CONNECT WITH US  

ಸೂರ್ಯ ಶಿಕಾರಿ ಯಶಸ್ಸಿನ ಬೆನ್ನೇರಿ

ರೂಪತಾರಾ

ಯಶಸ್‌ ಸೂರ್ಯ ಒಂದೇ ಒಂದು ಸಕ್ಸಸ್‌ಗಾಗಿ ಎದುರು ನೋಡುತ್ತಿದ್ದಾರೆ. ಈವರೆಗೆ ಅವರು ನಟಿಸಿದ ಬಹುತೇಕ ಚಿತ್ರಗಳು ಹೇಳಿಕೊಳ್ಳುವಂತಹ ಗೆಲುವು ಕೊಡದಿದ್ದರೂ, ಅವರನ್ನು ಗುರುತಿಸಿಕೊಳ್ಳುವಂತೆ ಮಾಡಿರುವುದು ಮಾತ್ರ ಸುಳ್ಳಲ್ಲ. ಚಿತ್ರರಂಗದಲ್ಲಿ ಸೋಲಿರಲಿ, ಗೆಲುವಿರಲಿ, ದೊಡ್ಡ ಚಿತ್ರವಿರಲಿ, ಸಣ್ಣ ಸಿನಿಮಾವೇ ಇರಲಿ ನಿರಂತರವಾಗಿ ಒಂದಷ್ಟು ಚಿತ್ರಗಳಲ್ಲಿ ನಟಿಸುತ್ತಲೇ ಒಂದು ಬ್ರೇಕ್‌ಗಾಗಿ ಕಾಯುತ್ತಿರುವ ಅನೇಕ ಹೀರೋಗಳಂತೆ ಯಶಸ್‌ ಸೂರ್ಯ ಕೂಡ ಒಂದು ಸಕ್ಸಸ್‌ಗಾಗಿ ಕಾಯುತ್ತಿದ್ದಾರೆ.

ಯಶಸ್‌ ಸೂರ್ಯ ಇದುವರೆಗೆ ಸುಮಾರು ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಕ್ಕಮಟ್ಟಿಗೆ ತಮ್ಮದ್ದೊಂದು ಛಾಪನ್ನೂ ಮೂಡಿಸಿದ್ದಾರೆ. ಆರಂಭದಿಂದಲೂ ಇಲ್ಲಿಯವರೆಗೆ ತಮ್ಮ ಪಾಲಿಗೆ ಬಂದದ್ದೆಲ್ಲವೂ ಪಂಚಾಮೃತ ಎಂದು ಸ್ವೀಕರಿಸಿ, ಕೆಲಸ ಮಾಡಿದ ಯಶಸ್‌ ಸೂರ್ಯ, ಆ ಚಿತ್ರಗಳ ಮೇಲೆ ಅತೀವ ನಂಬಿಕೆ ಇಟ್ಟುಕೊಂಡೇ ತಮ್ಮ ಪಾಲಿನ ಕೆಲಸ ಮಾಡಿದ್ದರು. ಆದರೆ, ಅವರ ಅತಿಯಾದ ನಂಬಿಕೆ ಹುಸಿಯಾದಾಗ, ಮತ್ತದೇ ನಂಬಿಕೆಯಲ್ಲೆ ಕೆಲಸ ಮಾಡುತ್ತ ಬಂದವರು.

ಆದರೂ, ಅವರು ಸೋಲುಂಡಾಗಲೂ ಅದೇ ಹುಮ್ಮಸ್ಸು, ಉತ್ಸಾಹದಿಂದ ಮುಂದಿನ ಚಿತ್ರಗಳಲ್ಲೂ ನಟಿಸುತ್ತಲಿದ್ದಾರೆ. ಸದ್ಯ ಅವರು ಅಭಿನಯಿಸಿರುವ "ರಾಮಧಾನ್ಯ' ಮತ್ತು "ಚಿಟ್ಟೆ' ಚಿತ್ರಗಳು ಬಿಡುಗಡೆ ಕಂಡಿವೆ. ಇನ್ನು, ದರ್ಶನ್‌ ಅವರ "ಕುರುಕ್ಷೇತ್ರ' ಚಿತ್ರದಲ್ಲೂ ಯಶಸ್‌ ಸೂರ್ಯ ನಟಿಸಿದ್ದಾರೆ. "ಕುರುಕ್ಷೇತ್ರ' ಕೂಡ ಬಿಡುಗಡೆಯ ಹಾದಿಯಲ್ಲಿದೆ. ಅಲ್ಲಿಗೆ ಈ ವರ್ಷ ಯಶಸ್‌ ಅಭಿನಯದ ಮೂರು ಚಿತ್ರಗಳು ತೆರೆಗೆ ಬಂದಂತಾಗುತ್ತವೆ. ಅವರ ಸಿನಿಮಾ ಕೆರಿಯರ್‌ನಲ್ಲಿ ಇದುವರೆಗಿನ ಸಿನಿಮಾಗಳನ್ನು ಗಮನಿಸಿಕೊಂಡು ಬಂದರೆ, "ರಾಮಧಾನ್ಯ' ಚಿತ್ರ ವಿಶೇಷ ಎಂಬ ಮಾತಿತ್ತು.

ಯಾಕೆಂದರೆ, ಅದರಲ್ಲಿ ಅವರದು ನಾಲ್ಕು ಶೇಡ್‌ ಇರುವ ವಿಭಿನ್ನ ಪಾತ್ರವಾಗಿತ್ತು. ಈ ಹಿಂದೆ ಬೇರೆ ಬೇರೆ ಜಾನರ್‌ನ ಕಥೆವುಳ್ಳ ಚಿತ್ರಗಳಲ್ಲಿ ನಟಿಸಿದ್ದ ಯಶಸ್‌ ಸೂರ್ಯ, ಒಂದಷ್ಟು ಬದಲಾವಣೆ ಇರಬೇಕು ಎಂಬ ಕಾರಣಕ್ಕೆ, "ರಾಮಧಾನ್ಯ' ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದರು. ಅಲ್ಲಿ ಕನಕದಾಸರು, ರಾಮ ಕುರಿತ ಕಥೆಯಲ್ಲಿ ಕಾಣಿಸಿಕೊಂಡಿದ್ದರು. ಅಭಿನಯಕ್ಕೆ ಹೆಚ್ಚ ಒತ್ತು ಇರುವಂತಹ ಪಾತ್ರವಾಗಿದ್ದರಿಂದಲೇ ಅವರು ಆ ಚಿತ್ರ ಒಪ್ಪಿಕೊಂಡಿದ್ದರು.

ಚಿತ್ರ ಬಿಡುಗಡೆಯಾದರೂ ಅಷ್ಟೇನೂ ಸದ್ದು ಮಾಡಲಿಲ್ಲ. ಆದರೆ, ಒಳ್ಳೆಯ ಪ್ರಯತ್ನ ಎಂಬ ಮಾತುಗಳಷ್ಟೇ ಕೇಳಿಬಂದವು. ಇನ್ನು, "ಚಿಟ್ಟೆ' ಕೂಡ ಮತ್ತೂಂದು ವಿಶ್ವಾಸದ ಚಿತ್ರ ಎಂದೇ ಹೇಳಿಕೊಂಡಿದ್ದರು ಯಶಸ್‌ ಸೂರ್ಯ. ಅದೊಂದು ಗಂಡ-ಹೆಂಡತಿ ನಡುವಿನ ಸಾಮರಸ್ಯ ಸಾರುವ ಚಿತ್ರವಾಗಿದ್ದು, ಈಗಿನ ಟ್ರೆಂಡ್‌ಗೆ ತಕ್ಕಂತಹ ಲವ್‌ಸ್ಟೋರಿ ಚಿತ್ರದಲ್ಲಿದೆ. ರೊಮ್ಯಾನ್ಸ್‌ ಅಂಶಗಳ ಮೂಲಕ ಹೊಸದೇನನ್ನೋ ಹೇಳುವಂತಿದೆ.

ಅದಕ್ಕಿಂತ ಹೆಚ್ಚಾಗಿ ಸಾಕಷ್ಟು ಸಂದೇಶವೂ ಇರುವುದರಿಂದ ಸಹಜವಾಗಿಯೇ ಯಶಸ್‌ಸೂರ್ಯ ಅವರಿಗೆ ಆ ಚಿತ್ರದ ಮೇಲೆ ಇನ್ನಿಲ್ಲದ ಪ್ರೀತಿ. ಇನ್ನು, ದರ್ಶನ್‌ ಅವರ "ಕುರುಕ್ಷೇತ್ರ' ಚಿತ್ರದಲ್ಲೂ ಯಶಸ್‌ ಸೂರ್ಯ ಅವರು ನಕುಲ ಪಾತ್ರ ನಿರ್ವಹಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, "ಕುರುಕ್ಷೇತ್ರ' ಇಷ್ಟರಲ್ಲೇ ತೆರೆಗೆ ಬರುವ ಸಾಧ್ಯತೆ ಇದೆ. ಈ ಮಧ್ಯೆ ಯಶಸ್‌ ಸೂರ್ಯ ಅವರನ್ನು ಒಂದಷ್ಟು ಕಥೆಗಳನ್ನೂ ಕೇಳಿದ್ದಾರಂತೆ.

ಅಷ್ಟೂ ಕಥೆಗಳ ಪೈಕಿ ಅವರು "ಲಂಕಾಪುರ' ಎಂಬ ಕಥೆ ಕೇಳಿ ಖುಷಿಗೊಂಡಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರವನ್ನು ಓಕೆ ಮಾಡಿದ್ದಾರೆ ಕೂಡ. ಬಹುಶಃ  ಜುಲೈನಲ್ಲಿ ಆ ಪ್ರಾಜೆಕ್ಟ್ ಶುರುವಾಗುವ ಸಾಧ್ಯತೆ ಇದೆ. ಯಶಸ್‌ ಸೂರ್ಯ, ಒಳ್ಳೆಯ ಚಿತ್ರದಲ್ಲೇ ಕೆಲಸ ಮಾಡಬೇಕು ಅಂತ ಕಾದಿದ್ದು ನಿಜವಂತೆ. ಆದರೆ, ಈ ಹಿಂದೆ ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಂಡು, ಮಾಡಿದ ಮೇಲಷ್ಟೇ ತಪ್ಪಿನ ಅರಿವಾಯಿತಂತೆ. ಹಾಗಾಗಿ ಇನ್ನು ಮುಂದೆ ತುಂಬಾ ಎಚ್ಚರದಿಂದ ಹೆಜ್ಜೆ ಇಡಬೇಕು ಎಂಬ ತೀರ್ಮಾನ ಮಾಡಿದ್ದಾರಂತೆ ಅವರು.

ಒಳ್ಳೆಯ ಕಥೆ, ಪಾತ್ರ ಹಾಗೂ ಒಳ್ಳೆಯ ತಂಡ ಇದ್ದರೆ ಮಾತ್ರ ಕೆಲಸ ಮಾಡಬೇಕು ಎಂಬುದೇ ಆ ತೀರ್ಮಾನ. ಅಂತಹ ಚಿತ್ರ ಮಾಡುವುದಕ್ಕಾಗಿಯೇ ಅವರು ಕಳೆದ ಎರಡು ವರ್ಷಗಳಿಂದ ಯಾವುದೇ ಸಿನಿಮಾ ಮಾಡದೆ ಒಂದು ಸಿನಿಮಾಗಾಗಿ ಕಾದಿದ್ದಾರೆ. "ಲೆಜೆಂಡ್‌' ಎಂಬ ಚಿತ್ರಕ್ಕಾಗಿ ಯಶಸ್‌ ಸೂರ್ಯ ಅವರು ಎರಡು ವರ್ಷಗಳ ಕಾಲ ತಮ್ಮ ಕೂದಲು ಬಿಟ್ಟಿದ್ದರಂತೆ. ಎಲ್ಲವೂ ಪಕ್ಕಾ ಆಗಿದ್ದರಿಂದ ಅಷ್ಟೊಂದು ತಾಳ್ಮೆಯಿಂದ ಕೂದಲು ಬಿಟ್ಟು, ಪ್ರಾಜೆಕ್ಟ್ಗಾಗಿ ಕಾದಿದ್ದರಂತೆ ಯಶಸ್‌ ಸೂರ್ಯ.

ಆ ಚಿತ್ರ ಇದ್ದುದರಿಂದ ಯಶಸ್‌ ಸೂರ್ಯ ಯಾವ ಪಾತ್ರವನ್ನೂ ಒಪ್ಪಿಕೊಂಡಿರಲಿಲ್ಲವಂತೆ. ಆದರೆ, "ಲೆಜೆಂಡ್‌' ಎಂಬ ಶೀರ್ಷಿಕೆ ಕೊನೆಗೆ ಶಿವಣ್ಣ ಅವರು ಅಭಿನಯಿಸುತ್ತಿರುವ ಚಿತ್ರಕ್ಕೆ ಹೋಗಿದ್ದರಿಂದ, ಆ ಟೀಮ್‌ ಸಹ ಸುಮ್ಮನಾಗಿದೆ. ಯಶಸ್‌ ಸೂರ್ಯ ಅವರು ಕಳೆದ ಎರಡು ವರ್ಷ ಕಾದಿದ್ದಷ್ಟೇ ಬಂತು. ಈ ಚಿತ್ರದಿಂದ ಬಹಳಷ್ಟು ಪಾಠ ಕಲಿತ ಮೇಲೆ ಎಚ್ಚರದಿಂದ ಹೆಜ್ಜೆ ಇಡಬೇಕು ಎಂಬ ನಿರ್ಧಾರ ಮಾಡಿರುವ ಯಶಸ್‌ ಸೂರ್ಯ, ಇನ್ನು ಮುಂದೆಯಾದರೂ ಸದ್ದು ಮಾಡವ ಚಿತ್ರದಲ್ಲಿ ನಾನಿರಬೇಕು ಅಂತ ನಿರ್ಧರಿಸಿದ್ದಾರೆ. 

ಸದ್ಯಕ್ಕೆ "ಲಂಕಾಪುರ' ಎಂಬ ಚಿತ್ರದತ್ತ ಚಿತ್ತ ಹರಿಸಿದ್ದಾರೆ. ಅವರಿಗೀಗ ಒಂದು ಬ್ರೇಕ್‌ ಬೇಕು. ಅದಕ್ಕಾಗಿ ಕಾಯುತ್ತಿರುವುದಂತೂ ನಿಜ. ಇದುವರೆಗೆ ಮಾಡಿದ ಚಿತ್ರಗಳೆಲ್ಲವೂ ಹೇಗೋ ಗೊತ್ತಿಲ್ಲ. ಇನ್ನು ಮುಂದೆ ಗಟ್ಟಿ ಇರುವ ಕಥೆ, ಪಾತ್ರ ಒಪ್ಪಿ ಮಾಡುವ ಬಗ್ಗೆ ಯೋಚಿಸಿದ್ದಾರೆ. ಪ್ರತಿಯೊಬ್ಬ ನಟನಿಗೂ ತಾನು ಮಾಡಿದ ಚಿತ್ರದ ಮೇಲೆ ನಿರೀಕ್ಷೆ ಇದ್ದೇ ಇರುತ್ತೆ. ಆರಂಭದಲ್ಲಿ ಕಥೆ ಹೇಳುವ ನಿರ್ದೇಶಕರು ಹಾಗೇ ಚಿತ್ರ ಮಾಡಿದರೆ, ಎಲ್ಲವೂ ಸರಿ ಇರುತ್ತೆ. ಆದರೆ, ಹಾಗೆ ಆಗಲ್ಲ ಎನ್ನುವ ಯಶಸ್‌ ಸೂರ್ಯ, ಹಿಂದೆಲ್ಲಾ ಮಾಡಿದ ಆಯ್ಕೆಯಿಂದ ಸಣ್ಣಪುಟ್ಟ ತಪ್ಪು ಮಾಡಿ, ಎಡವಿದ್ದನ್ನು ಒಪ್ಪುವ ಯಶಸ್‌ ಸೂರ್ಯ, ಮುಂದಿನ ದಿನಗಳಲ್ಲಿ ತುಂಬಾನೇ ಎಚ್ಚರವಹಿಸುವುದಾಗಿ ಹೇಳುತ್ತಾರೆ.

ಬರಹ: ವಿಜಯ್‌ ಭರಮಸಾಗರ


Trending videos

Back to Top