ 13 ಚಿತ್ರಗಳಲ್ಲಿ ನಟಿಸಿದ್ದೇನೆ. ಮಾಡಿದ ಅಷ್ಟೂ ಚಿತ್ರಗಳಲ್ಲಿ ಒಳ್ಳೆಯ ಪಾತ್ರಗಳೇ ಸಿಕ್ಕಿವೆ. ಸದ್ಯಕ್ಕೆ ಇನ್ನೂ ಪ್ರಮುಖ ಸಿನಿಮಾಗಳಿವೆ. "ಹೂಲ್ಸ್‌ ಆಫ್ ಕಾನೂರು' (ಕಾನೂರಿನ ತೋಳಗಳು) ಚಿತ್ರ ಶುರುವಾಗಬೇಕಿದೆ. "ಜೋರ್ಡಾನ್‌' ಎಂಬ ಹೊಸ ಚಿತ್ರ ರಿಲೀಸ್‌ ಆಗಬೇಕಿದೆ. "ಕವಲು ದಾರಿ' ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. "ಕೆಜಿಎಫ್' ಚಿತ್ರದಲ್ಲೂ ವಿಶೇಷ ಪಾತ್ರವಿದೆ. ಇವುಗಳ ನಡುವೆ ಒಂದಷ್ಟು ಕಥೆಗಳೂ ಹುಡುಕಿ ಬರುತ್ತಿವೆ. ಸದ್ಯಕ್ಕೆ ಸಿನಿಮಾ ಪಯಣ ಜೋರಾಗಿದೆ.

ಈಗ ಚಿತ್ರಗಳಲ್ಲಿ ತೊಡಗಿಸಿಕೊಂಡಿರವುದರಿಂದ ನಾಟಕಗಳಲ್ಲಿ ಅಭಿನಯಿಸುವುದು ಕಷ್ಟವಾಗುತ್ತಿದೆ. ಯಾಕೆಂದರೆ, ನಾಟಕ ಅಂದರೆ, ಸುಮಾರು ಎರಡು ತಿಂಗಳ ಕಾಲ ತಯಾರಿ ಬೇಕು. ಆದರೆ, ಸಿನಿಮಾ ಚಿತ್ರೀಕರಣದಲ್ಲಿದ್ದರೆ, ನಾಟಕ ಮಾಡುವುದು ಕಷ್ಟ ಸಾಧ್ಯ. ನಾಟಕದಲ್ಲಿ ಪ್ರತಿ ನಿತ್ಯ ತೊಡಗಿಕೊಂಡರೆ ಮಾತ್ರ ಮಾಡಲು ಸಾಧ್ಯ. ಇನ್ನೆಲ್ಲೋ ನಾಟಕಗಳು ಮರು ಪ್ರದರ್ಶನವಾದರಂತೂ ಇರಲೇಬೇಕು. ಹಾಗಾಗಿ, ಸದ್ಯಕ್ಕೆ ನಾನು ಹೊಸ ನಾಟಕಗಳಿಗೆ ಬ್ರೇಕ್‌ ಹಾಕಿದ್ದೇನೆ. ಹಳೆಯ ನಾಟಕಗಳಿದ್ದರೆ, ಸಮಯ ನೋಡಿಕೊಂಡು ಮಾಡುತ್ತೇನೆ.

ನಾನು ನಟಿಸಿದ ಹದಿಮೂರು ಚಿತ್ರಗಳ ಪೈಕಿ, "ಕಿರಗೂರಿನ ಗಯ್ನಾಳಿಗಳು' ಒಳ್ಳೆಯ ಹೆಸರು ತಂದುಕೊಡು¤. ಉಳಿದಂತೆ ಮಾಡಿದ ಚಿತ್ರಗಳಲ್ಲೂ ಒಳ್ಳೆಯ ಪಾತ್ರಗಳಿದ್ದವು. ನಾನೊಬ್ಬ ನಟನಾಗಿ ಎಲ್ಲಾ ರೀತಿಯ ಪಾತ್ರಗಳನ್ನು ಬಯಸುತ್ತೇನೆ. ನನಗೆ ಇಂಥದ್ದೇ ಪಾತ್ರ ಬೇಕು ಎಂಬ ಮೈಂಡ್‌ಸೆಟ್‌ ಇಲ್ಲ. ಮೂಲತಃ ರಂಗಭೂಮಿಯಿಂದ ಬಂದಿರುವುದರಿಂದ ಯಾವ ಪಾತ್ರ ಕೊಟ್ಟರೂ, ತಯಾರಿ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಲ್ತಿàನಿ. ನನಗೆ ಹೀರೋ ಆಗಬೇಕು ಎಂಬ ಆಸೆಗಳಿಲ್ಲ. ನಾನು ಹೀರೋ ಎಂಬ ಕಾನ್ಸೆಪ್ಟ್ ಒಪ್ಪುವುದೂ ಇಲ್ಲ.

ಬರೀ, ಫೈಟು, ಡ್ಯಾನ್ಸ್‌ ಮಾಡಿಬಿಟ್ಟರೆ ಹೇಗೆ ಹೀರೋ ಅನ್ನುವುದಕ್ಕಾಗುತ್ತೆ. ನನ್ನ ಪ್ರಕಾರ, ಹೀರೋ ಅಂದರೆ, ಬಸವಣ್ಣ, ಅಲ್ಲಮ ಪ್ರಭು, ಬುದ್ಧ ಇವರು ನಿಜವಾದ ಹೀರೋಗಳು. ಇದು ನನ್ನ ಅಭಿಪ್ರಾಯವಷ್ಟೇ. ನನಗೆ ಕಲಾವಿದನಾಗಿ ಉಳಿಯಬೇಕೆಂಬ ಆಸೆ ಇದೆ. ಎಲ್ಲಾ ರೀತಿಯ ಪಾತ್ರ ಮಾಡುವಂತಹ ಕಲಾವಿದನಾಗಬೇಕು. ಹೀರೋ ಅಂತ ಗುರುತಿಸಿಕೊಂಡರೆ, ಒಂದಕ್ಕೇ ಅಂಟಿಕೊಳ್ಳಬೇಕಾಗುತ್ತೆ. ಅಲ್ಲೇ ಒದ್ದಾಡಬೇಕಾಗುತ್ತೆ. ಬೇಕಾದ ಪಾತ್ರಗಳು ಸಿಗುವುದು ಕಷ್ಟ. ಸಿಕ್ಕರೂ ಅಭಿನಯಕ್ಕೆ ಹೆಚ್ಚು ಸ್ಕೋಪ್‌ ಇರಲ್ಲ.

ಅದೇ ಕಲಾವಿದರಾದರೆ, ಚಾಲೆಂಜಿಂಗ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯ. ನನಗೆ ಚಾಲೆಂಜಿಂಗ್‌ ಪಾತ್ರವೆಂದರೆ ಇಷ್ಟ. "ಕವಲು ದಾರಿ', "ಕೆಜಿಎಫ್' ಚಿತ್ರಗಳಲ್ಲಿ ಅಂಥದ್ದೊಂದು ಚಾಲೆಂಜಿಂಗ್‌ ಪಾತ್ರವಿದೆ. ನನಗೆ ಹೀರೋ ಪಟ್ಟ ಬೇಡ. ಅಭಿನಯಕ್ಕೆ ಒತ್ತು ಇದ್ದರೆ ಸಣ್ಣ ಪಾತ್ರವಾದರೂ ಸರಿ, ಖುಷಿಯಿಂದ ಮಾಡುತ್ತೇನೆ. ನನಗೆ ಸೀಮಿತವಾಗೋಕೆ ಇಷ್ಟವಿಲ್ಲ. ಕಟ್ಟಿಸಿಕೊಂಡು ಇರೋಕೂ ಮನಸ್ಸಿಲ್ಲ. ಈ ಸಿನಿಮಾ ಪಯಣದ ನಡುವೆಯೂ ನಾನು ರಂಗಭೂಮಿ ನಂಟು ಬಿಡುವುದಿಲ್ಲ.

ರಂಗಭೂಮಿ ಮತ್ತು ಸಿನಿಮಾಗೆ ನಂಟು ಇದೆ. ಆದರೆ, ಎರಡರಲ್ಲೂ ಸಾಕಷ್ಟು ವ್ಯತ್ಯಾಸವೂ ಇದೆ. ರಂಗಭೂಮಿಯಲ್ಲಿ ಮೊಳೆ ಹೊಡೆಯುವ ಕೆಲಸದಿಂದ ಹಿಡಿದು, ಕಸಗುಡಿಸುವ ಕೆಲಸದವರೆಗೂ ಮಾಡುತ್ತೇನೆ ಮತ್ತು ಮಾಡಬೇಕು. ಆದರೆ, ಸಿನಿಮಾದಲ್ಲಿ ಸಾಧ್ಯವಿಲ್ಲ. ಪಾತ್ರ ಏನಿದೆಯೋ ಅದನ್ನಷ್ಟೇ ಮಾಡಬೇಕು ಬರಬೇಕು. ಸಿನಿಮಾದಲ್ಲಿ ಅಂತಹ ವಾತಾವರಣ ಕಡಿಮೆ. ಸಿಕ್ಕರೆ ಮಾಡಲು ಮರೆಯೋದಿಲ್ಲ. ಇನ್ನು ನಾಟಕವೇ ಬೇರೆ. ಸಿನಿಮಾನೇ ಬೇರೆ. ನಾಟಕವಾದರೆ, ಕಡೆಯಲ್ಲಿ ಕೂತ ಪ್ರೇಕ್ಷಕನಿಗೆ ನೇರ ಮುಖಾಮುಖೀ ಆಗಬಹುದು.

ಸಿನಿಮಾದಲ್ಲಿ ತಂತ್ರಜ್ಞಾನ ಮತ್ತು ಪ್ರೇಕ್ಷಕರ ನಡುವೆ ಮುಖಾಮುಖೀ ನಡೆಯುತ್ತಿದೆ. ನಾಟಕದಲ್ಲಿ ದೊಡ್ಡ ವೇದಿಕೆಯನ್ನು ಹೇಗಾದರೂ ಬಳಸಿಕೊಳ್ಳಬಹುದು. ಸಿನಿಮಾದಲ್ಲಿ ಕಟ್ಟಿಹಾಕುತ್ತಾರೆ. ಒಂದು ಫ್ರೆàಮ್‌ ಇಟ್ಟು, ಆ ಫ್ರೆàಮ್‌ನಲ್ಲೇ ನಟಿಸಬೇಕು. ನಾಟಕದಲ್ಲಿ ವೇದಿಕೆಗೆ ಚೌಕಟ್ಟು ಇರಲ್ಲ. ಅಲ್ಲಿ ಕೈ ಎತ್ತಿದರೆ, ಓಡಾಡಿದರೆ ಮಾತ್ರ ಕೊನೆಯ ಪ್ರೇಕ್ಷಕನಿಗೂ ಕಾಣಬಹುದು. ಸಿನಿಮಾದಲ್ಲಿ ಅದು ಅಸಾಧ್ಯ. ಫ್ರೆಮ್‌ ಬಿಟ್ಟು ಆಚೆ ಹೋಗಿ ಕೈ ಎತ್ತಿದರೆ ಕಷ್ಟ. ಈವರೆಗೆ ಎಲ್ಲಾ ರೀತಿಯ ಪಾತ್ರ ನಿರ್ವಹಿಸಿದ್ದೇನೆ.

ನನಗೆ ದೊಡ್ಡ ಪಾತ್ರ, ಸಣ್ಣ ಪಾತ್ರ ಎಂಬುದು ಗೊತ್ತಿಲ್ಲ. ಚಿಕ್ಕ ಪಾತ್ರವಿದ್ದರೂ ಸರಿ, ಎಲ್ಲರೂ ಗಮನಿಸುವಂತೆ ಮಾಡಿ ತೋರಿಸುವುದರಲ್ಲಿ ನನಗೆ ಚಾಲೆಂಜ್‌. ಎಂಥಾ ಒಳ್ಳೆಯ ನಟನೇ ಇರಲಿ, ಅವರನ್ನು ಕರೆದುಕೊಂಡು ಬಂದು ಹೀಗೊಂದು "ಅಲೆಮಾರಿ' ಪಾತ್ರ ಮಾಡಿ ಅಂದರೆ, ಅವರು ಆ ಕೆಳವರ್ಗದ ಪಾತ್ರ ಮಾಡೋಕೆ ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ನಾನು ಹಳ್ಳಿಯಿಂದ ಬಂದವನು. ಆ ರೀತಿಯ ಪಾತ್ರಗಳನ್ನು ಹತ್ತಿರದಿಂದ ನೋಡಿದವನು. ಆದ್ದರಿಂದ ಅಂತಹ ಪಾತ್ರಗಳೇ ನನಗಿಷ್ಟ.

ನಾನು ಸುಮಾರು ಮುವತ್ತಕ್ಕೂ ಹೆಚ್ಚು ನಾಟಕಗಳನ್ನು ಮಾಡಿದ್ದೇನೆ. ಅದರಲ್ಲಿ ಪ್ರಮುಖ ಪಾತ್ರಗಳನ್ನೇ ನಿರ್ವಹಿಸಿದ್ದೇನೆ. ಸುಮಾರು ಹದಿನಾಲ್ಕು ವರ್ಷಗಳ ಕಾಲ ರಂಗಭೂಮಿಯಲ್ಲಿ ನಿರಂತರ ಕಾರ್ಯ ನಿರ್ವಹಿಸುತ್ತ ಬಂದಿದ್ದೇನೆ. ಈ ಮಧ್ಯೆ ಹಲವು ನಾಟಕ ಬೀದಿ ನಾಟಕ ಮಾಡಿದ್ದುಂಟು. ಬಸವಲಿಂಗಯ್ಯ ಅವರು ನನ್ನ ರಂಗಭೂಮಿಯ  ಗುರು. ಅವರೊಟ್ಟಿಗೆ ಒಂದು ದಶಕದ ಕಾಲ ಜತೆಗಿದ್ದು ಕೆಲಸ ಮಾಡಿದ್ದೇನೆ. ಚಿಕ್ಕೋಡಿ, ತೀರ್ಥಹಳ್ಳಿ ತಾಲೂಕಿನ ಪ್ರತಿ ಗ್ರಾಮಗಳಲ್ಲೂ ನಾನು "ಡೆಮಾಕ್ರಿಸಿ' ಹಾಗು "ಅಧಿಕಾರ ವಿಕೇಂದ್ರೀಕರಣ' ಕುರಿತ ಬೀದಿ ನಾಟಕ ಮಾಡಿದ್ದೇನೆ.

ರಂಗಭೂಮಿಯಿಂದ ಮೊದಲ ಸಲ ನಾನು ಕಿರುತೆರೆ ಪ್ರವೇಶಿಸಿದೆ. ನಾಗತಿಹಳ್ಳಿ ಚಂದ್ರಶೇಖರ್‌ ಅವರ "ಬೆಳ್ಳಿ ಚುಕ್ಕಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡಿದೆ. ನಾನು ಆಗ ಅದೇ ಪಯಣ ಮುಂದುವರೆಸಿದ್ದರೆ, ಯಾವಾಗಲೋ ನಾನು ಸಿನಿಮಾ ರಂಗಕ್ಕೆ ಬರಬಹುದಿತ್ತು. ಆದರೆ, ಸಿನಿಮಾಗೆ ಗಂಟು ಬೀಳದೆ, ನಾಟಕದತ್ತ ಪುನಃ ಮುಖ ಮಾಡಿದೆ. ನಾನು ಡ್ರಾಮಾದಲ್ಲಿ ಎಂಎ ಪದವಿ ಮಾಡಿದ್ದೇನೆ.

ಇದುವರೆಗೆ ನಾನು ಎಂಟು ನಾಟಕಗಳನ್ನು ನಿರ್ದೇಶನ ಮಾಡಿದ್ದೇನೆ. "ಸ್ಮಶಾನ ಕುರುಕ್ಷೇತ್ರ', "ಚದುರಂಗ', "ಒಂದು ಬೊಗಸೆ ನೀರು' ಸೇರಿದಂತೆ ಹಲವು ನಾಟಕ ನಿರ್ದೇಶಿಸಿದ್ದು, ಗುಲ್ಬರ್ಗ ಯೂನಿರ್ವಸಿಟಿಯಲ್ಲಿ ರಂಗಭೂಮಿ ಡಿಪ್ಲೊಮೋ ಕೋರ್ಸ್‌ಗೆ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸದ್ದುಂಟು.  ಎಷ್ಟೋ ಮಂದಿ, ರಂಗಭೂಮಿಯಲ್ಲೇ ಇರುವುದಕ್ಕಿಂತ ಸಿನಿಮಾದಲ್ಲೂ ಕೆಲಸ ಮಾಡು. ಇದು ಪ್ರಬಲ ಮಾಧ್ಯಮ ಅಂದರು. ಅದಕ್ಕೆ ತಕ್ಕಂತೆ ಅವಕಾಶಗಳು ಕೈ ಬೀಸಿ ಕರೆದವು. ಈಗ ಸಿನಿಮಾ ಮಾಡುತ್ತಿದ್ದೇನೆ.

ನನಗೆ ನಟನೆಯಷ್ಟೇ ಸಾಕು. ಸಿನಿಮಾ ನಿರ್ದೇಶನವೆಲ್ಲ ದೂರದ ಮಾತು. ಯಾಕೆಂದರೆ, ಕಥೆ ಮಾಡಿಕೊಂಡು, ನಿರ್ಮಾಪಕರನ್ನು ಹುಡುಕಿ, ಅವರನ್ನು ಒಪ್ಪಿಸಿ ಚಿತ್ರ ಮಾಡೋಕೆ ಸಾಧ್ಯವಿಲ್ಲ. ಎಂಥಾ ಪಾತ್ರವೇ ಇರಲಿ, ಅದನ್ನು ಕೊಟ್ಟರೆ, ಅಚ್ಚುಕಟ್ಟಾಗಿ ನಿರ್ವಹಿಸುತ್ತೇನಷ್ಟೇ. ನಾನು ಯಾವತ್ತೂ ಸಂಭಾವನೆ ವಿಚಾರದಲ್ಲಿ ಡಿಮ್ಯಾಂಡ್‌ ಮಾಡಿಲ್ಲ. ಈಗೀಗ ಡಿಮ್ಯಾಂಡ್‌ ಮಾಡೋ ಹಂತಕ್ಕೆ ಬಂದಿದ್ದೇನಷ್ಟೇ. ಹಿಂದೆ, ಕೊಟ್ಟಷ್ಟು ಪಡೆದು ಹೋಗಿದ್ದೇನೆ. ಎಷ್ಟೋ ಜನ ಸಂಭಾವನೆಗೆ ಕೈ ಎತ್ತಿದ್ದೂ ಇದೆ. ನನಗೊಂದು ದೊಡ್ಡ ಆಸೆ ಇದೆ.

ಅದು ನನ್ನದೇ ಆದಂತಹ ಒಂದು ಸುಂದರ ರಂಗಭೂಮಿ ಕಟ್ಟುವುದು. ಆ ಬಗ್ಗೆ ಗಂಭೀರವಾಗಿ ಯೋಚಿಸಿದ್ದೇನೆ. ಈಗಲೂ ನನಗೆ ರಂಗಭೂಮಿ ಅಭಿವ್ಯಕ್ತಿ ಮಾಧ್ಯಮ. ಹದಿನೆಂಟು ವರ್ಷಗಳ ಕಾಲ ಎಲ್ಲಾ ವಿಭಾಗದಲ್ಲೂ ಕೆಲಸ ಮಾಡಿದ್ದೇನೆ. ಒಂದಷ್ಟು ಅರಿತಿದ್ದೇನೆ. ಹಾಗಾಗಿ, ಒಂದಲ್ಲ ಒಂದು ದಿನ ನಾನು ಆರ್ಥಿಕತೆಯಲ್ಲಿ ಸ್ಟ್ರಾಂಗ್‌ ಆದಾಗ, ರಂಗಭೂಮಿಗೆ ಹಿಂದಿರುಗಿ, ಒಂದು ಗ್ರಾಮೀಣ ಭಾಗದಲ್ಲಿ ರಂಗಭೂಮಿ ಶುರುಮಾಡಿ, ಅಲ್ಲಿ ಒಂದಷ್ಟು ಪ್ರತಿಭೆಗಳನ್ನು ಹೊರತರುವ ಉದ್ದೇಶವಿದೆ.ಎಲ್ಲರೂ ನಟನೆ ಮಾಡಬಹುದು. ಆದರೆ, ಅದು ಮುಖ್ಯವಲ್ಲ.

ಒಬ್ಬ ನಟನಿಗೆ ತಯಾರಿ ಮುಖ್ಯ. ಅದರಲ್ಲೂ ಕೆಲ ಗುಣಗಳನ್ನು ಬೆಳೆಸಿಕೊಳ್ಳಬೇಕು. ರೈತ ಹೊಲದಲ್ಲಿ ಕೆಲಸ ಮಾಡದೆ ಕೂತರೆ ಬೆಳೆ ಬರಲು ಸಾಧ್ಯವೇ? ಹಾಗೆ, ನಟ ತಯಾರಿ ಇಲ್ಲದೆ ಕ್ಯಾಮೆರಾ ಮುಂದೆ ಬಂದರೆ ನಟಿಸೋಕೆ ಸಾಧ್ಯವೇ? ಆಯಾ ವೃತ್ತಿಗೆ ಗೌರವ ಕೊಟ್ಟು, ತಯಾರಿ ಮಾಡಿಕೊಂಡರೆ ಮಾತ್ರ ಉಳಿದು, ಬೆಳೆಯಲು ಸಾಧ್ಯ. ಈ ರಂಗದಲ್ಲಿ ಪ್ರತಿದಿನವೂ ಕಲಿಕೆ ಇದ್ದೇ ಇರುತ್ತೆ. ಎಲ್ಲಾ ಬಂತು, ಅಂದುಕೊಂಡರೆ ಅಲ್ಲಿಗೆ ಮುಗೀತು ಎಂದರ್ಥ. ಈ ವರ್ಷ ಟೇಕಾಫ್ ಆಗುತ್ತಿದ್ದೇನೆ. ಮುಂದಿನ ವರ್ಷ ಸಿನಿಮಾ ಸಂಪತ್ತು ಜೋರಾಗಿರುತ್ತೆ.

* ವಿಜಯ್‌ ಭರಮಸಾಗರ

Trending videos

Back to Top