CONNECT WITH US  

ನೆಗೆಟಿವ್‌ನಿಂದ ಮತ್ತೆ ಪಾಸಿಟಿವ್‌ನತ್ತ: ಭೈರವ ಧನಂಜಯ್‌

ರೂಪತಾರಾ

ಸರಿ, ಮುಂದೇನು? "ಟಗರು' ಬಿಡುಗಡೆಯಾಗಿ, ಅದರಲ್ಲಿನ ಡಾಲಿ ಪಾತ್ರ ಹಿಟ್‌ ಆದ ಹೊಸದರಲ್ಲಿ ಧನಂಜಯ್‌ಗೆ ಇಂಥದ್ದೊಂದು ಪ್ರಶ್ನೆ ಇಡಲಾಗಿತ್ತು. ಏಕೆಂದರೆ, ಕನ್ನಡ ಚಿತ್ರರಂಗಕ್ಕೆ "ಡೈರೆಕ್ಟರ್ ಸ್ಪೆಷಲ್‌' ಚಿತ್ರದ ಮೂಲಕ ಹೀರೊ ಆಗಿ ಬಂದ ಧನಂಜಯ್‌, ಆ ನಂತರ ಹಲವು ಸೋಲುಗಳನ್ನು ಕಂಡರು. ಒಂದು ಹಂತದಲ್ಲಿ ಅವರ ಕಾಲ್ಗುಣ ಸರಿ ಇಲ್ಲ ಎಂಬಂತಹ ಮಾತುಗಳು ಕನ್ನಡ ಚಿತ್ರರಂಗದಲ್ಲಿ ಕೇಳಿ ಬಂದಿತ್ತು. ಈ ಎಲ್ಲಾ ಟೀಕೆಗಳಿಗೆ ಅವರೊಂದು ಉತ್ತರ ಕೊಡಲೇಬೇಕಿತ್ತು.

ಹೀಗಿರುವಾಗಲೇ ಅವರು "ಟಗರು' ಚಿತ್ರದಲ್ಲಿ ಡಾಲಿ ಎಂಬ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡು ಯಶಸ್ವಿಯಾದರು. ಇನ್ನು ಅವರು ಹೀರೋ ಪಾತ್ರಗಳಲ್ಲಿ ಮುಂದುವರೆಯುತ್ತಾರಾ ಅಥವಾ ನೆಗೆಟಿವ್‌ ಪಾತ್ರಗಳಿಗೆ ಸೀಮಿತವಾಗುತ್ತಾರಾ ಎಂಬ ಪ್ರಶ್ನೆ ಕೇಳಿದಾಗ, "ನನಗೂ ಗೊತ್ತಿಲ್ಲ' ಎಂದು ಉತ್ತರಿಸಿದ್ದರು. "ನಿಜ ಹೇಳಬೇಕೆಂದರೆ, ವಾಟ್‌ ನೆಕ್ಸ್ಟ್ ಅಂತ ನನಗೂ ಗೊತ್ತಿಲ್ಲ. "ಟಗರು' ಚಿತ್ರ ಒಂದು ಜಾಗದಲ್ಲಿ ತಂದು ಬಿಟ್ಟಿದೆ.

ಮುಂದೆ ಹೀರೋ ಪಾತ್ರಗಳನ್ನ ಮಾಡಬೇಕಾ ಅಥವಾ ನೆಗೆಟಿವ್‌ ಪಾತ್ರಗಳನ್ನು ಮಾಡಬೇಕಾ ಅಂತ ಗೊತ್ತಾಗುತ್ತಿಲ್ಲ. ಆ ಬಗ್ಗೆ ಯೋಚಿಸಿಯೂ ಇಲ್ಲ. ಒಂದಂತು ಅಂದುಕೊಂಡಿದ್ದೇನೆ. ಪಾಸಿಟಿವೊ ಅಥವಾ ನೆಗೆಟಿವೊ ಅಂತ ಯೋಚಿಸಲ್ಲ. ಒಳ್ಳೆಯ ಪಾತ್ರ ಮತ್ತು ತಂಡ ಬಂದರೆ ಯಾವುದಾದರೂ ಖಂಡಿತಾ ಒಪ್ಪಿಕೊಳ್ಳುತ್ತೇನೆ. "ಯಜಮಾನ' ಸಹ ನಾನು ಹಾಗೆಯೇ ಒಪ್ಪಿಕೊಂಡ ಚಿತ್ರ. ಇದುವರೆಗೂ ಡಾಲಿ ಪಾತ್ರ ಒಂದು ಸವಾಲಾಗಿತ್ತು.

ಅದನ್ನು ಬ್ರೇಕ್‌ ಮಾಡಿ ಇನ್ನೇನೋ ಮಾಡಬೇಕು. ಹಾಗೆ ಮಾಡಬೇಕೆಂದರೆ, ಇನ್ನೊಂದು ಪಾತ್ರ ಹುಚ್ಚು ಹತ್ತಿಸಬೇಕು. ಆ ಪಾತ್ರ ಯಾರ ಕಡೆಯಿಂದ ಬರುತ್ತದೆ ಎಂಬ ಕುತೂಹಲ ನನಗೂ ಇದೆ.  ಆ ಕುತೂಹಲದಿಂದಲೇ ಕಾಯುತ್ತಿದ್ದೇನೆ' ಎಂದಿದ್ದರು ಧನಂಜಯ್‌. ಅದಾಗಿ ಮೂರು ತಿಂಗಳಲ್ಲಿ ಧನಂಜಯ್‌ ಬದುಕಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪ್ರಮುಖವಾಗಿ ಅವರು ಸೂರಿ ನಿರ್ದೇಶನದ "ಪಾಪ್‌ಕಾರ್ನ್ ಮಂಕಿ ಟೈಗರ್‌' ಚಿತ್ರಕ್ಕೆ ಹೀರೋ ಆಗಿದ್ದಾರೆ.

ಅದಲ್ಲದೆ "ಟಗರು' ಚಿತ್ರ ನೋಡಿ ಮೆಚ್ಚಿಕೊಂಡಿದ್ದ ರಾಮ್‌ ಗೋಪಾಲ್‌ ವರ್ಮ, ಕರೆದು ಕನ್ನಡ-ತೆಲುಗು ಚಿತ್ರದಲ್ಲಿ ಹೀರೋ ಆಗಿ ನಟಿಸುವುದಕ್ಕೆ ಅವಕಾಶ ನೀಡಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಿಗೆ ಕಳೆದ ವರ್ಷ ಬಿಡುಗಡೆಯಾದ "ಅಲ್ಲಮ' ಚಿತ್ರದ ಅಭಿನಯಕ್ಕಾಗಿ ಫಿಲ್ಮ್ ಫೇರ್‌ನಿಂದ ವಿಮರ್ಶಕರ ಪ್ರಶಸ್ತಿ ಅವರಿಗೆ ಸಿಕ್ಕಿದೆ. ಖುಷಿಯಾಗುವುದಕ್ಕೆ ಇನ್ನೇನು ಬೇಕು ಹೇಳಿ?

ಅದೇ ಖುಷಿಯಲ್ಲಿರುವ ಧನಂಜಯ್‌, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಆರ್‌.ಜಿ.ವಿ ನಿರ್ಮಾಣದ "ಭೈರವ ಗೀತಾ' ಚಿತ್ರದಲ್ಲಿ ನಟಿಸುವುದಕ್ಕೆ ಆಂಧ್ರಕ್ಕೆ ಹಾರಿದ್ದಾರೆ. ಈ ಚಿತ್ರದ ಚಿತ್ರೀಕರಣ ಜುಲೈ ಅಂತ್ಯದಲ್ಲಿ ಮುಗಿಯಲಿದ್ದು, ಆ ನಂತರ ಆಗಸ್ಟ್‌ನಲ್ಲಿ ಸೂರಿ ನಿರ್ದೇಶನದ "ಪಾಪ್‌ಕಾರ್ನ್ ಮಂಕಿ ಟೈಗರ್‌' ಚಿತ್ರದ ಚಿತ್ರೀಕರಣ ಶುರುವಾಗಲಿದೆ.

ಈ ಮಧ್ಯೆ ಇನ್ನೊಂದಿಷ್ಟು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿದ್ದು, ಕೆಲವು ಕಥೆಗಳನ್ನು ಕೇಳುತ್ತಿದ್ದಾರಂತೆ ಧನಂಜಯ್‌. ಆ ಚಿತ್ರಗಳೇನಿದ್ದರೂ "ಪಾಪ್‌ಕಾರ್ನ್ ಮಂಕಿ ಟೈಗರ್‌' ಮುಗಿದ ಮೇಲಷ್ಟೇ ಶುರುವಾಗಬೇಕಿದೆ. "ಒಟ್ಟಿನಲ್ಲಿ ಮತ್ತೂಮ್ಮೆ ಕನ್ನಡದಿಂದ ಹಲವು ಫೋನ್‌ ಕಾಲ್‌ಗ‌ಳು ಬರುತ್ತಿವೆ. ಅದೇ ಖುಷಿ' ಎಂದು ಮಾತು ಮುಗಿಸುತ್ತಾರೆ ಧನಂಜಯ್‌.


Trending videos

Back to Top