CONNECT WITH US  

ಯುಗಯುಗಗಳೆ ಸಾಗಲಿ

ರೂಪತಾರಾ

ಚಿತ್ರ: ಹೃದಯಗೀತೆ
ಗೀತೆರಚನೆ: ಎಂ.ಎನ್‌. ವ್ಯಾಸರಾವ್‌
ಸಂಗೀತ: ರಾಜನ್‌-ನಾಗೇಂದ್ರ
ಗಾಯನ: ಎಸ್ಪಿ. ಬಾಲಸುಬ್ರಹ್ಮಣ್ಯಂ-ಚಿತ್ರಾ

ಯುಗಯುಗಗಳೆ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿಗಗನವೆ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ-ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ
ಜಗವೇನೇ ಹೇಳಲಿ, ನಮ್ಮ ಪ್ರೀತಿ ಶಾಶ್ವತ ||ಪ||

ನಡುಗಲಿ ಭುವಿ ಬಿರಿಯಲಿ, ನೀನೇ ಈ ಬಾಳ ಜೀವ
ಉರಿಯಲಿ ಕಿಡಿ ಸಿಡಿಯಲಿ, ಏಕೆ ಈ ತಾಪ ಭಾವ
ಒಲವಿಂದು ತುಂಬಿ ಬಂದು ಮೈತುಂಬಾ ಮಿಂಚಿದೆ
ಒಡನಾಡಿ ಪ್ರೀತಿ ನೀಡು ಈ ನಿನ್ನ ಪ್ರೇಮಿಗೆ
ಈ ಭೀತಿ ಇನ್ನೇಕೆ ಈ ದೂರವೇಕೆ? ||1||

ಭಯವ ಬಿಡು ನೀನು ನಿನಗಾಗಿ ಓಡೋಡಿ ಬಂದೆ
ಸುಖದ ಮಧು ನೀನು ಬದುಕಲ್ಲಿ ತಂಗಾಳಿ ತಂದೆ
ಅಮರಾ ಈ ಪ್ರೇಮ ಬರಲಾರದಿಂದೆಂದೂ ಸಾವು
ವಹಿಸೂ ಈ ಮೌನ, ಮನದಲ್ಲಿ ಏಕಿಂಥ ನೋವು
ಈ ಪ್ರಾಣವೇ ಹೋಗಲಿ, ಈ ಲೋಕವೆ ನೂಕಲಿ
ಎಂದೆಂದು ಸಂಗಾತಿ ನೀನೇ ||2||

90ರ ದಶಕದಲ್ಲಿ ಬಂದ ಅತ್ಯುತ್ತಮ ಚಿತ್ರಗಳಲ್ಲಿ "ಹೃದಯಗೀತೆ'ಯೂ ಒಂದು. ಭಾರ್ಗವ - ರಾಜಾರಾಮ್‌ ಜೋಡಿಯ ಕಲಾಕೃತಿ ಲಾಂಛನದಲ್ಲಿ ತಯಾರಾದ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ವಿಷ್ಣುವರ್ಧನ್‌-ಖುಷ್ಬೂ-ಭವ್ಯಾ ಇದ್ದರು. ಭಾರ್ಗವ ನಿರ್ದೇಶಿಸಿದ ಈ ಚಿತ್ರಕ್ಕೆ ಛಾಯಾಗ್ರಹಣ ನಿರ್ದೇಶನ ಮಾಡಿದವರು ರಾಜಾರಾಂ. "ಹೃದಯಗೀತೆ' ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿಯಾಗಿ ಓಡಿದ್ದು ಮಾತ್ರವಲ್ಲ,

ಅದರ ಹಾಡುಗಳೂ ಸೂಪರ್‌ ಹಿಟ್‌ ಆದವು. ಸಿನಿಮಾ ಮ್ಯೂಸಿಕಲ್‌ ಹಿಟ್‌ ಆಯಿತು. ಅದರಲ್ಲೂ, "ಯುಗಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ' ಗೀತೆಯಂತೂ ಆ ದಿನಗಳಲ್ಲಿ ಹದಿಹರೆಯದವರ ಮೆಚ್ಚಿನ ಹಾಡಾಗಿತ್ತು. ತಮ್ಮ ಪ್ರೇಮದ ಮಹತ್ವ ವಿವರಿಸಲು ಒಂದು ಒಳ್ಳೆಯ ಸಾಲು ಹುಡುಕುತ್ತಿದ್ದ ಜನ, ಈ ಹಾಡು ಕಂಡೊಡನೆ ನಿಧಿಯನ್ನೇ ಕಂಡಂತೆ ಖುಷಿಪಟ್ಟರು.

ಪರಿಣಾಮ- "ಯುಗಯುಗಗಳೇ ಸಾಗಲಿ' ಹಾಡಿನ ಸಾಲುಗಳು ಪ್ರೇಮಿಗಳ ಮಾತುಕತೆಯ ಸಂದರ್ಭದಲ್ಲಿ ಮಾತ್ರವಲ್ಲ, 90 ರ ದಶಕದಲ್ಲಿ ಆಟೋಗ್ರಾಫ್ ಪುಸ್ತಕಗಳಲ್ಲೂ ಜಾಗ ಪಡೆದುಕೊಂಡವು. ಎಲ್ಲ ವಯೋಮಾನದವರ ಮನದ ಪಿಸುಮಾತಾಗಿ ನೂರೆಂಟು ರೀತಿಯಲ್ಲಿ ಪ್ರಕಟವಾಗತೊಡಗಿದವು. ಸರ್ವರಿಗೂ, ಸರ್ವಕಾಲಕ್ಕೂ ಸಲ್ಲುವಂಥ ಹಾಡು ಎಂಬುದು- "ಯುಗಯುಗಗಳೇ ಸಾಗಲಿ' ಗೀತೆಯ ಹೆಚ್ಚುಗಾರಿಕೆ.

ಇದನ್ನು ಬರೆದವರು ಎಂ.ಎನ್‌. ವ್ಯಾಸರಾವ್‌. ಅವರು ಈ ಹಾಡು ಬರೆದದ್ದು ಎಲ್ಲಿ ಮತ್ತು ಹೇಗೆ? ಅವರಿಗೆ ಈ ಹಾಡಿನ ಸಾಲುಗಳು ಹೊಳೆದ ಸಂದರ್ಭವಾದರೂ ಎಂಥಾದ್ದು ಎಂದು ತಿಳಿಯುವ ಮುನ್ನ- "ಹೃದಯಗೀತೆ' ಚಿತ್ರದಲ್ಲಿ ಈ ಹಾಡು ಬರುವ ಸಂದರ್ಭವನ್ನು ನೆನಪು ಮಾಡಿಕೊಳ್ಳಿ. ಚಿತ್ರದ ನಾಯಕ ಎಂದಿನಂತೆ ಒಳ್ಳೆಯವನು. ಆತ, ಸುತ್ತಲಿರುವ ಹತ್ತು ಮಂದಿಗೆ ಒಳಿತನ್ನು ಬಯಸುವ,

ಇನ್ನೊಬ್ಬರ ಕಷ್ಟಕ್ಕೆ ಮರುಗುವ; ಕರಗುವ ಗುಣಸಂಪನ್ನ. ಇಂಥವನಿಗೆ, ಅಥ್ಲೀಟ್‌ ಆಗಿದ್ದ ಶ್ರೀಮಂತ ಕುಟುಂಬದ ಹಿನ್ನೆಲೆಯ ಕಥಾನಾಯಕಿ ಪರಿಚಯವಾಗುತ್ತಾಳೆ. ಪರಿಚಯ, ಕೆಲವೇ ದಿನಗಳಲ್ಲಿ ಪ್ರೀತಿಗೆ ತಿರುಗುತ್ತದೆ. ವಿಷಯ ಗೊತ್ತಾದಾಗ ನಾಯಕಿಯ ತಂದೆ- "ನಾವೇನು, ನಮ್ಮ ಅಂತಸ್ತೇನು? ಹೀಗಿರುವಾಗ ನೀನು ಅದ್ಯಾರೋ ಅಬ್ಬೇಪಾರಿಯನ್ನು ಪ್ರೀತ್ಸೋದಾ' ಎಂದು ಅಬ್ಬರಿಸುತ್ತಾನೆ.

ಈ ಮಾತಿಗೆ ತಲೆಕೆಡಿಸಿಕೊಳ್ಳದ ನಾಯಕಿ, ನನಗೆ ಅವನ ಅಂತಸ್ತಿಗಿಂತ ಪ್ರೀತಿಯೇ ಮುಖ್ಯ ಅನ್ನುತ್ತಾಳೆ. ನಂತರ ನಾಯಕನಿದ್ದ ಊರಿಗೆ ಬಂದು, ಒಂದು ಮನೆಯಲ್ಲಿ ಉಳಿದುಕೊಂಡು ವಿದ್ಯಾಭ್ಯಾಸ, ಕ್ರೀಡಾಭ್ಯಾಸವನ್ನು ಮುಂದುವರಿಸಿರುತ್ತಾಳೆ. ಈ ಮಧ್ಯೆ ನಾಯಕಿಗೆ ಕ್ರೀಡಾಕೂಟವೊಂದರಲ್ಲಿ ಪಾಲ್ಗೊಳ್ಳಲು ವಿದೇಶದಿಂದ ಆಹ್ವಾನ ಬರುತ್ತದೆ. ಆಕೆ ಹೊರಡುವ ತಯಾರಿಯಲ್ಲಿದ್ದಾಗಲೇ ಆಕೆಯ ಮನೆ ಮಾಲೀಕನೇ ಅತ್ಯಾಚಾರ ನಡೆಸಲು ಮುಂದಾಗುತ್ತಾನೆ.

ಆತ್ಮರಕ್ಷಣೆಗೆ ಮುಂದಾದ ನಾಯಕಿ, ಆತನನ್ನು ಕೊಲೆ ಮಾಡುತ್ತಾಳೆ. ಅದೇ ವೇಳೆಗೆ ಅಲ್ಲಿಗೆ ಬಂದ ನಾಯಕ, ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಕ್ಷಣಕ್ಕೇ ಪೊಲೀಸರೂ ಬರುತ್ತಾರೆ. ತಕ್ಷಣವೇ, ಗೆಳತಿಯ ಭವಿಷ್ಯ ಹಾಳಾಗದಿರಲಿ ಎಂಬ ಸದುದ್ದೇಶದಿಂದ, ಆ ಕೊಲೆಯನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಂಡು ಮಾನಸಿಕ ಅಸ್ವಸ್ಥನಂತೆ ನಾಟಕವಾಡುತ್ತಾನೆ ನಾಯಕ. ಈ ಕಾರಣದಿಂದಲೇ ಪೊಲೀಸರು ನಾಯಕನನ್ನು ಮಾನಸಿಕ ಅಸ್ವಸ್ಥರಿದ್ದ ಆಸ್ಪತ್ರೆಗೆ ಸೇರಿಸುತ್ತಾರೆ.

ಅಲ್ಲಿ ಇವನ ನಾಟಕದ ಬಗ್ಗೆ ತಿಳಿದುಕೊಳ್ಳುವ ಎರಡನೇ ನಾಯಕಿ(ಆಕೆ ವೈದ್ಯೆ)- "ಈ ನಾಟಕವೆಲ್ಲ ಯಾಕೆ?' ಎಂದು ಕೇಳುತ್ತಾಳೆ. ಆಗ ತನ್ನ ಪ್ರೀತಿಯ ಕಥೆಯನ್ನು ವಿವರಿಸಿ ಹೇಳುತ್ತಾನೆ ನಾಯಕ. ಆಗ ಫ್ಲಾಶ್‌ಬ್ಯಾಕ್‌ನಲ್ಲಿ ಈ ಹಾಡು ಬರುತ್ತದೆ. ಮುಂದೆ, ಏನೇನೋ ಆಗುತ್ತದೆ. ವಿದೇಶದಿಂದ ಹಿಂತಿರುಗಿದ ನಾಯಕಿಗೆ ಆಕೆಯ ತಂದೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಬೇರೊಬ್ಬನೊಂದಿಗೆ ಮದುವೆ ಮಾಡಿಬಿಡುತ್ತಾನೆ.

ಈ ವಿಷಯ ತಿಳಿದಾಗ, ಅದುವರೆಗೂ ಮಾನಸಿಕ ಅಸ್ವಸ್ಥನಂತೆ ನಟಿಸುತ್ತಿದ್ದ ನಾಯಕ, ನಿಜಕ್ಕೂ ಹುಚ್ಚನೇ ಆಗಿಬಿಡುತ್ತಾನೆ. ಈ ವೇಳೆಗಾಗಲೇ ಆಸ್ಪತ್ರೆಯಲ್ಲಿದ್ದ ವೈದ್ಯೆ, ನಾಯಕನನ್ನು ಪ್ರೀತಿಸುತ್ತಿರುತ್ತಾಳೆ, ಆರಾಧಿಸುತ್ತಿರುತ್ತಾಳೆ. ಮಾನಸಿಕ ಅಸ್ವಸ್ಥನಾದ ಆತನನ್ನು ಮತ್ತೆ ಸರಿ ಮಾಡುವ ಸದಾಶಯದಿಂದ- "ನಿನ್ನೊಂದಿಗೆ ಸುಖ-ದುಃಖ ಹಂಚಿಕೊಳ್ಳಲು ನಾನಿದ್ದೇನೆ ಹೆದರಬೇಡ' ಎಂದು ಧೈರ್ಯ ಹೇಳುವ ಸಂದರ್ಭದಲ್ಲಿ ಮತ್ತೆ ಇದೇ ಹಾಡು ರಿಪೀಟ್‌ ಆಗುತ್ತದೆ!

ತಮ್ಮ ಚಿತ್ರಕ್ಕೆ ಕವಿಗಳಿಂದ ಹಾಡು ಬರೆಸಬೇಕು ಎಂಬುದು ಭಾರ್ಗವ ಅವರ ಆಸೆಯಾಗಿತ್ತು. ಈ ಕಾರಣದಿಂದಲೇ ಅವರು- ದೊಡ್ಡರಂಗೇಗೌಡ, ಎಂ.ಎನ್‌. ವ್ಯಾಸರಾವ್‌ ಹಾಗೂ ಸು. ರುದ್ರಮೂರ್ತಿ ಶಾಸಿಗಳನ್ನು ಕಾನಿಷ್ಕ ಹೋಟೆಲಿಗೆ ಕರೆಸಿಕೊಂಡು, ಹಾಡುಗಳ ಸಂದರ್ಭ ವಿವರಿಸಿ- "ಸಾರ್‌, ಮೊದಲು ಎಲ್ಲರೂ ಹಾಡು ಬರೆದುಬಿಡಿ. ನಂತರ ಎಲ್ಲರೂ ಜತೆಯಾಗಿ ಕೂತು ವಿಚಾರ ವಿನಿಮಯ ಮಾಡೋಣ. ಬೇಕಾದ್ರೆ ಒಂದು ಕವಿಗೋಷ್ಠಿಯನ್ನೂ ನಡೆಸೋಣ' ಎಂದು ತಮಾಷೆ ಮಾಡಿದರಂತೆ.

ನಂತರ ವ್ಯಾಸರಾವ್‌ ಬಳಿಗೆ ಬಂದು ಮತ್ತೆ ಸನ್ನಿವೇಶ ನೆನಪಿಸಿ- ಸಾರ್‌, ನೀವು ಬರೆಯುವ ಹಾಡು ಎರಡು ಸಂದರ್ಭಗಳಲ್ಲಿ ಬರುವಂಥಾದ್ದು. ಒಂದು: ನಾಯಕ-ನಾಯಕಿ ಸಂತೋಷದಲ್ಲಿ ಇದ್ದಾಗ ಹಾಡುವಂಥಾದ್ದು. ಇನ್ನೊಂದು: ಪ್ರೇಯಸಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ನಾಯಕನನ್ನು ಸಂತೈಸಲು ಎರಡನೇ ನಾಯಕಿ ಹಾಡುವಂಥಾದ್ದು. ಹಾಡು ಒಂದೇ; ಆದರೆ ಅದರ ಭಾವ ಹಾಗೂ ಸನ್ನಿವೇಶಗಳು ಬೇರೆ.

ಈವರೆಗೂ ಅವೆಷ್ಟೋ ಪ್ರೇಮಗೀತೆಗಳು ಬಂದಿವೆ. ಅವೆಲ್ಲಕ್ಕಿಂತ ಡಿಫ‌ರೆಂಟ್‌ ಅನ್ನಿಸುವಂಥ ಫೀಲ್‌ ಕೊಡುವ ಪ್ರೇಮಗೀತೆ ಬೇಕು' ಅಂದರಂತೆ. ಮುಂದೆ ಏನಾಯ್ತು ಎಂಬುದನ್ನು ವ್ಯಾಸರಾವ್‌ ವಿವರಿಸಿದ್ದು ಹೀಗೆ: ಭಾರ್ಗವರ ಮಾತು ಮುಗಿಯುತ್ತಿದ್ದಂತೆಯೇ ಅಲ್ಲಿಗೆ ಸಂಗೀತ ನಿರ್ದೇಶಕರಾದ ರಾಜನ್‌-ನಾಗೇಂದ್ರ ಬಂದರು. ಕುಶಲೋಪರಿಯ ಮಾತುಗಳಾದವು. ನಂತರ ಅವರು, ಟ್ಯೂನ್‌ ರೆಡಿ ಆಗಿದೆ ಅಂದರು.

ಹಿಂದೆಯೇ ಒಂದು ಟ್ಯೂನ್‌ ಕೇಳಿಸಿದರು. ಅದರಲ್ಲಿ ಎಂಥದೋ ಸೆಳೆತವಿತ್ತು. ನನ್ನನ್ನು ಅದು ಬಹುವಾಗಿ ಕಾಡಿತು. ತಕ್ಷಣವೇ, ಆ ಕಡೆಗೆ ಸಮಾಧಾನವನ್ನೂ ಹೇಳುವಂಥ, ಈ ಕಡೆ ಪ್ರೇಮದ ಉತ್ಕಟತೆಯನ್ನೂ ವಿವರಿಸುವಂಥ ಸಾಲುಗಳ ಕುರಿತು ಯೋಚಿಸಿದೆ. ಹಾಗೆ ಯೋಚಿಸುತ್ತಿದ್ದಾಗಲೇ- ಪ್ರೀತಿ ಒಂದು ದಿನದ್ದಲ್ಲ, ಒಂದು ತಿಂಗಳಿನದಲ್ಲ, ಒಂದು ವರ್ಷದ್ದಲ್ಲ, ಅದು ಯುಗಯುಗಗಳಲ್ಲೂ ನೆನಪಾಗಿ ಇರುವಂಥಾದ್ದು ಅನ್ನಿಸಿತು.

ಈ ಸಂದರ್ಭದಲ್ಲಿಯೇ ಆಗಷ್ಟೇ ಪ್ರೀತಿಯ ಹೊಳೆಗೆ ಬಿದ್ದ ಹುಡುಗ-ಹುಡುಗಿಯರು ಪಾರ್ಕಿನಲ್ಲಿ, ಸಿನಿಮಾ ಮಂದಿರದ ಕತ್ತಲಲ್ಲಿ, ಕಾಲೇಜಿನ ಕಾರಿಡಾರಿನಲ್ಲಿ ಪಿಸುಗುಡುವುದನ್ನು, ಪ್ರೇಮ ಪತ್ರ ಬರೆದಾಗ ಅಥವಾ ಅದನ್ನು ಓದುವಾಗ ಸಂಭ್ರಮಿಸುವ ರೀತಿಯನ್ನು ನೆನಪು ಮಾಡಿಕೊಂಡೆ. ಹೌದಲ್ಲವಾ? ಮನುಷ್ಯ ಅನ್ನಿಸಿಕೊಂಡವರಿಗೆ ಇರುವುದೇ ನೂರು ವರ್ಷದ ಆಯಸ್ಸು. ಇದು ಕಾಲೇಜು ಹುಡುಗ-ಹುಡುಗಿಯರಿಗೂ ಗೊತ್ತಿರುತ್ತದೆ.

ಆದರೂ ಅವರು (ಮತ್ತು ಪ್ರೀತಿಗೆ ಬಿದ್ದ ಮಧ್ಯವಯಸ್ಸಿನವರೂ)- ಯುಗಯುಗಗಳೇ ಕಳೆದ್ರೂ ನಾನು ನಿನ್ನನ್ನೇ ಪ್ರೀತಿಸ್ತೀನಿ ಅನ್ನುತ್ತಾರೆ. ಮನೆಮಂದಿಯ ಕಾಕದೃಷ್ಟಿ ಬಿದ್ದರೆ ಸಾಕು, ನಮ್ಮ ಪ್ರೀತಿಗೆ ಕಲ್ಲುಬೀಳುತ್ತೆ ಎಂದು ಗೊತ್ತಿದ್ದರೂ- ಆಕಾಶವೇ ಬಿದ್ದರೂ ನಮ್ಮ ಪ್ರೀತಿಗೆ ಸೋಲಿಲ್ಲ(?) ಎನ್ನುತ್ತಾರೆ. ಸಮುದ್ರ ಉಕ್ಕಿ ಹರಿದರೂ ನಾವು ಪ್ರೀತಿಸುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ' ಎಂದೂ ಘೋಷಿಸುತ್ತಾರೆ, ಪ್ರಾಮಿಸ್‌ ಮಾಡುತ್ತಾರೆ ...

ಇಂಥವೇ ಪ್ರಸಂಗಗಳನ್ನು ನೆನಪು ಮಾಡಿಕೊಂಡಾಗಲೇ-ನಮ್ಮದು ಕೃಷ್ಣ-ರಾಧೆಯನ್ನು ನೆನಪಿಸುವ ಪ್ರೇಮ ಎನ್ನುವವರ  ಇನ್ನೊಂದು ಮಾತೂ ನೆನಪಾಯಿತು. ರಾಧೇ-ಕೃಷ್ಣರ ಅವತಾರ ಆಗಿ ಯುಗಗಳೇ ಕಳೆದುಹೋಗಿದ್ರೂ ಜನ ಇನ್ನೂ ಆ ಮಧುರ ಪ್ರೇಮವನ್ನು ನೆನಪಿಟ್ಟುಕೊಂಡಿದ್ದಾರೆ ಅನ್ನಿಸಿದಾಗ ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ' ಎಂಬ ಸಾಲು ಹೊಳೆಯಿತು. ಅದನ್ನೇ ಹಾಡಿನ ಮೊದಲ ಸಾಲಾಗಿ ಮಾಡೋಣ ಎಂದು ನಿರ್ಧರಿಸಿದೆ.

ಆನಂತರದಲ್ಲಿ ಒಂದೊಂದೇ ಸಾಲುಗಳು ಆಕಸ್ಮಿಕವಾಗಿ ಕೈಹಿಡಿಯುತ್ತಾ ಹೋದವು. ಪರಿಣಾಮ, ಉಳಿದವರಿಗಿಂತ ಬೇಗನೆ ಹಾಡು ಬರೆದೆ. ನಂತರ ಅದನ್ನು ಭಾರ್ಗವ ಅವರಿಗೆ ಕೊಟ್ಟೆ. ನನ್ನ ಜೊತೆಗೇ ಬಂದಿದ್ದ ದೊಡ್ಡರಂಗೇಗೌಡರು ಮತ್ತು ರುದ್ರಮೂರ್ತಿ ಶಾಸಿಗಳು ಇನ್ನೂ ಬರೆಯುತ್ತಿದ್ದಾಗಲೇ ನಾನು ಹಾಡು ಮುಗಿಸಿದ್ದು ಕಂಡು ಭಾರ್ಗವ ಅವರಿಗೆ ಸ್ವಲ್ಪ ಅನುಮಾನ ಬಂದಿರಬೇಕು:

ನಾನು ಕೊಟ್ಟ ಹಾಡನ್ನು ನೋಡಿ ಅವರಿಗೇನೊ ಅಷ್ಟೊಂದು ಸಮಾಧಾನವಾದಂತೆ ಕಾಣಲಿಲ್ಲ. ಆದರೆ, ಹಾಡಿನ ಸಾಹಿತ್ಯ ಗಮನಿಸಿದ ರಾಜನ್‌-ನಾಗೇಂದ್ರ- "ಇದು ಸೂಪರ್‌ಹಿಟ್‌ ಸಾಂಗ್‌ ಆಗುತ್ತೆ ರೀ' ಎಂದು ಆ ಕ್ಷಣವೇ ಭವಿಷ್ಯ ನುಡಿದಿದ್ದರು. ಆದರೆ, ಭಾರ್ಗವ ಅವರ ಪಟ್ಟಿಯಲ್ಲಿ ನನ್ನ ಹಾಡಿಗೆ ಕೊನೆಯ ಸ್ಥಾನವಿತ್ತು. ಚಿತ್ರ ಬಿಡುಗಡೆಯಾದ ಬಳಿಕ- ಎಲ್ಲರೂ ಈ ಹಾಡನ್ನೇ ಗುನುಗತೊಡಗಿದರು. ಕಾಲೇಜು ಯುವಕ-ಯುವತಿಯರಿಗಂತೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಒಂದು ಹಾಡೇ ಸಿಕ್ಕಂತಾಯಿತು.

ಆ ಸಂದರ್ಭದಲ್ಲಿಯೇ ಫೋನ್‌ ಮಾಡಿದ ನಿರ್ದೇಶಕ ಭಾರ್ಗವ- "ಸಾರ್‌, ಸೂಪರ್‌ ಹಿಟ್‌ ಸಾಂಗ್‌ ಕೊಟ್ಟಿದೀರ.  ನಿಮಗೆ ಸಾವಿರ ನಮಸ್ಕಾರ ಹೇಳಿದ್ರೂ ಸಾಲದು' ಎಂದರು. ಲಹರಿಗೆ ಬಿದ್ದವರಂತೆ ಇಷ್ಟೂ ವಿವರ ತಿಳಿಸಿದ ವ್ಯಾಸರಾವ್‌ ಕಡೆಗೆ ಸ್ವಗತವೆಂಬಂತೆ ಹೇಳಿದರು: ಈ ಒಂದು ಹಾಡಿಂದ ನನಗೆ ಎಷ್ಟೊಂದು ಜನರ ಪ್ರೀತಿ, ವಿಶ್ವಾಸ, ಮಮಕಾರ, ಹೆಸರು, ಜನಪ್ರಿಯತೆ ಸಿಕ್ಕಿತಲ್ಲ ಎಂದು ನೆನಪಿಸಿಕೊಂಡರೆ- ಈಗಲೂ ಬೆರಗು, ಸಂತೋಷ ಎರಡೂ ಜತೆಜತೆಗೇ ಆಗುತ್ತೆ'

ಹಾಡಾಗಿದ್ದು ಹೃದಯದ ಭಾಷೆ: ಒಂದು ಸ್ವಾರಸ್ಯ ಕೇಳಿ: ಹೃದಯಗೀತೆ ಸಿನಿಮಾ ಹಿಟ್‌ ಆಯಿತಲ್ಲ! ಆ ನಂತರ ವಿಷ್ಣುವರ್ಧನ್‌ ಅವರು ಯಾವುದೇ ಊರಿಗೆ ಹೋದರೂ ಸರಿ; ಅಲ್ಲಿ ಅಭಿಮಾನಿಗಳೆಲ್ಲ ಒಕ್ಕೊರಲಿನಿಂದ- "ಸಾರ್‌, ಯುಗಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ' ಹಾಡು ಹೇಳಿ ಅನ್ನುತ್ತಿದ್ದರಂತೆ. ಅವರು ಹೀಗೆ ಹಾಡಿದಾಗ ಅದನ್ನು ಕಲಾವಿದ-ಪ್ರೇಕ್ಷಕರ ನಡುವಿನ ಭಾವನಾತ್ಮಕ ಸಂಬಂಧಕ್ಕೆ ಹೋಲಿಸಿಕೊಂಡು ಖುಷಿ ಪಡುತ್ತಿದ್ದರಂತೆ!

ಇದನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುತ್ತಿದ್ದ ವಿಷ್ಣುವರ್ಧನ್‌- "ನನ್ನ ಅಭಿಮಾನಿಗಳ ಮುಂದೆ ನನ್ನ ಹೃದಯದ ಭಾಷೆಯನ್ನೇ ಹಾಡಾಗಿಸಲು ಅನುಕೂಲ ಮಾಡಿಕೊಟ್ಟಿದ್ದೀರಿ ಸರ್‌. ಧನ್ಯವಾದ' ಎಂದು ಅದೊಮ್ಮೆ ವ್ಯಾಸರಾವ್‌ ಅವರಿಗೇ ಹೇಳಿದರಂತೆ. ಅಲ್ಲ, ಸಿನಿಮಾದಲ್ಲಿ ಒಮ್ಮೆ ನಾಯಕಿಯನ್ನು ಖುಷಿಪಡಿಸಲು, ಇನ್ನೊಮ್ಮೆ ನಾಯಕನಿಗೆ ಸಮಾಧಾನ ಹೇಳಲು-ಹೀಗೆ ಎರಡು ಭಿನ್ನ ಸಂದರ್ಭಗಳಿಗೆಂದು ಬರೆದ ಹಾಡು, ನಿಜ ಬದುಕಿನಲ್ಲಿ ಮತ್ತೂಂದು ವಿಭಿನ್ನ ಸಂದರ್ಭಕ್ಕೂ ಅನ್ವಯವಾಯಿತಲ್ಲ; ಅದಲ್ಲವೆ ಸ್ವಾರಸ್ಯ?


Trending videos

Back to Top