CONNECT WITH US  

ಮೊದಲು ಅವಮಾನ; ಈಗ ಸನ್ಮಾನ: ಕಿರಣ್‌ ‍ಫ್ರಮ್‌ ಹಂಪಾಪುರ್‌

ರೂಪತಾರಾ

ಸುಮಾರು 20 ವರ್ಷದ ಹಿಂದಿನ ಮಾತು. ಆ ಹುಡುಗನ ಅಪ್ಪ, ಅಮ್ಮ ತನ್ನ ಮಗ ಚೆನ್ನಾಗಿ ಓದಲೆಂದು, ವಕೀಲರೊಬ್ಬರ ಮನೆಯಲ್ಲಿ ಬಿಟ್ಟಿದ್ದರು. ಆಗಷ್ಟೇ ಎಸ್ಸೆಸ್ಸೆಲ್ಸಿ ಮುಗಿಸಿ, ಪಿಯುಸಿ  ಓದುತ್ತಿದ ಆ ಹುಡುಗ, ಫೇಲ್‌ ಆಗಿಬಿಟ್ಟ! ತನ್ನ ಬಗ್ಗೆ ದೊಡ್ಡ ಕನಸು ಕಟ್ಟಿಕೊಂಡಿದ್ದ ಅಪ್ಪ, ಅಮ್ಮನಿಗೆ ಮುಖ ತೋರಿಸೋಕೆ ಭಯಪಟ್ಟ ಹುಡುಗನಿಗೆ ಮುಂದೇನು ಎಂಬ ಪ್ರಶ್ನೆ ಎದುರಾಗಿತ್ತು.

ಫೇಲ್‌ ಆದ ವಿಷಯಕ್ಕೆ ಅವನ ಅಪ್ಪ, ಸಿಟ್ಟಿನಿಂದ ಅಂಗಿ ಬಿಚ್ಚಿಸಿ, ಓಡಿಸಿಕೊಂಡು ಹೋಗಿದ್ದರು. "ನನಗೆ ಅವಮಾನ ಮಾಡಿಬಿಟ್ಟೆ, ನೀನು ನನ್ನ ಕಣ್ಣ ಮುಂದೆ ಇರಬೇಡ' ಅಂತ ಅವರಪ್ಪ ರೇಗಾಡಿದ್ದರು. ಅಪ್ಪನ ಭಯಕ್ಕೆ ಆ ಹಳ್ಳಿ ಬಿಟ್ಟ ಹುಡುಗ, ಬೆಂಗಳೂರಿಗೆ ಬಂದು ಬಿದ್ದದ್ದು ಗಾಂಧಿನಗರಕ್ಕೆ. ಅಲ್ಲಿ ಸುಮಾರು ವರ್ಷಗಳ ಕಾಲ ಕಷ್ಟಪಟ್ಟು ದುಡಿದು, ಈಗ ಸಣ್ಣದ್ದೊಂದು ಜಾಗ ಮಾಡಿಕೊಂಡು, ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಈಗ ಅದೇ ಅಪ್ಪ-ಅಮ್ಮ, ಮಗನ ಸಾಧನೆ ನೋಡಿ ಹೆಮ್ಮೆ ಪಡುತ್ತಿದ್ದಾರೆ.  ಅವಮಾನಿಸಿದ ಊರಿನವರು ಊರಿಗೆ ಕರೆದು ಸನ್ಮಾನಿಸುತ್ತಿದ್ದಾರೆ ... ಅಂದಹಾಗೆ, ಅಂದು ಅವಮಾನ ಕಂಡು ಇಂದು ಸನ್ಮಾನಕ್ಕೆ ಪಾತ್ರವಾದ ಆ ಹುಡುಗ ಬೇರಾರೂ ಅಲ್ಲ, ಛಾಯಾಗ್ರಾಹಕ ಕಿರಣ್‌ ಹಂಪಾಪುರ. ತನ್ನ ಸಿನಿ ಜರ್ನಿ ಕುರಿತು "ರೂಪತಾರಾ' ಜೊತೆ ಕಿರಣ್‌ ಒಂದಷ್ಟು ಮಾತನಾಡಿದ್ದಾರೆ.

ಲೈಟ್‌ ಬಾಯ್‌ ಆಗಿ ಎಂಟ್ರಿ: ಕೆ.ಆರ್‌.ನಗರ ಸಮೀಪದ ಹಂಪಾಪುರ ಎಂಬ ಹಳ್ಳಿಯಿಂದ ಬಂದ ಕಿರಣ್‌, ಇಂದು ತಾನೊಬ್ಬ ಒಳ್ಳೆಯ ಛಾಯಾಗ್ರಾಹಕ ಎಂದು ಗುರುತಿಸಿಕೊಂಡಿದ್ದಾರೆ. ಇದರ ಹಿಂದೆ ಎರಡು ದಶಕದ ಶ್ರಮವಿದೆ ಅಂದರೆ ನಂಬಲೇಬೇಕು. ಸಾಧಾರಣ ಕುಟುಂಬದಿಂದ ಬಂದ ಕಿರಣ್‌ ತನ್ನ ಹೆಸರ ಮುಂದೆ ತನ್ನೂರಿನ ಹೆಸರನ್ನೂ ಸೇರಿಸಿಕೊಂಡಿದ್ದಾರೆ. ತಾನು ಬೆಳೆದಂತೆ ತನ್ನೂರಿನ ಹೆಸರನ್ನೂ ಗುರುತಿಸುತ್ತಿರುವುದಕ್ಕೆ ಸಹಜವಾಗಿಯೇ ಕಿರಣ್‌ಗೆ ಹೆಮ್ಮೆ ಇದೆ.

ಅಪ್ಪ, ಅಮ್ಮ ಮಗ ಚೆನ್ನಾಗಿ ಓದಬೇಕು ಅಂತ ಆಸೆಪಟ್ಟರು. ಆದರೆ, ಹಾಗೆ ಮಾಡದ ಕಿರಣ್‌ ಹಂಪಾಪುರ, ತನ್ನ ಆಸೆ ಈಡೇರಿಸಿಕೊಂಡು, ಈಗ ಅಪ್ಪ, ಅಮ್ಮನನ್ನೂ ಖುಷಿಗೊಳಿಸಿದ್ದಾರೆ. ಆ ದಿನಗಳಲ್ಲಿ ಕಷ್ಟ ಅನುಭವಿಸಿದ್ದ ಕಿರಣ್‌ ಹಂಪಾಪುರ್‌, ಇಂದು ಎಲ್ಲರೂ ಮೆಚ್ಚಿಕೊಳ್ಳುವ ಕೆಲಸ ಮಾಡಿದ್ದಾರೆ. ದೂರಿದವರೆಲ್ಲರೂ ಇಂದು ಹತ್ತಿರವಾಗಿದ್ದಾರೆ. "ಈ ಜನ್ಮಕ್ಕೆ ಇದಕ್ಕಿಂತ ದೊಡ್ಡ ಖುಷಿ ಇನ್ನೇನಿದೆ' ಎನ್ನುತ್ತಾರೆ ಕಿರಣ್‌ ಹಂಪಾಪುರ.

ಕಿರಣ್‌ 1999ರಲ್ಲಿ ಲೈಟ್‌ ಬಾಯ್‌ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಚಿತ್ರರಂಗ ಪ್ರವೇಶ ಮಾಡಬೇಕು ಎಂಬ ಆಸೆ ಕಟ್ಟಿಕೊಂಡಿದ್ದ ಕಿರಣ್‌ಗೆ ಮೊದಲು ಅವಕಾಶ ಸಿಕ್ಕಿದ್ದು ಕಿರುತೆರೆಯಲ್ಲಿ. ಅಲ್ಲೊಂದಷ್ಟು ಕೆಲಸ ಮಾಡಿದ ಅವರು, ಇನ್ನೇನು ಸಿನಿಮಾ ರಂಗಕ್ಕೆ ಹೋಗಬೇಕು ಎಂಬ ತಯಾರಿ ನಡೆಸಿದಾಗ, ಡಾ.ರಾಜಕುಮಾರ್‌ ಅವರ ಕಿಡ್ನಾಪ್‌ ಆಗಿಹೋಯಿತು. ಆಗ ಚಿತ್ರರಂಗ ಮೂರು ತಿಂಗಳ ಕಾಲ ತಟಸ್ಥಗೊಂಡಿತ್ತು.

ಪುನಃ ರಾಜಕುಮಾರ್‌ ಅವರು ಹಿಂದಿರುಗಿದ ನಂತರ ಸಿನಿಮಾ ಚಟುವಟಿಕೆ ಶುರುವಾಯ್ತು. ಕಿರಣ್‌ ಕೂಡ ತನ್ನ ಪ್ರಯತ್ನ ಮುಂದುವರೆಸಿದರು. ದೊಡ್ಡ ಕಂಪೆನಿಯಲ್ಲಿ ಕೆಲಸ ಮಾಡಬೇಕು ಅಂತ ನಿರ್ಧರಿಸಿದ ಅವರಿಗೆ ಸಿಕ್ಕಿದ್ದು ಈಶ್ವರಿ ಕಂಪೆನಿ. ಆಗ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ರವಿಚಂದ್ರನ್‌ ತಮ್ಮ ಸಹೋದರ ಬಾಲಾಜಿಗೆ "ಅಹಂ ಪ್ರೇಮಾಸ್ಮಿ' ಚಿತ್ರ ಮಾಡುತ್ತಿದ್ದರು.

ಆ ಚಿತ್ರಕ್ಕೆ ಕೆಲಸ ಮಾಡುವ ಅವಕಾಶ ಪಡೆದ ಕಿರಣ್‌, ಅಲ್ಲಿಂದ ತನ್ನ ಸಿನಿಪಯಣ ಶುರು ಮಾಡಿದರು. ಅಲ್ಲಿಂದ ಮೆಲ್ಲನೆ ರಾಕ್‌ಲೈನ್‌ ವೆಂಕಟೇಶ್‌ ಅವರ ಯುನಿಟ್‌ನಲ್ಲೂ ಕೆಲಸ ಮಾಡುವ ಅವಕಾಶ ಪಡೆದರು. ಅಷ್ಟೊತ್ತಿಗಾಗಲೇ ದೊಡ್ಡ ದೊಡ್ಡ ಛಾಯಾಗ್ರಾಹಕರ ಬಳಿ ಕೆಲಸ ಮಾಡಿದ್ದರು. ಕ್ಯಾಮೆರಾ ಆಸಕ್ತಿಯನ್ನೂ ಬೆಳೆಸಿಕೊಂಡಿದ್ದರು. ಹೀಗೆ ಐದು ವರ್ಷಗಳ ಕಾಲ ಕೆಲಸ ಮಾಡಿದ  ಕಿರಣ್‌ಗೆ ಸಿಕ್ಕಿದ್ದು ಛಾಯಾಗ್ರಾಹಕ ಶೇಖರ್‌ ಚಂದ್ರ.

"ನೀನು ಇನ್ನು ಮುಂದೆ ನನ್ನ ಬಳಿ ಕೆಲಸ ಮಾಡು' ಅಂತ ಶೇಖರ್‌ ಚಂದ್ರ ಹೇಳಿದ್ದೇ ತಡ, ಅಲ್ಲಿಂದ "ಅರಮನೆ', "ಸರ್ಕಸ್‌', "ಪುಂಡ', "ಕೃಷ್ಣನ್‌ ಲವ್‌ಸ್ಟೋರಿ' ಹೀಗೆ ಇನ್ನು ಹಲವು ಚಿತ್ರಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದೆ. ಸುಧಾಕರ್‌ ಬಳಿಯೂ ಎರಡು ಚಿತ್ರಗಳಲ್ಲಿ ಕೆಲಸ ಮಾಡಿದೆ' ಎಂದು ತನ್ನ ಜರ್ನಿ ಬಗ್ಗೆ ವಿವರಿಸುತ್ತಾರೆ ಅವರು."ಕೃಷ್ಣನ್‌ ಲವ್‌ ಸ್ಟೋರಿ' ಚಿತ್ರದಲ್ಲಿ ಬಿ.ಎಂ.ಗಿರಿರಾಜ್‌ ಕೂಡ ಶಶಾಂಕ್‌ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.

ಅದೇ ವೇಳೆ ಗಿರಿರಾಜ್‌ಗೆ ಒಂದು ಚಿತ್ರ ನಿರ್ದೇಶನ ಮಾಡುವ ಅವಕಾಶ ಬಂದಿತ್ತು. ಆಗ, ಶೇಖರ್‌ ಚಂದ್ರ ಅವರ ಬಳಿ, "ನನಗೆ ಅಜೇಯ್‌ ರಾವ್‌ ಚಿತ್ರ ಸಿಕ್ಕಿದೆ. ಈ ಟೀಮ್‌ನಲ್ಲಿ ಛಾಯಾಗ್ರಾಹಕರನ್ನಾಗಿ ಯಾರನ್ನು ಮಾಡಲಿ' ಅಂತ ಕೇಳಿದ್ದರು. ತಕ್ಷಣವೇ ಶೇಖರ್‌ ಚಂದ್ರ, "ಕಿರಣ್‌ಗೆ ಅವಕಾಶ ಕೊಡು, ಅವನಿಗೆ ಲೈಟಿಂಗ್‌ ಸೆನ್ಸ್‌ ಇದೆ, ಛಾಯಗ್ರಹಣದಲ್ಲಿ ಆಸಕ್ತಿಯೂ ಇದೆ' ಅಂದಿದ್ದರು.

ಹಾಗೆ ಹೇಳಿದ್ದರಿಂದ, ಗಿರಿರಾಜ್‌ ನನಗೆ "ಅದ್ವೆ„ತ' ಚಿತ್ರಕ್ಕೆ ಛಾಯಾಗ್ರಹಣ ಮಾಡಲು ಅವಕಾಶ ಕೊಟ್ಟರು. ಅದು ಇಬ್ಬರಿಗೂ ಮೊದಲ ಚಿತ್ರ. ಸೂಪರ್‌ 35 ಕ್ಯಾಮೆರಾ ಬಳಕೆ ಮಾಡುವ ಟೈಮ್‌ನಲ್ಲಿ ನಾವು ಸೂಪರ್‌ 16 ಕ್ಯಾಮೆರಾ ಮೊರೆ ಹೋದೆವು. ಸ್ವಲ್ಪ ಹಿಂದಕ್ಕೆ ಹೋಗೋಕೆ ಕಾರಣ, ನಾವು ಈ ಚಿತ್ರದಲ್ಲಿ ಏನಾದರೊಂದು ಸಾಬೀತುಪಡಿಸಬೇಕು ಎಂಬ ಕಾರಣಕ್ಕೆ.

ಚಾಲೆಂಜಿಂಗ್‌ನಲ್ಲೇ ಆ ಚಿತ್ರ ಮಾಡಿದೆವು. ಅಲ್ಲಿಂದ ನಮ್ಮಿಬ್ಬರ ಜರ್ನಿ ಜೊತೆಯಾಗಿಯೇ ಸಾಗಿಬಂದಿದೆ. "ಅದ್ವೆ„ತ' ಚಿತ್ರದಿಂದ "ಅಮರಾವತಿ'ವರೆಗೂ ಅವರೊಂದಿಗೆ ಕೆಲಸ ಮಾಡಿದ್ದೇನೆ. 2001 ರಲ್ಲಿ ಶುರುವಾದ ನನ್ನ ಕೆಲಸ ಇಲ್ಲಿಯವರೆಗೂ ಚೆನ್ನಾಗಿ ನಡೆಯುತ್ತಲೇ ಬಂದಿದೆ. ಇದುವರೆಗೆ ಸುಮಾರು 20 ಚಿತ್ರಗಳಿಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿದ ಖುಷಿ ಇದೆ' ಎನ್ನುತ್ತಾರೆ ಕಿರಣ್‌ ಹಂಪಾಪುರ.

ಛಾಯಗ್ರಾಹಕನಿಗೂ ಜವಾಬ್ದಾರಿ ಇರುತ್ತೆ: "ಅದ್ವೆ„ತ' ಸಿನಿಮಾ ಕೆಲಸ ಮೆಚ್ಚಿ ಯುವ ನಿರ್ದೇಶಕ ಸಂತೋಷ್‌, "ಗೊಂಬೆಗಳ ಲವ್‌' ಚಿತ್ರದಲ್ಲಿ ಅವಕಾಶ ಕೊಟ್ಟರು. ಅದು ಹೆಸರು ತಂದುಕೊಟ್ಟಿತು. ನಂತರ ಗಿರಿರಾಜ್‌ "ಜಟ್ಟ' ಚಿತ್ರಕ್ಕೆ ಕರೆದರು. ಅದೂ ಕೂಡ ಒಳ್ಳೆಯ ಹೆಸರು ತಂದುಕೊಟ್ಟಿತು. ಆ ಬಳಿಕ, "ನಗೆಬಾಂಬ್‌', "ರೇಸ್‌', "ತುಂಡೈಕ್ಳ ಸಾವಾಸ', "ಮಡಮಕ್ಕಿ', "ಬ್ಯೂಟಿಫ‌ುಲ್‌ ಮನಸುಗಳು', "ವೆನಿಲ್ಲಾ', "ಪ್ರಯಾಣಿಕರ ಗಮನಕ್ಕೆ', "ಲೌಡ್‌ ಸ್ಪೀಕರ್‌' ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. 

"ನನಗೆ "ಜಟ್ಟ', "ಗೊಂಬೆಗಳ ಲವ್‌', "ಅಮರಾವತಿ', "ಮಡಮಕ್ಕಿ', "ಬ್ಯೂಟಿಫ‌ುಲ್‌ ಮನಸುಗಳು' ಒಳ್ಳೆಯ ಹೆಸರು ತಂದುಕೊಟ್ಟ ಚಿತ್ರಗಳು, ನನಗೆ ತಾಂತ್ರಿಕವಾಗಿ ಕೆಲವು ರಿಸ್ಕೀ ಶಾಟ್ಸ್‌ಗಳನ್ನು ಸಂಯೋಜನೆ ಮಾಡುವುದು ತುಂಬಾ ಚಾಲೆಂಜಿಂಗ್‌ ಎನಿಸುತ್ತದೆ. ಲೈಟಿಂಗ್ಸ್‌, ಫೋಕಸ್‌, ಲೆನ್ಸ್‌ ಇವುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ತೀನಿ. ನನಗೆ ಯಾವ ದೃಶ್ಯ, ಲೊಕೇಷನ್‌ ಎಲ್ಲಿ, ಆರ್ಟಿಸ್ಟ್‌ ಯಾರೆಲ್ಲಾ ಇರುತ್ತಾರೆ ಎಂಬುದು ಮೊದಲೇ ಗೊತ್ತಿರುತ್ತೆ. ಎಲ್ಲವನ್ನು ತಿಳಿದುಕೊಂಡೇ ನಾನು ನನಗೆ ಏನೆಲ್ಲಾ ಬೇಕು, ಬೇಡಗಳ ಬಗ್ಗೆ ನಿರ್ದೇಶಕರ ಜೊತೆ ಚರ್ಚಿಸಿ, ಪರಿಕರ ಪಡೆದುಕೊಳ್ತೀನಿ.

ಎಲ್ಲವನ್ನು ಒದಗಿಸಿಕೊಟ್ಟರೆ, ಆ ಜವಾಬ್ದಾರಿ ಹೆಚ್ಚಾಗಿರುತ್ತೆ. ನನ್ನ ತಂಡ ಕೂಡ ಅಷ್ಟೇ ಜವಬ್ದಾರಿಯಿಂದ ಕೆಲಸ ಮಾಡುತ್ತೆ. ಕೆಲವೊಮ್ಮೆ ಆ್ಯಕ್ಷನ್‌ ದೃಶ್ಯ ಸೆರೆಹಿಡಿಯೋದು ತುಂಬಾ ಕಷ್ಟ. ಅದನ್ನು ಅದ್ಭುತವಾಗಿ ಸೆರೆಹಿಡಿಯೋದೇ ಚಾಲೆಂಜ್‌. ಅಂತೆಯೇ, ಚೇಸಿಂಗ್‌ ಕೂಡ ಅಷ್ಟೇ ರಿಸ್ಕಾ. ಕಾಮಿಡಿ ದೃಶ್ಯಗಳಾದರೆ, ಆ ನಟರಿಗೆ ಲೈಟಿಂಗ್‌ ಇಟ್ಟು, ಬಾಡಿ ಲಾಂಗ್ವೇಜ್‌ ಗಮನಿಸಿ, ಮುದ್ದಾಗಿ ತೋರಿಸುವುದು ಕಷ್ಟವೇನಲ್ಲ. ಗ್ಲಾಮರ್‌, ಪ್ಯಾಥೋ ಹೀಗೆ ದೃಶ್ಯಗಳು ಬಂದಾಗ, ಲೈಟಿಂಗ್‌ ಬಹಳ ಮುಖ್ಯವಾಗುತ್ತೆ.

ಅದನ್ನು ಕಟ್ಟಿಕೊಡುವ ಜವಾಬ್ದಾರಿ ಛಾಯಾಗ್ರಾಹಕನ ಮೇಲಿರುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಹೀರೋ ಇಂಟ್ರಡಕ್ಷನ್‌, ವಿಲನ್‌ ಇಂಟ್ರಡಕ್ಷನ್‌ ಇದ್ದಾಗ, ಅವರ ಬಾಡಿ ಲಾಂಗೇÌಜ್‌ ವಿಭಿನ್ನವಾಗಿ ತೋರಿಸಬೇಕು. ಅದರಲ್ಲೂ ಆ ಲೋಕೇಷನ್‌, ಟೈಮು, ಇರುವ ಡೇಟ್ಸ್‌ನಲ್ಲಿ ಎಲ್ಲವನ್ನೂ ಪಕ್ವಗೊಳಿಸಬೇಕು. ಅದಂತೂ ಇನ್ನೂ ಸವಾಲಿನ ಕೆಲಸ' ಎಂದು ತಮ್ಮ ಕೈಚಳಕದ ಬಗ್ಗೆ ಹೇಳಿಕೊಳ್ಳುತ್ತಾರೆ ಕಿರಣ್‌. ಇನ್ನು, ಕಿರಣ್‌ ಹಂಪಾಪುರ ಇದುವರೆಗೆ ಹಳಬರ, ಹೊಸಬರ ಜೊತೆ ಕೆಲಸ ಮಾಡಿದ್ದಾರೆ.

ಹೆಚ್ಚು ಹೊಸಬರ ಜೊತೆ ಕೆಲಸ ಮಾಡಿದ್ದಾರೆ. ಆ ಬಗ್ಗೆ ಹೇಳಿಕೊಳ್ಳುವ ಅವರು, "ಹೊಸಬರ ಜೊತೆ ಕೆಲಸ ಮಾಡುವಾಗ, ಕೆಲವು ಸಲಹೆಗಳನ್ನು ಕೊಟ್ಟರೆ, ಕೆಲವರು ಸಲಹೆ ಪಡೆಯುತ್ತಾರೆ, ಇನ್ನೂ ಕೆಲವರು ಪಡೆಯೋದಿಲ್ಲ. ನಾವು ಹೇಳಿದ್ದನ್ನು ಮಾಡಿ ಅಂತಾರೆ. ಆಗ, ನಮ್ಮ ಕೆಲಸ ಮಾಡಿ ಬರುತ್ತೇವೆ. ತೆರೆಮೇಲೆ ನೋಡಿದಾಗ, ಅವರಿಗೆ ಆ ತಪ್ಪಿನ ಅರಿವಾಗುತ್ತೆ. ಆ ಬಳಿಕ ನೀವು ಹೇಳಿದ್ದು ಸರಿ ಇತ್ತು, ಹಾಗೆ ಮಾಡಬೇಕಿತ್ತು ಅಂತ ಹೇಳಿಕೊಳ್ಳುತ್ತಾರೆ. ಹಾಗಾಗಿ, ನಾನು ಕೆಲವು ಸಲಹೆ ಕೊಡ್ತೀನಿ. ಅದನ್ನು ಸ್ವೀಕರಿಸಿದರೆ ಖುಷಿ.

ಇಲ್ಲವಾದರೆ, ನನ್ನಪಾಡಿಗೆ ಅವರು ಹೇಳಿದಂತೆ ಕೆಲಸ ಮಾಡಿ ಬರುತ್ತೇನೆ. ಇನ್ನು, ಬಹುತೇಕ ನನ್ನ ಕೆಲಸ ಮೆಚ್ಚಿಕೊಂಡ ನಿರ್ದೇಶಕರು ಕೆಲಸ ಕೊಡುತ್ತಿದ್ದಾರೆ. ಹಾಗಂತ, ನಾನು ಸಂಭಾವನೆ ವಿಚಾರದಲ್ಲಿ ದೊಡ್ಡವನಂತೂ ಅಲ್ಲ. ಮೊದಲು ಕಥೆ ಕೇಳ್ತೀನಿ. ಆ ಕಥೆಯಲ್ಲಿ ನನಗೆ ಸ್ಕೋರ್‌ ಮಾಡಲು ಸಾಧ್ಯವಿದೆ ಅನಿಸಿದರೆ, ನಾನೇ ಹೊಂದಾಣಿಕೆ ಮಾಡಿಕೊಂಡು ಮಾಡುತ್ತೇನೆ. ಯಾಕೆಂದರೆ ಆ ಕಥೆಯಲ್ಲಿ ಸ್ಕೋರಿಂಗ್‌ ಪಾಯಿಂಟ್‌ ಇದೆ ಅಂತ ಗೊತ್ತಾದಾಗ, ಇಲ್ಲಿ ಸಾಬೀತುಪಡಿಸಬಹುದು ಅನಿಸಿ, ಸ್ವಲ್ಪ ರಿಸ್ಕ್ ಆದರೂ ಒಪ್ಪಿಕೊಳ್ತೀನಿ.

ಅಲ್ಲಿ ನನಗೆ ಸಂಭಾವನೆ ವಿಷಯ ಬರುವುದಿಲ್ಲ. ನಾನು ಮೊದಲು ಒಳ್ಳೆಯ ಕಥೆ, ತಂಡ ನೋಡಿ ನಿರ್ಧರಿಸುತ್ತೇನೆ. ನನಗೆ ಸ್ಕ್ರಿಪ್ಟ್ ಇಷ್ಟವಾದರೆ, ಇನ್ನಷ್ಟು ಹೊಸ ಸಲಹೆ ಕೊಟ್ಟು, ಆ ತಂಡ ಹೇಗಿದೆ ಅಂತ ಗಮನಿಸುತ್ತೇನೆ. ಉತ್ಸಾಹ ತಂಡ ಅನಿಸಿದರಂತೂ, ನಾನೇ ಅವರ ಜೊತೆ ರಾತ್ರಿ-ಹಗಲು ಚರ್ಚೆಗೆ ಕೂರುತ್ತೇನೆ. ಇಂದು ನಾನು ಗುರುತಿಸಿಕೊಳ್ಳೋಕೆ ಕಾರಣ, ಒಳ್ಳೆಯ ಚಿತ್ರಗಳು. ಅದರಲ್ಲೂ ನನಗೆ ಇಲ್ಲಿಯವರೆಗೆ ಒಳ್ಳೆಯ ಕಥೆ, ನಿರ್ದೇಶಕರೇ ಸಿಕ್ಕಿದ್ದಾರೆ. ಅದು ನನಗೊಂದು ಪ್ಲಸ್‌' ಎನ್ನುತ್ತಾರೆ ಕಿರಣ್‌. 

ದರ್ಶನ್‌ ಜೊತೆ ಕೆಲಸ ಮಾಡೋವಾಸೆ: "ನನಗೆ ಒಳ್ಳೆಯ ಹೆಸರು ತಂದುಕೊಟ್ಟ ಚಿತ್ರವೆಂದರೆ, "ಜಟ್ಟ' ಮತ್ತು "ಮಡಮಕ್ಕಿ' ಆ ಚಿತ್ರಗಳನ್ನು ನೋಡಿದ ದೊಡ್ಡ ನಿರ್ದೇಶಕರೆಲ್ಲರೂ ಕರೆ ಮಾಡಿ ಮಾತಾಡಿದ್ದುಂಟು. ಸದ್ಯಕ್ಕೆ "ಠಕ್ಕರ್‌' ಎಂಬ ಚಿತ್ರ ಮಾಡುತ್ತಿದ್ದೇನೆ. ದರ್ಶನ್‌ ಅವರ ಸಂಬಂಧಿಯ ಚಿತ್ರವದು. ರಘು ಶಾಸಿŒ ನಿರ್ದೇಶಕರು. ನನಗೂ ದರ್ಶನ್‌ ಅವರ ಜೊತೆ ಕೆಲಸ ಮಾಡುವ ಆಸೆ ಇದೆ. ಅವರು ಕರೆದರಂತೂ ಬೇರೆ ಯೋಚನೆ ಮಾಡದೆ ಹೋಗುತ್ತೇನೆ.

ಈ ಹಿಂದೆ ದರ್ಶನ್‌ ಅವರು ನನ್ನ ಜೊತೆಗೆ ಇರು ಅಂದಿದ್ದರು. ಆದರೆ, ಅವರ ಕ್ಯಾಮೆರಾಮೆನ್‌ ಸಹಾಯಕರು ಇರುವಾಗ, ನಾನು ಹೋಗಿ ಇರುವುದು ಅಷ್ಟು ಸಮಂಜಸವಲ್ಲ ಅಂತ ಅವರಿಗೆ ಹೇಳಿದ್ದೆ. ಆದರೂ, ದರ್ಶನ್‌ ಸರ್‌ ಇಂದು ನನ್ನನ್ನು ಪ್ರೀತಿಯಿಂದ ಆತ್ಮೀಯತೆಯಿಂದ ಕಾಣುತ್ತಾರೆ. ಅವರಲ್ಲಿ ಸಹಾಯದ ಗುಣವಿದೆ. ನಾನು ಎಲ್ಲೇ ಸಿಕ್ಕರೂ, ಊಟ ಮಾಡಿದ್ಯಾ? ಕೆಲಸ ಹೇಗೆ ನಡೆಯುತ್ತಿದೆ, ತೊಂದರೆ ಏನೂ ಇಲ್ಲ ತಾನೇ ಅಂತ ಕೇಳುತ್ತಾರೆ.

ಅವರ ಚಿತ್ರೀಕರಣ ಸೆಟ್‌ಗೆ ಹೋದರೆ, ಕ್ಯಾರವಾನ್‌ನಲ್ಲಿ ಕೂರಿಸಿ ಮಾತಾಡುತ್ತಾರೆ. ಅದೆಲ್ಲಾ ಅವರ ದೊಡ್ಡ ಗುಣ. ಅಂತಹವರ ಜೊತೆ ಕೆಲಸ ಮಾಡಲು ಇಷ್ಟ. ಆದರೆ, ಸಿಗದಿದ್ದರೂ, ಅಂತಹವರ ಸ್ನೇಹ ಬಿಡುವುದಿಲ್ಲ' ಎನ್ನುತ್ತಾರೆ ಕಿರಣ್‌ ಹಂಪಾಪುರ್‌. ಇಷ್ಟೆಲ್ಲಾ ಹೇಳಿಕೊಳ್ಳುವ ಕಿರಣ್‌, "ಬೇರೆ ಭಾಷೆಯ ಚಿತ್ರಗಳಿಗೆ ಹೋಲಿಸಿದರೆ, ಕನ್ನಡದಲ್ಲೂ ಒಳ್ಳೆಯ ಕಥೆ ಇರುವ ಚಿತ್ರ ಬರುತ್ತಿವೆ. ಇಲ್ಲೂ ತಾಂತ್ರಿಕತೆ ಹೆಚ್ಚಿದೆ.

ನಮ್ಮಲ್ಲೂ ಬುದ್ಧಿವಂತ ತಂತ್ರಜ್ಞರಿದ್ದಾರೆ ಎನ್ನುತ್ತಾರೆ. ಇಲ್ಲಿ ಹೊಸಬರು ಬರುತ್ತಿದ್ದಾರೆ. ಹೊಸ ಆಲೋಚನೆಗಳು ಅವರಲ್ಲಿವೆ. ಅಂತಹ ಯುವ ಪ್ರತಿಭೆಗಳಿಗೆ ಅವಕಾಶ ಸಿಗಬೇಕು. ಒಂದು ಸಿನಿಮಾಗೆ ನಿರ್ದೇಶಕ ಎಷ್ಟು ಮುಖ್ಯವೋ, ಛಾಯಾಗ್ರಾಹಕನೂ ಅಷ್ಟೇ ಮುಖ್ಯ. ಅವನಿಗೂ ಅಷ್ಟೇ ಜವಾಬ್ದಾರಿ ಇರುತ್ತೆ. ಒಂದು ಕಥೆಗೆ ರೂಪ ಕೊಡಬೇಕಾದರೆ, ಅದು ದೃಶ್ಯಗಳಿಂದ ಸಾಧ್ಯ. ಹಾಗಾಗಿ ಛಾಯಾಗ್ರಾಹಕನಿಗೆ ಇಡೀ ಸಿನಿಮಾದ ಜವಾಬ್ದಾರಿ ಇರುತ್ತೆ.

ಎಲ್ಲರೂ ಇದನ್ನರಿತರೆ, ಒಳ್ಳೆಯ ಚಿತ್ರ ಕಟ್ಟಿಕೊಡಲು ಸಾಧ್ಯವಿದೆ' ಎಂಬುದು ಕಿರಣ್‌ ಅಭಿಪ್ರಾಯ. ಅಂದಹಾಗೆ, ಕಿರಣ್‌ಗೆ ಚಿತ್ರರಂಗಕ್ಕೆ ಬರುವ ಆಸೆ ಇತ್ತು. ಬಂದರು. ಆದರೆ, ಹೆಚ್ಚು ಕಾಯಲಿಲ್ಲ, ಬೇಗನೇ ತನ್ನೆಲ್ಲಾ ಆಸೆ ಈಡೇರಿಸಿಕೊಂಡೆ ಎನ್ನುವ ಅವರು, "ಭಗವಂತ ಕೊಟ್ಟು ನೋಡ್ತಾನೆ, ಕಿತ್ತುಕೊಂಡೂ ನೋಡ್ತಾನೆ. ಆದರೆ, ನನಗೆ ಸಿಕ್ಕ ಅವಕಾಶವನ್ನು ಇದುವರೆಗೆ ಚೆನ್ನಾಗಿ ಬಳಸಿಕೊಂಡಿದ್ದೇನೆ. ಮುಂದೆಯೂ ಇದೇ ಕೆಲಸ ಮಾಡಿಕೊಂಡು ಹೆಸರು ಉಳಿಸಿಕೊಂಡು ಹೋಗುವ ಜವಾಬ್ದಾರಿ ಇದೆ' ಎನ್ನುತ್ತಾರೆ ಅವರು.

ಬರಹ: ವಿಜಯ್‌ ಭರಮಸಾಗರ


Trending videos

Back to Top