CONNECT WITH US  

ಮಾಸ್ತಿಗೆ ಬರಹವೇ ಆಸ್ತಿ: ಟಗರು ಹಿಂದಿನ ಪೆನ್ನು ಇವರು

ರೂಪತಾರಾ

ಪೇಪರ್‌ ವರ್ಕ್‌ ಚೆನ್ನಾಗಿ ಆದರೆ ಸಿನಿಮಾವೂ ಚೆನ್ನಾಗಿ ಮೂಡಿಬರುತ್ತದೆ ಎಂಬ ಮಾತಿದೆ. ಸಿನಿಮಂದಿಯ ಭಾಷೆಯಲ್ಲಿ ಪೇಪರ್‌ ವರ್ಕ್‌ ಅಂದರೆ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆ. ಯಾವುದೇ ಒಂದು ಸಿನಿಮಾ ಆರಂಭವಾಗುವ ಮುನ್ನ ಹೆಚ್ಚು ತಲೆಕೆಡಿಸಿಕೊಳ್ಳುವ ಕೆಲಸವಿದೆ. ಕಥೆಗೊಂದು ಪೂರ್ಣ ರೂಪ ಬರೋದು ಇಲ್ಲೇ. ಆ ನಂತರ ನೀವು ಚಿತ್ರೀಕರಣದಲ್ಲಿ ಏನು ಬೇಕಾದರೂ ಆಟವಾಡಬಹುದು. ಆದರೆ, ಚಿತ್ರೀಕರಣಕ್ಕೆ ಹೊರಡುವ ಮೊದಲು ಬರವಣಿಗೆ ಚೆನ್ನಾಗಿ ಮೂಡಿಬರಬೇಕು.

ಅದೇ ಕಾರಣದಿಂದ ಚಿತ್ರವೊಂದಕ್ಕೆ ಒಳ್ಳೆಯ ಬರಹಗಾರ ಕೂಡಾ ಮುಖ್ಯವಾಗುತ್ತದೆ. ಅದೇ ಕಾರಣದಿಂದ ಬಹುತೇಕರು ಸ್ಕ್ರಿಪ್ಟ್ಗೆ, ಬರಹಗಾರನಿಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಸದ್ಯ ಕನ್ನಡ ಚಿತ್ರರಂಗದ ಬರಹಗಾರರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿರುವ ಒಂದು ಹೆಸರೆಂದರೆ ಅದು ಮಾಸ್ತಿ. ಇನ್ನು ಮುಂದುವರಿದು ಹೇಳಬೇಕೆಂದರೆ ಮಾಸ್ತಿ ಮಂಜು. ಈ ವ್ಯಕ್ತಿ ಯಾವ ಸಿನಿಮಾಕ್ಕೆ ಕೆಲಸ ಮಾಡಿದ್ದಾನೆಂದು ನೀವು ಕೇಳಿದರೆ ಶಿವರಾಜಕುಮಾರ್‌ ಅವರ "ಟಗರು' ಚಿತ್ರವನ್ನು ತೋರಿಸಬೇಕು.

ಸದ್ಯ ಶತದಿನದತ್ತ ದಾಪುಗಾಲು ಹಾಕುತ್ತಿರುವ "ಟಗರು' ಚಿತ್ರದ ಸಂಭಾಷಣೆ ಇದೇ ಮಾಸ್ತಿ ಅವರದ್ದು. ಆ ಸಿನಿಮಾದಲ್ಲಿ ಮಾಸ್ತಿ ಕೇವಲ ಸಂಭಾಷಣೆಕಾರರಾಗಿ ಗುರುತಿಸಿಕೊಂಡಿಲ್ಲ, ಇಡೀ ಸಿನಿಮಾದ ಹಿನ್ನೆಲೆಯಲ್ಲಿ ನಿಂತು ಕೆಲಸ ಮಾಡಿದ್ದಾರೆ. "ಟಗರು' ಚಿತ್ರ ಹಿಟ್‌ ಆಗುವ ಮೂಲಕ ಮಾಸ್ತಿ ಅವರಿಗೂ ಬೇಡಿಕೆ ಬಂದಿದೆ. ಹಾಗೆ ನೋಡಿದರೆ ಮಾಸ್ತಿಗೆ ಚಿತ್ರರಂಗ ಹೊಸದಲ್ಲ. ಸುಮಾರು 12 -13 ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ ಮಾಸ್ತಿ.

ನಿರ್ದೇಶಕ ತುಷಾರ್‌ ರಂಗನಾಥ್‌ ಮೂಲಕ ಚಿತ್ರರಂಗಕ್ಕೆ ಬಂದ ಮಾಸ್ತಿ, ಭಟ್‌-ಸೂರಿ ಟೀಂ ಸೇರಿಕೊಂಡು ಬರವಣಿಗೆಯನ್ನು ಆಸಕ್ತಿಯನ್ನು ಹೆಚ್ಚಿಸಿಕೊಂಡವರು. ಮಾಸ್ತಿಗೆ ಬರವಣಿಗೆಯ ವಿಶ್ವಾಸ ಹೆಚ್ಚಿಸಿದ್ದು, ತಾನು ಚಿತ್ರರಂಗದಲ್ಲಿ ಬರಹಗಾರನಾಗಿ ಗುರುತಿಸಿಕೊಳ್ಳಬಹುದೆಂಬ ಭರವಸೆ ಮೂಡಿಸಿದ್ದು, "ಬಾಲ್‌ಪೆನ್‌'. ಮಾಸ್ತಿ ಬರೆದ ಕಥೆಯನ್ನು ಇಷ್ಟಪಟ ಭಾವನಾ ಬೆಳಗೆರೆ ಹಾಗೂ ಶ್ರೀನಗರ ಕಿಟ್ಟಿ ಅದನ್ನು "ಬಾಲ್‌ಪೆನ್‌' ಎಂಬ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಾರೆ.

ಆ ಸಿನಿಮಾಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುವ ಮಾಸ್ತಿ ಬರಗಾರರಾಗಿ ಗುರುತಿಸಿಕೊಳ್ಳಲಾರಂಭಿಸಿದ್ದಾರೆ. ಶಿವರಾಜಕುಮಾರ್‌ ಅವರ "ಕಡ್ಡಿಪುಡಿ' ಚಿತ್ರಕ್ಕೂ ಮಾಸ್ತಿ ಸಂಭಾಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಭಟ್ಟರ "ಪಂಚತಂತ್ರ' ಚಿತ್ರಕ್ಕೆ ಮಾಸ್ತಿ ಅವರ ಕಥೆ ಇದೆ. ಇದರ ಜೊತೆಗೆ ಶಿವರಾಜಕುಮಾರ್‌ ಅವರ ಮತ್ತೂಂದು ಚಿತ್ರಕ್ಕೂ ಮಾಸ್ತಿ ಬರಹವಿದೆ. ಜೊತೆಗೆ ಹೊಸಬರ ಒಂದಿಷ್ಟು ಚಿತ್ರಗಳಿಗೂ ಮಾಸ್ತಿ ಪೆನ್ನು ಹಿಡಿದಿದ್ದಾರೆ.

ಸೂರಿ ಮೆಷ್ಟ್ರು ಭಟ್ರು ಹೆಡ್‌ಮೆಷ್ಟ್ರು: ಮಾಸ್ತಿ ಸೂರಿ ಹಾಗೂ ಭಟ್ಟರ ತಂಡದಲ್ಲಿ ಗುರುತಿಸಿಕೊಂಡವರು. ಆರಂಭದಿಂದಲೂ ಅವರ ಜೊತೆಯೇ, ಅವರ ಸಿನಿಮಾಗಳಲ್ಲಿ ಕೆಲಸ ಮಾಡುತ್ತಾ ಬರಹವನ್ನು ಮತ್ತಷ್ಟು ಪಕ್ವ ಮಾಡಿಕೊಂಡರು. "ಭಟ್ರು ಮತ್ತು ಸೂರಿ ಜೊತೆ ಸೇರಿ ಸಾಕಷ್ಟು ಹೊಸ ಹೊಸ ವಿಷಯಗಳನ್ನು ಕಲಿತೆ. ಅವರ ಜೊತೆ ದಿನಕ್ಕೆರಡು ಗಂಟೆ ಸಮಯ ಕಳೆದರೂ ಅಲ್ಲಿ ಹಲವು ಅಂಶಗಳು ಬಂದು ಹೋಗುತ್ತವೆ. ಅವರು ಕಥೆ ಕಟ್ಟುವ ರೀತಿ, ಅವರ ಸಿನಿಮಾ ಶೈಲಿಯನ್ನು ಕಲಿಯಬಹುದು.

ಅವರಿಬ್ಬರ ಮತ್ತೂಂದು ವಿಶೇಷತೆ ಎಂದರೆ ಅವರಿಬ್ಬರು ಕಥೆ ಮಾಡಿಕೊಂಡು ಬರಲ್ಲ. ದಿನನಿತ್ಯದ ಅಂಶಗಳನ್ನಿಟ್ಟುಕೊಂಡೇ ಸಿನಿಮಾ ಮಾಡುತ್ತಾರೆ. ಈ ತರಹ ಆದಾಗ ದೃಶ್ಯಗಳನ್ನು ಕಟ್ಟೋದು ಒಬ್ಬ ಬರಹಗಾರನಿಗೆ ತುಂಬಾ ಸವಾಲಿನ ಕೆಲಸವಾಗಿರುತ್ತದೆ. ಎಲ್ಲೂ ಬಂದಿರದಂತಹ ದೃಶ್ಯಗಳನ್ನು ಬರೆಯಬೇಕಾಗುತ್ತದೆ. ಈ ವಿಚಾರದಲ್ಲಿ ಅವರಿಬ್ಬರ ಜೊತೆ ಸೇರಿ ಸಾಕಷ್ಟು ಪಳಗಿದ್ದೇನೆ' ಎನ್ನುವ ಮಾಸ್ತಿ, ಅವರಿಬ್ಬರ ಜೊತೆ ಕೆಲಸ ಮಾಡಿರೋದು ನನ್ನ ಕೆರಿಯರ್‌ಗೆ ದೊಡ್ಡ ಪ್ಲಸ್‌ ಎನ್ನಲು ಮರೆಯುವುದಿಲ್ಲ.

ಅದಕ್ಕೆ ಕಾರಣ ಭಟ್ರು ಕ್ಲಾಸ್‌ ಆದರೆ, ಸೂರಿ ಮಾಸ್‌. ಈ ಎರಡು ಜಾನರ್‌ ನಿರ್ದೇಶಕರೊಂದಿಗೆ ಸೇರಿಕೊಂಡು ಮಾಸ್ತಿ ಕೂಡಾ ಸಾಕಷ್ಟು ಹೊಸ ವಿಷಯಗಳನ್ನು ಕಲಿಯುತ್ತಿದ್ದಾರಂತೆ. ಇನ್ನು, "ಟಗರು' ಚಿತ್ರ ಗೆದ್ದ ಬಗ್ಗೆ ಮಾತನಾಡುವ ಮಾಸ್ತಿ, "ಪ್ರೇಕ್ಷಕರು, ನಿರ್ದೇಶಕ ನಮಗಿಂತ ಬುದ್ಧಿವಂತನಿದ್ದಾನಾ ಎಂಬುದನ್ನು ನೋಡುತ್ತಾರೆ. ಆ ವಿಷಯದಲ್ಲಿ "ಟಗರು' ಅವರಿಗೆ ಇಷ್ಟವಾಗಿದೆ. ಅದಕ್ಕಿಂತ ಹೆಚ್ಚಾಗಿ ಬೇರೆ ಜಾನರ್‌ನ ಸಿನಿಮಾ.

ಈ ಸಿನಿಮಾದಲ್ಲಿ ಪ್ರತ್ಯೇಕ ಕಾಮಿಡಿ ನಟರನ್ನಿಟ್ಟುಕೊಂಡು ಪ್ರೇಕ್ಷಕರನ್ನು ನಗಿಸುವ ಅವಕಾಶವಿರಲಿಲ್ಲ. ಅದೇ ಕಾರಣದಿಂದ ರೌಡಿಗಳ ಮ್ಯಾನರಿಸಂಗೆ ತಕ್ಕಂತೆ ಸಂಭಾಷಣೆ ಬರೆಯಬೇಕಾಗಿತ್ತು. ರೌಡಿಗಳು ಎಲ್ಲವನ್ನು ನೋಡಿರುತ್ತಾರೆ. ಯಾರಧ್ದೋ ಜೀವದ ಜೊತೆ, ತಿನ್ನೋ ಅನ್ನದ ಜೊತೆ, ಕಾಸಿನ ಜೊತೆ ಕಾಮಿಡಿ ಮಾಡುತ್ತಿರುತ್ತಾರೆ. ಅದನ್ನು ಮಜವಾಗಿ ಹೇಳಲು ಪ್ರಯತ್ನಿಸಿದೆವು.

ಇನ್ನು ಎಲ್ಲರೂ ಪೊಲೀಸರಿಗೆ ಗೌರವ ಕೊಟ್ಟರೆ, ಹೆದರಿದರೆ, ರೌಡಿಗಳು ಗೌರವ ಕೊಡಲ್ಲ. ನಮ್ಮ ಅಪ್ಪ-ಅಮ್ಮನ ಮಾತೇ ನಾವು ಕೇಳಿಲ್ಲ. ಇನ್ನು ಪೊಲೀಸ್‌ ಆಫೀಸರ್‌ ಮಾತು ಕೇಳಬೇಕಾ ಎನ್ನುತ್ತಾ ಏಕವಚನದಲ್ಲಿ ಬೈಯ್ಯುತ್ತಾರೆ. ಆ ಅಂಶವನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿದ್ದೇವೆ' ಎಂದು "ಟಗರು' ಬಗ್ಗೆ ಹೇಳುತ್ತಾರೆ ಮಾಸ್ತಿ. 

ಸ್ಟಾರ್‌ಗಳಿಗೆ ಬರೆಯೋದು ಸುಲಭ: ಬರಹಗಾರರಿಗೆ ಇರುವ ಸವಾಲೆಂದರೆ ಒಬ್ಬೊಬ್ಬ ನಟನ ಮ್ಯಾನರಿಸಂ, ಇಮೇಜ್‌, ಬಿಲ್ಡಪ್‌ಗ್ಳಿಗೆ ತಕ್ಕಂತೆ ಬರೆಯಬೇಕು. ಅದರಲ್ಲೂ ಕೆಲವು ಸ್ಟಾರ್‌ ನಟರು ತಮಗೆ ಈ ತರಹದ ಸನ್ನಿವೇಶ, ಸಂಭಾಷಣೆಯೇ ಬೇಕು ಎನ್ನುತ್ತಾರೆ ಕೂಡಾ. ಆದರೆ, ಮಾಸ್ತಿ ಪ್ರಕಾರ, ಸ್ಟಾರ್‌ಗಳಿಗೆ ಬರೆಯೋದು ಸುಲಭ. "ನಿಜ ಹೇಳಬೇಕೆಂದರೆ ಸ್ಟಾರ್‌ಗಳಿಗೆ ಬರೆಯೋದು ತುಂಬಾ ಸುಲಭ. ಅವರಿಗೊಂದು ಫಿಕ್ಸ್‌ ಆದ ಇಮೇಜ್‌ ಇರುತ್ತದೆ.

ಒಬ್ಬ ಸ್ಟಾರ್‌ 25 ಮಂದಿಯನ್ನು ಹೊಡೆಯುತ್ತಾನೆಂಬುದನ್ನು ಜನ ಕೂಡಾ ಅರಗಿಸಿಕೊಂಡಿರುತ್ತಾರೆ. ಈ ಗ್ಯಾಪಲ್ಲಿ ಎರಡು ಪಂಚ್‌ ಡೈಲಾಗ್‌ ಹೇಳಿಸೋದು ಸುಲಭ. ಆದರೆ, ಹೊಸಬರಿಗೆ ಯಾವುದೇ ಇಮೇಜ್‌ ಇರೋದಿಲ್ಲ. ಅವರಿಗೆ ಬರೆಯೋದು ಕಷ್ಟ ಮತ್ತು ಖುಷಿ ಕೊಡುವ ವಿಚಾರ. ಸ್ಟಾರ್‌ಗಳ ಫೈಟ್‌ ಮುಗಿದ ಕೂಡಲೇ ಜನ ಕೂಡಾ ಅವರ ಡೈಲಾಗ್‌ ಅನ್ನು ಮರೆತುಬಿಡುತ್ತಾರೆ. ಆದರೆ, ಹೊಸಬರ ಸಿನಿಮಾಗಳು ಅದರ ಬರಹದಿಂದಲೂ ಗುರುತಿಸಿಕೊಳ್ಳುತ್ತದೆ' ಎನ್ನುವುದು ಮಾಸ್ತಿ ಮಾತು. 

ಇನ್ನು, ಚಿತ್ರರಂಗಕ್ಕೆ ಬರುವ ಹೊಸಬರು ಕಥೆಗೆ, ಬರಹಕ್ಕೆ ಹೆಚ್ಚು ಒತ್ತುಕೊಡುತ್ತಾರೆ ಎನ್ನುವ ಮಾಸ್ತಿ, ಬರವಣಿಗೆಗೆ ಚಿತ್ರರಂಗದಲ್ಲಿ ಯಾವತ್ತೂ ಬೆಲೆ ಇದೆ ಎನ್ನುತ್ತಾರೆ. "ಚಿತ್ರರಂಗಕ್ಕೆ ಬರುವ ಹೊಸಬರು ಬರವಣಿಗೆಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಕೆಲವು ಅನುಭವಿ ನಿರ್ದೇಶಕರು ಹೊಸ ಬರಹಗಾರರ ಜೊತೆ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಆದರೆ, ಹೊಸಬರು ಮತ್ತೂಬ್ಬ ಹೊಸ ಬರಹಗಾರರಿಗೆ ಅವಕಾಶ ಕೊಡುತ್ತಾರೆ. ಇಲ್ಲಿ ವಿಭಿನ್ನ ಕಲ್ಪನೆಗೆ ಯಾವತ್ತೂ ಬೆಲೆ ಇದೆ' ಎನ್ನುವುದು ಮಾಸ್ತಿ ಕಂಡುಕೊಂಡ ಸತ್ಯ.

ಮಾಸ್ತಿಗೆ ಬರವಣಿಗೆಯಲ್ಲೇ ಮುಂದುವರೆಯುವ ಆಸೆ ಇದೆ. ಆರಂಭದಲ್ಲಿ ನಿರ್ದೇಶನ ಮಾಡುವ ಕನಸು ಕಂಡಿದ್ದ ಮಾಸ್ತಿ, ಸದ್ಯ ಆ ಕನಸಿಗೆ ಪರದೆ ಕಟ್ಟಿದ್ದಾರೆ. ಅದಕ್ಕೆ ಕಾರಣ, ರಾಜಿಯಾಗದ ಮನಸ್ಥಿತಿ. "ನಿರ್ದೇಶನ ಮಾಡುವ ಆಸೆ ಇತ್ತು. ಆದರೆ, ಬಹುತೇಕ ನಿರ್ಮಾಪಕ, ನಟರು ಸ್ಕ್ರಿಪ್ಟ್ನಲ್ಲಿ ಸಾಕಷ್ಟು ಬದಲಾವಣೆ ಮಾಡಲು ಹೇಳುತ್ತಾರೆ. ಆರಂಭದಲ್ಲೇ ರಾಜಿಯಾಗುತ್ತಾ ಹೋದರೆ ಇಡೀ ಸಿನಿಮಾದಲ್ಲಿ ರಾಜಿಯಾಗಬೇಕಾಗುತ್ತದೆ. ಆಗ ನಮ್ಮ ಕಲ್ಪನೆಗೆ ಅರ್ಥವೇ ಇರೋದಿಲ್ಲ. ಹಾಗಾಗಿ, ಸದ್ಯಕ್ಕೆ ಬರಹಗಾರನಾಗಿಯೇ ಇರುತ್ತೇನೆ' ಎನ್ನುತ್ತಾರೆ. 


Trending videos

Back to Top