CONNECT WITH US  

ನನ್ನ ಯಾರು ಚಾಲೆಂಜ್‌ ಮಾಡ್ತಾರೋ ...

ರೂಪತಾರಾ

ಛಾಯಾಗ್ರಾಹಕ ಮಹೇಂದ್ರ ಸಿಂಹ, "ರೂಪತಾರಾ' ಓದುಗರಿಗೆ ಹೊಸಬರೇನಲ್ಲ. ಇದೇ ಮೊದಲ ಬಾರಿಗೆ ಅವರ ಸಂದರ್ಶನ ಪ್ರಕಟವಾಗುತ್ತಿದ್ದರೂ, ಅವರು ತೆಗೆದುಕೊಟ್ಟ ಹಲವು ಫೋಟೋಗಳು "ರೂಪತಾರಾ'ದ ಪುಟಗಳನ್ನು, ಮುಖಪುಟಗಳನ್ನು ಅಲಂಕರಿಸಿವೆ. ಆಗ ಅವರು ಸ್ಟಿಲ್‌ ಫೋಟೋಗ್ರಾಫ‌ರ್‌ ಆಗಿದ್ದರು. ಅದರ ಈಗ ಸಿನಿಮಾದ ಛಾಯಾಗ್ರಹಣವನ್ನೂ ಮಾಡುತ್ತಿದ್ದಾರೆ. ಅದರಲ್ಲೂ ಶಿವರಾಜಕುಮಾರ್‌ ಅಭಿನಯದ "ಟಗರು' ಚಿತ್ರದ ಛಾಯಾಗ್ರಹಣ ಮಾಡಿ, ಎಲ್ಲರಿಂದ ಮೆಚ್ಚುಗೆ ಪಡೆದವರು ಅವರು. ಒಬ್ಬ ಸ್ಟಿಲ್‌ ಫೋಟೋಗ್ರಾಫ‌ರ್‌ನಿಂದ, ಇವತ್ತು ಜನಪ್ರಿಯ ಛಾಯಾಗ್ರಾಹಕರಾಗಿರುವ ಅವರು, ತಾವು ನಡೆದು ಬಂದ ಹಾದಿ ಮತ್ತು ತಮ್ಮ ಇಷ್ಟ-ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.

ಇದಕ್ಕೆ ಕಾರಣ ಎಸ್‌ ಎಸ್‌ ಎಸ್‌ ...: ಹೀಗೆ ಹೇಳುವಷ್ಟರಲ್ಲಿ ಫೋನ್‌ ರಿಂಗ್‌ ಆಯಿತು. ಕಟ್‌ ಮಾಡಿ ಮಾತು ಮುಂದುವರೆಸಿದರು ಮಹೇಂದ್ರ ಸಿಂಹ. "ಸೂರಿ, ಶಿವರಾಜಕುಮಾರ್‌ ಮತ್ತು ಶ್ರೀಕಾಂತ್‌ ಪ್ರತಿಯೊಂದು ಹಂತದಲ್ಲೂ ಸಹಕಾರ ನೀಡಿದರು. ಯಾವತ್ತೂ ಹಸ್ತಕ್ಷೇಪ ಮಾಡಲಿಲ್ಲ. ಇದು ಬಹಳ ಸಹಾಯವಾಯ್ತು. ಅದೇ ಕಾರಣಕ್ಕೆ ಚಿತ್ರ ಚೆನ್ನಾಗಿ ಬರೋದಕ್ಕೆ ಸಾಧ್ಯವಾಯಿತು. ಅದರಲ್ಲೂ ಸೂರಿ ಅಂತೂ, ನನ್ನ ಜೊತೆಗೆ ಇದುವರೆಗೂ ಸಿನಿಮಾ ಬಿಟ್ಟು ಬೇರೇನೂ ಮಾತಾಡಿಲ್ಲ.

ಹಗಲು-ರಾತ್ರಿ ಸಿನಿಮಾ ಬಗ್ಗೆ ಮಾತಾಡಿದ್ದೀವಿ. ಕಲರ್‌ ಟೋನ್‌ಗಳ ಬಗ್ಗೆ, ಪಾತ್ರಗಳ ಬಗ್ಗೆ ಮಾತಾಡಿದ್ದೀವಿ. ಕೊನೆಗೆ ಸಿನಿಮಾದ ಡಿಐ ಜವಾಬ್ದಾರಿಯನ್ನೂ ನನಗೆ ಕೊಟ್ಟು, ನಿಮಗೆ ಹೇಗನಿಸುತ್ತದೋ ಮಾಡಿ, ನನಗೆ ನಂಬಿಕೆ ಇದೆ ಅಂತ ಹೇಳಿದ್ದರು. ಅದು ವಕೌಟ್‌ ಆಯ್ತು. ಅದೇ ಕಾರಣಕ್ಕೆ ಹೇಳಿದ್ದು, ಆ ಮೂವರು ಎಸ್‌ ಎಸ್‌ ಎಸ್‌ಗಳನ್ನು ಮರೆಯೋಕೆ ಸಾಧ್ಯವೇ ಇಲ್ಲ ಎಂದು' ಎನ್ನುತ್ತಾರೆ ಮಹೇಂದ್ರ ಸಿಂಹ.

ಮಹೇಂದ್ರ ಸಿಂಹ ಇದುವರೆಗೂ ಛಾಯಾಗ್ರಹಣ ಮಾಡಿರುವುದು ನಾಲ್ಕು ಚಿತ್ರಗಳಾದರೂ, ಅವರಿಗೆ ಚಿಕ್ಕಂದಿನಿಂದಲೂ ಸಿನಿಮಾ ನಂಟು ಒಂಥರಾ ಇತ್ತು, ಒಂಥರಾ ಇರಲಿಲ್ಲ ಎಂದರೆ ತಪ್ಪಿಲ್ಲ. ಅವರ ತಂದೆ ಗುಬ್ಬಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಡಾ. ರಾಜಕುಮಾರ್‌ ಅವರ ಒಡನಾಡಿಯಾಗಿದ್ದರಂತೆ. "ಚಿಕ್ಕಂದಿನಿಂದಲೂ ನಮ್ಮ ತಂದೆಗೆ ಡಾ. ರಾಜ್‌ ಅವರು ಆತ್ಮೀಯ ಎಂದು ಕೇಳಿ ಬೆಳೆದೆ.

ಆದರೆ, ನಾನು ಬೆಳೆದಿದ್ದೆಲ್ಲಾ ಮೈಸೂರಿನಲ್ಲಾದ್ದರಿಂದ ನನಗೆ ಸಿನಿಮಾ ನಂಟಿರಲಿಲ್ಲ. ಚಿಕ್ಕಂದಿನಿಂದ ನನಗೆ ಸಿನಿಮಾಗೆ ಛಾಯಾಗ್ರಹಣ ಮಾಡಬೇಕು ಅಂತ ಬಹಳ ಆಸೆ ಇತ್ತು. ಏಕೆಂದರೆ, ಬೇರೆಯವರೆಲ್ಲರೂ ಒಂದೊಂದು ಹಂತದಲ್ಲಿ ಬಂದು ಹೊರಟು ಹೋಗುತ್ತಾರೆ. ಆದರೆ, ಒಬ್ಬ ನಿರ್ದೇಶಕ ಮತ್ತು ಛಾಯಾಗ್ರಾಹಕ ಕೊನೆಯವರೆಗೂ ಚಿತ್ರದ ಜೊತೆಗೆ ಪಯಣ ಮಾಡುತ್ತಾನೆ. ಅದಲ್ಲದೆ ಛಾಯಾಗ್ರಾಹಕ ಆದರೆ ತುಂಬಾ ಸುತ್ತಬಹುದು ಎಂಬ ಆಸೆ ಇತ್ತು.

ಆದರೆ, ಪೂಣೆಗೆ ಹೋಗಿ ಸಿನಿಮಾಟೊಗ್ರಫಿ ಕಲಿಯಲು ಸಾಧ್ಯವಾಗದಿದ್ದರಿಂದ, ಫೈನ್‌ ಆರ್ಟ್ಸ್ ಮಾಡಿದೆ. ಪ್ರಾಡಕ್ಟ್ ಫೋಟೋಸ್‌, ಇಂಟೀರಿಯರ್‌ ಡಿಸೈನ್‌, ಫ್ಯಾಶನ್‌ ಫೋಟೋಗ್ರಫಿ ಅಂತ ದೇಶದ  ತುಂಬಾ ಓಡಾಡಿದೆ. ಎಲ್ಲಾ ದೊಡ್ಡ ಬ್ರಾಂಡ್‌ಗಳಿಗೆ ಸ್ಟಿಲ್‌ ಫೋಟೋಗ್ರಾಫ‌ರ್‌ ಆಗಿ ಕೆಲಸ ಮಾಡಿದೆ. ಅಲ್ಲಿಯವರೆಗೂ ನಾನು ಸಿನಿಮಾಗೆ ಬರಬಹುದು ಅಂತ ಯೋಚಿಸಿಯೇ ಇರಲಿಲ್ಲ. ಅದೊಮ್ಮೆ ...' ಅಂತ ಹೇಳಿ ಒಂದು ಸಣ್ಣ ಪಾಸ್‌ ಕೊಟ್ಟರು ಮಹೇಂದ್ರ ಸಿಂಹ.

ಎಲ್ಲಾ ಸರಿ, ನಾನೃ ಯಾಕೆ?: "ಒಂದು ದಿವಸ ಯಾವುದೋ ಆ್ಯಡ್‌ ಶೂಟ್‌ಗೆ ಸಂತೋಷ್‌ ರೈ ಪಾತಾಜೆ ಬಂದಿದ್ದರು. ಪರಿಚಯವಾಯಿತು. ಆಗ ಸಂತೋಷ್‌ ಒಂದು ಸಿನಿಮಾ ಮಾಡುತ್ತಿರುವುದಾಗಿ ಹೇಳಿದರು. ಅದೇ "ಸವಿಸವಿ ನೆನಪು'. ಅದಕ್ಕೆ ಫೋಟೋ ಶೂಟ್‌ ಮಾಡಿಕೊಡ್ತೀರಾ ಅಂತ ಕೇಳಿದರು. ಅಲ್ಲಿಯವರೆಗೂ ನನಗೆ ಸಿನಿಮಾ ಯೋಚನೆಯೇ ಇರಲಿಲ್ಲ. ಯಾಕೆ ಟ್ರೈ ಮಾಡಬಾರದು ಅಂತ ಫೋಟೋ ತೆಗೆದುಕೊಟ್ಟೆ.

ಪೋಸ್ಟರ್‌ ಬಹಳ ಚೆನ್ನಾಗಿ ಬಂತು. ಆಮೇಲೆ ನಾನು ಯಾರನ್ನೂ ಕೇಳಲಿಲ್ಲ. ತನ್ನಿಂತಾನೆ ಒಬ್ಬರಿಗೊಬ್ಬರು ಕರೆದು ತಮ್ಮ ಚಿತ್ರಗಳ ಫೋಟೋ ಶೂಟ್‌ ಮಾಡೋದಕ್ಕೆ ಅವಕಾಶ ಕೊಟ್ಟರು. "ಮೈಲಾರಿ', "ಜಾಕಿ' ಚಿತ್ರಗಳು ಹೆಸರು ತಂದುಕೊಟ್ಟವು. ಹೀಗಿರುವಾಗಲೇ ಒಮ್ಮೆ ಗುರು ಪ್ರಸಾದ್‌ ಅವರು ತಮ್ಮ ಪುಸ್ತಕಕ್ಕೆ ಕವರ್‌ ಪೇಜ್‌ ಶೂಟ್‌ ಮಾಡಿಸುವುದಕ್ಕೆ ಬಂದಿದ್ದರು. ಆಗ ಅವರು "ಡೈರೆಕ್ಟರ್ ಸ್ಪೆಷಲ್‌' ಚಿತ್ರಕ್ಕೆ ಛಾಯಾಗ್ರಹಣ ಮಾಡಿ ಎಂದರು.

ಅದಾದ ಮೇಲೆ ಪಿ. ಶೇಷಾದ್ರಿ ಅವರ "ಭಾರತ್‌ ಸ್ಟೋರ್'ಗೆ ಛಾಯಾಗ್ರಹಣ ಮಾಡಿದೆ. ಆಮೇಲೆ ಒಂದಿಷ್ಟು ದಿನ ಫೋಟೋಗ್ರಫಿಯಲ್ಲಿ ಬಿಝಿ ಇದ್ದೆ. ಅದೊಂದು ದಿನ ಸೂರಿ ಫೋನ್‌ ಮಾಡಿ, "50 ದಿನ ಫ್ರೀ ಇದ್ದೀರಾ, ಒಟ್ಟಿಗೆ ಕೆಲಸ ಮಾಡೋಣ' ಎಂದರು. ಚಿತ್ರದ ಸ್ಟಿಲ್‌ ತೆಗೆದುಕೊಡೋಕೆ ಕೇಳುತ್ತಿದ್ದಾರೆ ಅಂತ ಅಂದುಕೊಂಡೆ. ಆದರೆ, ಅವರು "ಟಗರು' ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿ ಎಂದರು.

ಆ ಕ್ಷಣಕ್ಕೆ ನನಗೆ ಬಂದ ಪ್ರಶ್ನೆ ನಾನು ಯಾಕೆ ಅಂತ? ಅದನ್ನೇ ಕೇಳಿದೆ. "ನನಗೇನೋ ಹೊಸದು ಬೇಕು. ಅದರ ಹುಡುಕಾಟದಲ್ಲಿದ್ದೇನೆ. ನಿಮಗೆ ಕಮರ್ಷಿಯಲ್‌ ಸಿನಿಮಾ ಹೊಸದು. ಇಬ್ಬರೂ ಸೇರಿ ಒಂದು ಪ್ರಯೋಗ ಮಾಡೋಣ ಎಂದರು. ಅಲ್ಲಿಂದ "ಟಗರು' ಶುರುವಾಯ್ತು' ಎಂದು ನೆನಪಿಸಿಕೊಳ್ಳುತ್ತಾರೆ ಮಹೇಂದ್ರ ಸಿಂಹ.

ಒಂದೇ ತರಹ ಕೆಲಸ ಮಾಡೋಕೆ ಬೋರು: ಮಹೇಂದ್ರ ಸಿಂಹ ಮಾಡಿರುವ ಮೂರೂ ಚಿತ್ರಗಳು ಒಂದೊಂದು ಜಾನರ್‌ನ ಸಿನಿಮಾಗಳು. ಅದೆಷ್ಟು ಕಷ್ಟ ಎಂದು ಕೇಳಿದರೆ, "ನನ್ನ ಸಮಸ್ಯೆ ಏನು ಎಂದರೆ, ನಿನ್ನ ಮಾಡಿದ್ದನ್ನು ಇಂದು ಮಾಡೋಕೆ ಆಗಲ್ಲ. ನನಗೆ ಒಂದೇ ತರಹ ಕೆಲಸ ಮಾಡೋಕೆ ಆಗಲ್ಲ. ತುಂಬಾ ಏಕತಾನತೆ ಕಾಡುತ್ತದೆ. ನನಗ್ಯಾವಗಲೂ ಜನ ಹೇಗೆ ದಿನ ಆಫೀಸ್‌ಗೆ ಹೋಗಿ ಒಂದೇ ತರಹದ ಕೆಲಸ ಮಾಡುತ್ತಾರೆ ಎಂಬ ಪ್ರಶ್ನೆ ಕಾಡುತ್ತದೆ.

ಈ ಪ್ರಶ್ನೆಯಿಂದಲೇ ನಾನು ಏನೇನೋ ಹೊಸದನ್ನು ಹುಡುಕುತ್ತಿರುತ್ತೀನಿ. ಯಾವುದೇ ತರಹದ ಚಿತ್ರವಾದರೂ, ನಿರ್ದೇಶಕರನ್ನು ಹೇಗೆ ಕನ್ವಿನ್ಸ್‌ ಮಾಡಬಹುದು ಎಂಬ ನಿರಂತರ ಪ್ರಯತ್ನ ಮಾಡುತ್ತಿರುತ್ತೀನಿ. ಉದಹಾರಣೆಗೆ, ಪಿ. ಶೇಷಾದ್ರಿ ತರಹದವರು ಕೋಪ ಮಾಡಿಕೊಂಡರೆ, ಆ ಕೋಪಕ್ಕೂ ಒಂದು ತೂಕ ಇರುತ್ತದೆ. ಅವರಿಗೆ ನನ್ನ ಕೆಲಸದಿಂದ ನಿರಾಸೆಯಾಗಬಾರದು,

ಕೋಪ ಬರಬಾರದು ಎಂಬ ಪ್ರಯತ್ನ ನಿರಂತರವಾಗಿ ನನ್ನ ಕಡೆಯಿಂದ ಇರುತ್ತದೆ. ಇನ್ನು ಸೂರಿ ಅವರ ಕೋಪ, ಯೋಚನೆ, ವಿಲಕ್ಷಣತೆ ಎಲ್ಲವೂ ಚಂದ. ಅವರು ಕೋಪ ಮಾಡಿಕೊಳ್ಳದಂತೆ ಕೆಲಸ ಮಾಡುವುದೇ ಒಂದು ಸವಾಲು. ನನ್ನ ಯಾರು ಚಾಲೆಂಜ್‌ ಮಾಡ್ತಾರೋ ಅವರೊಂದಿಗೆ ಕೆಲಸ ಮಾಡುವುದಕ್ಕೆ ನನಗೆ ಬಹಳ ಇಷ್ಟ. ಹಾಗಾಗಿ ಕೆಲಸ ಮಾಡುವುದಕ್ಕೆ ಒಪ್ಪುತ್ತೀನಿ' ಎನ್ನುತ್ತಾರೆ ಮಹೇಂದ್ರ ಸಿಂಹ.

ಎರಡೂ ಕಡೆ ಕತ್ತಲೆ-ಬೆಳಕಿನಾಟವೇ: ಒಂದು ಕಡೆ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡುತ್ತಲೇ, ಇಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳೋದಕ್ಕೆ ಸಾಧ್ಯವಾ ಎಂಬುದು ಮುಂದಿನ ಪ್ರಶ್ನೆ. "ಆ ಕ್ಷೇತ್ರ ಸಂಪೂರ್ಣವಾಗಿ ಬಿಟ್ಟು ಬರೋಕೆ ಆಗಲ್ಲ. ಅಲ್ಲಿ ನನ್ನ ಕ್ಲೈಂಟ್ಸ್‌ ಇದ್ದಾರೆ. ಅವರಿಗೆ ಇಲ್ಲ ಅನ್ನೋಕೆ ಆಗಲ್ಲ. ಹಾಗಾಗಿ ಫ್ರೀ ಇದ್ದಾಗ ಅಲ್ಲೂ ಇರುತ್ತೇನೆ. ಹಾಗೆ ನೋಡಿದರೆ, ಅದು ಬೇರೆ, ಇದು ಬೇರೆ ಅಂತ ಬೇರೆ ಮಾಡುವುದಕ್ಕೆ ಆಗುವುದಿಲ್ಲ. ಅದೂ ವಿಷ್ಯುಯಲ್‌ ಕೆಲಸವೇ. ಅದೂ ಕತ್ತಲೆ-ಬೆಳಕಿನ ಪ್ರಪಂಚವೇ. ಅದು ಸಿಂಗಲ್‌ ಫ್ರೆàಮ್‌, ಇದು 24 ಫ್ರೆàಮ್‌. ಹಾಗಾಗಿ ಎರಡನ್ನೂ ತೂಗಿಸಿಕೊಂಡು ಹೋಗುತ್ತೇನೆ' ಎಂಬ ಉತ್ತರ ಅವರಿಂದ ಬರುತ್ತದೆ.

ಹಿಂಸೆ ಎಂದುಕೊಂಡರೆ ಹೊಳೆಯಲ್ಲ: "ಟಗರು' ಚಿತ್ರದಲ್ಲಿ ಕೆಲಸ ಮಾಡಿದ್ದು ಮಾತ್ರ ಮರೆಯದ ಅನುಭವ ಎಂಬ ಅಭಿಪ್ರಾಯ ಮಹೇಂದ್ರ ಸಿಂಹ ಅವರದ್ದು. "ಅದೊಂಥರಾ ಕುಲುಮೆ ಇದ್ದಂತೆ. ಎಷ್ಟು ಸುಡುತ್ತೇವೋ, ಅಷ್ಟೇ ಶೈನ್‌ ಆಗುತ್ತೇವೆ. ಅದನ್ನ ಹಿಂಸೆ ಎಂದುಕೊಂಡರೆ ಹೊಳೆಯಲ್ಲ. ಧೂಳಿನಿಂದ ಅದೆಷ್ಟು ಬಾರಿ ಹುಷಾರು ತಪ್ಪಿತೋ ಗೊತ್ತಿಲ್ಲ. ಇನ್ನು ಹುಬ್ಬಳ್ಳಿಯಲ್ಲಿ ಗಾಳಿಯ ಸೌಂಡ್‌ಗೆ ಕಿವಿ ನೋವು ಬರುತಿತ್ತು.

ಯಾರಿಗೆ ಸಿಗುತ್ತೆ ಹೇಳಿ ಅಂಥದ್ದೊಂದು ಅವಕಾಶ? ಒಂದೇ ಚಿತ್ರದಲ್ಲಿ ಇಂಟೀರಿಯರ್‌, ಮಳೆ, ರಾತ್ರಿ, ಸಮುದ್ರ, ಫೈಟು, ಚೇಸು ಎಲ್ಲಾ ತರಹದ ಚಿತ್ರೀಕರಣ ಇತ್ತು. ಹಾಗೆ ನೋಡಿದರೆ, ಕೆಲವು ದೃಶ್ಯಗಳಿಗೆ ಮುಂಚೆ ರೆಫ‌ರೆನ್ಸೇ ಇರಲಿಲ್ಲ. ರಸೆಲ್‌ ಮಾರ್ಕೆಟ್‌ ಅಥವಾ ಯಾವುದೋ ಚಿತ್ರಮಂದಿರದ ಪ್ರೊಜೆಕ್ಟರ್‌ ರೂಮ್‌ನಲ್ಲಿ ಯಾರೂ ಚಿತ್ರೀಕರಣ ಮಾಡಿದ ನೆನಪಿರಲಿಲ್ಲ.

ಹಾಗಾಗಿ ಎಲ್ಲವನ್ನೂ ಫ್ರೆಶ್‌ ಆಗಿ ಮಾಡಬೇಕಿತ್ತು ಮತ್ತು ಆ ಕ್ಷಣಕ್ಕೆ ಏನೇನು ಸಿಗುತ್ತದೋ ಅದರಲ್ಲೇ ಮಾಡಬೇಕಿತ್ತು. ಇರೋ ಜಾಗ ಮತ್ತು ಉಪಕರಣಗಳಲ್ಲೇ ಒಂದು ಬೇರೆ ಪ್ರಯೋಗ ಮಾಡಬೇಕಿತ್ತು. ಇದು ಯಾವುದೇ ಒಬ್ಬ ಕ್ರಿಯೇಟಿವ್‌ ಮನುಷ್ಯನಿಗೂ ಒಂದು ದೊಡ್ಡ ಸವಾಲು. ಆ ಮಟ್ಟಿಗೆ "ಟಗರು' ಚಿತ್ರವನ್ನು ಮರೆಯೋಕೆ ಸಾಧ್ಯವೇ ಇಲ್ಲ' ಎನ್ನುತ್ತಾರೆ ಸಿಂಹ.

ಕಥೆ ಮತ್ತು ನಿರ್ದೇಶಕರಿಗೆ ಹೇಗೆ ತಮ್ಮ ಕೆಲಸ ಬದ್ಧವಾಗಿರುತ್ತದೋ, ಅದೇ ತರಹ ಪ್ರೇಕ್ಷಕನಿಗೆ ಬದ್ಧವಾಗಿರುತ್ತದಂತೆ. "ನನ್ನ ನಂಬಿಕೆ ಏನೆಂದರೆ, ವೀಕ್ಷಕನಿಗೆ ಬದ್ಧವಾಗಿರಬೇಕು. ಪ್ರೇಕ್ಷಕರು ನಾವೇನೋ ಮಾಡಿದ್ದೀವಿ ಅಂತ ನಿರೀಕ್ಷೆ ಇಟ್ಟು ಬಂದಿರುತ್ತಾರೆ. ಅವರು ಮೊದಲು ಖುಷಿಪಡಬೇಕು. ಅವರಿಗೆ ಸಂತೃಪ್ತಿಯಾಗಬೇಕು. ಅವನು ಖುಷಿಯಾದರೆ ಎಲ್ಲರೂ ಖುಷಿ. ಹಾಗಾಗಿ ನನ್ನ ಟಾರ್ಗೆಟ್‌ ಆ ಪ್ರೇಕ್ಷಕ ಆಗಿರುತ್ತಾನೆ.

ನಿಜ ಹೇಳಬೇಕೆಂದರೆ, ನಾವು ಅವರಿಗೆ ಅದೆಷ್ಟೋ ಜಾಗವನ್ನು ಇದುವರೆಗೂ ತೋರಿಸಿಲ್ಲ. ನಾವು ಅವರಿಗೆ ಹೊಸ ಹೊಸ ಲೊಕೇಶನ್‌ಗಳು, ಪಾತ್ರಗಳು, ಕೆಲಸಗಳನ್ನು ತೋರಿಸಬೇಕು. ಆ ನಿಟ್ಟಿನಲ್ಲಿ ನನ್ನ ಗಮನವಿದೆ. ಅದೇ ಕಾರಣಕ್ಕೆ ಸಾಕಷ್ಟು ಹೋಂವರ್ಕ್‌ ಮಾಡಿ ಹೋಗುತ್ತೇನೆ. ನನ್ನ ಸಾಧ್ಯತೆಗಳನ್ನು ಹೇಳುತ್ತೇನೆ. "ರುಸ್ತುಂ' ಚಿತ್ರ ಶುರುವಾಗುವುದಕ್ಕೂ ಮುನ್ನ ರವಿ ವರ್ಮ ಅವರಿಗೆ ಏನು ಮಾಡಬಹುದು ಎಂದು ಹೇಳಿದೆ. ನಿರ್ದೇಶರಿಗೆ ಒಮ್ಮೆ ನಂಬಿಕೆ ಬಂದರೆ, ಆ ನಂತರ ಬೇರೆ ಯಾವ ವಿಷಯಕ್ಕೂ ತಲೆ ಹಾಕುವುದಿಲ್ಲ. ನನ್ನ ಕೆಲಸ ನನ್ನದು' ಎಂದು ಮಾತು ಮುಗಿಸುತ್ತಾರೆ ಮಹೇಂದ್ರ ಸಿಂಹ.

ಬರಹ: ಭುವನ್‌


Trending videos

Back to Top