CONNECT WITH US  

ಹೊಸ ಧರ್ಮ: ಚಾಣಾಕ್ಷಣನ ಗೆಲುವಿನ ಸೂತ್ರ

ರೂಪತಾರಾ

ಧರ್ಮ ಕೀರ್ತಿರಾಜ್‌ ಈಗ ಹೊಸ ಆಶಯದೊಂದಿಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. "ನವಗ್ರಹ' ಮೂಲಕ ಲವರ್‌ಬಾಯ್‌ ಆಗಿ, ಕ್ಯಾಡ್‌ಬರೀಸ್‌ ಬಾಯ್‌ ಅಂತಾನೇ ಗುರುತಿಸಿಕೊಂಡ ಧರ್ಮ, ಆ ಬಳಿಕ "ಒಲವೇ ವಿಸ್ಮಯ' ಚಿತ್ರದ ಮೂಲಕ ಹೀರೋ ಆಗಿ ಗುರುತಿಸಿಕೊಂಡರು. ಅದಾದ ಬಳಿಕ ಧರ್ಮ ಒಂದೆರೆಡು ಚಿತ್ರಗಳಲ್ಲಿ ನಟಿಸಿದರಾದರೂ, ಅವರು ಗೆಲ್ಲಲಿಲ್ಲ. ಒಂದೆರೆಡು ಸಿನಿಮಾಗೆ ಗ್ರೀನ್‌ಸಿಗ್ನಲ್‌ ಕೊಟ್ಟರೂ ಕಾರಣಾಂತರಗಳಿಂದ ಆ ಪ್ರಾಜೆಕ್ಟ್ ಶುರುವಾಗಲಿಲ್ಲ. ಇದರ ಮಧ್ಯೆ ಧರ್ಮ ಸಿಸಿಎಲ್‌ನಲ್ಲಿ ಬ್ಯಾಟ್‌ ಹಿಡಿದು ಫೀಲ್ಡ್‌ ತುಂಬಾ ಓಡಾಡಿದರು.

ಅಲ್ಲೂ ಒಂದಷ್ಟು ಸುದ್ದಿಯಾದರು. ಈಗ ರೀಫ್ರೆಶ್‌ ಆಗಿ, ಮತ್ತೆ ಗಾಂಧಿನಗರ ಅಡ್ಡಕ್ಕೆ ಕಾಲಿಡಲು ಪೂರ್ವತಯಾರಿಯೊಂದಿಗೆ ಸ್ಟಡಿಯಾಗಿದ್ದಾರೆ. ಇಷ್ಟಕ್ಕೂ ಧರ್ಮ ಒಂದು ಗ್ಯಾಪ್‌ನಲ್ಲಿ ಏನೆಲ್ಲಾ ಮಾಡಿದರು ಗೊತ್ತಾ?  ಐದು ತಿಂಗಳ ಕಾಲ ಚೆನ್ನೈನಲ್ಲಿ ಡಾನ್ಸ್‌, ಆ್ಯಕ್ಟಿಂಗ್‌, ಸ್ಟಿಕ್‌ ಫೈಟ್ಸ್‌ ಸೇರಿದಂತೆ ಸಿನಿಮಾಗೆ ಸಂಬಂಧಿಸಿದ ಕರಾಟೆ, ಸ್ಟಂಟ್ಸ್‌ ಕಲಿತರು. ಜೊತೆಗೆ ಹಾರ್ಸ್‌ ರೈಡಿಂಗ್‌ನಲ್ಲೂ ಪಕ್ವಗೊಂಡಿದ್ದಾರೆ. ಒಬ್ಬ ಪಫೆìಕ್ಟ್ ಹೀರೋ ಆಗೋಕೆ ಏನೆಲ್ಲ ಬೇಕೋ ಅದೆಲ್ಲವನ್ನೂ ಕರಗತ ಮಾಡಿಕೊಂಡಾಗಿದೆ. ಸದ್ದಿಲ್ಲದೆಯೇ ಅವರು ಬೆರಳೆಣಿಕೆ ಚಿತ್ರಗಳಲ್ಲೂ ನಟಿಸಿದ್ದಾರೆ.

ಧರ್ಮ ಕೀರ್ತಿರಾಜ್‌ ಈಗ "ಚಾಣಾಕ್ಷ' ಬಗ್ಗೆ ಜಪ ಮಾಡುತ್ತಿದ್ದಾರೆ. ಹೌದು, ಈ ಚಿತ್ರದ ಮೇಲೆ ಧರ್ಮ ಕೀರ್ತಿರಾಜ್‌ ಅವರಿಗೆ ಇನ್ನಿಲ್ಲದ ಪ್ರೀತಿ ಮತ್ತು ವಿಶ್ವಾಸ. ಅದಕ್ಕೆ ಕಾರಣ, ಅದೊಂದು ಪಕ್ಕಾ ಮಾಸ್‌ ಸಿನಿಮಾ ಅನ್ನೋದು. ಈಗ ಡಿಐ ಮತ್ತು ಹಿನ್ನೆಲೆ ಸಂಗೀತದಲ್ಲಿರುವ "ಚಾಣಾಕ್ಷ' ತನಗೊಂದು ಹೊಸ ಇಮೇಜ್‌ ತಂದುಕೊಡುವ ಚಿತ್ರ ಎಂದು ನಂಬಿದ್ದಾರೆ. ಅವರಿಗೆ ಮತ್ತಷ್ಟು ವಿಶ್ವಾಸ ಬರಲು ಕಾರಣ, "ಚಾಣಾಕ್ಷ' ರಿಲೀಸ್‌ಗೆ ಮುನ್ನವೇ, ಹಿಂದಿ ಡಬ್ಬಿಂಗ್‌ ಹಕ್ಕು ಮಾರಾಟವಾಗಿದೆ.

ಸುಮಾರು 35 ಲಕ್ಷ ರೂ.ಗೆ ಮಾರಾಟವಾಗಿರುವುದರಿಂದ ಧರ್ಮಕೀರ್ತಿರಾಜ್‌ಗೆ ಚಿತ್ರ ಬಿಡುಗಡೆ ಬಳಿಕ ಒಳ್ಳೆಯ ಮಾತುಗಳು ಕೇಳಿಬರುತ್ತವೆ ಎಂಬ ಲೆಕ್ಕಾಚಾರವಿದೆ. ಇನ್ನು, ಧರ್ಮ "ಚಾಣಾಕ್ಷ' ಸಿನಿಮಾ ಮಾಡಿ ಮುಗಿಸುತ್ತಿದ್ದಂತೆಯೇ, "ವಿವಿಕ್ತ' ಎಂಬ ಮತ್ತೂಂದು ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ವಿಘ್ನೇಶ್‌ ನಿರ್ದೇಶನ ಮಾಡಿದ್ದಾರೆ. "ಜಿಗರ್‌ಥಂಡ' ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಿಘ್ನೇಶ್‌ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ಧರ್ಮ ಅವರೊಂದಿಗೆ ಅವರ ತಂದೆ ಕೀರ್ತಿರಾಜ್‌ ಕೂಡ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ತಂದೆ, ಮಗ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷತೆಗಳಲ್ಲೊಂದು. ಧರ್ಮ ಅವರು ಕೀರ್ತಿರಾಜ್‌ ಕಾಂಬಿನೇಷನ್‌ನಲ್ಲೂ ಇದ್ದಾರೆ. ಕೀರ್ತಿರಾಜ್‌ ಅವರು ಇಲ್ಲಿ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ. ಉಳಿದಂತೆ ಪ್ರತಾಪ್‌ ನಾರಾಯಣ್‌ ಕೂಡ ಧರ್ಮಕೀರ್ತಿರಾಜ್‌ ಜೊತೆ ನಟಿಸಿದ್ದಾರೆ. ವೆಂಕಟ್‌ ನಾರಾಯಣ್‌ ಈ ಚಿತ್ರಕ್ಕೆ ಸಂಗೀತಿ ನೀಡಿದ್ದಾರೆ. ಪೂಜಶ್ರೀ ಸಾನಿಕ ನಾಯಕಿಯಾಗಿ ನಟಿಸಿದ್ದಾರೆ.

ಭಾಸ್ಕರ್‌ ಹಾಗೂ ರಾಕೇಶ್‌ ಚಿತ್ರದ ನಿರ್ಮಾಣ ಮಾಡಿದ್ದಾರೆ. "ವಿವಿಕ್ತ' ಒಂದು ಯಂಗ್‌ಸ್ಟರ್ ಸ್ಟೋರಿ. ಥ್ರಿಲ್ಲರ್‌ ಮತ್ತು ಹಾರರ್‌ ಕಥಾಹಂದರವೊಂದಿದೆ. ಬಿಪಿನ್‌ ಎಂಬ ಕೇರಳ ಮೂಲದ ಛಾಯಾಗ್ರಾಹಕ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರ ಸದ್ದಿಲ್ಲದೆಯೇ ಪೂರ್ಣಗೊಂಡಿದೆ. ಇದರ ಜೊತೆ ಜೊತೆಗೆ ಧರ್ಮ ಅವರು "ಜಾಸ್ತಿ ಪ್ರೀತಿ' ಎಂಬ ಮತ್ತೂಂದು ಸಿನಿಮಾವನ್ನೂ ಮಾಡಿ ಮುಗಿಸಿದ್ದಾರೆ. ಅರುಣ್‌ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ಈಗಾಗಲೇ ಧರ್ಮ ಅವರ ಭಾಗದ ಡಬ್ಬಿಂಗ್‌ ಕೆಲಸವನ್ನು ಮುಗಿಸಿದ್ದಾರೆ.

ಇದರೊಂದಿಗೆ ಅವರು "ಬಿಂದಾಸ್‌ ಗೂಗ್ಲಿ' ಎಂಬ ಚಿತ್ರದಲ್ಲೂ ಅತಿಥಿ ಪಾತ್ರ ಮಾಡಿದ್ದಾರೆ. ಅದೊಂದು ಕೋಚ್‌ ಪಾತ್ರವಾಗಿದ್ದು, ಸಂತೋಷ್‌ ನಿರ್ದೇಶನ ಮಾಡಿದ್ದಾರೆ. ವಿಜಯಕುಮಾರ್‌ ಚಿತ್ರದ ನಿರ್ಮಾಪಕರು. ಸದ್ಯಕ್ಕೆ ಕೈಯಲ್ಲಿ "ಚಾಣಾಕ್ಷಣ', "ವಿವಿಕ್ತ', "ಜಾಸ್ತಿ ಪ್ರೀತಿ' ಹಾಗೂ "ಬಿಂದಾಸ್‌ ಗೂಗ್ಲಿ' ಚಿತ್ರಗಳಿವೆ. ಇವುಗಳು ಪ್ರೇಕ್ಷಕರ ಮುಂದೆ ಬರಬೇಕಿದೆ. ಇದರ ನಂತರ ಹೊಸ ಸಿನಿಮಾದ ಮಾತುಕತೆ ಕೂಡ ನಡೆಯುತ್ತಿದ್ದು, ಯಾವುದನ್ನೂ ಅಂತಿಮ ಮಾಡಿಲ್ಲ. ತೆಲುಗು ಚಿತ್ರವೊಂದನ್ನು ರಿಮೇಕ್‌ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಈವರೆಗೆ ಏಳು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಯಾವ ಚಿತ್ರಗಳೂ ನಿರೀಕ್ಷೆ ಗೆಲುವು ತಂದುಕೊಟ್ಟಿಲ್ಲ ಎಂಬ ಸಣ್ಣ ಬೇಸರ ಧರ್ಮ ಅವರಿಗಿದೆ.

ಈ ವರ್ಷ ಗೆಲ್ಲುವ ವಿಶ್ವಾಸವಿದೆ ...: ಧರ್ಮ ಕೀರ್ತಿರಾಜ್‌ ಅವರೇ ಹೇಳುವಂತೆ, "ಅದೇನೋ ಗೊತ್ತಿಲ್ಲ. ನನ್ನ ವಿಷಯದಲಿ ಈ ಸಕ್ಸಸ್‌ ಅನ್ನೋದೇ ಕೂಡಿ ಬಂದಿಲ್ಲ. ನನ್ನ ಟೈಮ್‌ ಸರಿಯಿಲ್ಲ ಅನ್ಸುತ್ತೆ. ಅದಕ್ಕೆ ಒಂದು ಗೆಲುವಿಗಾಗಿ ಇನ್ನೂ ಕಾಯುತ್ತಲೇ ಇದ್ದೇನೆ. ನಾನು ಮಾಡಿದ ಎಲ್ಲಾ ಚಿತ್ರಗಳು ಚೆನ್ನಾಗಿಯೇ ಇದ್ದವು. ಎಲ್ಲರೂ ಪ್ರೀತಿಯಿಂದ ಚಿತ್ರ ಮಾಡಿದವರೇ. ಆದರೆ, ಪ್ರೇಕ್ಷಕರು ಮಾತ್ರ ಒಪ್ಪಲಿಲ್ಲ. ನಾನು ಏನೂ ಇಲ್ಲದ್ದಾಗ ಕುಳಿತುಕೊಂಡಾಗಲೇ, ಕೆಲವು ನಿರ್ದೇಶಕ, ನಿರ್ಮಾಪಕರು ನನ್ನ ಬಳಿ ಬಂದು ಕೆಲಸ ಕೊಟ್ಟು, ಸಿನಿಮಾ ಮಾಡಿದ್ದಾರೆ.

ಇದುವರೆಗಿನ ಕಥೆ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಮುಂದಿನ ನನ್ನ ಭವಿಷ್ಯದ ಬಗ್ಗೆ ಸಾಕಷ್ಟು ಗಮನಹರಿಸಿದ್ದೇನೆ. "ಚಾಣಾಕ್ಷ' ನನಗೆ ಬೆಸ್ಟ್‌ ಸಿನಿಮಾ ಆಗುತ್ತೆ ಎಂಬ ನಂಬಿಕೆ ಇದೆ. "ವಿವಿಕ್ತ', "ಜಾಸ್ತಿ ಪ್ರೀತಿ' ಕೂಡ ಹೊಸ ಇಮೇಜ್‌ ತರುವಂತಹ ಚಿತ್ರಗಳಾಗುತ್ತವೆ' ಎನ್ನುತ್ತಾರೆ ಧರ್ಮ. ಇನ್ನು, ಧರ್ಮ ಅವರ ತಂದೆ ಕೀರ್ತಿರಾಜ್‌ ಅವರೇ ಕಥೆ ಕೇಳುತ್ತಾರೆ, ಅವರೇ ಅಂತಿಮ ಆಯ್ಕೆ ಮಾಡುತ್ತಾರೆ,  ಸಂಭಾವನೆ ವಿಷಯದಲ್ಲೂ ಅವರೇ ಮಾತಾಡುತ್ತಾರೆ ಎಂಬೆಲ್ಲಾ ಮಾತುಗಳು ಕೇಳಿ ಬಂದಿದ್ದರಿಂದ, ಅವರ ತಂದೆಗೆ ಸ್ವಲ್ಪ ಬೇಸರವಾಯಿತಂತೆ.

ಈ ಕುರಿತು ಮಾತನಾಡುವ ಅವರು, "ಅಪ್ಪ ಯಾವತ್ತೂ ನನ್ನ ವಿಚಾರದಲ್ಲಿ ತಲೆ ಹಾಕಿಲ್ಲ. ಕಥೆ ಕೇಳುತ್ತಿದ್ದರು. ಆದರೆ, ಅಂತಿಮ ಆಯ್ಕೆ ನನಗೇ ಬಿಡುತ್ತಿದ್ದರು. ಈಗ ಅಪ್ಪ ಎಲ್ಲವನ್ನೂ ನನಗೇ ಬಿಟ್ಟುಬಿಟ್ಟಿದ್ದಾರೆ. ನಾನೇ ಕಥೆ ಕೇಳಬೇಕು, ಆಯ್ಕೆಯನ್ನೂ ನಾನೇ ಮಾಡಬೇಕು. ಸಂಭಾವನೆಯನ್ನೂ ನಾನೇ ಮಾತಾಡಬೇಕು. ಎಲ್ಲವನ್ನೂ ಬಿಟ್ಟು, ನಿನಗೆ ಏನು ಇಷ್ಟ ಆಗುತ್ತೋ ಅದನ್ನು ಮಾಡು, ನಿನ್ನ ಭವಿಷ್ಯವನ್ನು ನೀನೇ ರೂಪಿಸಿಕೋ ಅಂದಿದ್ದಾರೆ. ಅದರಂತೆ, ನಾನೀಗ ಹೊಸ ಕಥೆಗಳನ್ನು ಕೇಳುತ್ತಿದ್ದೇನೆ.

ಈ ಮಧ್ಯೆ, ಸ್ಟಾರ್‌ ಚಿತ್ರಗಳಲ್ಲಿ ನಟಿಸುವ ಅವಕಾಶ ಬಂದಿತ್ತಾದರೂ, ಡೇಟ್‌ ಸಮಸ್ಯೆಯಿಂದ ಮಾಡಲು ಸಾಧ್ಯವಿಲ್ಲ. ನನಗೆ ಹೊಸಬರು, ಹಳಬರು ಅಂತೇನೂ ಇಲ್ಲ. ಕಥೆ, ಪಾತ್ರ ಮತ್ತು ತಂಡ ಚೆನ್ನಾಗಿದ್ದರೆ, ಖಂಡಿತವಾಗಿಯೂ ಚಿತ್ರ ಮಾಡುವುದಾಗಿ' ಹೇಳುತ್ತಾರೆ ಧರ್ಮ ಕೀರ್ತಿರಾಜ್‌. "ಸದ್ಯಕ್ಕೆ ನಾನೀಗ ಫ‌ುಲ್‌ ಟೈಮ್‌ ಸಿನಿಮಾದಲ್ಲಿ ತೊಡಗಬೇಕು ಅಂದುಕೊಂಡಿದ್ದೇನೆ. ಬ್ರೇಕ್‌ ಮಾಡದೆ ಸಿನಿಮಾ ಕಥೆ, ಕೇಳಿ ಕೆಲಸ ಮಾಡುವ ಉದ್ದೇಶ ಹೊಂದಿದ್ದೇನೆ. ಈಗ ಹೊಸಬರ ಎರಡೂರು ಕಥೆಗಳನ್ನು ಕೇಳಿದ್ದೇನೆ.

ಚೆನ್ನಾಗಿವೆ. ನೋಡಬೇಕು, ಈ ವರ್ಷ ಎರಡು ಹೊಸ ಚಿತ್ರಗಳು ಸೆಟ್ಟೇರುವ ಸಾಧ್ಯತೆ ಇದೆ. ಜುಲೈ 7ರಂದು ನನ್ನ ಹುಟ್ಟುಹಬ್ಬ ಇದೆ. ಅಂದು "ಚಾಣಾಕ್ಷ' ಚಿತ್ರದ ಟೀಸರ್‌ ಬಿಡುಗಡೆ ಮಾಡಲಿದೆ ಚಿತ್ರತಂಡ. ಇನ್ನು, "ವಿವಿಕ್ತ' ಚಿತ್ರಕ್ಕೆ ನನ್ನ ಲುಕ್‌ ಚೇಂಜ್‌ ಮಾಡಿದ್ದೇನೆ. ಹೊಸತನಕ್ಕೆ ಕಾಯುತ್ತಿದ್ದೇನೆ. ಈ ವರ್ಷ ಒಂದು ಗೆಲುವಿನ ಚಿತ್ರ ಕೊಡಲೇಬೇಕೆಂಬ ಉತ್ಸಾಹದಲ್ಲಿದ್ದೇನೆ' ಎಂದು ಮಾತು ಮುಗಿಸುತ್ತಾರೆ.

* ನನ್ನ ವಿಷಯದಲಿ ಈ ಸಕ್ಸಸ್‌ ಅನ್ನೋದೇ ಕೂಡಿ ಬಂದಿಲ್ಲ
* ನನ್ನ ಟೈಮ್‌ ಸರಿಯಿಲ್ಲ ಅನ್ಸುತ್ತೆ, ಅದಕ್ಕೆ ಒಂದು ಗೆಲುವಿಗಾಗಿ ಇನ್ನೂ ಕಾಯುತ್ತಲೇ ಇದ್ದೇನೆ
* ಮುಂದಿನ ನನ್ನ ಭವಿಷ್ಯದ ಬಗ್ಗೆ ಸಾಕಷ್ಟು ಗಮನಹರಿಸಿದ್ದೇನೆ
* "ಚಾಣಾಕ್ಷ' ನನಗೆ ಬೆಸ್ಟ್‌ ಸಿನಿಮಾ ಆಗುತ್ತೆ ಎಂಬ ನಂಬಿಕೆ ಇದೆ
* ಅಪ್ಪ ಯಾವತ್ತೂ ನನ್ನ ವಿಚಾರದಲ್ಲಿ ತಲೆ ತೂರಿಸುವುದಿಲ್ಲ
* ಜುಲೈ 7ರಂದು ಹುಟ್ಟುಹಬ್ಬದಂದು "ಚಾಣಾಕ್ಷ' ಚಿತ್ರದ ಟೀಸರ್‌ ಬಿಡುಗಡೆ

ಬರಹ: ವಿಜಯ್‌ ಭರಮಸಾಗರ


Trending videos

Back to Top