CONNECT WITH US  

ಕೇಸರ್ಕರ್‌ ಕಹಾನಿ ಬಂದದ್ದೇ ಭಾಗ್ಯ

ರೂಪತಾರಾ

ಅದು ಕೊಳ್ಳೆಗಾಲ ತಾಲೂಕಿನ ವಂಡರಬಾಳು ಗ್ರಾಮ. ಆ ಊರ ಶಾಲೆಯಲ್ಲಿ ಆ ಹುಡುಗ ಆಗ 8 ನೇ ತರಗತಿ ಓದುತ್ತಿದ್ದ. ಆ ದಿನಗಳಲ್ಲೇ ಆ ಹುಡುಗನಿಗೆ ಕಲೆ ಮೇಲೆ ಎಲ್ಲಿಲ್ಲದ ಪ್ರೀತಿ. ಶಾಲಾ ವಾರ್ಷಿಕೋತ್ಸವಗಳಲ್ಲಿ ಬೇರೆ ಹುಡುಗರು ನಾಟಕ ಮಾಡಲು ಅಣಿಯಾಗುವಾಗ, ಆ ಹುಡುಗನನ್ನು ಯಾರೊಬ್ಬರೂ ಸೇರಿಸಿಕೊಳ್ಳುತ್ತಿರಲಿಲ್ಲ. ಕಾರಣ, ಅವನು ಆಜಾನುಬಾಹು. ಅಂದರೆ ಸಿಕ್ಕಾಪಟ್ಟೆ ಎತ್ತರ ಇದ್ದಾನೆಂಬುದು. ಕೊನೆಗೆ ಕಾಡಿ, ಬೇಡಿದ್ದಕ್ಕೆ ಆ ಹುಡುಗನಿಗೊಂದು ಹುಡುಗಿ ಪಾತ್ರ ಕೊಡುತ್ತಾರೆ.

ಒಳ್ಳೇ ಎತ್ತರದ ನಿಲುವಲ್ಲಿದ್ದ ಆ ಹುಡುಗ ನಾಟಕ ಮಾಡಿಸುತ್ತಿದ್ದ ಮಾಸ್ಟರ್‌ ಕಣ್ಣಿಗೆ ಬೀಳುತ್ತಾನೆ. ಅಭ್ಯಾಸ ವೇಳೆ ಆ ಹುಡುಗನಲ್ಲಿರುವ ಶ್ರದ್ಧೆ,ಭಕ್ತಿ ನೋಡಿ, ಹುಡುಗಿ ಪಾತ್ರ ಬಿಟ್ಟು, ಆ ನಾಟಕದ ಹೀರೋ ಪಾತ್ರವನ್ನು ಕೊಡುತ್ತಾರೆ. ನಾಟಕದಲ್ಲಿ ಆ ಹುಡುಗ ಮಿಂಚುತ್ತಾನೆ. ಮುಂದಿನ ಮೂರು ವರ್ಷ ನಡೆದ ವಾರ್ಷಿಕೋತ್ಸವದ ನಾಟಕದಲ್ಲೂ ಆ ಹುಡುಗನೇ ಲೀಡ್‌ ರೋಲ್‌ ಮಾಡುತ್ತಾನೆ. ಅಷ್ಟೇ ಅಲ್ಲ, ಮೈಸೂರಲ್ಲಿ ನಡೆದ ಅಂತಾರಾಜ್ಯ ನಾಟಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಿಟ್ಟಿಸಿಕೊಂಡು ಪ್ರಶಂಸೆ ಪಡೆಯುತ್ತಾನೆ.

ಆ ಶಾಲೆ, ಆ ಊರಲ್ಲಿ ಹುಡುಗನ ಬಗ್ಗೆ ಮೆಚ್ಚುಗೆ ಸಿಗುತ್ತೆ. ಅಲ್ಲಿಂದ ಕಲೆ ಮೇಲಿನ ಪ್ರೀತಿ ಹೆಚ್ಚಿಸಿಕೊಂಡ ಆ ಹುಡುಗ ಇದೀಗ ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 180 ಚಿತ್ರಗಳಲ್ಲಿ ನಟಿಸಿದ್ದಾಗಿದೆ. ಡಾ.ರಾಜ್‌ಕುಮಾರ್‌ ಹೊರತುಪಡಿಸಿ ಎಲ್ಲಾ ಸ್ಟಾರ್‌ನೊಂದಿಗೂ ಪರದೆ ಹಂಚಿಕೊಂಡಾಗಿದೆ. ಅದು ಬೇರಾರೂ ಅಲ್ಲ, ಗಣೇಶ್‌ರಾವ್‌ ಕೇಸರ್ಕರ್‌. ಇವರು ಚಿತ್ರರಂಗಕ್ಕೆ ಕಾಲಿಟ್ಟು ಒಂದುವರೆ ದಶಕದ ಆಸುಪಾಸು. ಇಷ್ಟು ವರ್ಷಗಳ ಸಿನಿಪಯಣದಲ್ಲಾದ ಅನುಭವ ಕುರಿತು "ರೂಪತಾರ" ಜತೆ ಮಾತನಾಡಿದ್ದಾರೆ.

ಕಿರುತೆರೆಯಲ್ಲಿ ಸಿಕ್ಕ ಭಾಗ್ಯ!: ನನ್ನ ತಂದೆ ಆರ್ಮಿ ಆಫೀಸರ್‌. ನಾನು ಹುಟ್ಟಿದ್ದು ಹಲಸೂರು ಕಮಾಂಡ್‌ ಆಸ್ಪತ್ರೆಯಲ್ಲಿ. ತಂದೆ ಆರ್ಮಿಯಲ್ಲಿದ್ದುದರಿಂದ ಅಲ್ಲಲ್ಲಿ ವರ್ಗಾವಣೆ ಆಗುತ್ತಿತ್ತು. ಆಗ, ನನ್ನ ತಾಯಿ ಹುಟ್ಟೂರಾದ ಕೊಳ್ಳೆಗಾಲ ತಾಲೂಕಿನ ವಂಡರಬಾಳುವಿನಲ್ಲಿ ವಿದ್ಯಾಭ್ಯಾಸ ಮಾಡಿದೆ. ಪಿಯುಸಿವರೆಗೆ ಓದಿದ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಬಂದೆ. ಇಲ್ಲಿ ಬಂದವನಿಗೆ ಮತ್ತೆ ಕಲೆಯ ಮೇಲೆ ಪ್ರೀತಿ ಹೆಚ್ಚಾಯ್ತು. ರಂಗಭೂಮಿಯತ್ತ ಮುಖ ಮಾಡಿದೆ. ದಿವ್ಯಜ್ಯೋತಿ ಕಲಾಸಂಘ ಎಂಬ ರಂಗತಂಡ ಸೇರಿಕೊಂಡು ಹಲವು ನಾಟಕ ಪ್ರಯೋಗ ಮಾಡಿದೆ.

ಅದೇ ವೇಳೆಗೆ ದೂರದರ್ಶನ (ಡಿಡಿ1)ದಲ್ಲಿ "ಭಾಗ್ಯಚಕ್ರ' ಧಾರಾವಾಹಿ ಶುರುವಾಗಿತ್ತು. ಅಲ್ಲಿ ನಟಿಸೋಕೆ ಅವಕಾಶ ಸಿಕ್ಕಿತು. ಅದು ನನ್ನ ಮೊದಲ ಧಾರಾವಾಹಿ. ಅದೇ ಮೊದಲ ಸಲ ನಾನು ಟಿವಿಯಲ್ಲಿ ಕಾಣಿಸಕೊಂಡೆ. ಆ ಬಳಿಕ "ಮಂಜು ಕರಗಿತು', "ಮಮಕಾರ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದೆ. ಅಲ್ಲಿಂದ ಗಾಂಧಿನಗರದ ಅಂಗಳಕ್ಕೂ ಕಾಲಿಟ್ಟೆ. ಅಲ್ಲಿ ಸಿಕ್ಕ ಮೊದಲ ಸಿನಿಮಾ ಅವಕಾಶ "ಚಾಮುಂಡಿ'. ಮಾಲಾಶ್ರೀ ಮತ್ತು ಖುಷು³ ಅಭಿನಯದ ಆ ಚಿತ್ರದಲ್ಲಿ ಚಿಕ್ಕ ಡಾಕ್ಟರ್‌ ಪಾತ್ರ ಮಾಡಿದೆ.

ಅಲ್ಲಿಂದ ನನ್ನ ಸಿನಿ ಜರ್ನಿ ಶುರುವಾಗಿ, ಇಲ್ಲಿಯವರೆಗೆ ಸುಮಾರು 180 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅನೇಕ ಪಾತ್ರಗಳ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ದೇನೆ. ಮೊದಲ ಬಾರಿಗೆ ನಾಯಕನಾಗಿ "ನಮ್ಮವರು' ಚಿತ್ರದಲ್ಲಿ ನಟಿಸಿದೆ. ಅದು ನನ್ನ 150 ನೇ ಚಿತ್ರ. ಅದೊಂದು ಭಾವನಾತ್ಮಕ ಸಂಬಂಧದ ಕಥೆ. ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು ಎಂದು ಹೇಳುತ್ತಾರೆ ಗಣೇಶ್‌ರಾವ್‌ ಕೇಸರ್ಕರ್‌. ನನ್ನ ಈ ಪಯಣಕ್ಕೆ ಮನೆಯವರು ಸಾಥ್‌ ಕೊಟ್ಟಿದ್ದಾರೆ. ಮೊದ ಮೊದಲು ಮನೆಯಲ್ಲಿ ಪ್ರೋತ್ಸಾಹ ಇರಲಿಲ್ಲ.

ಕಲೆಗೆ ಅಷ್ಟೊಂದು ಆಸಕ್ತಿ ತೋರಿಸುತ್ತಿರಲಿಲ್ಲ. ಯಾಕೆಂದರೆ, ಅಪ್ಪ ಮಿಲಿಟರಿಯಲ್ಲಿದ್ದವರು. ತುಂಬಾ ಶಿಸ್ತಿನಿಂದ ಬೆಳೆಸಿದ್ದರು. ನನ್ನನ್ನೂ ಮಿಲಿಟರಿಗೆ ಸೇರಿಸಬೇಕೆಂಬ ಆಸೆ ತಂದೆಯದ್ದು. ಆದರೆ, ನನ್ನ ತಾಯಿಗೆ ಆ ಆಸೆ ಇರಲಿಲ್ಲ. ಕಾರಣ, ತಂದೆ ಕಷ್ಟಪಡುತ್ತಿದ್ದನ್ನು ನೋಡಿದ್ದರು. ಅಲ್ಲದೆ, ತಿಂಗಳಿಗೊಂದು ಪತ್ರದ ಮೂಲಕ ಯೋಗಕ್ಷೇಮ ವಿಚಾರಿಸುತ್ತಿದ್ದರು. ವರ್ಷದಲ್ಲಿ ಹದಿನೈದು ದಿನ ಮಾತ್ರ ನಮ್ಮನ್ನು ನೋಡಲು ಬರುತ್ತಿದ್ದರು. ಹೀಗಾಗಿ ನನ್ನ ತಾಯಿ, ನನ್ನನ್ನು ಆರ್ಮಿಗೆ ಕಳುಹಿಸಲು ಇಷ್ಟಪಡಲಿಲ್ಲ. ನಮ್ಮನೆಯಲ್ಲಿ ನಟರ್ಯಾರೂ ಇಲ್ಲ. ಹಾಗಾಗಿ ಮೊದಲು ಯಾರೂ ಸಹಕರಿಸಲಿಲ್ಲ. ನಂತರದ ದಿನಗಳಲ್ಲಿ ಫೇಮ್‌ ಬರುವುದನ್ನು ಗಮನಿಸಿ, ಅಕ್ಕ, ತಮ್ಮ ಎಲ್ಲರೂ ಪ್ರೋತ್ಸಾಹಿಸಿದರು ಎಂಬುದು ಅವರ ಮಾತು.

ವಜ್ರಮುನಿ ರೀತಿ ಖಳನಟನಾಗಬೇಕು...!: ನಟನೆಯೊಂದಿಗೆ ನಿರ್ದೇಶನದ ಮೇಲೂ ಆಸೆ ಇಟ್ಟುಕೊಂಡಿದ್ದೆ. ಹಾಗಾಗಿ ನಾನು "ಪುನಾರಂಭ' ಎಂಬ ಚಿತ್ರದಲ್ಲಿ ನಿರ್ದೇಶನ ಕೆಲಸ ಮಾಡಿದೆ. ಆ ಆಸಕ್ತಿ ಮೂಡಿದ್ದು, ಸಿನಿಮಾಗಳಲ್ಲಿ ಕೆಲಸ ಮಾಡುವಾಗ, ನಿರ್ದೇಶಕರು ಮಾಡುತ್ತಿದ್ದ ಕೆಲಸವನ್ನು ನೋಡುತ್ತಿದ್ದೆ. ನಾನು ನನ್ನ ದೃಶ್ಯ ಮುಗಿದ ಮೇಲೂ, ಆ ನಿರ್ದೇಶಕ ಯಾವ ದೃಶ್ಯವನ್ನು ಹೇಗೆ ಕಂಪೋಸ್‌ ಮಾಡ್ತಾರೆ, ಕ್ಯಾಮೆರಾ ಎಲ್ಲಿ ಹಿಡಿಸಿ ದೃಶ್ಯವನ್ನು ಸೆರೆ ಹಿಡಿಯುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ.

ಒಬ್ಬೊಬ್ಬ ನಿರ್ದೇಶರಕದ್ದು ಒಂದೊಂದು ಶೈಲಿಯಲ್ಲಿ ನಿರ್ದೇಶನದ ಕೆಲಸವಿರುತ್ತಿತ್ತು. ಅವರೆಲ್ಲರ ಕೆಲಸ ನೋಡಿಕೊಂಡೇ ನಾನು ನಿರ್ದೇಶನ ಮಾಡುವ ಮನಸ್ಸು ಮಾಡಿದೆ. ಅದೊಂದು ಹೊಸತರಹದ ಅನುಭವ. ಇನ್ನು, ನಾನು ಡಾ.ರಾಜ್‌ಕುಮಾರ್‌ ಅವರನ್ನು ಹೊರತುಪಡಿಸಿ ಬಹುತೇಕ ಸ್ಟಾರ್‌ ನಟರ ಜತೆ ನಟಿಸಿದ್ದೇನೆ. ಶಿವಣ್ಣ, ಸುದೀಪ್‌, ಪುನೀತ್‌,ದರ್ಶನ್‌, ಗಣೇಶ್‌ ಸೇರಿದಂತೆ ಬಹುತೇಕ ನಟರೊಂದಿಗೆ ತೆರೆ ಹಂಚಿಕೊಂಡಿದ್ದೇನೆ. ಆದರೆ, ಎಲ್ಲಾ ಕಲಾವಿದರಿಗೂ ಇದ್ದಂತೆ ನನಗೂ ಒಂದು ಆಸೆ ಇದೆ.

ಅದು ಖಳನಟ ವಜ್ರಮುನಿ ಅವರ ರೀತಿ ಪ್ರಮುಖ ಖಳ ಪಾತ್ರ ಮಾಡುವ ಆಸೆ ಇದೆ. ಯಾವುದೇ ದೊಡ್ಡ ಹೀರೋ ಇದ್ದರೂ, ಅಲ್ಲಿ ವಿಲನ್‌ಗೂ ಅಷ್ಟೇ ಜಾಗ ಇರುತ್ತೆ. ಹಾಗಾಗಿ ನಾನು ಅಂಥದ್ದೊಂದು ಖಳನಟನ ಪಾತ್ರ ಮಾಡುವ ತವಕದಲ್ಲಿದ್ದೇನೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಗಣೇಶ್‌ರಾವ್‌. ಇಲ್ಲಿಯವರೆಗೆ ನಾನು ಹೆಚ್ಚಾಗಿ ಗುರುತಿಸಿಕೊಂಡಿದ್ದು ಪೊಲೀಸ್‌ ಇನ್ಸ್‌ಪೆಕ್ಟರ್‌ ಪಾತ್ರಗಳಲ್ಲಿ. ಒಳ್ಳೆಯ ಪೊಲೀಸ್‌ ಆಗಿಯೂ, ಕೆಟ್ಟ ಪೊಲೀಸ್‌ ಆಗಿಯೂ ಕಾಣಿಸಿಕೊಂಡಿರುವುದುಂಟು.

ಹಾಗೆ ಹೇಳುವುದಾದರೆ, ನನಗೆ ಸಿಕ್ಕಿರುವ ಪೊಲೀಸ್‌ ಇನ್ಸ್‌ಪೆಕ್ಟರ್‌ ಪಾತ್ರಗಳೆಲ್ಲವೂ ತೃಪ್ತಿ ಕೊಟ್ಟಿವೆ. ದರ್ಶನ್‌ ಜೊತೆ "ಸಾರಥಿ' ಚಿತ್ರದಲ್ಲಿ ಮಾಡಿದ ಇನ್ಸ್‌ಪೆಕ್ಟರ್‌ ಪಾತ್ರ ನನಗೆ ತುಂಬಾನೇ ಮೈಲೇಜ್‌ ಕೊಟ್ಟಿತು. ಕೆಲ ನಿರ್ದೇಶಕರು ಸ್ಕ್ರಿಪ್ಟ್ ಮಾಡುವಾಗ, ಇನ್ಸ್‌ಪೆಕ್ಟರ್‌ ಅಂದರೆ, ಗಣೇಶ್‌ರಾವ್‌ ಅಂತ ಫಿಕ್ಸ್‌ ಮಾಡಿಬಿಟ್ಟಿರುತ್ತಾರೆ. ಕಾಲ್‌ ಮಾಡಿ ನಿನಗೆ ಪೊಲೀಸ್‌ ಅಧಿಕಾರಿ ಪಾತ್ರ ಇದೆ ಮಾಡಿ ಅಂತಾರೆ. ನಾನೊಬ್ಬ ಕಲಾವಿದ ಬಂದ ಪಾತ್ರವನ್ನು ಒಪ್ಪಿ ಮಾಡುವುದಷ್ಟೇ ಕೆಲಸ. ಎಷ್ಟೋ ಜನ ಒಂದೇ ಪಾತ್ರಕ್ಕೆ ಬ್ರಾಂಡ್‌ ಆಗಿಬಿಟ್ಟಿದ್ದೀಯ ಅಂತಾರೆ,

ಏನ್ಮಾಡೋದು, ನಿರ್ದೇಶಕರು ಬಯಸಿ ಅಂತಹ ಪಾತ್ರ ಕೊಟ್ಟರೆ ಬೇಡ ಅನ್ನುವುದಕ್ಕಾಗಲ್ಲ. ಚಿತ್ರರಂಗ ಕಲಾದೇಗುಲವಿದ್ದಂತೆ. ಇಲ್ಲಿ ಎಲ್ಲರಿಗೂ ಸುಲಭವಾಗಿ ಜಾಗ ಸಿಗುವುದಿಲ್ಲ. ನಾನೂ ಸಾಕಷ್ಟು ಕಷ್ಟಪಟ್ಟು ಇಲ್ಲಿ ಒಂದಷ್ಟು ಜಾಗ ಮಾಡಿಕೊಂಡಿದ್ದೇನೆ. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರ ಕೊಟ್ಟು ಆ ಬಳಿಕ ಅವು ಮಿಸ್‌ ಆಗಿದ್ದುಂಟು. ಒಂದು ಪಾತ್ರಕ್ಕೆ ಮೂವರನ್ನು ಕರೆಸಿ, ಯಾರಧ್ದೋ ರೆಕ್ಮಂಡ್‌ನಿಂದ ಆ ಪಾತ್ರ ಬೇರೆಯವರಿಗೆ ಸಿಕ್ಕಾಗಲೂ ಮನಸ್ಸಿಗೆ ಬೇಸರವಾಗಿದ್ದೂ ಇದೆ.

ಅಂತಹ ಸಂದರ್ಭ ಎದುರಿಸಿ, ಅವಮಾನಗಳನ್ನು ಸಹಿಸಿಕೊಂಡು ಕಲೆಯನ್ನು ಗೌರವಿಸಿಕೊಂಡು ಬಂದಿದ್ದರಿಂದ ಇಂದು ಎಲ್ಲರೂ, ಗುರುತಿಸಿ, ಒಳ್ಳೆಯ ಪಾತ್ರ ಕೊಡುತ್ತಿದ್ದಾರೆ. ಆ ಪ್ರೀತಿ ಉಳಿಸಿಕೊಂಡು ಬಂದಿರುವುದಕ್ಕೆ ಇದೆಲ್ಲಾ ಸಾಧ್ಯವಾಗಿದೆ. ನನಗೆ ನಿರ್ದೇಶನದಲ್ಲೂ ಆಸಕ್ತಿ ಇದೆ. ಆದರೆ, ನಟನೆಗೆ ಮೊದಲ ಆದ್ಯತೆ ಕೊಡ್ತೀನಿ. ಅವಕಾಶ ಸಿಕ್ಕಾಗ ನಿರ್ದೇಶನ ಮಾಡುತ್ತೇನೆ. ಇನ್ನು, "ನಮ್ಮವರು' ಮೂಲಕ ಹೀರೋ ಆಗಿಬಿಟ್ಟೆ ಅಂತ, ಪೋಷಕ ಪಾತ್ರ ಮಾಡುವುದನ್ನು ಬಿಡುವುದಿಲ್ಲ. ಸಣ್ಣ ಪಾತ್ರ, ದೊಡ್ಡ ಪಾತ್ರ ಅನ್ನದೆ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡ್ತೀನಿ  ಎನ್ನುತ್ತಾರೆ ಅವರು.

ಲೈಫ‌ಲ್ಲಿ ಮರೆಯದ ಅನುಭವ...: ಇಷ್ಟು ವರ್ಷಗಳ ಸಿನಿಮಾ ಪಯಣದಲ್ಲಿ ನನಗೆ ಸಾಕಷ್ಟು ಅನುಭವಗಳಾಗಿವೆ. ಅಂತಹ ಅನುಭವಗಳನ್ನು ಮರೆಯುವುದಕ್ಕಾಗುವುದಿಲ್ಲ. ಆದರೆ, ಒಂದೇ ಒಂದು ಘಟನೆ ಮಾತ್ರ ನನ್ನ ಬದುಕಿನಲ್ಲಿ ಮರೆಯಲಾರದ ಅನುಭವ ಆಗಿದೆ. ಅದು "ಅಣ್ಣಾವ್ರು' ಚಿತ್ರದ ಚಿತ್ರೀಕರಣದಲ್ಲಿ ನಡೆದದ್ದು. ಆ ಚಿತ್ರದಲ್ಲಿ ಅಂಬರೀಷ್‌ ಮತ್ತು ದರ್ಶನ್‌ ನಟಿಸಿದ್ದಾರೆ. ಅದರಲ್ಲಿ ನಾನು ಅಂಬರೀಷ್‌ ಅವರ ಅಸಿಸ್ಟೆಂಟ್‌ ಆಗಿರುವ ಪಾತ್ರ ಮಾಡಿದ್ದೇನೆ. ಅದು ಕನ್ನಂಬಾಡಿ ಕಟ್ಟೆ ಬ್ರಿಡ್ಜ್.

ಅಲ್ಲಿ ಅಂಬರೀಷ್‌ ಮತ್ತು ದರ್ಶನ್‌ ಅವರ ಇಂಟ್ರಡಕ್ಷನ್‌ ದೃಶ್ಯ ಚಿತ್ರೀಕರಣವಾಗುತ್ತಿತ್ತು. ರಾತ್ರಿ ಎಫೆಕ್ಟ್‌ನಲ್ಲಿ ಮಳೆ ಬರುವ ದೃಶ್ಯವದು. ನಾನು ಅಂಬರೀಷ್‌ ಅವರಿಗೆ ಛತ್ರಿ ಹಿಡಿದು ಹಿಂದಿಂದೆ ಬರುವ ಪಾತ್ರ. ಜೋರು ಮಳೆಗೆ ಮೈಯೆಲ್ಲಾ ಒದ್ದೆಯಾಗಿತ್ತು. ಆ ಶಾಟ್‌ ಓಕೆ ಆದಾಗ, ಅಂಬರೀಷ್‌, ದರ್ಶನ್‌ ಅವರ ಅಸಿಸ್ಟೆಂಟ್‌ಗಳು ಓಡೋಡಿ ಬಂದು, ಒದ್ದೆಯಾಗಿದ್ದ ಅವರ ತಲೆಯನ್ನು ಟವೆಲ್‌ನಿಂದ ಒರೆಸುತ್ತಾ, ಕೈ, ಕಾಲು ಉಜ್ಜುತ್ತಿದ್ದರು. ಇನ್ನು ಕೆಲವರು ಕಾಫಿ ಕೊಡುತ್ತಿದ್ದರು.

ಆದರೆ, ನಾನು ಮಾತ್ರ ಆ ರಾತ್ರಿಯಲ್ಲಿ ಕೊರೆವ ಛಳಿಯಲ್ಲೇ ಒದ್ದೆಯಾಗಿದ್ದ ದೇಹದೊಂದಿಗೆ ನಡುಗುತ್ತ ಕುಳಿತಿದ್ದೆ. ನನ್ನನ್ನು ಗಮನಿಸಿದ ಅಂಬರೀಷ್‌ ಅವರು, ನಿರ್ದೇಶಕರು ಸೇರಿದಂತೆ ಅಲ್ಲಿದ್ದವರನ್ನೆಲ್ಲಾ ಕರೆದು ಬೈಯ್ದರು. ನಮಗಷ್ಟೇ, ನೋಡಿಕೊಳ್ಳೋದಲ್ಲ, ಆ ಹುಡುಗ ಕೂಡ ನೀರಲ್ಲಿ ನೆಂದು, ಛಳಿಯಲ್ಲಿ ನಡುಗುತ್ತಿದ್ದಾನೆ. ಅವನಿಗೂ ಟವೆಲ್‌ ಕೊಟ್ಟು, ಕಾಫಿ ಕೊಡ್ರಯ್ಯ ಅಂದಿದ್ದರು ಎಂದು ಆ ಘಟನೆ ನೆನಪಿಸಿಕೊಂಡು ಹಾಗೊಮ್ಮೆ ಕಣ್ತುಂಬಿಕೊಂಡ ಗಣೇಶ್‌ರಾವ್‌, ಆ ಘಟನೆ ಮತ್ತು ಅನುಭವ ಮರೆಯುವುದಕ್ಕಾಗುವುದಿಲ್ಲ ಎನ್ನುತ್ತಾರೆ.

ಶಿವಾಜಿ ಸಿನಿಮಾದ ಹಿಂದೆ ನಿಂತು...: ನಾನೊಬ್ಬ ಕಲಾವಿದ ಆಗಿದ್ದೇನೆಂದರೆ, ಅದು ನನ್ನ ಮನೆಯವರ ಸಹಕಾರ ಮತ್ತು ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಸಿನಿಮಾ ಚಿತ್ರೀಕರಣವೆಂದರೆ, ಇಡೀ ದಿನ ಹೊರಗೇ ಇರಬೇಕು. ನಿತ್ಯವೂ ಹಾಗೇ ಇದ್ದರೆ, ಮನೆಯವರ ಜತೆ ಕಾಲ ಕಳೆಯಲು ಆಗಲ್ಲ. ಮನೆ ಬಗ್ಗೆ ಯೋಚಿಸಿದರೆ, ಅಲ್ಲಿ ಕೆಲಸ ಮಾಡೋಕ್ಕಾಗುವುದಿಲ್ಲ. ಹಾಗಾಗಿ ನನ್ನ ಪತ್ನಿ, ನನಗೆ ಯಾವುದೇ ಟೆನÒನ್‌ ಕೊಡದೆ, ಇಡೀ ಸಂಸಾರವನ್ನು ತೂಗಿಸಿಕೊಂಡು ಹೋಗಿದ್ದರಿಂದಲೇ ನಾನು ಕಲಾವಿದನಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ.

ನನ್ನ ಮಗಳು ಮಧು ಕೇಸರ್ಕರ್‌ ಎಂ.ಕಾಂ ಮುಗಿಸಿದ್ದಾಳೆ. ಅವಳು ಸುವರ್ಣದಲ್ಲಿ ಬಂದ "ಆ್ಯಕ್ಷನ್‌ ಸ್ಟಾರ್‌' ರಿಯಾಲಿಟಿ ಶೋನ ವಿನ್ನರ್‌, ಉದಯ ಟಿವಿಯಲ್ಲಿ ಬಂದ ಕಬಡ್ಡಿ ಶೋನಲ್ಲಿ ವಿನ್ನರ್‌ ಆಗಿದ್ದಾಳೆ. ಮಗ ಬಿಇ ಓದುತ್ತಿದ್ದಾನೆ. ನ್ಯಾಷನಲ್‌ಲೆವೆಲ್‌ನ ಕರಾಟೆ ಪಟು ಕೂಡ ಹೌದು. ಮಕ್ಕಳಿಗೆ ಸಿನಿಮಾ ಮೇಲೆ ಪ್ರೀತಿ ಇದೆ. ನನ್ನ ಚಿತ್ರ ನೋಡಿ ಕಾಮೆಂಟ್‌ ಮಾಡ್ತಾರೆ. ನೆಗೆಟಿವ್‌ ಪಾತ್ರ ಮಾಡಿದಾಗ ಅಂತಹ ಪಾತ್ರ ಮಾಡಬೇಡಿ ಅನ್ನುತ್ತಾರೆ.

ನಾನು ಕಲಾವಿದನಾಗಿ ಬಂದ ಪಾತ್ರ ಮಾಡಬೇಕಲ್ವಾ ಅಂದಾಗ ಸುಮ್ಮನಾಗುತ್ತಾರೆ. ಬಹಳಷ್ಟು ನಿರ್ದೇಶಕರು ನನಗೆ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ಐತಿಹಾಸಿಕ, ಪೌರಾಣಿಕ ಚಿತ್ರಗಳಲ್ಲೂ ಗುರುತಿಸಿಕೊಳ್ಳುವ ಪಾತ್ರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ನಿರ್ದೇಶನ, ಪ್ರೊಡಕ್ಷನ್ಸ್‌ ಯೋಚನೆ ಇದೆ. ಯಾವಾಗ ಕೂಡಿ ಬರುತ್ತೋ ಗೊತ್ತಿಲ್ಲ. ಈಗಾಗಲೇ "ಸ್ವರಾಷ್ಟ್ರ ಸೂರ್ಯ ಶಿವಾಜಿ' ಎಂಬ ಚಿತ್ರ ನಿರ್ದೇಶನ ಮಾಡಲು ತಯಾರಿ ನಡೆಯುತ್ತಿದೆ. ಸ್ಕ್ರಿಪ್ಟ್ ಪೂಜೆಯೂ ನೆರವೇರಿದೆ.

ಹಿರಿಯ ನಿರ್ದೇಶಕ ಸಾಯಿಪ್ರಕಾಶ್‌ ಅವರ ಸಹಕಾರ ಆ ಚಿತ್ರಕ್ಕಿದೆ ಎಂದು ವಿವರಿಸುವ  ಗಣೇಶ್‌ರಾವ್‌, ಕನ್ನಡ ನಿರ್ದೇಶಕರಲ್ಲಿ ಒಂದು ವಿನಂತಿ. ಇಲ್ಲಿ ನಮ್ಮವರೇ ಸಾಕಷ್ಟು ಪೋಷಕ ಕಲಾವಿದರಿದ್ದಾರೆ. ಅಂತಹವರನ್ನು ಗುರುತಿಸಿ ಅವಕಾಶ ಕೊಡಿ. ಕಲೆಯನ್ನೇ ನಂಬಿದವರಿದ್ದಾರೆ. ಬೇರೆ ಕಡೆಯಿಂದ ಕರೆದುಕೊಂಡು ಬಂದು ಪಾತ್ರ ಕೊಡಲು ಅಭ್ಯಂತರವಿಲ್ಲ. ಆದರೆ, ನಮ್ಮವರನ್ನೂ ಗಣನೆಗೆ ತೆಗೆದುಕೊಳ್ಳಿ. ಸ್ಟಾರ್ ಚಿತ್ರಗಳಲ್ಲಿ ಇಲ್ಲಿಯ ಪೋಷಕ ಕಲಾವಿದರನ್ನು ಉಪ್ಪು, ಖಾರ, ಸಾಸಿವೆಯಂತಾದರೂ ಉಪಯೋಗಿಸಿಕೊಳ್ಳಿ ಎಂದು ಮನವಿ ಮಾಡುತ್ತಾರೆ.

Trending videos

Back to Top