CONNECT WITH US  

ಸ್ಯಾಂಡಿವಿಚ್‌

ರೂಪತಾರಾ

ಆ ಹುಡುಗನಿಗೆ ಸಂಗೀತ ಕ್ಷೇತ್ರಕ್ಕೆ ಕಾಲಿಡುವ ಆಸೆ. ಆದರೆ, ಅವನ ಮನೆಯಲ್ಲಿ ಯಾರಿಗೂ ಅಷ್ಟಾಗಿ ಇಷ್ಟವಿರಲಿಲ್ಲ. ಅಷ್ಟೇ ಅಲ್ಲ, ಆ ಹುಡುಗನಿಗೆ ಮನೆಯವರಿಂದ ಹಣದ ಸಹಾಯವೂ ಅಷ್ಟಕ್ಕಷ್ಟೇ. ಒಂದು ಸಣ್ಣ ಕೀ ಬೋರ್ಡ್‌ ಖರೀದಿಸಬೇಕೆಂಬ ಆಸೆ ಆ ಹುಡುಗನಲ್ಲಿ ಬೇರೂರಿತ್ತು. ಆದರೆ, ಕೈಯಲ್ಲಿ ಬಿಡಿಗಾಸೂ ಇಲ್ಲ. ಮನೆಯಲ್ಲಂತೂ ಕೇಳುವಂತಿಲ್ಲ. ರೆಕಾರ್ಡಿಂಗ್‌ ಬಗ್ಗೆ ಅಷ್ಟೇನೂ ಐಡಿಯಾ ಇರದಿದ್ದರೂ ಒಂದು ಕೀ ಬೋರ್ಡ್‌ ತಗೋಬೇಕೆಂಬ ಹಂಬಲ ಮನದಲ್ಲಿತ್ತು.

ಅದಕ್ಕಾಗಿ ಆ ಹುಡುಗ ಬೆಂಗಳೂರಿನ ಎಸ್‌.ಪಿ.ರಸ್ತೆಯಲ್ಲಿರುವ ಸೈಬರ್‌ ಕೆಫೆಯಲ್ಲಿ ಆರು ತಿಂಗಳು ಕೆಲಸ ಮಾಡಿದ. ಟಿ.ವಿ. ರಿಮೋಟ್‌ಗಳನ್ನು ಸೇಲ್‌ ಮಾಡುವ ಕಾಯಕವನ್ನೂ ಮಾಡಿದ. ಅದರೊಂದಿಗೆ ಮನೆ ಬಳಿ ಇದ್ದ ಜಾಮ್‌ ಫ್ಯಾಕ್ಟರಿಯೊಂದರಲ್ಲೂ ದುಡಿದ. ಆ ದುಡಿಮೆಯಿಂದ ಬಂದ ಹಣದಿಂದ ಕೊನೆಗೂ ಸಣ್ಣ ಕೀ ಬೋರ್ಡ್‌ ಖರೀದಿಸಿಬಿಟ್ಟ. ಈಗ ನೋಡ ನೋಡುತ್ತಲೇ ಮೆಚ್ಚುಗೆಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.

ಆಗ ಹಣಕ್ಕಾಗಿ ಎಲ್ಲೆಲ್ಲೋ ದುಡಿದ ಆ ಹುಡುಗ, ಇಂದು ಕಣ್ಣಿಗೆ ಕಾಣುವ ಸಂಗೀತ ಉಪಕರಣವನ್ನು ಖರೀದಿಸುವಷ್ಟು ಬೆಳೆದಿದ್ದಾಗಿದೆ. ಅಂದಹಾಗೆ, ಅವರು ಬೇರಾರೂ ಅಲ್ಲ, ಯುವ ಸಂಗೀತ ನಿರ್ದೇಶಕ ಜೂಡ ಸ್ಯಾಂಡಿ. ಎಲ್ಲರಂತೆ ಜೂಡ ಸ್ಯಾಂಡಿ ಕೂಡ ಶ್ರಮಪಟ್ಟು ಗಾಂಧಿನಗರದಲ್ಲಿ ಜಾಗ ಮಾಡಿಕೊಂಡಿದ್ದಾರೆ. ಆ ಕುರಿತು ಅವರೇ ರೂಪತಾರಾದಲ್ಲಿ ಮಾತನಾಡಿದ್ದಾರೆ.

ಚಮಕ್‌ನ ಚಮತ್ಕಾರ...: ಇಷ್ಟಕ್ಕೂ ಜೂಡ ಅಂದರೆ, ಈಜಿಪ್ಟ್ನಲ್ಲಿರುವ ಒಂದು ಸ್ಥಳದ ಹೆಸರು. ಸ್ಯಾಂಡಿ ಅಂದರೆ ಅದು ತಂದೆಯ ಹೆಸರು. ಕೊನೆಗೆ ಜೂಡ ಸ್ಯಾಂಡಿ ಅಂತ ಹೆಸರಿನಿಂದ ಕರೆಸಿಕೊಂಡ ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಾಗ ಸ್ಯಾಂಡಿ ಅಂತಿಟ್ಟುಕೊಂಡರು. ಜೂಡ ಸ್ಯಾಂಡಿ ಬೆಂಗಳೂರಿನವರೇ. ಕ್ಲಾರೆನ್ಸ್‌ ಶಾಲೆಯಲ್ಲಿ ಓದಿದವರು. ನಂತರ ಅಲೋಶಿಯಸ್‌ ಕಾಲೇಜು ಮೆಟ್ಟಿಲು ಏರಿದವರು.

ಕಾಲೇಜು ದಿನಗಳಲ್ಲೇ ಬ್ಯಾಂಡ್‌ ಶುರು ಮಾಡಿದ್ದ ಜೂಡ ಸ್ಯಾಂಡಿ, ಆ ದಿನಗಳಲ್ಲೇ ರಾಕ್‌ ಬ್ಯಾಂಡ್‌ ಮೂಲಕ ಸಂಗೀತ ಆಸಕ್ತಿ ಬೆಳೆಸಿಕೊಂಡಿದ್ದರು. ಸಂಗೀತವನ್ನು ಪ್ರೊಫೆಷನಲ್‌ ಆಗಿ ಸ್ವೀಕರಿಸಬೇಕೆಂಬ ಆಸೆ ಅವರಲ್ಲಿತ್ತು. ಮೊದಲು "ಸುಳ್ಳು ಕಥೆ' ಎಂಬ ಕಿರುಚಿತ್ರಕ್ಕೆ ಸಂಗೀತ ಮಾಡಿದರು. ಆ ಚಿತ್ರವನ್ನು ಆಕಾಶ್‌ ಶ್ರೀವತ್ಸ ನಿರ್ದೇಶಿಸಿದ್ದರು. ಅದಾದ ಬಳಿಕ ಆಕಾಶ್‌ ಶ್ರೀವತ್ಸ "ಬದ್ಮಾಶ್‌' ಚಿತ್ರಕ್ಕೆ ನಿರ್ದೇಶಕರಾದರು. ಜೂಡ ಸ್ಯಾಂಡಿ ಆ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಎಂಟ್ರಿಕೊಟ್ಟರು.

"ಧನಂಜಯ್‌ ಅಭಿನಯದ "ಬದ್ಮಾಶ್‌' ನನಗೊಂದು ತಿರುವು ಕೊಟ್ಟ ಚಿತ್ರ. 2015 ರಲ್ಲಿ ನಾನು ಸಂಗೀತ ನಿರ್ದೇಶಿಸಿದ ಮೊದಲ ಚಿತ್ರವದು. ಆ ಬಳಿಕ ನನಗೆ ಹುಡುಕಿ ಬಂದ ಚಿತ್ರ "ಸಿಂಪಲ್‌' ಸುನಿ ನಿರ್ದೇಶನದ "ಆಪರೇಷನ್‌ ಅಲಮೇಲಮ್ಮ' ಚಿತ್ರಕ್ಕೆ ಸಂಗೀತ ನೀಡುವ ಅವಕಾಶ ದೊರೆಯಿತು. ಆ ಚಿತ್ರದ ಕೆಲಸ ನೋಡಿ ಪುನಃ ಸುನಿ ಅವರು "ಚಮಕ್‌' ಚಿತ್ರಕ್ಕೆ ಅವಕಾಶ ಕೊಟ್ಟರು.

ಈಗ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದೇನೆ. ಅಲ್ಲಿ "ಎಬಿಸಿಡಿ' ಚಿತ್ರಕ್ಕೆ ಸಂಗೀತ ನೀಡುತ್ತಿದ್ದೇನೆ. ಅಲ್ಲು ಶಿರಿಶ್‌ ಅಭಿನಯದ ಚಿತ್ರವದು. ಇನ್ನು, ಕನ್ನಡದಲ್ಲಿ ಅಜೇಯ್‌ರಾವ್‌ ಅಭಿನಯದ "ತಾಯಿಗೆ ತಕ್ಕ ಮಗ', ಜಗ್ಗೇಶ್‌ ನಟನೆಯ "8 ಎಂಎಂ', ನೀನಾಸಂ ಸತೀಶ್‌ ಅಭಿನಯದ "ಗೋದ್ರಾ' ಮತ್ತು "ಚಂಬಲ್‌' ಚಿತ್ರಕ್ಕೆ ಸಂಗೀತ ನೀಡುತ್ತಿದ್ದೇನೆ' ಎಂದು ವಿವರ ಕೊಡುತ್ತಾರೆ ಸ್ಯಾಂಡಿ.

ಅಪ್ಪನೇ ಸ್ಪೂರ್ತಿ: ಇಷ್ಟಕ್ಕೂ ಜೂಡ ಸ್ಯಾಂಡಿಗೆ ಸಂಗೀತದ ಮೇಲೆ ಆಸಕ್ತಿ ಬರುವುದಕ್ಕೆ ಕಾರಣವೇನು? ಇದಕ್ಕೆ ಉತ್ತರಿಸುವ ಸ್ಯಾಂಡಿ, "ನನ್ನ ತಂದೆಯೇ ನನಗೆ ಸ್ಫೂರ್ತಿ. ಅವರಿಂದಲೇ ನಾನು ಸಂಗೀತದ ಆಸಕ್ತಿ ಬೆಳೆಸಿಕೊಂಡೆ. ನನ್ನ ತಂದೆ ಅಗಸ್ಟಿನ್‌ ಸ್ಯಾಂಡಿ. ಹಂಸಲೇಖ ಅವರ ಬಳಿ ವಯಲಿನ್‌ ನುಡಿಸುತ್ತಿದ್ದರು. ಸುಮಾರು 250 ಹಾಡುಗಳಿಗೆ ವಯಲಿನ್‌ ನುಡಿಸಿದ್ದಾರೆ.

ಅಪ್ಪನ ನೋಡಿಕೊಂಡೇ ಬೆಳೆದವನು ನಾನು. ಆದರೆ, ನನ್ನ ಮನೆಯಲ್ಲಿ ನಾನು ಸಂಗೀತ ಕ್ಷೇತ್ರಕ್ಕೆ ಹೋಗುವುದು ಇಷ್ಟವಿರಲಿಲ್ಲ. ಆದರೆ, ನನಗೆ ಸಂಗೀತ ಕ್ಷೇತ್ರಕ್ಕೆ ಹೋಗಬೇಕು ಎಂಬ ಆಸೆ ಇತ್ತು. ಮನೆಯವರ ಒಲ್ಲದ ಮನಸ್ಸಿದ್ದರೂ, ನಾನು ಸ್ಟ್ರಗಲ್‌ ಮಾಡಿಕೊಂಡು ಹೇಗೋ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡೆ. ಈಗ ನನ್ನ ಬೆಳವಣಿಗೆ ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ. ಅವರ ಪ್ರೋತ್ಸಾಹವೂ ಹೆಚ್ಚಾಗಿದೆ' ಎಂಬುದು ಸ್ಯಾಂಡಿ ಮಾತು. 

ಅಪ್ಪು ಸಿನ್ಮಾಗೆ ಸಂಗೀತ ಕೊಡುವಾಸೆ: ಎಲ್ಲಾ ಸರಿ, ಸ್ಯಾಂಡಿ ಕನ್ನಡದಲ್ಲಿ ಈಗಷ್ಟೇ ಗುರುತಿಸಿಕೊಳ್ಳುತ್ತಿದ್ದಾರೆ. ಅದಾಗಲೇ, ತೆಲುಗಿಗೂ ಕಾಲಿಟ್ಟುಬಿಟ್ಟಿದ್ದಾರಲ್ಲ? ಈ ಪ್ರಶ್ನೆಗೆ ಉತ್ತರ ಕೊಡುವ ಸ್ಯಾಂಡಿ, "ನನಗೆ ಕನ್ನಡ ಮಾತೃಭಾಷೆ. ತೆಲುಗು ಚಿತ್ರಕ್ಕೆ ಕೆಲಸ ಮಾಡಲು ಸಿಕ್ಕ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಕಾರಣದಿಂದ ಹೋಗಿದ್ದೇನೆ. ನನಗೆ ಯಾವತ್ತಿದ್ದರೂ ಕನ್ನಡವೇ ಎಲ್ಲ.

ತೆಲುಗಿನ ಚಿತ್ರದ ಕೆಲಸ ನನಗೊಂದು ಹೊಸ ಅನುಭವ ಅಷ್ಟೇ. ಅಲ್ಲಿಗೆ ಹೋಗಿದ್ದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆಯಾದರೂ, ನನಗೆ ಇಲ್ಲೇ ಹೆಚ್ಚು ಕೆಲಸ ಮಾಡುವಾಸೆ. ಅಲ್ಲು ಅರವಿಂದ್‌ ಅವರ ಬ್ಯಾನರ್‌ನ ಚಿತ್ರ ಎಂಬ ಕಾರಣಕ್ಕೆ ಆಲ್ಲಿ ಹೋಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಇಲ್ಲಿ ದೊಡ್ಡ ಸ್ಟಾರ್‌ ನಟರ ಅದರಲ್ಲೂ ಪುನೀತ್‌ರಾಜಕುಮಾರ್‌ ಅವರ ಚಿತ್ರಕ್ಕೆ ಕೆಲಸ ಮಾಡುವ ಆಸೆ ಇದೆ. ನನ್ನ ಪಾಡಿಗೆ ನಾನು ಒಳ್ಳೆಯ ಕೆಲಸ ಮಾಡಿಕೊಂಡು ಹೋಗುತ್ತೇನೆ.

ಎಂದಾದರೂ ಒಂದು ದಿನ ಅಂಥದ್ದೊಂದು ಅವಕಾಶ ಬರುತ್ತೆ ಎಂದು ನಂಬಿದ್ದೇನೆ ಎನ್ನುವ ಸ್ಯಾಂಡಿ, ನನಗೆ ಮೆಲೋಡಿ ಹಾಡುಗಳಿಷ್ಟ. ಎಂದೆಂದಿಗೂ ಅವು ಎಲ್ಲಾ ವರ್ಗದವರನ್ನೂ ಖುಷಿಪಡಿಸುತ್ತವೆ. ಈಗ ಇಂಡಸ್ಟ್ರಿಯಲ್ಲಿ ಹೊಸಬರು ಬರುತ್ತಿದ್ದಾರೆ. ಇಲ್ಲಿ ಪ್ರತಿಭಾವಂತರಿಗೆ ಮಾತ್ರ ಜಾಗ ಸಿಗುತ್ತೆ. ಈಗಂತೂ ಇಲ್ಲಿ ಅನೇಕ ಹೊಸ ಉಪಕರಣಗಳು ಬಂದಿವೆ. ಸೌಂಡಿಂಗ್‌ ಕೂಡ ಬದಲಾಗುತ್ತಿದೆ. ಇದೊಂದು ಒಳ್ಳೆಯ ಬೆಳವಣಿಗೆ.

ಈಗೆಲ್ಲಾ, ಒಂದು ಲ್ಯಾಪ್‌ಟಾಪ್‌ ಇಟ್ಟುಕೊಂಡು ಸಾಂಗ್‌ ಮಾಡುವಷ್ಟರಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ. ಸಿನಿಮಾ ಅಂದಾಗ, ಪ್ಯಾಷನ್‌ ಇಟ್ಟುಕೊಂಡು, ಒಳ್ಳೆಯ ತಂತ್ರಜ್ಞರ ಜೊತೆಗೆ ಕೆಲಸ ಮಾಡಿದರೆ ಮಾತ್ರ ಸೈ ಎನಿಸಿಕೊಳ್ಳಲು ಸಾಧ್ಯವಿದೆ. ಈ ಮೂರು ವರ್ಷದಲ್ಲಿ ನಾನು ಇಷ್ಟೊಂದು ಬದಲಾವಣೆ ಕಾಣುತ್ತೇನೆ ಅಂತ ನಂಬಿರಲಿಲ್ಲ. ಸಿಕ್ಕ ಅವಕಾಶವನ್ನು ಶ್ರದ್ಧೆಯಿಂದ ಮಾಡಿದ್ದರ ಪರಿಣಾಮ, ಇಂದು ನನಗೆ ಒಳ್ಳೆಯ ಅವಕಾಶಗಳು ಸಿಗುತ್ತಿವೆ' ಎಂದು ಹೆಮ್ಮೆ ಪಡುತ್ತಾರೆ ಸ್ಯಾಂಡಿ. 

ರೆಹಮಾನ್‌ ಮೆಚ್ಚಿದ್ದು ಮರೆಯದ ಅನುಭವ: ಒಬ್ಬೊಬ್ಬ ಸಂಗೀತ ನಿರ್ದೇಶಕರ ಅಭಿರುಚಿ ಒಂದೊಂದು ರೀತಿ ಇರುತ್ತೆ. ಹಾಗೆಯೇ ಜೂಡ ಸ್ಯಾಂಡಿ ಅವರಿಗೂ ಒಂದು ಅಭಿರುಚಿ ಇದೆ. ಅದು ಸಾಹಿತ್ಯಕ್ಕೆ ರಾಗ ಸಂಯೋಜಿಸುವುದು. ಅದು ಸುಲಭ ಎನ್ನುವ ಸ್ಯಾಂಡಿ, "ರಾಗ ಸಂಯೋಜಿಸಬೇಕಾದರೆ, ಒಳ್ಳೆಯ ಸಾಲುಗಳು ಹುಟ್ಟುತ್ತವೆ. ಆದರೆ, ಸಾಹಿತ್ಯವಿದ್ದರೆ, ರಾಗವನ್ನೂ ಚೆನ್ನಾಗಿ ಹಾಕಲು ಸಾಧ್ಯವಿದೆ.

"ಚಮಕ್‌' ಚಿತ್ರದ "ನೀ ನನ್ನ ಒಲವು ...' ಹಾಡು ನನ್ನನ್ನು ಮತ್ತಷ್ಟು ಗುರುತಿಸಿಕೊಳ್ಳುವಂತೆ ಮಾಡಿತು ಎಂದು ಹಳೆಯ ಘಟನೆಯೊಂದನ್ನು ನೆನಪಿಸಿಕೊಳ್ಳುವ ಸ್ಯಾಂಡಿ, ಗಾಯಕ ಹರಿಚರಣ್‌ ಅವರು "ಓ ಸಂಜೆ ಹೂವೇ...' ಹಾಡನ್ನು ಹಾಡಿದ್ದರು. ತಿಂಗಳ ಹಿಂದೆ ಖ್ಯಾತ ಸಂಗೀತ ನಿರ್ದೇಶಕ ರೆಹಮಾನ್‌ ಜೊತೆಗೆ ಪ್ರವಾಸ ಹೋಗಿದ್ದರು. ಆ ಸಮಯದಲ್ಲಿ ರೆಹಮಾನ್‌ ಅವರಿಗೆ "ಓ ಸಂಜೆ ಹೂವೇ...' ಹಾಡನ್ನು ತೋರಿಸಿದ್ದಾರೆ.

ಹಾಡು ಕೇಳಿ, ನೋಡಿದ ರೆಹಮಾನ್‌ ಅವರ ಕಡೆಯಿಂದ ಒಳ್ಳೆಯ ಕಾಂಪ್ಲಿಮೆಂಟ್‌ ಸಿಕ್ಕಿದೆ. ರೆಹಮಾನ್‌ ಅವರ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ, ಜೂಡ ಸ್ಯಾಂಡಿ ಯಾರೆಂಬುದು ರೆಹಮಾನ್‌ ಅವರಿಗೆ ಗೊತ್ತಿಲ್ಲ. ಅಂತಹ ಖ್ಯಾತ ಸಂಗೀತ ನಿರ್ದೇಶಕರು ನನ್ನ ಹಾಡಿಗೆ ಮೆಚ್ಚುಗೆ ಸೂಚಿಸಿದ್ದು ಮರೆಯದ ಘಟನೆ ಎನ್ನುತ್ತಾರೆ ಸ್ಯಾಂಡಿ. ಇದೇ ವೇಳೆ ಇನ್ನೊಂದು ಘಟನೆಯನ್ನು ಮೆಲುಕು ಹಾಕುವ ಸ್ಯಾಂಡಿ, ಡ್ಯಾನ್ಸ್‌ ವಿಷಯಕ್ಕೆ ಬಂದರೆ, ಕನ್ನಡದ ಪ್ರಭುದೇವ ನೆನಪಾಗುತ್ತಾರೆ.

"ಬದ್ಮಾಶ್‌' ಚಿತ್ರದ "ಮಾಯಾವಿ ಕನಸೇ..' ಹಾಡು ಬಿಡುಗಡೆಯಾದಾಗ, ಅವರೊಂದು ವೀಡಿಯೋ ಬೈಟ್‌ ಕೊಟ್ಟಿದ್ದರು. ಆಗ "ಮಾಯಾವಿ ಕನಸೇ..' ನನ್ನ ಫೇವರೇಟ್‌ ಎಂದು ಹೇಳಿಕೊಂಡು, ವಿಷ್‌ ಮಾಡಿದ್ದರು. ಅದೂ ಮರೆಯದ ಅನುಭವ ಎನ್ನುವ ಸ್ಯಾಂಡಿ, ಕನ್ನಡದಲ್ಲಿ ಒಳ್ಳೆಯ ಚಿತ್ರಗಳಿಗೆ ಮರೆಯದ ಹಾಡುಗಳನ್ನು ಕೊಡಬೇಕೆಂಬ ಉತ್ಸಾಹದಲ್ಲೇ ಕೆಲಸ ಮಾಡುವುದಾಗಿ' ಹೇಳುತ್ತಾರೆ ಜೂಡ ಸ್ಯಾಂಡಿ.

ಬರಹ: ವಿಜಯ್‌ ಭರಮಸಾಗರ


Trending videos

Back to Top