CONNECT WITH US  

ಚಂದ್ರು ಸಿಹಿಕಹಿ

ರೂಪತಾರಾ

ನಾವೇ ಶುರು ಮಾಡಿದ್ದು, ಈಗ ನಾವೇ ಅದನ್ನ ಬ್ರೇಕ್‌ ಮಾಡಬೇಕು ... ಹೀಗೆ ಹೇಳುವಾಗ ಸಿಹಿಕಹಿ ಚಂದ್ರು ಕಣ್ಣ ಮುಂದೆ "ಪಾ.ಪ. ಪಾಂಡು' ಹಾದು ಹೋಗಿರಬೇಕು. ಸುಮಾರು 18 ವರ್ಷಗಳ ಹಿಂದೆ ಅವರು ಈಟಿವಿ ಕನ್ನಡಕ್ಕಾಗಿ "ಪಾ.ಪ. ಪಾಂಡು' ಧಾರಾವಾಹಿಯನ್ನು ನಿರ್ದೇಶಿಸಿದ್ದರು. ಅದು ಯಾವ ಪರಿ ಹಿಟ್‌ ಆಗಿತ್ತೆಂದರೆ, ಆ ನಂತರ ಅವರೇ ಹಲವು ಕಾಮಿಡಿ ಧಾರಾವಾಹಿಗಳನ್ನು ಮಾಡುವುದರ ಜೊತೆಗೆ, ಬೇರೆಯವರು ಸಹ ಬೇರೆಬೇರೆ ಚಾನಲ್‌ಗ‌ಳಲ್ಲಿ ಕಾಮಿಡಿ ಧಾರಾವಾಹಿಗಳನ್ನು ಮಾಡಿದರು. ಒಂದು ಹಂತಕ್ಕೆ ಇದು ಅತಿಯಾಗಿ, ಕಾಮಿಡಿ ಎಂದರೆ ಜನಕ್ಕೂ ಸ್ವಲ್ಪ ಬೇಸರವಾಯ್ತು.

ಆ ನಂತರ ಕಿರುತೆರೆಯಲ್ಲಿ ಟ್ರೆಂಡ್‌ ಬದಲಾಗಿ, ಬೇರೆಬೇರೆ ತರಹದ ಧಾರಾವಾಹಿಗಳು ಪ್ರಸಾರವಾಗುತ್ತಿರುವಾಗ, ಚಂದ್ರು ಮತ್ತೂಮ್ಮೆ ಅದೇ "ಪಾ.ಪ. ಪಾಂಡು' ಜೊತೆಗೆ ವಾಪಸ್ಸು ಬರುತ್ತಿದ್ದಾರೆ. ಅವರೇ ಹೇಳುವಂತೆ ಇದು ಅವರ ಮಟ್ಟಿಗೆ ದೊಡ್ಡ ಸವಾಲು. ಏಕೆಂದರೆ, ಹಿಂದೊಮ್ಮೆ ಮಾಡುತ್ತಿದ್ದ ಕಾಮಿಡಿಯನ್ನು ಬ್ರೇಕ್‌ ಮಾಡಿ, ಈಗಿನ ಪ್ರೇಕ್ಷಕರಿಗೆ ತಕ್ಕ ಹಾಗೆ ಬೇರೇನೋ ಕೊಡಬೇಕು. ಅದೇ ಟೆನ್ಶನ್‌ನಲ್ಲಿದ್ದ ಚಂದ್ರು ಅದೊಂದು ರಾತ್ರಿ ಗಾಂಧಿಬಜಾರ್‌ ಕಾಫಿ ಡೇಯಲ್ಲಿ ಕುಳಿತು ತಮ್ಮ ಹೊಸ ಧಾರಾವಾಹಿಗಳ ಬಗ್ಗೆ, ತಾವು ನಡೆದು ಬಂದ ಹಾದಿಯ ಬಗ್ಗೆ ಮೆಲುಕು ಹಾಕತೊಡಗಿದರು.

ಭಂಡ ಧೈರ್ಯ ಮಾಡಿ ನುಗ್ಗಿಬಿಟ್ಟೆ ...: 18 ವರ್ಷಗಳ ಹಿಂದೆ "ಪಾ.ಪ. ಪಾಂಡು' ಮಾಡಿದ ಸಂದರ್ಭದಲ್ಲಿ ನಮಗೆ, ಕನ್ನಡದಲ್ಲಿ ಆ ತರಹದ ಉದಾಹರಣೆಗಳೇ ಇರಲಿಲ್ಲ. ಕಾಮಿಡಿ ಧಾರಾವಾಹಿ ಮಾಡಿಕೊಡಿ ಎಂದಾಗ ನಾನು ದಿನಕ್ಕೆ ಒಂದು ಕಥೆ ಮಾಡುತ್ತೀನಿ ಎಂದು ಹೇಳಿಬಿಟ್ಟೆ. ಕಾಮಿಡಿ ಕಥೆ ಸಿಗೋದೇ ಕಷ್ಟ. ಅಂಥದ್ದರಲ್ಲಿ ದಿನಕ್ಕೊಂದು ಕಥೆ ಅಂದರೆ ಇದು ಆಗೋ, ಹೋಗೋ ಮಾತಲ್ಲ ಅಂತ ಜನ ಹೇಳಿದರು.

100 ಎಪಿಸೋಡ್‌ಗಳನ್ನು ಪೂರೈಸೋದು ಕಷ್ಟ ಅಂತ ಎಲ್ಲಾ ಹೇಳಿಬಿಟ್ಟರು. ಆದರೆ, ನನಗೆ ಒಂದು ಜೋಷ್‌ ಇತ್ತು. ಭಂಡ ಧೈರ್ಯ ಮಾಡಿ ನುಗ್ಗಿಬಿಟ್ಟೆ. ಧಾರಾವಾಹಿ ಜನಪ್ರಿಯ ಆಯ್ತು. ಆ ನಂತರ "ಸಿಲ್ಲಿ ಲಲ್ಲಿ' ಮಾಡಿದೆ. ಅದು "ಪಾ.ಪ. ಪಾಂಡು' ಅಷ್ಟು ಜನಪ್ರಿಯ ಆಗೋಲ್ಲ ಎಂದರು. ಕೊನೆಗೆ ಅದೂ ಹಿಟ್‌ ಆಯ್ತು. ಆ ನಂತರ ಯಾರು ಕಾಮಿಡಿ ಧಾರಾವಾಹಿ ಮಾಡಿದರೂ, ಅವೆರಡಕ್ಕೆ ಹೋಲಿಸೋಕೆ ಶುರು ಮಾಡಿದರು.

ಈಗ ನಾನು "ಪಾ.ಪ. ಪಾಂಡು' ಮತ್ತೆ ಶುರು ಮಾಡಿದರೂ, ಹಳೆಯದರ ಜೊತೆಗೆ ಹೋಲಿಕೆ ಇದ್ದೇ ಇರುತ್ತೆ. ರಿಸ್ಕ್ ಕಟ್ಟಿಟ್ಟಬುತ್ತಿ. ಆದರೆ, ನನ್ನ ಬಲವಾದ ನಂಬಿಕೆ ಎಂದರೆ, ಪರಿಶುದ್ಧ ಹಾಸ್ಯ ಕೊಟ್ಟರೆ ಜನ ಖಂಡಿತಾ ತಗೋತಾರೆ. ಕಪಿಚೇಷ್ಟೆ, ವಲ್ಗಾರಿಟಿ ಇದ್ಯಾವುದನ್ನೂ ನಾವು ಇದುವರೆಗೂ ಹತ್ತಿರ ಸೇರಿಸಿಲ್ಲ. ಈ ಬಾರಿಯೂ ಅವೆಲ್ಲಾ ಇರೋದಿಲ್ಲ. ಹಾಗಾಗಿ ವರ್ಕ್‌ ಆಗಬಹುದು ಎಂಬ ನಂಬಿಕೆ ಇದೆ.

ಇದೊಂಥರಾ ಫ್ಯಾಕ್ಟರಿ ಇದ್ದಂಗೆ ...: ಕಾಮಿಡಿ ಧಾರಾವಾಹಿ ಮಾಡೋದು ತುಂಬಾ ಕಷ್ಟ ಮತ್ತು ಪ್ರತಿದಿನ ಟೆನ್ಶನ್‌ ಇದ್ದೇ ಇರುತ್ತದೆ. ಮೊದಲಿಗೆ ದಿನ ಒಂದು ಕಥೆ ಹುಟ್ಟುಹಾಕಬೇಕು. ಅದೇ ಮೊದಲ ಸವಾಲು. 5 ದಿನಕ್ಕೆ ಐದು ಕಥೆ ಮಾಡಿ, ಅದಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಶೂಟಿಂಗ್‌ ಆಗಬೇಕು. ಅದನ್ನ ಚಾನಲ್‌ನವರು ಅಪ್ರೂವ್‌ ಮಾಡಬೇಕು. ಆ ನಂತರ ಆ ಎಪಿಸೋಡು ಪ್ರಸಾರವಾಗುವಾಗ ಕರೆಂಟು ಹೋಗಬಾರದು, ಆ ಸಮಯಕ್ಕೆ ಯಾರೋ ಅತಿಥಿಗಳಿರಬಾರದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜನ ನೋಡಿ ನಗಬೇಕು.

ಇಷ್ಟೊಂದು ಸ್ಟೇಜ್‌ಗಳಲ್ಲಿ ಒಂದು ಕಡೆ ಎಡವಿದರೂ ಗಿಟ್ಟೋಲ್ಲ. ಹಾಗಾಗಿ ಪ್ರತಿದಿನ ಒಂದೊಂದು ಸವಾಲು. ಇದೆಲ್ಲದರ ಜೊತೆಗೆ ನಾವು ಮಾಡಿದ್ದು ಕಥೆ ಎಲ್ಲೂ ಬಂದಿರಬಾರದು. ದೃಶ್ಯ ಅಥವಾ ಸಂಭಾಷಣೆ ರಿಪೀಟ್‌ ಆಗಬಾರದು. ವರ್ಷಕ್ಕೆ 264 ಕಥೆಗಳು ಬೇಕು. ಎಲ್ಲಿಂದ ತರೋಣ ಅಷ್ಟೊಂದನ್ನ. ಇದೊಂಥರಾ ಫ್ಯಾಕ್ಟರಿ ಇದ್ದಂಗೆ. ನಿರಂತರ ಕೆಲಸ ಆಗುತ್ತಲೇ ಇರಬೇಕು. ಹೀಗೆ ಸತತವಾಗಿ ಸಾವಿರಾರು ಎಪಿಸೋಡ್‌ಗಳನ್ನು ಮಾಡಿದ ಮೇಲೆ, ಒಂದು ಹಂತಕ್ಕೆ ಸಾಕು ಎನಿಸಿತು. ಅದೇ ಕಾರಣಕ್ಕೆ ಬ್ರೇಕ್‌ ತಗೊಂಡೆ. ಈಗ ಕೆಲವು ವರ್ಷಗಳ ನಂತರ ಮತ್ತೆ ಕಾಮಿಡಿ ಧಾರಾವಾಹಿ ಮಾಡೋಕೆ ಬಂದಿದ್ದೀನಿ.

ಎಲ್ಲಾ ಆಯ್ತು ಅಂತ ಸುಮ್ಮನಿರಬಾರದು ...: ನನ್ನ ಜೀವನದಲ್ಲಿ ಒಂದೇ ಪಾಲಿಸಿ, ಅದು ಸದಾ ಏನಾದರೊಮದು ಕೆಲಸ ಮಾಡಬೇಕು ಎಂದು. ಯಾವುದೋ ಒಂದು ಕೆಲಸ ಯಶಸ್ವಿಯಾಯಿತು ಎಂದರೆ, ಎಲ್ಲಾ ಆಯ್ತು ಅಂತ ಸುಮ್ಮನಿರಬಾರದು. ಹೊಸದೇನನ್ನೋ ಹುಡುಕಬೇಕು. ಅದೇ ಕಾರಣಕ್ಕೆ ಬೇರೆ ಬೇರೆ ಕೆಲಸ ಮಾಡೋಕೆ ಸಾಧ್ಯವಾಗಿದೆ. ನಟನೆ, ನಿರ್ದೇಶನದ ಜೊತೆಗೆ ಅಡುಗೆ ಕಾರ್ಯಕ್ರಮ, ರೇಡಿಯೋ ನಿರೂಪಣೆ ಮಾಡುತ್ತಿದ್ದೇನೆ.

ಜೊತೆಗೆ "ಬೊಂಬಾಟ್‌ ಬೋಜನ' ಎಂಬ ಬ್ರಾಂಡ್‌ನ‌ಲ್ಲಿ ಸಾರಿನ ಪುಡಿ, ಸಾಂಬಾರ್‌ ಪುಡಿ, ಜಾಮೂನ್‌ ಮಿಕ್ಸ್‌, ಪುಳಿಯೋಗರೆ ಮಿಕ್ಸ್‌ ಮುಂತಾದ 18 ತರಹದ ಮಿಕ್ಸ್‌ಗಳನ್ನು ಮಾಡುತ್ತಿದ್ದೀನಿ. ಜೊತೆಗೆ ಓದು, ಬರಹ, ಸಿನಿಮಾ, ನಟನೆ ತರಬೇತಿ, ಲಕ್ಚರ್‌ಗಳು, ವರ್ಕ್‌ಶಾಪ್‌ಗ್ಳು, ರಂಗಭೂಮಿ ಇವೆಲ್ಲವೂ ಸಾಗಿದೆ. ಇದರ ಮಧ್ಯೆ ಕಳೆದ ವರ್ಷ "ಬಿಗ್‌ ಬಾಸ್‌'ಗೆ ಹೋಗಿದ್ದೆ. ತುಂಬಾ ದೊಡ್ಡ ಅನುಭವ ಕೊಟ್ಟ ಕಾರ್ಯಕ್ರಮ ಅದು.

ಅವೆಲ್ಲಾ ನನ್ನಂಥವನಿಗಲ್ಲ. ತುಂಬಾ ಕೆಲಸ ಮಾಡುವವನು ಒಂದೇ ಜಾಗದಲ್ಲಿ, ಸೀಮಿತ ವಾತಾವರಣದಲ್ಲಿ ಇರುವುದು ಬಹಳ ಕಷ್ಟ. ಆದರೆ, ಹಾಗೆ ಬದುಕಬಹುದು ಅಂತ ಕಲಿತೆ. ಆ ಕಾರ್ಯಕ್ರಮ ಒಂದು ಕನ್ನಡಿ ಇದ್ದಂಗೆ. ನಮ್ಮ ಹಲವು ದೋಷಗಳನ್ನ ತೋರಿಸೋದಷ್ಟೇ ಅಲ್ಲ, ನಾವೇನು ಅನ್ನೋದು ಅರ್ಥ ಮಾಡಿಸುತ್ತೆ. ನಿಜ ಹೇಳಬೇಕು ಅಂದರೆ, ಅಷ್ಟು ದಿನ ನಾನು ಎಲ್ಲಿ ಇರಬಹುದು ಅಂತ ನನಗೇ ಗೊತ್ತಿರಲಿಲ್ಲ.

ಕೆತ್ತು ಅಂದರೆ ಕೆತ್ತು, ಮೆತ್ತು ಎಂದರೆ ಮೆತ್ತು ...: ಸಿನಿಮಾ ಅಂತ ಬಂದಾಗ ಇವತ್ತಿಗೂ ಜನ ನನ್ನ ನೆನಪಿಸಿಕೊಳ್ಳೋದು "ಗೋಲ್‌ಮಾಲ್‌ ರಾಧಾಕೃಷ್ಣ' ಚಿತ್ರಕ್ಕಾಗಿ. ಎಲ್ಲಿ ಹೋದರೂ ಈಗಲೂ ಆ ಸಿನಿಮಾದ ಬಗ್ಗೆ ಜನ ನೆನಪಿಸುತ್ತಾರೆ. ಅದು ನನ್ನ ಗೋಲ್ಡನ್‌ ಪೀರಿಯಡ್‌ ಅಂದರೆ ತಪ್ಪಿಲ್ಲ. ಅದಾದ ಮೇಲೆ ಸಾಯಿಪ್ರಕಾಶ್‌ ಅವರ ಜೊತೆಗೆಎ ಒಂದು ವರ್ಷಕ್ಕೆ 17 ಸಿನಿಮಾಗಳಲ್ಲಿ ಮಾಡಿದೆ. ದಿನಕ್ಕೆ ಮೂರೂರು ಶಿಫ್ಟ್ಗಳು. ಮೂರಕ್ಕೂ ಅವರೇ ನಿರ್ದೇಶಕರು.

ಹಾಡು ಕಡೆ ಹಾಡು, ಇನ್ನೊಂದು ಕಡೆ ಫೈಟು, ಮತ್ತೂಂದು ಕಡೆ ದೃಶ್ಯ ... ಹೀಗೆ ಸತತ ಕೆಲಸ. ಆಗಿನ ಕಾಲಕ್ಕೆ ಪೋಷಕ ಪಾತ್ರಗಳಿಗೂ ಪ್ರಾಮುಖ್ಯತೆ ಇರೋದು. ಭಾರ್ಗವ, ವಿಜಯ್‌, ವಿ. ಸೋಮಶೇಖರ್‌, ಡಿ. ರಾಜೇಂದ್ರ ಬಾಬುರಂತಹ ನಿರ್ದೇಶಕರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಈಗ ಸ್ಥಿತಿ ಸಂಪೂರ್ಣ ಬದಲಾಗಿದೆ. ಈಗ ನಿರ್ದೇಶಕರ್ಯಾರು ಅನ್ನೋದೇ ನಮಗೆ ಗೊತ್ತಿರಲ್ಲ.

ಪ್ರೊಡಕ್ಷನ್‌ ಮ್ಯಾನೇಜರ್‌ ಫೋನ್‌ ಮಾಡಿ ಡೇಟ್‌ ಬುಕ್‌ ಮಾಡುತ್ತಾರೆ. ಇನ್ನು ಶೂಟಿಂಗ್‌ ಸ್ಪಾಟ್‌ಗೆ ಹೋದರೆ, ಅಲ್ಲಿ ನಿರ್ದೇಶಕರು ಬಂದು ಒಂದು ದೃಶ್ಯ ಹೇಳಿ, ನೀವು ಮಾಡಿ ಅಂತ ಹೊರಟು ಹೋಗುತ್ತಾರೆ. ಏನಾದರೂ ಸಲಹೆಗಳನ್ನ ಕೊಟ್ಟರೆ, "ಅದು ನಮಗೆ ಗೊತ್ತು ಬಿಡಿ' ಅಂತ ಹೇಳುತ್ತಾರೆ. ಹಾಗಾಗಿ ನಮ್ಮ ಕೆಲಸ ನಾವು ಮಾಡಿಕೊಂಡು ವಾಪಸ್ಸು ಬಂದುಬಿಡುತ್ತೇನೆ. ಕೆತ್ತು ಅಂದರೆ ಕೆತ್ತು, ಮೆತ್ತು ಎಂದರೆ ಮೆತ್ತು ... ಅಷ್ಟೇ ಆಗಿದೆ ಈಗ. Be a Roman, while you are in Rome ಅಂತಾರಲ್ಲ. ಹಾಗೇ ಆಗೋಗಿದೆ ಇದೆ.

ಇಸ್ಪೀಟ್‌ ನೋಡದೆ ಯಾವ ಕಾಲವಾಯೊ ಗೊತ್ತಿಲ್ಲ ...: ಇನ್ನು ಶೂಟಿಂಗ್‌ ವಾತಾವರಣ ಸಾಕಷ್ಟು ಬದಲಾಗಿದೆ. ಮುಂಚೆ ತಿಂಗಳಲ್ಲಿ 25 ದಿನ ಶೂಟಿಂಗ ಇರೋದು. ಬೆಳಗ್ಗಿನಿಂದ ರಾತ್ರಿಯವರೆಗೂ ಸತತವಾಗಿ ಚಿತ್ರೀಕರಣ ನಡೆಯೋದು. ಮನೆಯವರ ಜೊತೆಗೆ ಸ್ವಲ್ಪ ಸಮಯ ಕಳೆಯುವುದು ಬಿಟ್ಟರೆ, ಮಿಕ್ಕಂತೆ ಸಿನಿಮಾದವರೇ ನಮ್ಮ ಫ್ಯಾಮಿಲಿಯಾಗಿದ್ದರು.

ಎಲ್ಲರೂ ಜೊತೆಗೆ ಕೂತು ಹರಟೆ ಹೊಡೆಯುತ್ತಾ, ಪುಸ್ತಕ ಓದುತ್ತಾ, ಅಭಿನಯಿಸುವಾಗ ಒಬ್ಬರಿಗೊಬ್ಬರು ಸಲಹೆ ಕೊಡುತ್ತಾ, ಇಸ್ಪೀಟ್‌ ಆಡುತ್ತಾ ಇರುತ್ತಿದ್ದೆವು. ಈಗ ಇಸ್ಪೀಟ್‌ ನೋಡದೆ ಯಾವ ಕಾಲವಾಯೊ ಗೊತ್ತಿಲ್ಲ. ಬಹುಶಃ "ಬುಲ್‌ಬುಲ್‌' ಚಿತ್ರದಲ್ಲಿ ಇಸ್ಪೀಟ್‌ ಆಡೋದನ್ನ ನೋಡಿದ್ದು ಅನಿಸುತ್ತೆ. ಅದು ಬಿಟ್ಟರೆ, ಈಗ ಎಲ್ಲರೂ ತಮ್ಮ ಕೆಲಸ ಮುಗಿದ ಮೇಲೆ ಕ್ಯಾರಾವಾನ್‌ಗೆ ಹೋಗಿ ಕುಳಿತುಬಿಡುತ್ತಾರೆ.

ಕ್ಯಾರಾವಾನ್‌ನಲ್ಲಿ ಒಬ್ಬನೇ ಕೂರೋದಕ್ಕಿಂತ ಇನ್ನೊಂದು ದೊಡ್ಡ ಹಿಂಸೆ ಇಲ್ಲ. ಬರೀ ಕಾರಾವಾನ್‌ ಒಂದೇ ಅಲ್ಲ, ಪರಸ್ಪರ ಒಡನಾಟಗಳೇ ಕಡಿಮೆಯಾಗಿದೆ. ಮುಂಚೆ ಮುಖ್ಯಮಂತ್ರಿ ಚಂದ್ರು ಅವರ ಮನೆಗೆ ಊಟ-ತಿಂಡಿಗೆ ಹೋಗುತ್ತಿದ್ವಿ. ಅವರ ಮನೆಯಲ್ಲಿ ತಿಂದ ರುಚಿಯಾದ ರಾಗಿ ಇಡ್ಲಿ, ನಾನು ಬೇರೆ ಎಲ್ಲೂ ತಿಂದಿಲ್ಲ. ವಿಷ್ಣುವರ್ಧನ್‌ ಅವರು ಫೋನ್‌ ಮಾಡಿ ಮನೆಗೆ ಕರೆಸಿ ಕಾಯಿ ದೋಸೆ ತಿನ್ನಿಸೋರು. ಬಿ. ಸರೋಜಾದೇವಿ ಅವರು ಅವರೇ ಅಡುಗೆ ಮಾಡಿ ಊಡ ಬಡಿಸೋರು. ಒಂಥರಾ ಒಂದೇ ಕುಟುಂಬದವರ ತರಹ ಇದ್ದವರು ನಾವು. ಈಗ ಆ ಸಂಬಂಧಗಳೆಲ್ಲಾ ಕಡಿಮೆಯಾಗುತ್ತಿವೆ.

ಮಟನ್‌ ಚಾಪ್ಸ್‌ ಮಾಡಿ ಅಂದಿದ್ದರಂತೆ ಡಾ. ರಾಜ್‌: ನಟನೆ, ನಿರ್ದೇಶನದ ಜೊತೆಗೆ ಅಡುಗೆ ಕಾರ್ಯಕ್ರಮಗಳಿಗೂ ಚಂದ್ರು ಬಹಳ ಫೇಮಸ್ಸು. ಹಲವು ಚಾನಲ್‌ಗ‌ಳಲ್ಲಿ ಪ್ರಸಾರವಾದ "ನಳಪಾಕ', "ರಸಪಾಕ', "ಬೊಂಬಾಟ್‌ ಭೋಜನ' ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವರು ಅವರು. "ಅಡುಗೆ ಕಾರ್ಯಕ್ರಮ ಮಾಡಿ ಮಾಡಿ, ನಾನೊಬ್ಬ ನಟ ಅನ್ನೋದೇ ಮರೆತು ಹೋಗುವಂತ ಪರಿಸ್ಥಿತಿ ಇತ್ತು.

ಯಾರೇ ಜನ ಸಿಕ್ಕರೂ ನಟನೆ ಬಗ್ಗೆ ಮಾತಾಡುತ್ತಲೇ ಇರಲಿಲ್ಲ. ಎಲ್ಲರೂ ಅಡುಗೆಯ ಬಗ್ಗೆಯೇ ಮಾತಾಡೋರು. ಹೀಗೆ We identity crisis ಎದುರಾಗಿದ್ದರಿಂದ ಅಡುಗೆ ಕಾರ್ಯಕ್ರಮಗಳಿಂದ ದೂರವಾದೆ. ಆ ಕಾರ್ಯಕ್ರಮಗಳು ಪ್ರಸಾರವಾಗುವ ಸಂದರ್ಭದಲ್ಲಿ ಅದೆಷ್ಟೋ ಜನ ಮನೆಯ ನಂಬರ್‌ ಪಡೆದು, ಫೋನು ಮಾಡೋರು. ಯಾವ್ಯಾವುದೋ ಅಡುಗೆಯ ರೆಸಿಪಿ ಕೇಳ್ಳೋರು. ಬರೀ ಇಲ್ಲಷ್ಟೇ ಅಲ್ಲ, ಬೇರೆ ದೇಶಗಳಿಗೂ ಹೋಗಿ ಅಡುಗೆ ಕಾರ್ಯಕ್ರಮ ಮಾಡಿದ್ದಿದೆ.

ಬೇರೆ ದೇಶಗಳಲ್ಲಿನ ಕನ್ನಡಿಗರ ಮನೆಗೆ ಹೋಗಿ, ಚಿತ್ರೀಕರಣ ಮಾಡಿದ್ದೇನೆ. ಒಮ್ಮೆ ಒಂದು ಅಡುಗೆ ಕಾರ್ಯಕ್ರಮ ಮಾಡುವಾಗ, ಡಾ. ರಾಜಕುಮಾರ್‌ ಅವರು ಮಟನ್‌ ಚಾಪ್ಸ್‌ ಮಾಡಿ ಎಂದು ಸಲಹೆ ನೀಡಿದ್ದರು. ಅದು ನನಗೆ ಬರೋಲ್ಲ ಅಂತ ಹೇಳಿದಾಗ, ಯೋಚನೆ ಮಾಡಬೇಡಿ, ನಾನು ಹೇಳಿಕೊಡ್ತೀನಿ ಅಂದಿದ್ದರು. ಇಂತಹ ಘಟನೆಗಳನ್ನ ಮರೆಯೋಕೆ ಸಾಧ್ಯವೇ ಇಲ್ಲ' ಎನ್ನುತ್ತಾರೆ ಚಂದ್ರು.

ಬರಹ: ಚೇತನ್‌ ನಾಡಿಗೇರ್‌


Trending videos

Back to Top