CONNECT WITH US  

ನೂರು ಕಮರ್ಷಿಯಲ್‌ ಚಿತ್ರವಿದ್ದರೂ, ಪಕ್ಕಕ್ಕೆ ಸರಿಸಿ ಬರ್ತೀನಿ ...

ರೂಪತಾರಾ

ದರ್ಶನ್‌ ಪಾಲಿಗೆ ಕಳೆದ ವರ್ಷ ಅಷ್ಟೇನೂ ಅತ್ಯುತ್ತಮವಾಗಿರಲಿಲ್ಲ. 2016ರಲ್ಲಿ ದರ್ಶನ್‌ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾದವು. ಆ ಪೈಕಿ "ಚೌಕ'ದಲ್ಲಿ ಅವರದ್ದು ಅತಿಥಿ ಪಾತ್ರವಾಗಿತ್ತು. ಇನ್ನು "ಚಕ್ರವರ್ತಿ' ಚಿತ್ರವು ಸೋತರೆ, "ತಾರಕ್‌' ಸಾಧಾರಣ ಯಶಸ್ಸು ಪಡೆಯಿತು.  ಇನ್ನು ದರ್ಶನ್‌ ಅಭಿನಯದ ಎರಡು ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿವೆ.

ಪ್ರಮುಖವಾಗಿ "ಕುರುಕ್ಷೇತ್ರ' ಮಾರ್ಚ್‌ ಅಥವಾ ಏಪ್ರಿಲ್‌ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನವೇ ಬಿ. ಸುರೇಶ ನಿರ್ಮಾಣದ ಚಿತ್ರದ ಚಿತ್ರೀಕರಣ ಶುರುವಾಗಿದೆ. ಬಹುಶಃ ಅಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಿನಲ್ಲಿ ಈ ಚಿತ್ರವೂ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಲ್ಲಿಗೆ, ಈ ವರ್ಷ ದರ್ಶನ್‌ ಅವರಿಂದ ಎರಡು ಚಿತ್ರಗಳನ್ನು ನಿರೀಕ್ಷಿಸಬಹುದು.

ಬಹಳ ಕಡಿಮೆ ಕಲಾವಿದರಿಗೆ ಅಂಥದ್ದೊಂದು ಅವಕಾಶ ಸಿಗುತ್ತದೆ. ದರ್ಶನ್‌ ಅಂತಹ ಲಕ್ಕಿ ಕಲಾವಿದೆ ಎಂದರೆ ತಪ್ಪಲ್ಲ. ಒಬ್ಬ ಕಲಾವಿದನ 50ನೇ ಚಿತ್ರ ಎಂದರೆ, ಕಮರ್ಷಿಯಲ್‌ ಅಥವಾ ಮಾಸ್‌ ಚಿತ್ರವಾಗಿರಬಹುದು ಇತ್ತೀಚಿನ ವರ್ಷಗಳಲ್ಲಿ ಗಮನಿಸಬಹುದು. ಆದರೆ, ದರ್ಶನ್‌ ಅವರ 50ನೇ ಚಿತ್ರವಾಗಿ ಒಂದು ಪೌರಾಣಿಕ ಚಿತ್ರ ಸಿಕ್ಕಿದೆ. ಆ ಚಿತ್ರದಲ್ಲಿ ದುರ್ಯೋಧನನ ಪಾತ್ರ ಸಿಕ್ಕಿದೆ.

ಬಹುಶಃ ಒಬ್ಬ ನಟನಿಗೆ ಇದಕ್ಕಿಂತ ಸ್ಕೋರ್‌ ಮಾಡುವ ಪಾತ್ರ ಸಿಗಲಿಕ್ಕಿಲ್ಲ. ಅಂಥದ್ದೊಂದು ಅಪರೂಪದ ಪಾತ್ರ ಈಗ ದರ್ಶನ್‌ ಅವರ ಪಾಲಾಗಿದೆ. ಇಂಥದ್ದೊಂದು ಅವಕಾಶ ಸಿಗುತ್ತಿದ್ದಂತೆಯೇ, ಕಣ್ಮುಚ್ಚಿ ಒಪ್ಪಿದ್ದಾರೆ ದರ್ಶನ್‌. ಪೌರಾಣಿಕ ಚಿತ್ರದಲ್ಲಿ ಅವರು ಇದುವರೆಗೂ ನಟಿಸದಿದ್ದರೂ, ಪಾತ್ರದ ಬಗ್ಗೆ ಕೇಳುತ್ತಿದ್ದಂತೆಯೇ ಅವರು ಎರಡೂ ಕೈಗಳಿಂದ ಈ ಪಾತ್ರ ಮತ್ತು ಚಿತ್ರವನ್ನು ಅಪ್ಪಿಕೊಂಡಿದ್ದಾರೆ.

"ಈ ಚಿತ್ರದಲ್ಲಿ ಕೆಲಸ ಮಾಡಿದ್ದು ಮರೆಯದ ಅನುಭವ. ಇದು ನನ್ನ 50 ನೇ ಚಿತ್ರ. "ಕುರುಕ್ಷೇತ್ರ' 50 ನೇ ಚಿತ್ರ ಅಂತ ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ. ನನಗೆ ಸಿಕ್ಕ ಅವಕಾಶ ಚೆನ್ನಾಗಿ ಬಳಸಿಕೊಂಡ ಖುಷಿ ಇದೆ. ಇದು ನನ್ನ ಮೊದಲ ಚಿತ್ರ ಅಂತಾನೇ ಭಾವಿಸಿ ಕೆಲಸ ಮಾಡಿದ್ದೇನೆ. ಎಲ್ಲರೂ ಕೇಳ್ತಾ ಇದ್ದರು.

ದರ್ಶನ್‌, ಕ್ಯೂ ಇದೆಯಲ್ಲ ಅದನ್ನೆಲ್ಲಾ ಹೇಗೆ ನಿಭಾಯಿಸ್ತೀಯ ಅಂತ. ಪೌರಾಣಿಕ, ಐತಿಹಾಸಿಕ ಸಿನಿಮಾ ಮಾಡೋಕೆ ಯಾರೇ ಬಂದ್ರೂ, ಬಂದಾಗ ಕ್ಯೂ ಇಟ್ಟುಕೊಳ್ಳಲ್ಲ. ಮಿಕ್ಕಿದವರನ್ನು ಪಕ್ಕಕ್ಕೆ ಸರಿಸಿ, ಪೌರಾಣಿಕ ಸಿನಿಮಾ ಮಾಡ್ತೀನಿ. ಯಾಕೆಂದರೆ, ಅಂತಹ ಚಿತ್ರ ಮಾಡ್ತೀನಿ ಅಂತ ಬರೋದೇ ತುಂಬಾ ದೊಡ್ಡದು. ಅದರಲ್ಲೂ ನಮ್ಮ ಕನ್ನಡ ಚಿತ್ರರಂಗದಲ್ಲಿ ಅಂತಹವರು ಸಿಗುವುದಿಲ್ಲ' ಎನ್ನುತ್ತಾರೆ ದರ್ಶನ್‌.

ಪೌರಾಣಿಕ ಚಿತ್ರಗಳನ್ನು ಮಾಡಲು ಬರುವ ನಿರ್ಮಾಪಕರಿಗೆ ದರ್ಶನ್‌ ಮೊದಲ ಆದ್ಯತೆ ಕೊಡುತ್ತಾರಂತೆ. "ನಾನು ಪೌರಾಣಿಕ ಚಿತ್ರಗಳನ್ನು ಮಾಡಲು ಬರುವ ನಿರ್ಮಾಪಕರಿಗೆ ಮೊದಲ ಆದ್ಯತೆ ಕೊಡ್ತೀನಿ. ನೂರು ಕಮರ್ಷಿಯಲ್‌ ಚಿತ್ರವಿದ್ದರೂ, ಪಕ್ಕಕ್ಕೆ ಸರಿಸಿ ಬರಿ¤àನಿ. ಇಂತಹ ಚಿತ್ರ ಮಾಡುವವರೇ ಇಲ್ಲ. ಅಂಥದರಲ್ಲಿ ಬಂದಾಗ ಕಮರ್ಷಿಯಲ್‌ ಚಿತ್ರ ನನಗೆ ಮುಖ್ಯ ಆಗೋದಿಲ್ಲ.

ನಾನು ಇದುವರೆಗೆ ಮಾನಿಟರ್‌ ನೋಡಿಲ್ಲ. "ಕುರುಕ್ಷೇತ್ರ' ಹೇಗೆ ಮೂಡಿಬಂದಿದೆ ಎಂಬ ಕುತೂಹಲ ನನಗೂ ಇದೆ. ಅದನ್ನು ತೆರೆಯ ಮೇಲೆ ನೋಡಿಯೇ ಖುಷಿಪಡ್ತೀನಿ. "ಸಂಗೊಳ್ಳಿ ರಾಯಣ್ಣ'ನಿಗಿಂತ ಇದಕ್ಕೆ ಹೆಚ್ಚು ದಿನಗಳಾಗಿವೆ. ಇನ್ನೂ ಹೊಸ ತರಹದ ಕಮರ್ಷಿಯಲ್‌ ಕಥೆಗಳನ್ನು ಕೇಳಿದ್ದಾಗಿದೆ' ಎನ್ನುತ್ತಾರೆ ದರ್ಶನ್‌.

ಸ್ಕೂಲ್‌ ಸಿಲಬಸ್‌ ಓದೋದೇ ಕಷ್ಟ: ಮಹಾಭಾರತದ ಕುರುಕ್ಷೇತ್ರ ಬಗ್ಗೆ ಎಷ್ಟು ಹೇಳಿದರೂ ಸಾಲದೋ, ಹಾಗೆಯೇ "ಕುರುಕ್ಷೇತ್ರ' ಬಗ್ಗೆ ಎಷ್ಟು ಹೇಳಿದರೂ ಸಾಲದು ಎಂಬುದು ದರ್ಶನ್‌ ಅವರ ಅಭಿಪ್ರಾಯ. "ಇಲ್ಲಿ ನಿಜವಾದ ಹೀರೋ ಮತ್ತು ಕೇಂದ್ರಬಿಂದು ನಿರ್ಮಾಪಕ ಮುನಿರತ್ನ. ಅವರು ಇಂತಹ ಚಿತ್ರಕ್ಕೆ ಕೈ ಹಾಕಿರೋದೇ ದೊಡ್ಡದು. ಎಲ್ಲರೂ ಹಿಂಗೆ ಓಡ್ತಾ ಇರುವಾಗ, ನಾವು ಉಲ್ಟಾ ಓಡ್ತಾ ಇದ್ದೇವೆ.

"ಸಂಗೊಳ್ಳಿ ರಾಯಣ್ಣ' ಮಾಡಬೇಕಾದರೂ ಎಲ್ರೂ ಹಿಂಗ್‌ ಈಜುತ್ತಿದ್ದಾಗ, ನಾವು ಉಲ್ಟಾ ಈಜ್ಕೊಂಡ್‌ ಹೋದ್ವಿ. ನಾವೆಲ್ಲಾ ಪೌರಾಣಿಕ ಸಿನಿಮಾ ನೋಡಿ ಬೆಳೆದವರು. ನಮ್ಮ ಜನರೇಷನ್‌ಗೆ ಅದು ಕೊನೆ ಇತ್ತು. ಮುಂದಿನ ಜನರೇಷನ್‌ಗೆ ಪೌರಾಣಿಕ ಟಚ್‌ ಇರೋದೇ ಇಲ್ಲ. ಈಗಿನ ಮಕ್ಕಳು ಪೌರಾಣಿಕ ಓದ್ತಾ ಇಲ್ಲ. ಯಾಕೆಂದರೆ ಸ್ಕೂಲ್‌ ಸಿಲಬಸ್‌ ಓದೋದೇ ಕಷ್ಟ. ಆ ಸಿಲಬಸ್‌, ಈ ಸಿಲಬಸ್‌ ಅಂತ ಓದ್ತಾರೆ.

ಮುಂದೆ ಓದೋಕೆ ಪುಸ್ತಕನೂ ಇರೋದಿಲ್ವೇನೋ? ಮನೆಯಲ್ಲಿ ವಯಸ್ಸಾದವರು ಇದ್ದರೆ ಮಕ್ಕಳಿಗೆ  ಮಹಾಭಾರತ, ರಾಮಾಯಣ ಕಥೆ ಹೇಳ್ತಾರೆ. ಒಬ್ಬ  ಭೀಮ ಇದ್ದ, ದುರ್ಯೋಧನ ಇದ್ದ, ಪಾಂಡವರು ಅಂತ ಇದ್ದರು ಅಂತ ಹೇಳಬೇಕಿದೆ. ಇಂತಹ ಸಮಯದಲ್ಲಿ ಮುನಿರತ್ನ ಅವರು ಪೌರಾಣಿಕ ಚಿತ್ರ ಮಾಡಿದ್ದಾರೆ. ಏನೋ ಮಾಡಬೇಕು ಅಂತ ಮಾಡದೆ, ಎಲ್ಲೂ ಕಾಂಪ್ರಮೈಸ್‌ ಆಗದೆ ಅದ್ಧೂರಿಯಾಗಿ ಮಾಡಿದ್ದಾರೆ' ಎನ್ನುತ್ತಾರೆ ದರ್ಶನ್‌.

ಮೇಕಪ್‌ಗೆ ಒಂದೂವರೆ ತಾಸು: ಈ ತರಹದ ಚಿತ್ರ ಮಾಡುವುದು ಒಂದು ಕಡೆಯಾದರೆ, ಈ ಚಿತ್ರದಲ್ಲಿ ನಟಿಸುವುದಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ ದರ್ಶನ್‌. "ಚಿತ್ರೀಕರಣಕ್ಕೆ ಹೊರಡುವ ಮುನ್ನ ಎರಡು ಗಂಟೆ ವರ್ಕೌಟ್‌ ಮಾಡುತ್ತಿದ್ದೆ. ಮುಂಜಾನೆ ಐದಕ್ಕೆ ಎದ್ದು, ಎರಡು ಗಂಟೆ ವರ್ಕೌಟ್‌ ಮಾಡಿ ಸೆಟ್‌ಗೆ ಹೋಗುತ್ತಿದ್ದೆ. ಅಲ್ಲಿ ಸುಮಾರು ಒಂದುವರೆ ತಾಸು ಮೇಕಪ್‌, ಕಾಸ್ಟೂಮ್‌ಗೆ ಸಮಯ ಹೋಗುತ್ತಿತ್ತು.

ಆ ಬಳಿಕ ಕ್ಯಾಮರಾ ಮುಂದೆ ಸಂಜೆಯವರೆಗೂ ಕೆಲಸ ಮಾಡಬೇಕಿತ್ತು. ಆ ಕಾಸ್ಟೂಮ್‌ನಲ್ಲಿ ಕೆಲಸ ಮಾಡೋದಂದ್ರೇ ಅಬ್ಟಾ ಅದೊಂದು ದೊಡ್ಡ ಸಾಹಸ. ಇಡೀ ದೇಹಕ್ಕೆ ಆಭರಣ, ಕಿರೀಟ ಧರಿಸಿ, ಗದೆ ಹಿಡಿಯಬೇಕಿತ್ತು. ಮೈ ಮೇಲೆ ಹದಿನೈದು ಕೆಜಿಯಷ್ಟು ಭಾರದ ಆಭರಣ, 18 ಕೆಜಿ ತೂಕವಿರುವ ಗದೆ, ಸುಮಾರು 15 ಕೆಜಿ ತೂಕದ ಕಿರೀಟ ಎಲ್ಲಾ ಸೇರಿ, 45 ಕೆಜಿಗೂ ಹೆಚ್ಚು ಭಾರ ಹೊತ್ತು ನಟಿಸಬೇಕಿತ್ತು.

ಆ ಕಾಸ್ಟೂಮ್‌ನಲ್ಲಿ ಚೇರ್‌ ಮೇಲೆ ಕೂರಲು ಆಗುತ್ತಿರಲಿಲ್ಲ. ಮೈಯೆಲ್ಲಾ ಚುಚ್ಚುತ್ತಿತ್ತು. ಸ್ಟೂಲ್‌ನಲ್ಲಿ ಮಾತ್ರ ಕುಳಿತು ಸುಧಾರಿಸಿಕೊಳ್ಳಬೇಕಿತ್ತು. ಸಂಜೆ ರೂಮ್‌ಗೆ ಹೋಗಿ ಸ್ನಾನ ಮಾಡಿದಾಗ, ಅಲ್ಲಲ್ಲಿ ಚುರ್‌ ಚುರ್‌ ಅಂತ ನೋವಾದಾಗ ಮೈಯೆಲ್ಲಾ ಪರಚಿದೆ ಅಂತ ಗೊತ್ತಾಗುತ್ತಿತ್ತು. ದುರ್ಯೋಧನನ ಮೊದಲ ಕಿರೀಟ ಭಾರವಿತ್ತು. ತಲೆನೋವಿನಿಂದ ಕಿರಿಕಿರಿ ಎನಿಸುತ್ತಿತ್ತು.

ನಾನು ಚಿತ್ರ ಒಪ್ಪಿಕೊಂಡಾಗ, ಹತ್ತು ದಿನ ಸತತ ಚಿತ್ರೀಕರಣ ಮಾಡಿ, ಎರಡು ದಿನ ಬ್ರೇಕ್‌ ಬೇಕು ಅಂದಿದ್ದೆ. ಕಾರಣ, ಕಿರೀಟ ಭಾರದಿಂದ ಸಿಕ್ಕಾಪಟ್ಟೆ ತಲೆನೋವು ನೋವು ಬರುತಿತ್ತು. ಅದನ್ನರಿತ ಮುನಿರತ್ನ, ಎರಡು ದಿನದ ಗ್ಯಾಪ್‌ನಲ್ಲೇ ಇನ್ನೊಂದು ಕಿರೀಟ ಮಾಡಿಸಿಕೊಂಡು ಬಂದರು. ಆದರೆ, ಅದರ ಭಾರವೇನೂ ಕಡಿಮೆ ಇಲ್ಲ' ಎಂದು ನಗುತ್ತಾರೆ ದರ್ಶನ್‌.

ಪುಟಗಟ್ಟಲೆ ಸಂಭಾಷಣೆ ಹೇಳಿದ್ದೇನೆ: ಈ ಚಿತ್ರಕ್ಕಾಗಿ ಪುಟಗಟ್ಟಲೆ ಸಂಭಾಷಣೆಗಳನ್ನು ಉರು ಹೊಡೆದು ಹೇಳಿದ್ದಾರಂತೆ ದರ್ಶನ್‌. "ಇಂತಹ ಚಿತ್ರಕ್ಕೆ ಸಾಕಷ್ಟು ತಯಾರಿ ಬೇಕು. ನಾನು ಹೋಮ್‌ವರ್ಕ್‌ ಮಾಡಿಕೊಂಡೇ ಕೆಲಸ ಶುರುಮಾಡಿದೆ. ಹಳೆಗನ್ನಡ, ಸಂಸ್ಕೃತ ಸಂಭಾಷಣೆ ಜಾಸ್ತಿ ಇದೆ. ಪೌರಾಣಿಕ ಚಿತ್ರದ ಶೈಲಿ ಬಿಟ್ಟು ಆಚೀಚೆ ಹೋಗಿಲ್ಲ. ಪುಟಗಟ್ಟಲೆ ಸಂಭಾಷಣೆ ಹೇಳಿದ್ದೇನೆ.

ಒಂದು ಮುಕ್ಕಾಲು ಪುಟದ ಡೈಲಾಗ್‌ವೊಂದನ್ನು ಹೇಳಿದ್ದು ಮರೆಯಂಗಿಲ್ಲ. ಅದೊಂಥರಾ ಕಷ್ಟದ ಮಾತುಗಳು. ಅಲ್ಪ ಪ್ರಾಣ, ಮಹಾಪ್ರಾಣದ್ದೇ ಮುಖ್ಯ. "ಡಡ,ಢಢ' ಈ ರೀತಿಯ ಮಾತುಗಳನ್ನು ಹೇಳುವಾಗ ಸಾಕಷ್ಟು ಪ್ರಿಪೇರ್‌ ಆಗಿದ್ದೆ. ಒಂದಂತೂ ನಿಜ. ಇದು ಯಾವ ರೇಂಜ್‌ನ ಸಿನಿಮಾನೋ ಗೊತ್ತಿಲ್ಲ. ನಂಗೆ ಈ ರೇಂಜ್‌ ಅನ್ನೋದು ಗೊತ್ತಿಲ್ಲ. ಇಂತಹ ಚಿತ್ರಕ್ಕೆ ತಯಾರಿ ಬೇಕಿತ್ತು.

ಸ್ಕ್ರಿಪ್ಟ್ ಪಡೆದು, ಸುಮಾರು 20 ದಿನ ಆ ಸ್ಕ್ರಿಪ್ಟ್ ಓದಿಕೊಂಡು ಮೊದಲು ತಲೆಗೆ ಹಾಕಿಕೊಂಡೆ. ಏನಿದೆ, ಏನಿಲ್ಲ, ಭಾಷೆ ಬದಲಾವಣೆ ಎಷ್ಟಿದೆ ಎಂಬುದನ್ನು ಅರಿತೆ. ಸೆಟ್‌ಗೆ ಬಂದಾಗಲೂ ನಾನೇನು ಮಾಡಬೇಕು, ಹೇಗೆ ಮಾಡಬೇಕು ಅನ್ನುವುದರ ಚರ್ಚೆ ಹೊರತಾಗಿ ಬೇರೆ ಯಾವುದರ ಕಡೆಗೂ ಗಮನ ಕೊಡುತ್ತಿರಲಿಲ್ಲ' ಎನ್ನುತ್ತಾರೆ ದರ್ಶನ್‌.

"ಕುರುಕ್ಷೇತ್ರ'ದಿಂದ ದರ್ಶನ್‌ ತಾಳ್ಮೆ ಕಲಿತರು: ಈ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸುಸ್ತಾಗಿ ಹೋಗಿದ್ದರಂತೆ ದರ್ಶನ್‌. "ಸೆಟ್‌ಗೆ ಹೋಗುವ ಮುನ್ನ ಎರಡು ಗಂಟೆ ವರ್ಕೌಟ್‌ ಮಾಡುತ್ತಿದ್ದೆ. ಸಂಜೆ ಹಿಂದಿರುಗುವ ಹೊತ್ತಿಗೆ ಸುಸ್ತಾಗಿರುತ್ತಿದ್ದೆ. ಯಾವ ಮಟ್ಟಿಗೆ ಅಂದರೆ, ರೂಮ್‌ ಬಾಗಿಲು ತೆಗೆಯೋಕೂ ಆಗುತ್ತಿರಲಿಲ್ಲ. ಆಗಸ್ಟ್‌ 9ರಿಂದ ಇಲ್ಲಿಯವರೆಗೂ ಮಾಡಿದ ಕೆಲಸ ತೃಪ್ತಿ ಕೊಟ್ಟಿದೆ.

ಆಗಾಗ ಎರಡು ದಿನಗಳ ರಜೆ ಬಿಟ್ಟರೆ, ಈ ಚಿತ್ರಕ್ಕೆ ಸುಮಾರು 140ಕ್ಕೂ ಹೆಚ್ಚು ದಿನ ಕೆಲಸ ಮಾಡಿದ್ದೇನೆ. "ಸಂಗೊಳ್ಳಿ ರಾಯಣ್ಣ' ಮತ್ತು "ಕುರುಕ್ಷೇತ್ರ' ಇವುಗಳಿಗೆ ಫ್ರೀ ಡೇಟ್ಸ್‌ ಇಟ್ಟುಕೊಂಡೇ ಕೆಲಸ ಮಾಡಿದ್ದೇನೆ. ಕ್ಲೈಮ್ಯಾಕ್ಸ್‌ ಹತ್ತು ದಿನ ಸಾಕು ಅಂದೊಡ್ವಿ. ಅದು ಒಂದು ವಾರ ಹೆಚ್ಚಾಯ್ತು. ಹಾಗೆ ನೋಡಿದರೆ, "ಸಂಗೊಳ್ಳಿ ರಾಯಣ್ಣ' ಚಿತ್ರಕ್ಕಿಂತ ಈ ಚಿತ್ರಕ್ಕೆ ಜಾಸ್ತಿ ಡೇಟ್ಸ್‌ ಆಗಿದೆ.

ಇದು 3ಡಿ ಮತ್ತು 2ಡಿನಲ್ಲಿ ತಯಾರಾಗುತ್ತಿದೆ. ದಿನಕ್ಕೆ ನಾಲ್ಕು ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ನಾಲ್ಕು ಯೂನಿಟ್‌ಗಳು ಕೆಲಸ ಮಾಡುತ್ತಿದ್ದವು. ಹತ್ತಾರು ಕ್ಯಾಮೆರಾಗಳು ಓಡಾಡುತ್ತಿದ್ದವು. ಇದು ಚಿತ್ರೀಕರಣದ್ದಾದರೆ, ತಾಂತ್ರಿಕತೆಯಲ್ಲೂ ಶ್ರೀಮಂತವಾಗಿದೆ. 3ಡಿ, 2ಡಿ ಕೆಲಸಕ್ಕೆಂದೇ 120 ತಂತ್ರಜ್ಞರು ಒಂದೆಡೆ ಸೇರಿ ಕೆಲಸ ಮಾಡುತ್ತಿದ್ದಾರೆ. ಚೆನ್ನೈ, ಬೆಂಗಳೂರು, ಹೈದರಾಬಾದ್‌, ಕೇರಳ ಮತ್ತು ಮುಂಬೈನಲ್ಲಿ  ಗ್ರಾಫಿಕ್ಸ್‌ ಕೆಲಸ ನಡೆಯುತ್ತಿದೆ.

ಅದು ವಿಶೇಷ. ಈಗಾಗಲೇ ಡಬ್ಬಿಂಗ್‌ ಕೂಡ ಶುರುವಾಗಿದೆ. ನನ್ನದು ಜನವರಿ 5ರ ನಂತರ ನಡೆಯಲಿದೆ. ಇಲ್ಲಿ ಎರಡು ಸಲ ಡಬ್ಬಿಂಗ್‌ ಮಾಡಬೇಕು. ಯಾಕೆಂದರೆ, 3ಡಿ, 2ಡಿ ಆಗಿರುವುದರಿಂದ ಬೇರೆ ಆ್ಯಂಗಲ್‌ನಲ್ಲೂ ಚಿತ್ರ ಶೂಟ್‌ ಆಗಿರುತ್ತೆ. ಹಾಗಾಗಿ, ಡಬ್ಬಿಂಗ್‌ ಎರಡು ಸಲ ಮಾಡಲೇಬೇಕು. ಇಲ್ಲಿ ಕಲಿತದ್ದು, ತಾಳ್ಮೆ. ಇಂತಹ ಚಿತ್ರಗಳಿಗೆ ತಾಳ್ಮೆ ಬಹುಮುಖ್ಯ.

ಯಾಕೆಂದರೆ, ಆ ಕಾಸ್ಟೂಮ್‌ ಹಾಕಿ ಕೆಲಸ ಮಾಡುತ್ತಿರುವಾಗ, ಸಖತ್‌ ಕಿರಿಕಿರಿ ಆಗುತ್ತಿತ್ತು. ಆದರೂ ತಾಳ್ಮೆ ಕಳೆದುಕೊಳ್ಳದೆ ಕೆಲಸ ಮಾಡಿದ್ದೇನೆ. ನಾನಷ್ಟೇ ಅಲ್ಲ, ಪ್ರತಿಯೊಬ್ಬರೂ ಹಾಗೇ ಕೆಲಸ ಮಾಡಿದ್ದಾರೆ. ಇಲ್ಲಿ ಕೆಲಸ ಮಾಡಿದ್ದಕ್ಕೆ ಹೆಮ್ಮೆ ಮತ್ತು ತೃಪ್ತಿ ಇದೆ' ಎಂದು ಸಂತೋಷದಿಂದ ಹೇಳಿಕೊಳ್ಳುತ್ತಾರೆ.


Trending videos

Back to Top