CONNECT WITH US  

ನಿಶ್ವಿ‌ಕಾ ಎಂಬ ಕನಸು ಕಂಗಳ ಹುಡುಗಿ

ರೂಪತಾರಾ

ಒಂದೇ ಒಂದು ಸಿನಿಮಾ ಬಿಡುಗಡೆಯಾಗಿಲ್ಲ. ಆಗಲೇ ಕೈಯಲ್ಲಿ ಮೂರು ಸಿನಿಮಾ! ಸಾಮಾನ್ಯವಾಗಿ ಒಂದು ಸಿನಿಮಾ ಮುಗಿಸಿ, ಇನ್ನೊಂದು ಸಿನಿಮಾ ಸಿಗಲಿ ಎಂದು ಎದುರು ನೋಡುವ ನಟಿಯರೇ ಹೆಚ್ಚು. ಅದರಲ್ಲೂ ಚಿತ್ರರಂಗಕ್ಕೆ ಬರುವ ಹೊಸಬರಿಗೆ ಎರಡನೇ ಅವಕಾಶ ಸಿಗೋದೇ ಕಷ್ಟ ಎಂಬ ಸಮಯದಲ್ಲಿ ನಿಶ್ವಿ‌ಕಾ ನಾಯ್ಡು ಎಂಬ ನವನಟಿ ಮಾತ್ರ ಕೈಯಲ್ಲಿ ಮೂರೂರು ಸಿನಿಮಾಗಳನ್ನಿಟ್ಟುಕೊಂಡು ಮುಗುಳ್ನಗುತ್ತಿದ್ದಾರೆ.

ನಿಶ್ವಿ‌ಕಾ ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ನ್ಯೂ ಫೇಸ್‌. ಅನೀಶ್‌ ತೇಜೇಶ್ವರ್‌ ನಾಯಕರಾಗಿರುವ "ವಾಸು ನಾನ್‌ ಪಕ್ಕಾ ಲೋಕಲ್‌' ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ನಿಶ್ವಿ‌ಕಾ ಈಗ, ಚಿರಂಜೀವಿ ಸರ್ಜಾ ನಾಯಕರಾಗಿರುವ "ಅಮ್ಮಾ ಐ ಲವ್‌ ಯೂ' ಹಾಗೂ ನಿರ್ಮಾಪಕ ಕೆ.ಮಂಜು ಮಗ ಲಾಂಚ್‌ ಆಗುತ್ತಿರುವ "ಪಡ್ಡೆಹುಲಿ' ಚಿತ್ರಕ್ಕೂ ನಿಶ್ವಿ‌ಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಈ ಮೂಲಕ ಕನ್ನಡದ ಹುಡುಗಿಯಾಗಿ ಬೇಗನೇ ಬಿಝಿಯಾಗುತ್ತಿದ್ದಾರೆ. ಸಾಮಾನ್ಯವಾಗಿ ಕನ್ನಡದ ನಟಿಯರಿಗೆ ಅದರಲ್ಲೂ ಹೊಸಬರಿಗೆ ಅವಕಾಶ ಕೊಡೋದಿಲ್ಲ. ಪರಭಾಷೆಯಿಂದ ಕರೆತಂದ ನಾಯಕಿಯರಿಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ ಎಂಬ ಮಾತಿದೆ. ಆದರೆ, ಈ ಮಾತು ನಿಶ್ವಿ‌ಕಾಗೆ ಅನ್ವಯಿಸುವುದಿಲ್ಲ. ಆ ಖುಷಿ ನಿಶ್ವಿ‌ಕಾಗೂ ಇದೆ. ಒಟ್ಟು ಮೂರು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿರುವ ನಿಶ್ವಿ‌ಕಾ ಈಗ ಯಾವ ಸಿನಿಮಾ ತನಗೆ ಬ್ರೇಕ್‌ ಕೊಡುತ್ತದೆ ಎಂದು ಕುತೂಹಲದೊಂದಿಗೆ ಎದುರು ನೋಡುತ್ತಿದ್ದಾರೆ. 

ಸಿನಿಮಾ ಕನಸಿನ ಹುಡುಗಿ: ಕೆಲವು ನಟಿಯರು ತಾವು ಸಿನಿಮಾರಂಗಕ್ಕೆ ಬಂದಿದ್ದು ಅಚಾನಕ್‌ ಆಗಿ. ಸಿನಿಮಾ ಕ್ಷೇತ್ರದ ಬಗ್ಗೆ ನಾವು ಕನಸು ಕಂಡಿರಲಿಲ್ಲ, ಅವಕಾಶ ಸಿಕ್ಕಿತು ಬಂದೆವು ಎನ್ನುತ್ತಾರೆ. ಆದರೆ, ನಿಶ್ವಿ‌ಕಾ ಮಾತ್ರ ಸಿನಿಮಾ ನಟಿಯಾಗಬೇಕೆಂಬ ಕನಸಿನೊಂದಿಗೆ ಇದ್ದವರು. ಅವರ ಗುರಿ ಕೂಡಾ ಹೀರೋಯಿನ್‌ ಆಗೋದು ಆಗಿತ್ತಂತೆ. ಹಾಗಂತ ನಿಶ್ವಿ‌ಕಾ ಕುಟುಂಬದ ಯಾರೊಬ್ಬರು ಚಿತ್ರರಂಗದಲ್ಲಿ ಇಲ್ಲ. ನಿಶ್ವಿ‌ಕಾ ಅವರೇ ಮೊದಲ ಎಂಟ್ರಿ.

"ನಾನು ಬೇರೆ ಯಾವ ಕ್ಷೇತ್ರದ ಬಗ್ಗೆಯೂ ಆಲೋಚಿಸಿಲ್ಲ. ನನಗೆ ಸಿನಿಮಾ ಕ್ಷೇತ್ರದಲ್ಲೇ ನನ್ನ ಕೆರಿಯರ್‌ ಶುರು ಆರಂಭಿಸಬೇಕೆಂಬ ಆಸೆ ಇತ್ತು. ಅದರಂತೆ ನಾನು ಆಡಿಷನ್‌ ಕೊಡುತ್ತಿದ್ದೆ. ಆಗ ಸಿಕ್ಕಿದ್ದು "ವಾಸು ನಾನ್‌ ಪಕ್ಕಾ ಲೋಕಲ್‌' ಚಿತ್ರ. ಹೆಸರಿಗೆ ತಕ್ಕಂತೆ ಇದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ. ಪಾತ್ರ ತುಂಬಾ ಚೆನ್ನಾಗಿದೆ' ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ ನಿಶ್ವಿ‌ಕಾ.

ಕ್ಯಾಮರಾ ಮುಂದೆ ನಿಲ್ಲುವ ಮೊದಲು ನಟನೆಯ ತರಬೇತಿ ಪಡೆದರೆ ಕೆರಿಯರ್‌ಗೆ ಸಹಾಯವಾಗುತ್ತದೆಂಬ ಕಾರಣಕ್ಕೆ ನಿಶ್ವಿ‌ಕಾ ಕೂಡಾ ನಟನಾ ತರಬೇತಿ ಪಡೆದಿದ್ದಾರೆ. ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಕೋರ್ಸ್‌ ಮುಗಿಸಿದ ಕೂಡಲೇ ನಿಶ್ವಿ‌ಕಾ ಮುಖ ಮಾಡಿದ್ದು ಮುಂಬೈನತ್ತ. ಅದು ನಟನಾ ತರಬೇತಿಗೆ. ಮುಂಬೈನಲ್ಲಿ ಒಂದು ವರ್ಷ ಆ್ಯಕ್ಟಿಂಗ್‌ ಕೋರ್ಸ್‌ ಕೂಡಾ ಮಾಡಿದ್ದಾರಂತೆ ನಿಶ್ವಿ‌ಕಾ. ಅಂದಹಾಗೆ, ನಿಶ್ವಿ‌ಕಾ ಒಳ್ಳೆಯ ಡ್ಯಾನ್ಸರ್‌ ಕೂಡಾ.

ಸಾಕಷ್ಟು ಶೋಗಳನ್ನು ಕೂಡಾ ನೀಡಿದ್ದಾರಂತೆ. ಅದೇ ಕಾರಣದಿಂದ ಸಿನಿಮಾದಲ್ಲೂ ಅವರಿಗೆ ಡ್ಯಾನ್ಸ್‌ ಎಂದರೆ ಸುಲಭವಾಗಿದೆ. ಎಲ್ಲಾ ಓಕೆ, ಒಮ್ಮೆಲೇ ಮೂರು ಸಿನಿಮಾಗಳು ಹೇಗೆ ಸಿಕ್ಕಿತು ಎಂಬ ಕುತೂಹಲ ಸಹಜಹವಾಗಿಯೇ ಇರುತ್ತದೆ. ಒಂದು ಸಿನಿಮಾದಿಂದ ಮತ್ತೂಂದು, ಮತ್ತೂಂದರಿಂದ ಇನ್ನೊಂದು ಸಿನಿಮಾ ಸಿಕ್ಕಿತು ಎಂಬ ಉತ್ತರ ನಿಶ್ವಿ‌ಕಾರಿಂದ ಬರುತ್ತದೆ. ಮುಂಬೈನಲ್ಲಿ ಕೋರ್ಸ್‌ ಮುಗಿಸಿ ಬಂದ ಕೂಡಲೇ ನಿಶ್ವಿ‌ಕಾಗೆ ಸಿಕ್ಕ ಸಿನಿಮಾ "ವಾಸು ನಾನ್‌ ಪಕ್ಕಾ ಲೋಕಲ್‌'.

ಅದರಲ್ಲಿನ ನಿಶ್ವಿ‌ಕಾ ಪರ್‌ಫಾರ್ಮೆನ್ಸ್‌ ಬಗ್ಗೆ ಚಿತ್ರತಂಡದಿಂದ ಕೇಳಿತಿಳಿದು, "ಅಮ್ಮಾ ಐ ಲವ್‌ ಯೂ' ಸಿನಿಮಾಕ್ಕೆ ನಾಯಕಿ ಹುಡುಕುತ್ತಿದ್ದ ನಿರ್ಮಾಪಕ ಯೋಗೇಶ್‌ ದ್ವಾರಕೀಶ್‌ ತಮ್ಮ ಚಿತ್ರದಲ್ಲಿ ಅವಕಾಶ ಕೊಡುತ್ತಾರೆ. ಈ ಚಿತ್ರದಲ್ಲೂ ನಿಶ್ವಿ‌ಕಾ ಒಳ್ಳೆಯ ಪರ್‌ಫಾರ್ಮೆನ್ಸ್‌ ಕೊಡುತ್ತಾರೆ. ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸುವ ಜೊತೆಗೆ ಚಿತ್ರತಂಡದಿಂದಲೂ ಮೆಚ್ಚುಗೆ ಪಡೆದರು.

ಇತ್ತ ಕಡೆ ಕೆ.ಮಂಜು ಮಗನ "ಪಡ್ಡೆಹುಲಿ' ಸಿನಿಮಾಕ್ಕೆ ನಾಯಕಿಯ ಹುಡುಕಾಟ ನಡೆಸುತ್ತಿದ್ದರು. ಅದೊಂದು ಮಂಜುಗೆ ಸಿಕ್ಕ ಯೋಗೇಶ್‌ ದ್ವಾರಕೀಶ್‌, "ನಮ್‌ ಸಿನಿಮಾ ನಾಯಕಿ ಒಳ್ಳೆಯ ಪರ್‌ಫಾರ್ಮರ್‌. ನಿಮ್ಮ ಸಿನಿಮಾಕ್ಕೆ ಬೇಕಾದ್ರೆ ನೋಡಿ' ಎಂದರಂತೆ. ಅದರಂತೆ ನಿಶ್ವಿ‌ಕಾ "ಪಡ್ಡೆಹುಲಿ'ಗೆ ಆಡಿಷನ್‌ ನೀಡುತ್ತಾರೆ. ಆಡಿಷನ್‌ನಲ್ಲಿ ಪಾಸಾಗುವ ಮೂಲಕ "ಪಡ್ಡೆಹುಲಿ' ತಂಡ ಸೇರಿಕೊಳ್ಳುತ್ತಾರೆ ನಿಶ್ವಿ‌ಕಾ. 

ವಿಭಿನ್ನ ಪಾತ್ರ: ಸಾಮಾನ್ಯವಾಗಿ ಒಂದು ಸಿನಿಮಾ ಬಿಡುಗಡೆಯಾಗಿ ಅದನ್ನು ಜನ ಹೇಗೆ ಸ್ವೀಕರಿಸುತ್ತಾರೆಂಬುದನ್ನು ನೋಡಿಕೊಂಡು ಮುಂದಿನ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಆದರೆ, ನಿಶ್ವಿ‌ಕಾ ಮಾತ್ರ ಬಂದ ಅವಕಾಶಗಳನ್ನು ಒಪ್ಪಿಕೊಳ್ಳುತ್ತಲೇ ಹೋದರು. ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆಂದು ಕಾದರೆ ತನಗೆ ಅವಕಾಶ ಕೈ ತಪ್ಪುತ್ತದೆ ಎಂಬ ಕಾರಣಕ್ಕೋ ಏನೋ ಒಮ್ಮೆಗೇ ಮೂರೂರು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನಿಶ್ವಿ‌ಕಾಗೆ ಯಾವುದೇ ಬೇಸರವಿಲ್ಲ.

"ಅನೇಕರಿಗೆ ಈ ಹುಡುಗಿ ಯಾರು ಎಂಬ ಕುತೂಹಲವಿದೆ. ಏಕೆಂದರೆ ನಾನು ಒಮ್ಮೆಲೇ ಮೂರು ಸಿನಿಮಾಗಳನ್ನು ಕಮಿಟ್‌ ಆಗಿದ್ದಕ್ಕೆ. ಅದೇ ಕುತೂಹಲ ನನಗೂ ಇದೆ, ಜನ ಹೇಗೆ ಸ್ವೀಕರಿಸುತ್ತಾರೆಂದು. ಮೂರು ಸಿನಿಮಾಗಳಲ್ಲೂ ನನ್ನ ಪಾತ್ರ ವಿಭಿನ್ನವಾಗಿದೆ. ಎಲ್ಲೂ ರಿಪೀಟ್‌ ಆಗಿಲ್ಲ. ನಾನು ಕೂಡಾ ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಈಗಾಗಲೇ "ವಾಸು ನಾನ್‌ ಪಕ್ಕಾ ಲೋಕಲ್‌' ಹಾಗೂ "ಅಮ್ಮಾ ಐ ಲವ್‌ ಯೂ' ಚಿತ್ರಗಳು ಬಿಡುಗಡೆಯ ಹಂತಕ್ಕೆ ಬಂದಿವೆ. "ಪಡ್ಡೆಹುಲಿ' ಚಿತ್ರೀಕರಣದಲ್ಲಿದೆ.

"ವಾಸು' ಸಿನಿಮಾದಲ್ಲಿ ನಾನು ಮೆಡಿಕಲ್‌ ಸ್ಟೂಡೆಂಟ್‌. ಬೋಲ್ಡ್‌ ಅಂಡ್‌ ಬಬ್ಲಿ ಪಾತ್ರ. ಇನ್ನು "ಅಮ್ಮಾ ಐ ಲವ್‌ ಯೂ' ಸಿನಿಮಾದಲ್ಲಿ ತುಂಬಾ ಸೆಟಲ್ಡ್‌ ಆಗಿರುವ ಪಾತ್ರ. ಯಾರ ಕೈ ಕೆಳಗೂ ಕೆಲಸ ಮಾಡದೇ ಸ್ವಂತ ಉದ್ಯೋಗ ಮಾಡಬೇಕೆಂದು ಕನಸು ಕಾಣುವ ಪಾತ್ರ. "ಪಡ್ಡೆಹುಲಿ' ಚಿತ್ರದಲ್ಲಿ ಕಾಲೇಜು ಹುಡುಗಿ. ಹೀಗೆ ನನಗೆ ಮೂರು ಸಿನಿಮಾಗಳಲ್ಲೂ ವಿಭಿನ್ನ ಪಾತ್ರ ಸಿಕ್ಕಿದೆ' ಎಂದು ಖುಷಿಯಿಂದ ಹೇಳುತ್ತಾರೆ ನಿಶ್ವಿ‌ಕಾ.

ಸಿನಿಮಾ ತೆರೆಕಂಡ ನಂತರ ಪ್ರೇಕ್ಷಕರು ತನ್ನ ಯಾವ ಪಾತ್ರವನ್ನು ಹೆಚ್ಚು ಇಷ್ಟಪಡುತ್ತಾರೆಂದು ನೋಡಿಕೊಂಡು ಮುಂದೆ ಪಾತ್ರಗಳನ್ನು ಆಯ್ಕೆ ಮಾಡುವುದಾಗಿ ಹೇಳುತ್ತಾರೆ ನಿಶ್ವಿ‌ಕಾ. ಇನ್ನು, ನಿಶ್ವಿ‌ಕಾಗೆ ಈ ಹಿಂದಿನ ಮೂರು ಸಿನಿಮಾಗಳಲ್ಲಿ ಹೆಚ್ಚು ಮಾಡರ್ನ್ ಪಾತ್ರ ಸಿಕ್ಕಿಲ್ಲವಂತೆ. ಮುಂದಿನ ದಿನಗಳಲ್ಲಿ ಮಾಡರ್ನ್ ಪಾತ್ರ ಸಿಕ್ಕರೂ ಮಾಡುವುದಾಗಿ ಹೇಳುತ್ತಾರೆ ನಿಶ್ವಿ‌ಕಾ. ಸದ್ಯ ಕನ್ನಡದಿಂದ ಒಳ್ಳೆಯ ಅವಕಾಶಗಳು ಬರುತ್ತಿರುವುದರಿಂದ ಬೇರೆ ಭಾಷೆಯ ಕಡೆಗೆ ಗಮನಹರಿಸುತ್ತಿಲ್ಲವಂತೆ. 

Trending videos

Back to Top