CONNECT WITH US  

ನಾನೀಗ ಜ್ಯೂನಿಯರ್‌ ಅಲ್ಲ ಮೈಸೂರು ನರಸಿಂಹರಾಜು

ರೂಪತಾರಾ

ಜ್ಯೂನಿಯರ್‌ ನರಸಿಂಹರಾಜು ಒಂದು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಅದೇನೆಂದರೆ, ಇನ್ನು ಮುಂದಿನ ದಿನಗಳಲ್ಲಿ ತಮ್ಮ ಹೆಸರಿನ ಹಿಂದಿರುವ ಜ್ಯೂನಿಯರ್‌ ಕಿತ್ತುಹಾಕಿ, ಅದರ ಬದಲಿಗೆ ಮೈಸೂರು ಅಂತ ಸೇರಿಸಿಕೊಳ್ಳುವುದಕ್ಕೆ ಯೋಚಿಸಿದ್ದಾರೆ. ಚಿತ್ರರಂಗಕ್ಕೆ ಬಂದ ಮೇಲೆ ಹೆಸರು ಬದಲಾಯಿಸಿಕೊಂಡ ಹಲವರು ಇದ್ದಾರೆ. ಆದರೆ, ಚಿತ್ರರಂಗಕ್ಕೆ ಬಂದು 40 ವರ್ಷಗಳ ನಂತರ ಹೆಸರು ಬದಲಾಯಿಸಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಬರಬಹುದು. ಅವರು ಉತ್ತರ ಹೇಳುವುದಿಲ್ಲ. ಯಾಕೆ ಅಂತ ಮೊದಲು ಕೇಳಿ ಎನ್ನುತ್ತಾರೆ. ಯಾಕೆ ಎಂಬ ಪ್ರಶ್ನೆ ಕೇಳುತ್ತಿದ್ದಂತೆಯೇ ಉತ್ತರಿಸುತ್ತಾ ಹೋಗುತ್ತಾರೆ.

"ನಾನು ಚಿತ್ರರಂಗಕ್ಕೆ ಬಂದ ಸಂದರ್ಭದಲ್ಲಿ ಇದ್ದಿದ್ದೇ ಮೂರು ಜ್ಯೂನಿಯರ್‌ಗಳು. ಒಬ್ಬರು ಜ್ಯೂನಿಯರ್‌ ರೇವತಿ, ಇನ್ನೊಬ್ಬರು ಜ್ಯೂನಿಯರ್‌ ಮೆಹಮೂದ್‌ ಮತ್ತು ನಾನು. ಈಗ ಸಾಕಷ್ಟು ಜ್ಯೂನಿಯರ್‌ಗಳಿದ್ದಾರೆ. ಒಬ್ಬೊಬ್ಬ ಕಲಾವಿದರ ಮೂರು, ನಾಲ್ಕು ಜ್ಯೂನಿಯರ್‌ಗಳಿದ್ದಾರೆ. ಕನ್ನಡದಲ್ಲೇ ಡಾ. ರಾಜಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌, ಶಂಕರ್‌ ನಾಗ್‌ ಹೀಗೆ ಹಲವು ಕಲಾವಿದರಿಗೆ ಹಲವು ಜ್ಯೂನಿಯರ್ಗಳಿದ್ದಾರೆ. ಹಾಗಾಗಿ ಗೊಂದಲ ಬೇಡ ಎಂಬುದು ಒಂದು ಕಾರಣ. ಇನ್ನೊಂದೇನೆಂದರೆ, ಕೆಲವರು ಬಂದು, "ನೀವು ಜ್ಯೂನಿಯರ್‌ನಿಂದ ಸೀನಿಯರ್‌ ಆಗುವುದು ಯಾವಾಗ?' ಅಂತ ಕಾಲೆಳೆಯುತ್ತಾರೆ.

ಹಾಗಾಗಿ ಹೆಸರು ಬದಲಾಯಿಸಿಕೊಳ್ಳೋಣ ಅಂತ ಯೋಚಿಸಿದ್ದೀನಿ. ಇನ್ನು ಮುಂದೆ ನಾನು ಜ್ಯೂನಿಯರ್‌ ನರಸಿಂಹರಾಜು ಅಲ್ಲ, ಮೈಸೂರು ನರಸಿಂಹರಾಜು' ಎಂದು ಘೋಷಿಸಿದರು ನರಸಿಂಹರಾಜು. ಮೈಸೂರಿನ ಗುರುಸ್ವಾಮಿ, ಜ್ಯೂನಿಯರ್‌ ನರಸಿಂಹರಾಜು ಆಗಿದ್ದು ಹೇಗೆ ಎಂದರೆ, ಅದಕ್ಕೆ 40 ವರ್ಷಗಳ ಹಿಂದೆ ಹೋಗಬೇಕು. ಆಗು ಗುರುಸ್ವಾಮಿಗಳು ಇನ್ನೂ ಕಾಲೇಜು ವಿದ್ಯಾರ್ಥಿ. ಅವರ ದಂತಪಂಕ್ತಿಗಳನ್ನು ನೋಡಿ, ಕಾಲೇಜಿನವರೆಲ್ಲಾ ಜ್ಯೂನಿಯರ್‌ ನರಸಿಂಹರಾಜು ಅಂತ ಕರೆಯುತ್ತಿದ್ದರಂತೆ. ಅದೇ ಹೆಸರಿನಿಂದ ಚಿತ್ರರಂಗಕ್ಕೆ ಬಂದ ಅವರು, 1979ರಲ್ಲಿ ಬಿಡುಗಡೆಯಾದ "ಪಕ್ಕಾ ಕಳ್ಳ' ಎಂಬ ಚಿತ್ರದಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದರು.

ವಿಶೇಷವೆಂದರೆ, ಆ ಚಿತ್ರದಲ್ಲಿ ಅವರು ಅಭಿನಯಿಸಿದ್ದು, ನರಸಿಂಹರಾಜು ಅವರ ಮಗನ ಪಾತ್ರದಲ್ಲೇ. ಆ ಚಿತ್ರದ ನಂತರ "ಮಲ್ಲಿಗೆ ಸಂಪಿಗೆ', "ಗಂಡುಗಲಿ ರಾಮ', "ಲೀಡರ್‌ ವಿಶ್ವನಾಥ್‌', "ರಂಗನಾಯಕಿ', "ತಾಯಿಯ ಮಡಿಲಲ್ಲಿ' ಹೀಗೆ ಒಂದರಹಿಂದೊಂದು ಚಿತ್ರದಲ್ಲಿ ನಟಿಸುತ್ತಾ ಹೋದ ಅವರು, ಇದುವರೆಗೂ 580ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಸ್ವಲ್ಪ ದೊಡ್ಡ ಪಾತ್ರ ಇದ್ದಿದ್ದು ಮತ್ತು ಹೆಸರು ಬಂದಿದ್ದು "ಜೈ ಕರ್ನಾಟಕ' ಚಿತ್ರದಿಂದ. ಹಿಂದಿಯ "ಮಿಸ್ಟರ್‌ ಇಂಡಿಯಾ'ದ ರೀಮೇಕ್‌ ಆದ "ಜೈ ಕರ್ನಾಟಕ'ದಲ್ಲಿ ಅಂಬರೀಶ್‌ ಅವರ ಸಹಾಯಕನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

ಪ್ರೀಮಿಯರ್‌ನಿಂದ ಜವಾಬ್ದಾರಿ ಹೆಚ್ಚಿತು: ಈ ಮಧ್ಯೆ ಕೆಲವು ಚಿತ್ರಗಳಿಗೆ ಕಾರ್ಯಕಾರಿ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ ಜ್ಯೂನಿಯರ್‌ ನರಸಿಂಹರಾಜು. "1979-80ರಲ್ಲಿ ಮೈಸೂರಿನ ಪ್ರೀಮಿಯರ್‌ ಸ್ಟುಡಿಯೋಗೆ ಬೀಗ ಬಿತ್ತು. ಕೆಲವು ವರ್ಷಗಳ ಹೋರಾಟದ ನಂತರ "ಡ್ಯಾನ್ಸ್‌ ರಾಜಾ ಡ್ಯಾನ್ಸ್‌' ಚಿತ್ರದ ಚಿತ್ರೀಕರಣ ಪುನಃ ಅಲ್ಲೇ ಶುರುವಾಯಿತು. ಆ ನಂತರ ಬೇರೆ ಬೇರೆ ಭಾಷೆಯ ಚಿತ್ರತಂಡದವರು ಮತ್ತು ಕನ್ನಡದವರೇ ಅಲ್ಲಿ ಬಂದು ಚಿತ್ರೀಕರಣ ಮಾಡೋದಕ್ಕೆ ಶುರು ಮಾಡಿದರು.

ನಾನು ಮೈಸೂರಿನವನೇ ಆದ್ದರಿಂದ, ಕ್ರಮೇಣ ನಿರ್ಮಾಣ ಚಟುವಟಿಕೆಗಳಲ್ಲಿ ಅವರಿಗೆ ಸಹಾಯ ಮಾಡಿದೆ. ನಟನೆ ಮಾಡುತ್ತಲೇ ಕೆಲವು ಚಿತ್ರಗಳ ನಿರ್ವಹಣೆಯಲ್ಲೂ ತೊಡಗಿಸಿಕೊಂಡೆ' ಎನ್ನುತ್ತಾರೆ ಅವರು. ವಿಶೇಷವೆಂದರೆ, ಹಿಂದಿಯಲ್ಲಿ ಛಾಯಾಗ್ರಾಹಕ ಬಿ.ಸಿ. ಗೌರಿಶಂಕರ್‌ ನಿರ್ದೇಶಿಸಿದ "ಫ‌ೂಲ್‌' ಚಿತ್ರಕ್ಕೂ ನರಸಿಂಹರಾಜು ಕೆಲಸ ಮಾಡಿದ್ದಾರೆ. ಆ ಚಿತ್ರದ ಚಿತ್ರೀಕರಣ ಮೈಸೂರು, ಊಟಿ ಮುಂತಾದ ಕಡೆ ನಡೆದಿತ್ತಂತೆ. ಚಿತ್ರೀಕರಣ ವಯವಸ್ಥೆಗಳನ್ನೆಲ್ಲಾ ನೀವೇ ಮಾಡಬೇಕು ಎಂದು ಗೌರಿಶಂಕರ್‌ ಜವಾಬ್ದಾರಿ ವಹಿಸಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ನರಸಿಂಹರಾಜು.

ಬೆಟ್ಟಕ್ಕೆ ಇಷ್ಟು ದೂರ ಹೋಗಬೇಕಾ?: ಇನ್ನು ಮೈಸೂರಿನಲ್ಲೊಂದು ಚಿತ್ರನಗರಿ ನಿರ್ಮಾಣ ಮಾಡಬೇಕೆಂದು ಪ್ರಯತ್ನಿಸದವರಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ ನರಸಿಂಹರಾಜು. ಚಿತ್ರನಗರಿಗೆ ಒಂದೆರೆಡು ವರ್ಷಗಳ ಹಿಂದಷ್ಟೇ ಮೈಸೂರಿನಲ್ಲಿ ಜಾಗ ಮಂಜೂರಾದರೂ, 80ರ ಒಂದು ದಶಕದಲ್ಲೇ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ಮಾಡುವಂತೆ ಪ್ರಯತ್ನ ನಡೆಸಿದ್ದರು. ಅದಕ್ಕೆ ಕಾರಣವೂ ಇದೆ. "ನಾನೊಂದು ಚಿತ್ರದಲ್ಲಿ ನಟಿಸುತ್ತಿದ್ದೆ. "ಗೆಲುವು ನನ್ನದೇ' ಅಂತ ಚಿತ್ರದ ಹೆಸರು. ನಂದಿ ಬೆಟ್ಟದಲ್ಲಿ ಚಿತ್ರೀಕರಣ ನಡೆಯುತಿತ್ತು.

ನಾನು ಮೈಸೂರಿನಲ್ಲಿರುವುದರಿಂದ, ಅಲ್ಲಿಂದ ಬೆಂಗಳೂರಿಗೆ ಬಂದು ನಂದಿ ಬೆಟ್ಟಕ್ಕೆ ಹೋದೆ. ಒಂದು ಬೆಟ್ಟಕ್ಕೆ ಇಷ್ಟು ದೂರ ಹೋಗಬೇಕಾ ಅಂತ ಮೊದಲು ಅನಿಸಿತು. ಮೈಸೂರಿನವನಾದ್ದರಿಂದ ಅಲ್ಲಿನ ಬೆಟ್ಟ, ಗುಡ್ಡ, ಕಾಡು, ನದಿ ಎಲ್ಲವೂ ಗೊತ್ತಿದೆ. ಅವೆಲ್ಲವೂ ನಗರಕ್ಕೆ ಹತ್ತಿರದಲ್ಲೇ ಇದೆ. ನಾಗರಹೊಳೆ, ಮಡಿಕೇರಿ, ಊಟಿ, ಬೆಂಗಳೂರು ಎಲ್ಲವೂ ಹತ್ತಿರದಲ್ಲಿದೆ. ಹಾಗಾಗಿ ಮೈಸೂರಿನಲ್ಲಿ ಚಿತ್ರನಗರಿಯಾಗಬೇಕು ಮತ್ತು ಯಾವ್ಯಾವುದು ಎಷ್ಟೆಷ್ಟು ದೂರ ಇದೆ ಎಂದು ಆಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು' ಎನ್ನುತ್ತಾರೆ ನರಸಿಂಹರಾಜು.

ನಗಿಸುತ್ತಾ ತರಬೇತಿ ಕೊಟ್ಟಾಗ: ಇದಲ್ಲದೆ ನರಸಿಂಹರಾಜು ಇನ್ನೂ ಎರಡು ಅವತಾರಗಳನ್ನು ಎತ್ತಿದ್ದಾರೆ. ಒಂದು ನಿರ್ಮಾಪಕರಿಗೆ ತರಬೇತಿ ಕೊಡುವುದಕ್ಕೆ ಒಂದು ಸಂಸ್ಥೆಯನ್ನೇ ಹುಟ್ಟುಹಾಕಿದ್ದರು ಅವರು. ಅದರ ಜೊತೆಗೆ ಒಂದು ತಂಡವನ್ನು ಕಟ್ಟಿಕೊಂಡು ಊರೂರು ಸುತ್ತಿ ಜನರನ್ನು ನಗಿಸಿ ಬಂದತು. ನಿರ್ಮಾಪಕರಿಗೆ ತರಬೇತಿಯ ಅವಶ್ಯಕತೆ ಇದೆ ಎಂದು ಅವರಿಗೆ ಕಾರ್ಯಕಾರಿ ನಿರ್ಮಾಪಕರಾಗಿದ್ದಾಗಿ ಹೊಳೆಯಿತಂತೆ. "ಬಹಳಷ್ಟು ನಿರ್ಮಾಪಕರಿಗೆ ಸಿನಿಮಾ ಬಗ್ಗೆ ಗೊತ್ತಿರುವುದಿಲ್ಲ.

ಇನ್ನು ಸರಿಯಾದ ಪ್ಲಾನಿಂಗ್‌ ಇರುವುದಿಲ್ಲ. ನಿರ್ಮಾಪಕರ ಸಮಯ ಮತ್ತು ಹಣವನ್ನು ಉಳಿಸುವ ನಿಟ್ಟಿನಲ್ಲಿ ಒಂದು ತರಬೇತಿ ಕೇಂದ್ರ ಪ್ರಾರಂಭಿಸಿದೆ' ಎನ್ನುವ ಅವರು, ಹಿಂದೊಮ್ಮೆ ದೆಹಲಿಗೆ ಹೋದಾಗ ಜಸ್ಪಾಲ್‌ ಭಟ್ಟಿಯ ಕಾಮಿಡಿ ಸ್ಕೂಲ್‌ಗೆ ಹೋಗಿದ್ದರಂತೆ. ಯಾಕೆ ಕನ್ನಡಿಗರನ್ನೂ ಹಾಗೆ ನಗಿಸಬಾರದು ಎಂದು, ಎರಡು ವರ್ಷ ಒಂದಿಷ್ಟು ಸಂಶೋಧನೆ ಮಾಡಿ, ತಮ್ಮದೇ ತಂಡ ಕಟ್ಟಿದ್ದಾರೆ. ಆ ತಂಡದ ಮೂಲಕ ರಾಜ್ಯಾದ್ಯಂತ ಸುಮಾರು 900 ಕಾರ್ಯಕ್ರಮಗಳನ್ನು ಕೊಟ್ಟಿದ್ದಾರಂತೆ ನರಸಿಂಹರಾಜು.

ಈ ಕಾರ್ಯಕ್ರಮಗಳಲ್ಲಿ ಅವರು ಸಂದೇಶ ಸಾರುವ ಹಾಸ್ಯ ಮಾಡುತ್ತಾ ಬಂದಿದ್ದಾರೆ. ಇಷ್ಟೆಲ್ಲಾ ಅವತಾರಗಳನ್ನು ಎತ್ತಿರುವ ಅವರಿಗೆ, ಮುಂದೇನು ಎಂಬ ಪ್ರಶ್ನೆ ಇಟ್ಟರೆ, "ಹಲವು ಸಿನಿಮಾಗಳು ಬಿಡುಗಡೆ ಆಗಬೇಕಿದೆ. "ಬಸ್‌ ನಂಬರ್‌ 201', "ಕೆಂಪೇಗೌಡ 2', "ಉಪ್ಪಿ-ರುಪಿ' ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ತೆರೆ ಮುಂದೆ, ಹಿಂದೆ ಅಂತ ಯಾವತ್ತೂ ಬೇಧ-ಭಾವ ಮಾಡಿದೋನಲ್ಲ ನಾನು. ಯಾವ ಕೆಲಸ ಸಿಕ್ಕರೂ ಓಕೆ' ಎನ್ನುತ್ತಾರೆ ನರಸಿಂಹರಾಜು.

Trending videos

Back to Top