CONNECT WITH US  

ಹೆಸರು ಅದೇ; ಭಾಗ ಬೇರೆ: Part II

ರೂಪತಾರಾ

ಕನ್ನಡದಲ್ಲಿ ಹಳೇ ಚಿತ್ರಗಳ ಶೀರ್ಷಿಕೆ ಮರು ಬಳಕೆಯಾಗುತ್ತಿರುವುದು ಹೊಸತೇನಲ್ಲ. ಈಗಾಗಲೇ ಯಶಸ್ವಿ ಚಿತ್ರಗಳ ಶೀರ್ಷಿಕೆ ಇಟ್ಟುಕೊಂಡು ಹಲವರು ಚಿತ್ರ ಮಾಡಿದ್ದುಂಟು. ಹಾಗಂತ, "ಎರಡನೇ ಸಲ' ಬಳಕೆಯಾದ ಶೀರ್ಷಿಕೆ ಚಿತ್ರಗಳು ಗೆಲುವು ಕಂಡಿವೆಯಾ? ಉತ್ತರಿಸೋದು ಕಷ್ಟ. ಇಲ್ಲಿ ಯಶಸ್ವಿ ಚಿತ್ರಗಳ ಶೀರ್ಷಿಕೆ ಮರುಬಳಕೆ ಮಾಡಿದ್ದೇ "ದೊಡ್ಡ' ಗೆಲುವು!  ಹಳೇ ಚಿತ್ರಗಳ ಶೀರ್ಷಿಕೆ ಮರು ಬಳಕೆಯಾಗಿರುವುದಷ್ಟೇ ಅಲ್ಲ, ಹಲವು ಚಿತ್ರಗಳ ಶೀರ್ಷಿಕೆಗಳ ಮುಂದುವರೆದ ಭಾಗವೆಂಬಂತೆ ಬಿತ್ತರಿಸಿರುವುದುಂಟು.

ಆದರೆ, ಆ "ಭಾಗ-2' ಶೀರ್ಷಿಕೆವುಳ್ಳ ಚಿತ್ರಕ್ಕೂ ಮೊದಲ ಚಿತ್ರಕ್ಕೂ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ. ಅಲ್ಲಿ ಸಂಬಂಧ ಇರೋದು, ಕೇವಲ ಹಳೆಯ ಶೀರ್ಷಿಕೆಯಷ್ಟೇ ... ಒಂದು ಚಿತ್ರಕ್ಕೆ ಶೀರ್ಷಿಕೆಯೇ ಆಕರ್ಷಣೆ. ಈಗೀಗ ಕನ್ನಡದಲ್ಲಿ ಸಾಕಷ್ಟು ಹೊಸಬರ ಹೊಸತನದ ಚಿತ್ರಗಳು ಬರುತ್ತಿವೆ. ಆ ಮೂಲಕ ಒಂದಷ್ಟು ನಿರೀಕ್ಷೆಯೂ ಹೆಚ್ಚಿದೆ. ಈಗಂತೂ ಹೊಸಬರು ಹಳೇ ಚಿತ್ರಗಳ ಶೀರ್ಷಿಕೆಗಳಿಗೆ ಮಾರು ಹೋಗುತ್ತಿರುವುದು ಹೊಸ ಬೆಳವಣಿಗೆ.

ಹಾಗೊಮ್ಮೆ ಲೆಕ್ಕ ಹಾಕಿದರೆ, ಸುಮಾರು ಮೂವತ್ತಕ್ಕೂ ಹೆಚ್ಚು ಹೊಸಬರ ಚಿತ್ರಗಳು ಹಳೆಯ ಚಿತ್ರಗಳ ಶೀರ್ಷಿಕೆಯನ್ನೇ ಇಟ್ಟುಕೊಂಡು ಬಂದಿವೆ. ಬರುತ್ತಲೂ ಇವೆ, ಅದರಲ್ಲೂ ಸ್ಟಾರ್‌ ನಟರ ಚಿತ್ರಗಳ ಶೀರ್ಷಿಕೆಗಳೇ ರಿಪೀಟ್‌ ಆಗುತ್ತಿವೆ ಅಥವಾ ಆ ಹೆಸರುಗಳ ಮುಂದೆ 2 ಎಂದು ಸೇರಿಸಲಾಗಿರುತ್ತದೆ. ಹಾಗಾದರೆ, ಇದು ಹಳೆಯ ಚಿತ್ರದ ಮುಂದುವರೆದ ಭಾಗವಾ ಎಂದರೆ, ಖಂಡಿತಾ ಅದಕ್ಕೂ ಇದಕ್ಕೂ ಸಂಬಂಧವಿರುವುದಿಲ್ಲ. ಈ ಎರಡೂ ಚಿತ್ರಗಳಿಗೆ ಒಂದೇ ಒಂದು ಕೊಂಡಿ ಎಂದರೆ ಅದು ಹೆಸರು ಮಾತ್ರ.

ಇದಕ್ಕೆ ಇತ್ತೀಚಿನ ಉದಾಹರಣೆ "ರ್‍ಯಾಂಬೋ 2'. ಈ ಹಿಂದೆ "ರ್‍ಯಾಂಬೋ' ಹೆಸರಿನ ಚಿತ್ರದಲ್ಲಿ ಶರಣ್‌ ಅಭಿನಯಿಸಿದ್ದರು ಮತ್ತು ಆ ಚಿತ್ರ ಹಿಟ್‌ ಆಗಿತ್ತು. ಹಾಗಾಗಿ "ರ್‍ಯಾಂಬೋ 2' ಎಂಬ ಹೆಸರನ್ನು ಹೊಸ ಚಿತ್ರಕ್ಕಿಟ್ಟಾಗ, "ರ್‍ಯಾಂಬೋ'ಗೂ ಈ ಚಿತ್ರಕ್ಕೂ ಏನೋ ಸಂಬಂಧವಿರಬಹುದು ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ, ಎರಡೂ ಚಿತ್ರಗಳನ್ನು ನೋಡಿದವರಿಗೆ, ಅಲ್ಲಿ ಶರಣ್‌ ಬಿಟ್ಟರೆ ಮತ್ತೆ ಯಾವ ಕಾಮನ್‌ ಅಂಶಗಳೂ ಕಾಣುವುದಿಲ್ಲ.

ಈ ಕಥೆಗೆ ಹೆಸರು ಸಿಗಲಿಲ್ಲ ಎಂಬ ಕಾರಣಕ್ಕೋ ಅಥವಾ ಹಳೆದ ಜನಪ್ರಿಯ ಹೆಸರನ್ನು ಇಟ್ಟರೆ, ಚಿತ್ರ ಗೆಲ್ಲಬಹುದು ಎಂಬ ಕಾರಣಕ್ಕೋ, ಚಿತ್ರಕ್ಕೆ "ರ್‍ಯಾಂಬೋ 2' ಎಂದು ಹೆಸರಿಡಲಾಯಿತು. ವಿಶೇಷವೆಂದರೆ, "ರ್‍ಯಾಂಬೋ 2' ಸಹ ಯಶಸ್ವಿ ಪ್ರದರ್ಶನ ಕಂಡು, ನಿರ್ಮಾಪಕರಿಗೆ ದೊಡ್ಡ ಲಾಭ ತಂದುಕೊಟ್ಟಿದೆ. ಈ ಗೆಲುವಿನಿಂದಾಗಿ, ಶರಣ್‌ ಅವರ ಹೊಸ ಚಿತ್ರಕ್ಕೆ "ವಿಕ್ಟರಿ 2' ಎಂದು ಹೆಸರಿಡಲಾಗಿದೆ. ಶರಣ್‌ ಅವರ "ವಿಕ್ಟರಿ' ಸಹ ಹಿಟ್‌ ಆಗಿದ್ದು ನೆನಪಿದೆ ತಾನೇ?

ಈ ಪಾರ್ಟ್‌ 2 ಎಂಬ ಹೆಸರಿಡುವ ಟ್ರೆಂಡು ಇಂದು ನಿನ್ನೆಯದಲ್ಲ. ಬಹುಶಃ ಭಾರತೀಯ ಚಿತ್ರರಂಗದಲ್ಲೇ ಈ ಟ್ರೆಂಡ್‌ ಶುರುವಾಗಿದ್ದು ಕನ್ನಡದಲ್ಲೇ. 1988ರಲ್ಲಿ ಬಿಡುಗಡೆಯಾದ "ಸಾಂಗ್ಲಿಯಾನ' ಚಿತ್ರದಿಂದ ಪ್ರೇರೇಪಿತವಾದ ಅದೇ ತಂಡ, 1990ರಲ್ಲಿ "ಸಾಂಗ್ಲಿಯಾನ 2' ಎಂಬ ಚಿತ್ರ ಬಿಡುಗಡೆ ಮಾಡಿತು. ಎರಡೂ ಚಿತ್ರಗಳು ಪೊಲೀಸ್‌ ಅಧಿಕಾರಿ ಎಚ್‌.ಟಿ. ಸಾಂಗ್ಲಿಯಾನ ಅವರ ಸಾಹಸಗಳನ್ನು ಸಾರುವಂತಹ ಚಿತ್ರಗಳಾಗಿದ್ದವು.

ಆ ನಂತರ "ಸಾಂಗ್ಲಿಯಾನ 3' ಸಹ ಬಿಡುಗಡೆಯಾಯಿತು. ಮೊದಲೆರೆಡು ಚಿತ್ರಗಳಲ್ಲಿ ಸಾಂಗ್ಲಿಯಾನ ಅವರ ಪಾತ್ರವನ್ನು ಶಂಕರ್‌ನಾಗ್‌ ಅವರು ನಿರ್ವಹಿಸಿದರೆ, ಮೂರನೆಯ ಭಾಗದಲ್ಲಿ ಸಾಂಗ್ಲಿಯಾನ ಆಗಿ ದೇವರಾಜ್‌ ನಟಿಸಿದ್ದರು. ಆ ನಂತರ "ಗೋಲ್‌ಮಾಲ್‌ ರಾಧಾಕೃಷ್ಣ' ಯಶಸ್ಸಿನಿಂದ "ಗೋಲ್‌ಮಾಲ್‌ 2' ಬಿಡುಗಡೆಯಾಯಿತು. ಇದಾಗಿ ಕೆಲವು ವರ್ಷಗಳ ನಂತರ "ಗಂಧದ ಗುಡಿ-2' ಚಿತ್ರ ಸಹ ಬಿಡುಗಡೆಯಾಯಿತು. ಈ ಮೂರೂ ಚಿತ್ರಗಳು ಮೂಲ ಚಿತ್ರಗಳಷ್ಟು ಯಶಸ್ವಿಯಾಗಲಿಲ್ಲ. ಆ ನಂತರ ಈ ಪಾರ್ಟ್‌ 2ಗಳು ಕಡಿಮೆಯಾಗಿದ್ದವು

ಕೆಲವು ವರ್ಷಗಳಿಂದ ಮತ್ತೆ ಈ ಪಾರ್ಟ್‌ 2 ಕನ್ನಡ ಚಿತ್ರರಂಗದಲ್ಲಿ ಶುರುವಾಗಿದೆ. ಆದಿತ್ಯ ಅಭಿನಯದಲ್ಲಿ "ಡೆಡ್ಲಿ ಸೋಮ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು ರವಿ ಶ್ರೀವತ್ಸ. "ಡೆಡ್ಲಿ ಸೋಮ' ಗೆದ್ದ ನಂತರ "ಡೆಡ್ಲಿ 2' ಎಂಬ ಇನ್ನೊಂದು ಚಿತ್ರವನ್ನು ಅವರು ಮಾಡಿದರು. ಆದರೆ, ಈ ಚಿತ್ರ ಆದಿತ್ಯಗೆ ಮರುಜೀವ ಕೊಡುವಲ್ಲಿ ಸೋತಿತು. ಶಿವರಾಜ್‌ಕುಮಾರ್‌ ಅಭಿನಯದ "ಸಂಯುಕ್ತ' ಬಗ್ಗೆ ಎಲ್ಲರಿಗೂ ಗೊತ್ತು.

ಆ ಚಿತ್ರಕ್ಕೆ ಸಂಬಂಧವಿಲ್ಲದಿದ್ದರೂ ಚೇತನ್‌ ಚಂದ್ರ, ನೇಹಾಪಾಟೀಲ್‌, ಐಶ್ವರ್ಯ ಸಿಂಧೋಗಿ ಅಭಿನಯದಲ್ಲಿ "ಸಂಯುಕ್ತ 2' ಎಂಬ ಚಿತ್ರದ ನಿರ್ಮಾಣವಾಯಿತು. ದರ್ಶನ್‌ "ಕರಿಯ' ಅಭಿನಯದಿಂದ ಪ್ರೇರೇಪಣೆಗೊಂಡು, ಆ ಚಿತ್ರದ ನಿರ್ಮಾಪಕರಾದ ಆನೇಕಲ್‌ ಬಾಲರಾಜ್‌ ಅವರು ತಮ್ಮ ಮಗ ಸಂತೋಷ್‌ ಅಭಿನಯದಲ್ಲಿ "ಕರಿಯ 2' ಎಂಬ ಚಿತ್ರ ಮಾಡಿದರು. ಇಲ್ಲಿ ಹೆಸರೊಂದೇ ರಿಪೀಟ್‌. ರೌಡಿಸಂ ಕಥೆ ಬಿಟ್ಟರೆ ಬೇರೇನೂ ಇಲ್ಲ.

ಅದೇ ತರಹ, ವಿಷ್ಣುವರ್ಧನ್‌ ಅಭಿನಯದ "ನಿಶ್ಯಬ್ಧ'ಕ್ಕೂ ಇತ್ತೀಚೆಗೆ ತೆರೆಕಂಡ ಹೊಸಬರ "ನಿಶ್ಯಬ್ಧ 2'ಗೂ ಸಂಬಂಧವಿಲ್ಲ. "ದಂಡುಪಾಳ್ಯ'ದ ಯಶಸ್ಸಿನಿಂದಾಗಿ "ಪಾರ್ಟ್‌ 2' ಮತ್ತು "ಪಾರ್ಟ್‌ 3'ಗಳು ಸಹ ಬಂದವು. ವಿಶೇಷವೆಂದರೆ, ಮೂರೂ ಚಿತ್ರಗಳನ್ನು ಶ್ರೀನಿವಾಸರಾಜು ನಿರ್ದೇಶಿಸಿದ್ದು. ಈ ಮಧ್ಯೆ, "ದಂಡುಪಾಳ್ಯ 2' ನಿರ್ಮಿಸಿದ್ದ ನಿರ್ಮಾಪಕ ವೆಂಕಟ್‌, ಈಗ "ದಂಡುಪಾಳ್ಯ 4' ಎಂಬ ಚಿತ್ರ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇದೆ.

ಇನ್ನು ಈ ಚಿತ್ರಗಳ ಪಟ್ಟಿಗೆ ಇನ್ನಷ್ಟು ಚಿತ್ರಗಳನ್ನು ಸೇರಿಸಬಹುದು. "ಮುಂಗಾರು ಮಳೆ' ಮತ್ತು "ದುನಿಯಾ' ಕನ್ನಡ ಚಿತ್ರರಂಗದ ದಿಕ್ಕು ಬದಲಿಸಿದ ಚಿತ್ರಗಳೆಂದರೆ ತಪ್ಪಿಲ್ಲ. ಅದೇ ಶೀರ್ಷಿಕೆ ಮುಂದುವರೆಸಿ, "ಮುಂಗಾರು ಮಳೆ 2', "ದುನಿಯಾ 2' ಚಿತ್ರ ಶುರುವಾದವು. ಈ ಪೈಕಿ "ದುನಿಯಾ 2' ಬರಬೇಕಿದೆ. "ಕೆಂಪೇಗೌಡ' ಈಗ ಕೋಮಲ್‌ ಅಭಿನಯದಲ್ಲಿ "ಕೆಂಪೇಗೌಡ 2' ಆಗಿ ಬರಲು ಸಜ್ಜಾಗುತ್ತಿದೆ. "ಆಪ್ತಮಿತ್ರ'ದ ನಂತರ "ಆಪ್ತಮಿತ್ರ 2' ಎಂಬ ಇನ್ನೊಂದು ಚಿತ್ರ ಬರುತ್ತಿರುವ ಸುದ್ದಿಯಿದೆ.

ಇಷ್ಟಕ್ಕೂ ಹಳೇ ಶೀರ್ಷಿಕೆಗಳ ಮುಂದುವರೆದ ಭಾಗ ಅಂತ ಇಟ್ಟುಕೊಂಡು ಚಿತ್ರಗಳು ನಿರ್ಮಾಣವಾಗುತ್ತಿದ್ದರೂ, "ರ್‍ಯಾಂಬೋ 2' ಬಿಟ್ಟರೆ ಬೇರೆ ಯಾವ ಚಿತ್ರ ಸಹ ಗೆದ್ದ ಉದಾಹರಣೆ ಇಲ್ಲ. ಆದರೂ ಹಳೆಯ ಶೀರ್ಷಿಕೆಗಳ ಮುಂದುವರೆದ ಭಾಗ ಬರುತ್ತಿರುವುದಕ್ಕೆ ಹಳೆಯ ಯಶಸ್ಸಿನ ಚಿತ್ರಗಳ ಮಹಿಮೆ ಕಾರಣ. ಸಿನಿಮಾಗಳ ಕಥೆ ಬೇರೆ, ಅವುಗಳ ಯೋಚನೆ, ಯೋಜನೆ ಬೇರೆ ರೀತಿಯಾಗಿದ್ದರೂ, ಶೀರ್ಷಿಕೆ ಮಾತ್ರ ಹಾಗೊಮ್ಮೆ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸುವುದಂತೂ ಹೌದು. ಇಲ್ಲಿ ಹಳೆಯ ಶೀರ್ಷಿಕೆ ಇಟ್ಟುಕೊಂಡಿದ್ದಷ್ಟೇ ಲಾಭ.

ಒನ್ಸ್‌ ಅಗೇನ್‌ ಅದೇ ಹೆಸರುಗಳು!: ಹಾಗೊಮ್ಮೆ ಗಮನಿಸಿದರೆ, ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಶಂಕರ್‌ನಾಗ್‌, ಅಂಬರೀಶ್‌, ರವಿಚಂದ್ರನ್‌, ಶಿವರಾಜಕುಮಾರ್‌, ದರ್ಶನ್‌ ಮತ್ತು ಸುದೀಪ್‌ ಸೇರಿದಂತೆ ಕನ್ನಡದ ಕೆಲ ನಟರ ಹಳೆಯ ಚಿತ್ರಗಳ ಶೀರ್ಷಿಕೆಗಳನ್ನೇ ಇಟ್ಟುಕೊಂಡು ಹೊಸಬರು ಚಿತ್ರ ಮಾಡಿರುವುದುಂಟು. ಆದರೆ, ಗೆಲುವಿನ ಲೆಕ್ಕ ಮಾತ್ರ ಇಲ್ಲ. ಡಾ.ರಾಜ್‌ಕುಮಾರ್‌, ಮಂಜುಳ ಅಭಿನಯದ "ಎರಡು ಕನಸು' ಎವರ್‌ಗ್ರೀನ್‌ ಸಿನಿಮಾ.

ಇದೇ ಶೀರ್ಷಿಕೆಯಡಿ, ವಿಜಯರಾಘವೇಂದ್ರ ಅಭಿನಯದ "ಎರಡು ಕನಸು' ಚಿತ್ರ ರಿಲೀಸ್‌ ಆಯ್ತು. ಆದರೆ, ಇಲ್ಲಿ ಪ್ಲಸ್‌ ಆಗಿದ್ದು, ರಾಜ್‌ಕುಮಾರ್‌ ಸಿನಿಮಾದ "ಎರಡು ಕನಸು' ಶೀರ್ಷಿಕೆ ಮಾತ್ರ. ಚಿತ್ರವೆಲ್ಲೂ ಸದ್ದು ಮಾಡಲಿಲ್ಲ. ಹೀಗೆ ಬಂದು ಹಾಗೆ ಹೋಯ್ತು. ವಿಷ್ಣುವರ್ಧನ್‌ ನಟಿಸಿದ "ನಾಗರಹಾವು' ಶೀರ್ಷಿಕೆ ಎರಡು ಸಲ ಬಳಕೆಯಾಗಿದೆ. ಉಪೇಂದ್ರ ಈ ಹಿಂದೆ "ನಾಗರಹಾವು' ಮಾಡಿದ್ದರು. ಅದು ಹೇಳಿಕೊಳ್ಳುವ ಸಿನಿಮಾ ಎನಿಸಿಕೊಳ್ಳಲಿಲ್ಲ.

ಅದಾದ ನಂತರ ರಮ್ಯಾ, ದಿಗಂತ್‌ ಅಭಿನಯದಲ್ಲೂ "ನಾಗರಹಾವು' ಶೀರ್ಷಿಕೆ ಮರುಬಳಸಿ ಗ್ರಾಫಿಕ್ಸ್‌ನಲ್ಲೊಂದು ಚಿತ್ರ ಮಾಡಲಾಯಿತು. ಅದೂ ಕೂಡ "ಹೆಡೆ' ಬಿಚ್ಚಲಿಲ್ಲ. ಶಂಕರ್‌ನಾಗ್‌ ಅಭಿನಯದ "ಆ್ಯಕ್ಸಿಡೆಂಟ್‌' ಶೀರ್ಷಿಕೆಯನ್ನು ರಮೇಶ್‌ ಅರವಿಂದ್‌ ನಟಿಸಿದ ಚಿತ್ರಕ್ಕೂ ಇಡಲಾಯಿತು. ನಿರೀಕ್ಷೆ ಇತ್ತಾದರೂ, ಅದು ದೊಡ್ಡ "ಅಪಘಾತ'ಕ್ಕೀಡಾಯಿತು. ವಿಜಯರಾಘವೇಂದ್ರ, ಶ್ರೀ ಮುರಳಿ ಸಹೋದರರ ಅಭಿನಯದಲ್ಲಿ ಬಂದ "ಮಿಂಚಿನ ಓಟ' ಕೂಡ ವೇಗ ಮಿತಿ ಉಳಿಸಿಕೊಳ್ಳಲಿಲ್ಲ.

ರವಿಚಂದ್ರನ್‌ ಅಭಿನಯದ "ಸಿಪಾಯಿ' ಈಗಲೂ ಫೇವರೇಟ್‌. ಅದೇ ಶೀರ್ಷಿಕೆಯಡಿ ಮಹೇಶ್‌ ಸಿದ್ಧಾರ್ಥ ಎಂಬ ಹೊಸ ನಟ ಚಿತ್ರ ಮಾಡಿದರೂ, ಆ "ಸಿಪಾಯಿ'ಯನ್ನು ಯಾರೂ ಪ್ರೀತಿಸಲಿಲ್ಲ. ನೀನಾಸಂ ಸತೀಶ್‌ "ಅಂಜದ ಗಂಡು' ಹೆಸರಿಟ್ಟು ಚಿತ್ರ ಮಾಡಿದರು. ಹೆಸರಷ್ಟೇ ಸುದ್ದಿಯಾಯ್ತು ವಿನಃ, ಚಿತ್ರಮಂದಿರದಲ್ಲಿ ಆ ಚಿತ್ರ ಸದ್ದು ಮಾಡಲಿಲ್ಲ. ಇನ್ನು, ಮನೋಜ್‌ ಮತ್ತು ನಿಕ್ಕಿ ಗಾಲಾಣಿ ಅಭಿನಯದ "ಓ ಪ್ರೇಮವೇ' ಕೂಡ ರವಿಚಂದ್ರನ್‌ ಅಭಿನಯದ ಚಿತ್ರದ ಹೆಸರೇ.

"ಟೈಗರ್‌' ಮೂಲಕ ಪ್ರಭಾಕರ್‌ ಟೈಗರ್‌ ಪ್ರಭಾಕರ್‌ ಎನಿಸಿಕೊಂಡರು ಅದೇ ಶೀರ್ಷಿಕೆಯಡಿ ಪ್ರದೀಪ್‌ "ಟೈಗರ್‌' ಚಿತ್ರ ಮಾಡಿ ಸೋಲುಂಡರು. ರಾಘವೇಂದ್ರ ರಾಜ್‌ಕುಮಾರ್‌, ಮಾಲಾಶ್ರೀ ಅಭಿನಯದಲ್ಲಿ ಬಂದ "ನಂಜುಂಡಿ ಕಲ್ಯಾಣ' ದೊಡ್ಡ ಯಶಸ್ಸು ಪಡೆದಿತ್ತು. ಅದೇ "ನಂಜುಂಡಿ ಕಲ್ಯಾಣ' ಎಂಬ ಶೀರ್ಷಿಕೆ ಇಟ್ಟುಕೊಂಡ ಚಿತ್ರದಲ್ಲಿ ತನುಷ್‌ ಹಾಗೂ ಶ್ರಾವ್ಯಾ ಅಭಿನಯಿಸಿದ್ದಾರೆ. ನಂಜುಂಡಿಯ ಮೋಡಿ ಈ ಬಾರಿ ವಕೌಟ್‌ ಆಗಲಿಲ್ಲ.  

"ಕೌರವ', "ಒನ್ಸ್‌ ಮೋರ್‌ ಕೌರವ'ನಾಗಿ ಬಂದರೂ ಅಬ್ಬರಿಸಲಿಲ್ಲ. "ಭೂತಯ್ಯನ ಮಗ ಅಯ್ಯು' ಚಿತ್ರದ ಶೀರ್ಷಿಕೆಗೆ ಹತ್ತಿರ ಎಂಬಂತೆ, "ಭೂತಯ್ಯನ ಮೊಮ್ಮಗ ಅಯ್ಯು'ವಾಗಿ ಬಂದು ಸೋತಿತು. ಆದರೂ, ಆ ಕಥೆಗೂ ಈ ಕಥೆಗೂ ಸಂಬಂಧವಿಲ್ಲ. ಅಂದು "ಶಂಖನಾದ' ಬಂದಿತ್ತು, ಇತ್ತೀಚೆಗೆ ಬಂದ "ಶಂಖನಾದ' ಹೇಳಹೆಸರಿಲ್ಲದಂತೆ ಮಾಯವಾಗಿದೆ. ಕಾಶೀನಾಥ್‌ ಅವರ ಯಶಸ್ವಿ "ಅನುಭವ' ಶೀರ್ಷಿಕೆಗೆ ಈಗ "ಹೊಸ ಅನುಭವ' ಎಂಬ ಹೆಸರಲ್ಲಿ ಬಿಡುಗಡೆಯಾಗಿದೆ.

ಬರಹ: ವಿಜಯ್‌ ಭರಮಸಾಗರ


Trending videos

Back to Top