CONNECT WITH US  

ಡಿಂಪಲ್‌ ಹುಡುಗಿಯ ಸಿಂಪಲ್‌ ಸ್ಟೋರಿ

ರೂಪತಾರಾ

ಐದು ವರ್ಷ, ಒಂಭತ್ತು ಸಿನಿಮಾ ... ಇದು ರಚಿತಾ ರಾಮ್‌ ಅವರ ಐದು ವರ್ಷದ ಗ್ರಾಫ್ ಎನ್ನಬಹುದು. ದರ್ಶನ್‌ ನಾಯಕರಾಗಿರುವ "ಬುಲ್‌ಬುಲ್‌' ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿಕೊಟ್ಟ ರಚಿತಾ ರಾಮ್‌, ಚಿತ್ರರಂಗದಲ್ಲಿ ಐದು ವರ್ಷ ಪೂರೈಸಿದ್ದಾರೆ. ಈ ಐದು ವರ್ಷದಲ್ಲಿ ಆಕೆ ನಾಯಕಿಯಾಗಿ ನಟಿಸಿದ್ದು ಕೇವಲ ಒಂಭತ್ತೇ ಸಿನಿಮಾದಲ್ಲಿ.

ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್‌ ನಟರ ಜೊತೆ ನಟಿಸಿರುವ ಖ್ಯಾತಿ ರಚಿತಾಗಿದೆ. ಜೊತೆಗೆ ಮತ್ತೂಂದಿಷ್ಟು ಸ್ಟಾರ್‌ ಸಿನಿಮಾಗಳು ಕೂಡಾ ಡಿಂಪಲ್‌ ಹುಡುಗಿಯ ಕೈಯಲ್ಲಿದೆ. ಸದ್ಯ "ಅಯೋಗ್ಯ', "ನಟ ಸಾರ್ವಭೌಮ', "ಸೀತಾರಾಮ ಕಲ್ಯಾಣ' ಹಾಗೂ "ಐ ಲವ್‌ ಯೂ' ಸಿನಿಮಾಗಳಲ್ಲಿ ಬಿಝಿಯಾಗಿರುವ ರಚಿತಾ ತಮ್ಮ ಐದು ವರ್ಷದ ಜರ್ನಿ, ಅನುಭವ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ...  

* ರಚಿತಾ ಅವರು ತುಂಬಾ ಬಿಝಿ ಅನ್ಸುತ್ತೆ?
ಹೌದು, ದೇವರ ದಯೆಯಿಂದ ತುಂಬಾ ಬಿಝಿ ಇದ್ದೀನಿ. ಕೈ ತುಂಬಾ ಕೆಲಸ ಇದೆ. ನಾನು ಕೆಲಸನಾ ತುಂಬಾ ಇಷ್ಟಪಡುವುದರಿಂದ ಖುಷಿಯಾಗಿ ಮಾಡುತ್ತಿದ್ದೇನೆ. ಸತತವಾಗಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೇನೆ. ಅತ್ತ ಕಡೆ ಕಿರುತೆರೆ, ನನ್ನದೇ ಆದ ಒಂದಷ್ಟು ಫ್ರೆಂಡ್ಸ್‌, ಅಪ್ಪ-ಅಮ್ಮನ ಜೊತೆ ಹರಟೆ ... ಒಟ್ಟಾಗಿ ಲೈಫ್ ಸೂಪರ್‌ ಆಗಿದೆ. 

* ನಿಮ್ಮ "ಸ್ಟಾರ್‌ಯಾನ' ಮುಂದುವರಿದೆ. ಹೇಗನಿಸ್ತಾ ಇದೆ?
ಹೌದು, ತುಂಬಾ ಖುಷಿ ಇದೆ. ಚಿತ್ರರಂಗಕ್ಕೆ ಬಂದು ಐದು ವರ್ಷ ಆಗಿದೆ. ಇದು ಆರನೇ ವರ್ಷ. ಖುಷಿಯ ವಿಚಾರವೆಂದರೆ ಐದು ವರ್ಷದ ಹಿಂದೆ ಜರ್ನಿ ಆರಂಭಿಸಿದಾಗ ಹೇಗಿದ್ದೇನೋ ಇವತ್ತಿಗೂ ಅದೇ ರೀತಿ ಸಾಗಿದೆ. ಎಲ್ಲೂ ಡೌನ್‌ಫಾಲ್‌ ಆಗಿಲ್ಲ. ದೇವರ ಆಶೀರ್ವಾದ, ಜನರ ಪ್ರೀತಿ, ಮೀಡಿಯಾದವರ ಸಹಾಕರದಿಂದ ಇಷ್ಟು ವರ್ಷದ ಜರ್ನಿ ತುಂಬಾ ಚೆನ್ನಾಗಿ ನಡೆದುಕೊಂಡು ಬಂದಿದೆ. "ಬುಲ್‌ಬುಲ್‌' ಮೂಲಕ ಸ್ಟಾರ್‌ ಸಿನಿಮಾದಿಂದ ನನ್ನ ಯಾನ ಆರಂಭವಾಗಿದ್ದು, ಇವತ್ತಿಗೂ ಅದೇ ತರಹ ನಡೆದುಕೊಂಡು ಬಂದಿದೆ. ಆವತ್ತಿನಿಂದ ಇವತ್ತಿನವರೆಗೂ ದೊಡ್ಡ ಸಿನಿಮಾ, ದೊಡ್ಡ ತಂಡದ ಜೊತೆಗೆ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ವರ್ಷದ ಮೊದಲ ಆರು ತಿಂಗಳು ಮುಗಿದಿದೆ. ಒಂದು ಸಿನಿಮಾ ಬಿಡುಗಡೆಯಾಗಿದೆ. ಇನ್ನು ಮೂರು ನಡೆಯುತ್ತಿದೆ. ಎಲ್ಲಾ ಪ್ರಾಜೆಕ್ಟ್ಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. 

* ಐದು ವರ್ಷದ ಜರ್ನಿಯಲ್ಲಿ ನೀವು ಕಲಿತಿದ್ದೇನು?
ಐದು ವರ್ಷ ಆಗಿದೆ. ಸಾಕಷ್ಟು ಸಿನಿಮಾ ಮಾಡಿದ್ದೇನೆ. ಆದರೆ, ಮೊದಲ ಸಿನಿಮಾ ಮಾಡುವಾಗ ಇದ್ದಂತಹ ಮುಗ್ಧತೆಯನ್ನು ಇವತ್ತಿಗೂ ಉಳಿಸಿಕೊಂಡಿದ್ದೇನೆ. ಇವತ್ತು ನಾನು ಇಷ್ಟೊಂದು ಬೋಲ್ಡ್‌ ಆಗಿ ಮಾತನಾಡುತ್ತೇನೆ ಎಂದರೆ ಅದು ಚಿತ್ರರಂಗದಲ್ಲಿ ನಾನು ಪಡೆದ ಅನುಭವದಿಂದ. ತುಂಬಾ ಬ್ಲ್ಯಾಂಕ್‌ ಆಗಿ ಚಿತ್ರರಂಗಕ್ಕೆ ಬಂದೆ. ಚಿತ್ರರಂಗ ಹೊಸ ಅನುಭವ, ಪಾಠಗಳನ್ನು ನೀಡಿತು. ಯಾರಲ್ಲಿ ಹೇಗೆ ವರ್ತಿಸಬೇಕು, ಒಂದು ತಂಡವಾಗಿ ಹೇಗಿರಬೇಕು ಎಂಬುದನ್ನು ಕಲಿತೆ. ಈ ಐದು ವರ್ಷದಲ್ಲಿ ಸಾಕಷ್ಟು ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ. ಇಷ್ಟು ವರ್ಷದ ಜರ್ನಿಯಲ್ಲಿ ಶೇ 80ರಷ್ಟು ಎಲ್ಲವೂ ಪಾಸಿಟಿವ್‌ ಆಗಿಯೇ ನಡೆದಿದೆ. 

* ರಚಿತಾ ಬೇಡಿಕೆಯ ಹಿಂದಿನ ಗುಟ್ಟೇನು?
ಇಲ್ಲಿ ನಿಮ್ಮ ಕೆಲಸ ಹಾಗೂ ವ್ಯಕ್ತಿತ್ವ ಮುಖ್ಯವಾಗುತ್ತದೆ. ನೀವು ಸ್ಟಾರ್‌ ಸಿನಿಮಾದಲ್ಲಿ ನಟಿಸುತ್ತೀರಿ ಎಂದಾಕ್ಷಣ ಬೇರೆ ಸಿನಿಮಾಗಳಿಂದ ನಿಮಗೆ ಅವಕಾಶ ಬರಲ್ಲ. ನೀವು ಚಿತ್ರೀಕರಣದ ಸಮಯದಲ್ಲಿ ಹೇಗಿರುತ್ತೀರಿ ಎಂಬುದು ಕೂಡಾ ಮುಖ್ಯವಾಗುತ್ತದೆ. ನಟಿಯಾಗಿ ನಾನು ತೆರೆಮೇಲೆ ಎಷ್ಟೇ ಅಟಿಟ್ಯೂಡ್‌ ಇರುವ, ಧಿಮಾಕಿನ ಪಾತ್ರ ಮಾಡಬಹುದು. ಆದರೆ, ತೆರೆಹಿಂದೆ ನನ್ನನ್ನು ರಚಿತಾಳಾಗಿಯೇ ನೋಡುತ್ತಾರೆ, ರಚಿತಾಳ ವ್ಯಕ್ತಿತ್ವವೇ ಕೌಂಟ್‌ ಆಗುತ್ತದೆ. ನೀವು ಮತ್ತೂಬ್ಬರಲ್ಲಿ ಹೇಗೆ ಮಾತನಾಡುತ್ತೀರೋ ಅದೇ ರೀತಿ ಅವರು ನಿಮ್ಮನ್ನು ಮಾತನಾಡಿಸುತ್ತಾರೆ. ನಾವು ಗಾಂಚಾಲಿ, ದೌಲತ್‌ ಮಾಡಿದ್ರೆ ಅವರು ಹಂಗೆ ಮಾಡ್ತಾರೆ. ಆದರೆ, ನಾನು ಈವರೆಗೆ ಯಾರಲ್ಲೂ ಕೆಟ್ಟದಾಗಿ ನಡೆದುಕೊಂಡಿಲ್ಲ. ನಿರ್ದೇಶಕರ, ತಂತ್ರಜ್ಞರ ಕಲ್ಪನೆ ಏನಿದೆ ಅದಕ್ಕೆ ಜೀವ ತುಂಬಲು ಪ್ರಯತ್ನಿಸಿದ್ದೇನೆ. ಚಿತ್ರರಂಗದಲ್ಲಿ ನಿಮ್ಮ ವರ್ತನೆ ಕೂಡಾ ಮುಖ್ಯವಾಗುತ್ತದೆ. ನನಗೆ ನಗು, ಅಳು, ಕೋಪ ... ಮೂರೂ ಬೇಗನೇ ಬರುತ್ತದೆ. ಕೋಪ, ಅಳುವನ್ನು ಕಂಟ್ರೋಲ್‌ ಮಾಡುತ್ತಿದ್ದೇನೆ.

* ಈ ಐದು ವರ್ಷದಲ್ಲಿ ನೀವು ನಾಯಕಿಯಾಗಿ ಕೇವಲ 9 ಸಿನಿಮಾಗಳಲ್ಲಷ್ಟೇ ನಟಿಸಿದ್ದೀರಿ. ಕಡಿಮೆಯಾಗಿಲ್ವಾ?
ನನಗೆ ಆ ಬಗ್ಗೆ ಖುಷಿ ಇದೆ. ಯಾಕೆ ಹೇಳಿ, ಈ ಐದು ವರ್ಷದಲ್ಲಿ ನಾನು ಮಾಡಿರುವ ಅಷ್ಟೂ ಸಿನಿಮಾಗಳ ಹೆಸರುಗಳು ಜನರಲ್ಲಿ ಬಾಯಲ್ಲಿದೆ. "ಬುಲ್‌ ಬುಲ್‌' ನಿಂದ ಹಿಡಿದು ಮೊನ್ನೆ ಮೊನ್ನೆ ತೆರೆಕಂಡ "ಜಾನಿ ಜಾನಿ ಯೆಸ್‌ ಪಪ್ಪಾ' ಸಿನಿಮಾವರೆಗೂ ಜನ ಹೆಸರು ಹೇಳುತ್ತಾರೆಂದರೆ ಅದಕ್ಕೆ ಕಾರಣ ನನ್ನ ಸಿನಿಮಾ ಆಯ್ಕೆ. ನಾನು ಗುಣಮಟ್ಟಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ. 100 ಸಿನಿಮಾ ಮಾಡುವ ಬದಲು 10 ಸಿನಿಮಾ ಮಾಡಿದರೂ ಜನ ಅದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆ ನಿಟ್ಟಿನಲ್ಲೇ ಸಿನಿಮಾಗಳ ಆಯ್ಕೆ ನಡೆಯುತ್ತದೆ. 

* ನೀವು ತೆಲುಗಿಗೆ ಹೋಗುವ ಸುದ್ದಿ ಆಗಾಗ ಕೇಳಿಬರುತ್ತಿರುತ್ತದೆ. ಯಾಕೆ?
ಸತ್ಯವಾಗಲೂ ನನಗೆ ತೆಲುಗಿನಿಂದ ಅವಕಾಶಗಳು ಬಂದಿವೆ. ಒಳ್ಳೊಳ್ಳೆ ನಿರ್ದೇಶಕರ ಸಿನಿಮಾದಿಂದ ಕರೆ ಬಂದಿದೆ. ಆದರೆ, ಅದೇ ಸಮಯಕ್ಕೆ ಇಲ್ಲೂ ಒಳ್ಳೆಯ, ನಿರೀಕ್ಷಿತ ಸಿನಿಮಾಗಳಿಂದ ಅವಕಾಶಗಳು ಸಿಕ್ಕವು. ಯಾವುದಾದರೂ ಒಂದನ್ನು ಒಪ್ಪಿಕೊಳ್ಳಬೇಕೆಂದು, ತೆಲುಗು ಕಡೆ ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ. ಮುಂದೊಂದು ದಿನ ತೆಲುಗಿಗೆ ಹೋಗಿಯೇ ಹೋಗುತ್ತೇನೆ. ಸೌತ್‌ ಇಂಡಿಯನ್‌ ಹೀರೋಯಿನ್‌ ಎಂದು ಕರೆಸಿಕೊಳ್ಳಲು ನನಗೆ ಆಸೆ ಇದೆ. 

* ಒಂದು ರೌಂಡ್‌ ಎಲ್ಲಾ ಸ್ಟಾರ್‌ಗಳ ಜೊತೆ ನಟಿಸಿದ್ದೀರಿ. ಮುಂದಾ?
ಮತ್ತೂಂದು ರೌಂಡ್‌ ... (ನಗು). ಇದು ದುರಾಸೆ ಅಲ್ಲ. ಮತ್ತೂಮ್ಮೆ ಅವರ ಜೊತೆಯೇ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಅವಕಾಶವಿದೆ. ಸಹಜವಾಗಿಯೇ ಒಂದು ಕೆಮಿಸ್ಟ್ರಿ ರಿಪೀಟ್‌ ಆದಾಗ ಜನರಲ್ಲೂ ನಿರೀಕ್ಷೆ ಇರುತ್ತದೆ. ಮುಂದೆ ಮತ್ತೂಮ್ಮೆ ಆ ನಟರ ಜೊತೆ ನಟಿಸುವ ಆಸೆ ಇದೆ. 

* ಕೈಯಲ್ಲಿರುವ ಸಿನಿಮಾಗಳ ಬಗ್ಗೆ ಹೇಳಿ?
"ಅಯೋಗ್ಯ' ಚಿತ್ರದಲ್ಲಿ ಮಂಡ್ಯ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಪಕ್ಕಾ ಮಂಡ್ಯ ಕನ್ನಡ ಸಂಭಾಷಣೆ ಇರುವ ಸಿನಿಮಾ. ಪಾತ್ರ ತುಂಬಾ ಮಜಾವಾಗಿದೆ. "ಸೀತಾರಾಂ ಕಲ್ಯಾಣ' ಔಟ್‌ ಅಂಡ್‌ ಔಟ್‌ ಫ್ಯಾಮಿಲಿ ಸ್ಟೋರಿ. ಇಡೀ ಸಿನಿಮಾ ಇರಿ¤àನಿ. ಪಾತ್ರ ತುಂಬಾನೇ ಚೆನ್ನಾಗಿದೆ. ಇನ್ನು "ನಟ ಸಾರ್ವಭೌಮ'ದಲ್ಲಿ ತುಂಬಾ ಸಖತ್‌ ಸ್ಟೈಲಿಶ್‌ ಹುಡುಗಿ. ಹೀರೋ ಭಾವನೆಗಳಿಗೆ ಬೆಲೆ ಕೊಡುವ ಹುಡುಗಿಯಾಗಿ ನನ್ನ ಪಾತ್ರ ಸಾಗಿ ಬರುತ್ತದೆ. ಇನ್ನು, "ಐ ಲವ್‌ ಯೂ' ಪಾತ್ರದ ಬಗ್ಗೆ ಸಖತ್‌ ಎಕ್ಸೆ„ಟ್‌ ಆಗಿದ್ದೇನೆ. ಆ ಪಾತ್ರ ಮಜವಾಗಿದೆ. ಯಾವತ್ತು ಶೂಟಿಂಗ್‌ಗೆ ಹೋಗುತ್ತೇನೋ ಎಂದು ಕಾಯುತ್ತಿದ್ದೇನೆ. ಸಖತ್‌ ಬೋಲ್ಡ್‌ ಪಾತ್ರ. ಇಷ್ಟು ದಿನ ಮಾಡಿದ ಪಾತ್ರ ಒಂದು ಕಡೆಯಾದರೆ, ಆ ಸಿನಿಮಾದ ಪಾತ್ರವೇ ಬೇರೆಯದ್ದಾಗಿ ನಿಲ್ಲುತ್ತದೆ. ಸೆಟ್‌ಗೆ ಬ್ಲ್ಯಾಂಕ್‌ ಆಗಿ ಬರಿ¤àನಿ. ಆ ನಂತರ ನಿಮಗೆ ಯಾವ ತರಹದ ಅಭಿನಯ ಬೇಕೋ ಅದನ್ನು ತೆಗೀರಿ ಎಂದು ನಿರ್ದೇಶಕ ಆರ್‌.ಚಂದ್ರು ಅವರಿಗೆ ಹೇಳಿದ್ದೇನೆ. 

* ಕೆಲವು ಸಿನಿಮಾಗಳಲ್ಲಿ ನಿಮ್ಮ ಹೆಸರು ಕೇಳಿಬರುತ್ತದೆ. ಸಿನಿಮಾ ಶುರುವಾಗುವ ಹೊತ್ತಿಗೆ ನೀವಿರೋದಿಲ್ಲ. ಯಾಕೆ ಈ ಗೊಂದಲ?
ಇದಕ್ಕೆ ನಾನು ಕಾರಣಳಲ್ಲ. ಅದೇ ಕಾರಣದಿಂದ ನಾನು ಸಿನಿಮಾ ಒಪ್ಪಿಕೊಂಡು, ಆ ಸಿನಿಮಾ ಎರಡು ದಿನ ಚಿತ್ರೀಕರಣವಾಗಿ, ನಾವೇ ಮುಂದುವರಿಯುವವರೆಗೆ ಯಾವುದನ್ನು ಇಲ್ಲಿ ನಿಖರವಾಗಿ ಹೇಳ್ಳೋಕ್ಕಾಗಲ್ಲ. ಇನ್ನು, ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿರೋದಿಲ್ಲ. ಒಮ್ಮೆ ಮಾತುಕತೆಯಾದ ಕೂಡಲೇ, "ರಚಿತಾ ಸಿನಿಮಾ ಒಪ್ಪಿಕೊಂಡರಂತೆ' ಎಂದು ಸುದ್ದಿಯಾಗುತ್ತದೆ. ಕೆಲವೊಮ್ಮೆ ಮಿಸ್‌ ಕಮ್ಯುನಿಕೇಶನ್‌ನಿಂದಲೂ ಈ ತರಹ ಆಗುತ್ತದೆ. 

* ಆಗಾಗ ನಿಮ್ಮ ಬಗ್ಗೆ ಗಾಸಿಪ್‌ಗ್ಳು ಕೇಳಿಬರುತ್ತವೆ. ಈ ಸಂದರ್ಭ ಹೇಗಿರುತ್ತದೆ?
ನಿಜ ಹೇಳಬೇಕೆಂದರೆ ತುಂಬಾ ಖುಷಿಯಾಗುತ್ತದೆ. ಏಕೆಂದರೆ, ಏನೇ ಆದರೂ ಅದು ಕೂಡಾ ಒಂದು ಪಬ್ಲಿಸಿಟಿ. ನಾನು ಸಿಂಗಲ್‌ ಆಗಿರುವುದರಿಂದ ನನ್ನ ಸುತ್ತ ನೂರಾರು ಗಾಸಿಪ್‌ಗ್ಳು ಹುಟ್ಟುತ್ತವೆ. ನಾನು ನಟಿಸಿದ ಅಷ್ಟೂ ಹೀರೋಗಳ ಜೊತೆಗೂ ನನಗೆ ಅಫೇರ್‌ ಇದೆ ಎಂದು ಗಾಸಿಪ್‌ ಹಬ್ಬಿಸಿದವರು ಇದ್ದಾರೆ. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ. ನಾನು ಏನೆಂಬುದು ನನ್ನ ಜೊತೆ ಕೆಲಸ ಮಾಡಿದ ತಂಡಕ್ಕೆ ಗೊತ್ತಿದೆ. 

* ಗಾಸಿಪ್‌ ಬಗ್ಗೆ ನಿಮ್ಮ ತಂದೆ ತಾಯಿ ಏನಂತ್ತಾರೆ?
ದೇವರು ನನಗೆ ಒಳ್ಳೆಯ ತಂದೆ-ತಾಯಿಯನ್ನು ಕೊಟ್ಟಿದ್ದಾರೆ. ನನಗೆ ಮೊದಲು ಧೈರ್ಯ ಹೇಳುವವರೇ ಅವರು. ಯಾವುದಕ್ಕೂ ತಲೆ ಕೆಡಿಸ್ಕೋಬೇಡ, ನನಗೆ ನಿನ್ನ ಮೇಲೆ ಧೈರ್ಯ ಇದೆ ಅಂತಾರೆ. ನನಗೆ ಅವರೇ ದೊಡ್ಡ ಶಕ್ತಿ.

* ಕಿರುತೆರೆಯಲ್ಲೂ ಬಿಝಿ ಇದ್ದೀರಿ?
ನಾನು ಕಿರುತೆರೆಯಿಂದ ಬಂದವಳು. ನಾನು ಅದನ್ನು ಯಾವತ್ತೂ ಮರೆಯೋದಿಲ್ಲ. ಸಿನಿಮಾಕ್ಕಿಂತ ಹೆಚ್ಚಾಗಿ ಮನೆ ಮನೆಗೆ ತಲುಪೋದು ಕಿರುತೆರೆ. ಜನರಿಗೆ ನಾವು ಏನು, ಹೇಗೆ, ನಮ್ಮ ವರ್ತನೆ ಹೇಗಿರುತ್ತದೆ ಎಂಬುದು ಜನರಿಗೆ ಗೊತ್ತಾಗೋದು ಕಿರುತೆರೆಯಿಂದ. ಜೊತೆಗೆ ನಾನು ಕಿರುತೆರೆಯ ಕಾರ್ಯಕ್ರಮ ತುಂಬಾ ಎಂಜಾಯ್‌ ಮಾಡುತ್ತೇನೆ. ಮಗು ತರಹ ಕೂತಿರುತ್ತೇನೆ, ಮನಸಾರೆ ನಗುತ್ತೇನೆ. 

* ನಾವೇನು ಪರ್‌ಫಾರ್ಮೆನ್ಸ್‌ ಮಾಡಲ್ವಾ?
ರಚಿತಾ ರಾಮ್‌ಗೆ ಕೆಲವರು, "ನೀವು ಬಿಡಿ ಮೇಡಂ ಸ್ಟಾರ್‌ ನಟಿ, ಅವಕಾಶ ಸಿಗುತ್ತೆ' ಅಂತಾರಂತೆ. ಇದು ಅವರಿಗೆ ತುಂಬಾ ಕಿರಿಕಿರಿ ಅನಿಸುತ್ತದೆ. ಸ್ಟಾರ್‌ ನಟಿಯಾದ ಕೂಡಲೇ ಪರ್‌ಫಾರ್ಮೆನ್ಸ್‌ಘ ಇಲ್ಲದೇ ಇದ್ದರೆ ಅವಕಾಶ ಸಿಗುತ್ತಾ ಎನ್ನುವುದು ರಚಿತಾ ಪ್ರಶ್ನೆ. "ಸ್ಟಾರ್‌ ನಟಿ ಎಂದ ಕೂಡಲೇ ಅವಕಾಶ ಸಿಗಲ್ಲ. ಪರ್‌ಫಾರ್ಮೆನ್ಸ್‌ ಕೂಡಾ ಮುಖ್ಯ ಆಗುತ್ತೆ. ಒಬ್ಬ ಸ್ಟಾರ್‌ ನಟನ ಎದುರು ನಟಿಸಬೇಕಾದರೆ ಕೇವಲ ಗ್ಲಾಮರ್‌, ಲುಕ್‌ ಸಾಕಲ್ವಾ, ನಟನೆಯೂ ಬೇಕು. ಇಲ್ಲವಾದರೆ ನಾವು ಡಮ್ಮಿ ಅನ್ನಿಸಿಬಿಡುತ್ತೇವೆ. ಕೆಲವು ಪಾತ್ರಗಳು ಮೇಲ್ನೋಟಕ್ಕೆ ಏನೂ ಅನಿಸದೇ ಇರಬಹುದು. ಆದರೆ, ಆ ತರಹದ ಪಾತ್ರಗಳಿಗೆ ಎಕ್ಸ್‌ಪ್ರೆಶನ್‌ ಮುಖ್ಯವಾಗುತ್ತದೆ. ಎಕ್ಸ್‌ಪ್ರೆಶನ್‌ನಲ್ಲಿ ಆಟವಾಡಬೇಕಾಗುತ್ತದೆ. ಆದರೆ, ಜನ ಅದನ್ನು ಪರಿಗಣಿಸುವುದಿಲ್ಲ. ಕೇವಲ ಸ್ಟಾರ್‌ ನಟಿ ಎಂಬ ಕಾರಣಕ್ಕೆ ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂದುಕೊಂಡಿದ್ದಾರೆ' ಎಂದು ನೇರವಾಗಿ ಹೇಳುತ್ತಾರೆ ರಚಿತಾ.

ಬರಹ: ರವಿಪ್ರಕಾಶ್‌ ರೈ


Trending videos

Back to Top