CONNECT WITH US  

ಶಿವಣ್ಣ ದ್ರೋಣಾವತಾರ

ರೂಪತಾರಾ

"ಟಗರು ಟಗರು ಮತ್ತು ಟಗರು' ಈ ವರ್ಷ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಲಾಭ ಮಾಡಿದ ಸ್ಟಾರ್‌ ಸಿನಿಮಾ ಯಾವುದು ಎಂದು ಗಾಂಧಿನಗರದಲ್ಲಿ ನಿಂತು ಕೇಳಿದರೆ ಆ ಕಡೆ ಈ ಕಡೆ, ಇನ್ನೊಂದು ಕಡೆ ... ಹೀಗೆ ಎಲ್ಲಾ ಕಡೆಗಳಿಂದಲೂ ಕೇಳಿಬರುವ ಉತ್ತರ "ಟಗರು'. ಶಿವರಾಜಕುಮಾರ್‌ ಅಭಿನಯದ "ಟಗರು' ಚಿತ್ರ ಆರಂಭವಾದ ದಿನದಿಂದಲೂ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿತು. ಅದರಲ್ಲೂ ಆ ಚಿತ್ರದ ಟ್ರೇಲರ್‌, ಸಾಂಗ್‌ ಬಿಡುಗಡೆಯಾದ ನಂತರವಂತೂ ಸಿನಿಮಾದ ಕ್ರೇಜ್‌ ಡಬಲ್‌ ಆಯಿತು.

ಅದರಂತೆ ಸಿನಿಮಾ ಕೂಡಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡು ಅದ್ಧೂರಿಯಾಗಿ ಶತದಿನ ಆಚರಿಸಿದೆ. ಈ ಮೂಲಕ ಶಿವರಾಜಕುಮಾರ್‌ ಅವರ ಗೆಲುವಿನ ಪಯಣ ಮುಂದುವರಿದಿದೆ. ಕಳೆದ ವರ್ಷದ ಕೊನೆಯಲ್ಲಿ ತೆರೆಕಂಡಿದ್ದ "ಮಫ್ತಿ' ಸಿನಿಮಾ ಕೂಡಾ ಶಿವಣ್ಣನಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. "ಭೈರತಿ ರಣಗಲ್‌' ಪಾತ್ರದ ಮೂಲಕ ಶಿವಣ್ಣ ಮಿಂಚಿದ್ದರು. ಅದರ ಬೆನ್ನಲ್ಲೇ ಬಂದ "ಟಗರು' ಚಿತ್ರದಲ್ಲೂ ಶಿವಣ್ಣ ಅವರ ಖಡಕ್‌ ಲುಕ್‌ ಮುಂದುವರಿದಿತ್ತು. "ಟಗರು ಶಿವ' ಎಂಬ ಪಾತ್ರದ ಮೂಲಕ ಅಭಿಮಾನಿಗಳನ್ನು ಶಿವಣ್ಣ ರಂಜಿಸಿದ್ದರು. 

ಸಹಜವಾಗಿಯೇ ಯಾವುದೇ ಒಬ್ಬ ನಟನ ಒಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಾಗ, ಅಭಿಮಾನಿಗಳು ಆ ನಟನಿಂದ ಮತ್ತದೇ ಜಾನರ್‌ನ ಸಿನಿಮಾವನ್ನು ಎದುರು ನೋಡುತ್ತಿರುತ್ತಾರೆ. ಶಿವಣ್ಣ ಅಭಿಮಾನಿಗಳು ಕೂಡಾ ಅದರಿಂದ ಹೊರತಾಗಿರಲಿಲ್ಲ. "ಟಗರು' ನಂತರ ಮುಂದೇನು ಎಂದು ಯೋಚಿಸುತ್ತಿದ್ದಾಗ ಸೆಟ್ಟೇರಿದ ಮತ್ತೂಂದು ಸಿನಿಮಾ "ದ್ರೋಣ'. ಈ ಹಿಂದೆ ಶಿವರಾಜಕುಮಾರ್‌ "ಹರಿಹರ' ಎಂಬ ಸಿನಿಮಾ ಮಾಡುತ್ತಾರೆಂದು ಹೇಳಲಾಗಿತ್ತು.

ಆದರೆ, ನಂತರ ಆ ಶೀರ್ಷಿಕೆ ಬದಲಾಗುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಈಗ "ದ್ರೋಣ' ಎಂಬ ಟೈಟಲ್‌ನಡಿ ಸಿನಿಮಾ ಮುಹೂರ್ತ ನಡೆದಿದೆ. ಪ್ರಮೋದ್‌ ಚಕ್ರವರ್ತಿ ಈ ಸಿನಿಮಾದ ನಿರ್ದೇಶಕರು. ಈಗಾಗಲೇ ಚಿತ್ರದ ಫೋಟೋಶೂಟ್‌ ಕೂಡಾ ನಡೆದುಹೋಗಿದೆ. ಚಿತ್ರದಲ್ಲಿ ಶಿವಣ್ಣ ಅವರ ಗೆಟಪ್‌ ನೋಡಿದವರಿಗೆ ಇದೊಂದು ಪಕ್ಕಾ ಕ್ಲಾಸ್‌ ಸಿನಿಮಾದಂತೆ ಕಾಣುತ್ತದೆ. ಹಾಗಂತ ಶಿವಣ್ಣ ಅವರ ಮಾಸ್‌ ಅಭಿಮಾನಿಗಳು ಬೇಸರಮಾಡಿಕೊಳ್ಳುವ ಅಗತ್ಯವಿಲ್ಲ. ಅವರಿಗಾಗಿಯೇ ನಿರ್ದೇಶಕರು ಒಂದಷ್ಟು ಟ್ರ್ಯಾಕ್‌ ಇಟ್ಟಿದ್ದಾರೆ.

ಕನ್ನಡ ಶಾಲೆ ಉಳಿಸುವತ್ತ ದ್ರೋಣ: ಶಿವರಾಜಕುಮಾರ್‌ ಅವರು ಕ್ಲಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವುದಕ್ಕೂ "ದ್ರೋಣ' ಕಥೆಗೂ ಸಂಬಂಧವಿದೆ. ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ಶಿವರಾಜಕುಮಾರ್‌ ಅವರು ಶಿಕ್ಷಕರಾಗಿ ಸರ್ಕಾರಿ ಶಾಲಾ ಶಿಕ್ಷಕರಾಗಿ ನಟಿಸುತ್ತಿದ್ದಾರೆ. ಚಿತ್ರತಂಡ ಮೊದಲು ಅನೌನ್ಸ್‌ ಮಾಡಿದ "ಹರಿಹರ' ಚಿತ್ರದ ಕಥೆಗೂ "ದ್ರೋಣ' ಕಥೆಗೂ ಯಾವುದೇ ಸಂಬಂಧವಿಲ್ಲ. "ದ್ರೋಣ'ಗಾಗಿ ಪ್ರಮೋದ್‌ ಬೇರೇನೇ ಕಥೆ ಮಾಡಿಕೊಂಡಿದ್ದಾರೆ.

"ದ್ರೋಣ' ಚಿತ್ರ ಸರ್ಕಾರಿ ಶಾಲೆಯ ಅಂಶವನ್ನಿಟ್ಟುಕೊಂಡು ಸಾಗಲಿದೆಯಂತೆ. ಸರ್ಕಾರಿ ಶಾಲೆಗಳು ಯಾಕಾಗಿ ಮುಚ್ಚುತ್ತಿವೆ, ಅದರ ಹಿಂದಿನ ಕಾರಣವೇನು, ಜೊತೆಗೆ ಮಧ್ಯಮ ವರ್ಗದವರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಎದುರಿಸುವ ತೊಂದರೆಗಳು ... ಇಂತಹ ಅಂಶಗಳೊಂದಿಗೆ ಚಿತ್ರ ಸಾಗುತ್ತದೆಯಂತೆ. ಶಿವಣ್ಣ ಅಭಿಮಾನಿಗಳು ಬಯಸುವ ಮಾಸ್‌ ಅಂಶಗಳು ಕೂಡಾ ಈ ಸಿನಿಮಾದಲ್ಲಿದ್ದು, ಅಭಿಮಾನಿಗಳು ಇಷ್ಟಪಡುತ್ತಾರೆಂಬ ನಂಬಿಕೆ ಚಿತ್ರತಂಡಕ್ಕಿದೆ.  

ಜುಲೈ ಮೊದಲ ವಾರದಿಂದ ಚಿತ್ರೀಕರಣ ನಡೆಯಲಿದೆ. ಈ ಚಿತ್ರದಲ್ಲಿ  ಇನಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಲಯಾಳಂ, ತಮಿಳಿನಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಇನಿಯಾ "ದ್ರೋಣ'ನ ಜೋಡಿ. ಉಳಿದಂತೆ ಸ್ವಾತಿ ಶರ್ಮ, ರಂಗಾಯಣ ರಘು, ವಿ ಮನೋಹರ್‌, ಸಾಧುಕೋಕಿಲ, ಬಾಬು ಹಿರಣ್ಣಯ್ಯ, ಶಂಕರ್‌ ರಾವ್‌, ವಿಜಯಕಿರಣ್‌, ರೇಖಾದಾಸ್‌, ಪ್ರಕಾಶ್‌ ಹೆಗ್ಗೊàಡು, ಆನಂದ್‌ ಮುಂತಾದವರಿ¨ªಾರೆ. ಚಿತ್ರಕ್ಕೆ ಜಗದೀಶ್‌ ವಾಲಿ ಛಾಯಾಗ್ರಹಣ, ರಾಮ್‌ಕ್ರಿಶ್‌ ಸಂಗೀತವಿದೆ. 

ಸಾಲು ಸಾಲು ಸಿನಿಮಾ: ಶಿವರಾಜಕುಮಾರ್‌ ಅಂದಿನಿಂದ ಇಂದಿನವರೆಗೂ ಯಾವತ್ತೂ ಖಾಲಿ ಕೂತಿದ್ದಾಗಲೀ, ಸುಮ್ಮನೆ ಶೂಟಿಂಗ್‌ಗೆ ಗ್ಯಾಪ್‌ ಕೊಟ್ಟಿದ್ದಾಗಲೀ ಇಲ್ಲ. ಚಿತ್ರತಂಡದ ಸಮಸ್ಯೆಯಿಂದ ಚಿತ್ರೀಕರಣ ತಡವಾಗಿರಬಹುದೇ ಹೊರತು, ಶಿವಣ್ಣನಿಂದ ಆದ ಉದಾಹರಣೆಯಿಲ್ಲ. ಅದೇ ಕಾರಣದಿಂದ ಅವರ ಕೈ ತುಂಬಾ ಸಿನಿಮಾಗಳಿರುತ್ತವೆ. ಸದ್ಯ ಶಿವರಾಜಕುಮಾರ್‌ ನಟಿಸಿರುವ "ದಿ ವಿಲನ್‌' ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಈ ವರ್ಷಾಂತ್ಯದೊಳಗೆ ತೆರೆಗೆ ಬರಲಿದೆ.

ಸುದೀಪ್‌ ಹಾಗೂ ಶಿವರಾಜಕುಮಾರ್‌ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾವಿದು. ಇಲ್ಲೂ ಶಿವಣ್ಣ ಗೆಟಪ್‌ ಭಿನ್ನವಾಗಿದೆ. ಇನ್ನು, "ಕವಚ' ಸಿನಿಮಾದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ. ಸುಮಾರು 14 ವರ್ಷಗಳ ನಂತರ "ಕವಚ' ಮೂಲಕ ಶಿವಣ್ಣ ರೀಮೇಕ್‌ನಲ್ಲಿ ನಟಿಸಿದ್ದಾರೆ. ಮಲಯಾಳಂನ "ಒಪ್ಪಂ' ಸಿನಿಮಾದ ರೀಮೇಕ್‌ ಆಗಿರುವ "ಕವಚ'ವನ್ನು ಶಿವಣ್ಣ ತುಂಬಾನೇ ಇಷ್ಟಪಟ್ಟಿದ್ದು, ಈ ಸಿನಿಮಾದಲ್ಲಿ ಅವರು ಅಂಧನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತ ಪಕ್ಕಾ ಶಿವಣ್ಣ ಅವರ ಮಾಸ್‌ ಅಭಿಮಾನಿಗಳಿಗಾಗಿ ಇನ್ನೊಂದು ಸಿನಿಮಾವೂ ತಯಾರಾಗುತ್ತಿದೆ. ಅದು "ರುಸ್ತುಂ'. ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಇಲ್ಲೂ ಶಿವಣ್ಣ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಇನ್ನೊಂದಿಷ್ಟು ಸಿನಿಮಾಗಳು ಶಿವಣ್ಣ ಬತ್ತಳಿಕೆಯಲ್ಲಿವೆ. ಈ ನಡುವೆಯೇ ಶಿವಣ್ಣ ಮುಂದಿನ ವರ್ಷ ದ್ವಾರಕೀಶ್‌ ಅವರ ಬ್ಯಾನರ್‌ನ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದಾರೆ. "ನಾವು ಮತ್ತು ದ್ವಾರಕೀಶ್‌ ಕುಟುಂಬದವರು ಚೆನ್ನೈನಿಂದ ಯಾವುದೇ ಬೇಧ-ಭಾವ ಇಲ್ಲದೆ ಒಟ್ಟಿಗೆ ಬೆಳೆದವರು.

ದ್ವಾರಕೀಶ್‌ ಅವರು ಚಿತ್ರಕ್ಕೆ ಯಾವತ್ತೂ ದ್ರೋಹ ಮಾಡಿಲ್ಲ. ಹಾಗೆಯೇ ಖರ್ಚು ಮಾಡುವುದಕ್ಕೆ ಕೇರ್‌ ಮಾಡಿಲ್ಲ. ಅವರ ಸಂಸ್ಥೆಯ ಚಿತ್ರವೊಂದರಲ್ಲಿ ನಟಿಸಬೇಕು ಎಂಬ ಪ್ರಯತ್ನ ಕೆಲವು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ, ಕಾರಣಾಂತರಗಳಿಂದ ಅದು ಮುಂದಕ್ಕೆ ಹೋಗುತ್ತಿದೆ. ಮುಂದಿನ ವರ್ಷ (2019) ಅವರ ನಿರ್ಮಾಣದ ಚಿತ್ರದಲ್ಲಿ ನಟಿಸುವುದು ಗ್ಯಾರಂಟಿ. ನಾನೆಷ್ಟೇ ಬಿಝಿ ಇದ್ದರೂ, ಕಿವಿ ಹಿಂಡಿ ಮಾಡು ಅಂತ ಹೇಳುವ ಅಧಿಕಾರ ಅವರಿಗಿದೆ' ಎನ್ನುವ ಮೂಲಕ ಹೊಸ ಚಿತ್ರದ ಸುಳಿವು ನೀಡಿದ್ದಾರೆ ಶಿವಣ್ಣ. 


Trending videos

Back to Top