CONNECT WITH US  

ಸಂಗೀತದ ಹೊಸ ಚರಣ

ರೂಪತಾರಾ

"ಟಗರು ಬಂತು ಟಗರು ....'  ಬಹುಶಃ ಇತ್ತೀಚಿನ ದಿನಗಳಲ್ಲಿ ಈ ಹಾಡು ಹಿಟ್‌ ಆದಷ್ಟು ಯಾವ ಹಾಡು ಕೂಡಾ ಹಿಟ್‌ ಆಗಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಆ ಮಟ್ಟಕ್ಕೆ ಶಿವರಾಜಕುಮಾರ್‌ ಅವರ "ಟಗರು' ಚಿತ್ರದ "ಟಗರು ಬಂತು ಟಗರು' ಹಾಡು ಜನಪ್ರಿಯವಾಗಿತ್ತು. ಕೇವಲ ಅದೊಂದೇ ಅಲ್ಲ, "ಟಗರು' ಆಲ್ಬಂ ಬಗ್ಗೆಯೇ ಮೆಚ್ಚುಗೆ ವ್ಯಕ್ತವಾಯಿತು.

ಆದರೆ, ಆಲ್ಬಂ ಅಷ್ಟು ದೊಡ್ಡ ಹಿಟ್‌ ಆದರೂ ಆ ಹುಡುಗ ಮಾತ್ರ ತನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ತಣ್ಣಗೆ ನಾಲ್ಕು ಗೋಡೆಗಳ ಮಧ್ಯೆ ಕಂಪೋಸಿಂಗ್‌ನಲ್ಲಿ ಬಿಝಿ. ಯಶಸ್ಸು ಬರುತ್ತೆ, ಹೋಗುತ್ತೆ. ಆದರೆ, ನಾವು ಮಾಡುವ ಕೆಲಸ ಮಾತ್ರ ಶಾಶ್ವತ ಎಂಬ ಸಿದ್ಧಾಂತವನ್ನು ಮೈಗೂಡಿಸಿಕೊಂಡ ಆ ಹುಡುಗ ಬೇರಾರು ಅಲ್ಲ, ಯುವ ಸಂಗೀತ ನಿರ್ದೇಶಕ, "ಟಗರು' ಆಲ್ಬಂ ಹಿಂದಿನ "ಮಾಂತ್ರಿಕ' ಚರಣ್‌ರಾಜ್‌. ಚರಣ್‌ರಾಜ್‌ "ಟಗರು' ಸಿನಿಮಾದ ಸಂಗೀತ ನಿರ್ದೇಶಕ.

ಚರಣ್‌ರಾಜ್‌ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಹೆಚ್ಚೇನು ವರ್ಷಗಳಾಗಿಲ್ಲ. ಒಂದಷ್ಟು ಪ್ರಯೋಗಾತ್ಮಕ ಸಿನಿಮಾಗಳಿಗೆ ಸಂಗೀತ ನೀಡುತ್ತಾ, ಎಲೆಮರೆಯ ಕಾಯಿಯಂತೆ ಇದ್ದವರು ಚರಣ್‌. ಇಂತಿಪ್ಪ ಚರಣ್‌ರಾಜ್‌ ಅವರಿಗೆ ಬ್ರೇಕ್‌ ಕೊಟ್ಟಿದ್ದು, ಗಾಂಧಿನಗರದ ಮಂದಿಯ ತಿರುಗಿ ನೋಡುವಂತೆ ಮಾಡಿದ್ದು "ಗೋಧಿ ಬಣ್ಣ ಸಾಧಾರಣ ಮೈಕಟ್ಟು'. ಪುಷ್ಕರ್‌ ಬ್ಯಾನರ್‌ನಲ್ಲಿ ಬಂದ ಮೊದಲ ಸಿನಿಮಾವದು. ಆ ಚಿತ್ರ ಇಡೀ ತಂಡಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿತು.

ಚಿತ್ರದ ಸಂಗೀತ, ಹಿನ್ನೆಲೆ ಸಂಗೀತದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಸೂಕ್ಷ್ಮ ಸಂವೇದನೆಯ ಸಂಗೀತ ನಿರ್ದೇಶಕ ಎಂಬ ಹೆಸರು ಕೂಡಾ ಚರಣ್‌ರಾಜ್‌ಗೆ ಬಂತು. "ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರ ನನಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಆ ನಂತರ ಸಾಕಷ್ಟು ಅವಕಾಶಗಳು ಬಂದುವು. ನನ್ನ ಸಾಮರ್ಥ್ಯಕ್ಕೆ ಎಷ್ಟು ಸಿನಿಮಾಗಳನ್ನು ಮಾಡಬಹುದೋ ಅಷ್ಟನ್ನಷ್ಟೇ ಒಪ್ಪಿಕೊಂಡೆ' ಎಂದು ಹೇಳುತ್ತಾರೆ ಚರಣ್‌ರಾಜ್‌. 

ಟಗರು ಸವಾಲು: ಇವತ್ತು "ಟಗರು' ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಹಾಡುಗಳು ಇನ್ನಿಲ್ಲದಂತೆ ಹಿಟ್‌ ಆಗಿದೆ. ಚರಣ್‌ರಾಜ್‌ಗೂ "ಟಗರು' ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಆದರೆ, ಈ ಚಿತ್ರಕ್ಕೆ ಸಂಗೀತ ನೀಡೋದು ಒಂದು ಸವಾಲಿನ ಕೆಲಸವಾಗಿತ್ತಂತೆ. "ಟಗರು ಚಿತ್ರ ನನಗೆ ಒಳ್ಳೆಯ ಅನುಭವ ನೀಡಿತು. ಸೂರಿಯವರೊಂದಿಗೆ ಕೆಲಸ ಮಾಡಿದ ಕ್ಷಣಗಳು ಕೂಡಾ ಅದ್ಭುತ.

ಅವರ ಆಲೋಚನೆಗಳು, ಸಂಗೀತದ ಬಗೆಗಿನ ಅವರ ಪ್ರೀತಿ, ಅವರು ಬೆಂಬಲಿಸುವ ರೀತಿಯಿಂದ ಒಳ್ಳೆಯ ಹಾಡುಗಳನ್ನು ನೀಡಲು ಸಾಧ್ಯವಾಯಿತು' ಎಂದು "ಟಗರು' ಕ್ಷಣಗಳನ್ನು ಮೆಲುಕು ಹಾಕುತ್ತಾರೆ ಚರಣ್‌ರಾಜ್‌. ಮೊದಲೇ ಹೇಳಿದಂತೆ "ಟಗರು' ಒಂದು ಸವಾಲಿನ ಕೆಲಸ ಎನ್ನಲು ಚರಣ್‌ರಾಜ್‌ ಮರೆಯುವುದಿಲ್ಲ. "ಸಾಮಾನ್ಯವಾಗಿ ಒಂದು ಸಂದರ್ಭ ಹೇಳಿ, ಅದಕ್ಕೆ ಹಾಡು ಮಾಡಲು ಹೇಳುತ್ತಾರೆ.

ಆದರೆ, ಸೂರಿಯವರ ಶೈಲಿ ತುಂಬಾ ವಿಭಿನ್ನ. ಅವರು ಸಿಚುವೇಶನ್‌ ಹೇಳುತ್ತಿರಲಿಲ್ಲ. ಅದರ ಬದಲಾಗಿ ಮನುಷ್ಯ ಭಾವನೆಗಳನ್ನು ಹೇಳಿ, ಅದಕ್ಕೆ ಟ್ಯೂನ್‌ ಮಾಡಲು ಹೇಳುತ್ತಿದ್ದರು. ಕೋಪ, ಪ್ರೀತಿ, ಬೇಸರ ... ಹೀಗೆ ಭಾವನೆಗಳನ್ನು ಹೇಳುತ್ತಿದ್ದರು. ನಿಜಕ್ಕೂ ಅದೊಂದು ಸವಾಲಿನ ಕೆಲಸವಾಗಿತ್ತು. ಕಂಪೋಸ್‌ ಸಮಯದಲ್ಲಿ ಸೂರಿ ಹಾಗೂ ಜಯಂತ್‌ ಕಾಯ್ಕಿಣಿ ಇಬ್ಬರೂ ಜೊತೆಗೇ ಇರುತ್ತಿದ್ದರು.

ಇಬ್ಬರು ದಿಗ್ಗಜರ ಮಧ್ಯೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತು' ಎಂದು ಖುಷಿಯಿಂದ ಹೇಳುತ್ತಾರೆ ಚರಣ್‌. ಚರಣ್‌ರಾಜ್‌ ಎಂದರೆ ತುಂಬಾ ಸಾಫ್ಟ್. ಅವರ ಗುಣಕ್ಕೆ ತಕ್ಕಂತೆ ಅವರ ಸಂಗೀತ ಕೂಡಾ ಹೆಚ್ಚು ಮೆಲೋಡಿಯಾಗಿರುತ್ತದೆ, ಮಾಸ್‌ ಸಾಂಗ್‌ಗಳನ್ನು ಅವರು ಮಾಡೋದಿಲ್ಲ ಎಂಬ ಭಾವನೆ ಅನೇಕರಲ್ಲಿತ್ತಂತೆ. ಆದರೆ, "ಟಗರು' ಮೂಲಕ ಆ ಬ್ರಾಂಡ್‌ನಿಂದ ಹೊರಬಂದರಂತೆ.

ಚರಣ್‌ರಾಜ್‌ ಕೂಡಾ ಪಕ್ಕಾ ಮಾಸ್‌, ಟಪ್ಪಾಂಗುಚ್ಚಿ ಹಾಡುಗಳನ್ನು ಮಾಡುತ್ತಾರೆಂಬುದನ್ನು "ಟಗರು' ತೋರಿಸಿಕೊಡುವ ಮೂಲಕ ಬ್ರಾಂಡ್‌ ಆಗುವ ಅಪಾಯದಿಂದ ತಪ್ಪಿದರಂತೆ ಚರಣ್‌ರಾಜ್‌. ಇನ್ನು, "ಟಗರು' ಚಿತ್ರದ ಹಾಡುಗಳನ್ನು ಶಿವರಾಜಕುಮಾರ್‌ ಕೂಡಾ ಮೆಚ್ಚುವ ಜೊತೆಗೆ ಚರಣ್‌ರಾಜ್‌ ಅವರ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರಂತೆ. ಇದು ಅವರ ವಿಶ್ವಾಸವನ್ನು ಮತ್ತಷ್ಟು ಹೆಚ್ಚುಗೊಳಿಸಿದ್ದು ಸುಳ್ಳಲ್ಲ.

ನಿಧಾನವೇ ಪ್ರಧಾನ: "ಟಗರು' ನಂತರ ಅದೆಷ್ಟೋ ಸಿನಿಮಂದಿ ಚರಣ್‌ರಾಜ್‌ರಿಂದ ಸಂಗೀತ ಕೊಡಿಸಬೇಕು ಎಂದು ಪ್ರಯತ್ನಿಸಿದ್ದರು. ಆದರೆ, ಚರಣ್‌ರಾಜ್‌ ಮಾತ್ರ ಯಾರ ಕೈಗೂ ಸಿಕ್ಕಿರಲಿಲ್ಲ. ತಮ್ಮ ಪಾಡಿಗೆ ತಾವು ಒಪ್ಪಿಕೊಂಡ ಸಿನಿಮಾಗಳ ಕೆಲಸದಲ್ಲಿ ಬಿಝಿಯಾಗಿದ್ದರು. ಹಾಗಾದರೆ ಚರಣ್‌ಗೆ ಹೆಚ್ಚು ಸಿನಿಮಾ ಮಾಡುವ ಆಸೆ ಇಲ್ಲವೇ ಎಂದು ನೀವು ಕೇಳಬಹುದು. "ನನಗೆ ನಾಲ್ಕು ದಿನಕ್ಕೊಂದರಂತೆ ಅವಕಾಶಗಳು ಬರುತ್ತಲೇ ಇರುತ್ತವೆ.

ಅವಕಾಶಗಳು ಬಂತೆಂಬ ಕಾರಣಕ್ಕೆ ಎಲ್ಲವನ್ನು ಒಪ್ಪಿಕೊಂಡರೆ ಯಾವ ಸಿನಿಮಾಕ್ಕೂ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚಾಗಿ ನನಗೆ ತುಂಬಾ ತುರ್ತಾಗಿ ಸಂಗೀತ ಮಾಡಿಕೊಡಲು ಬರೋದಿಲ್ಲ. ಸ್ವಲ್ಪ ತಡವಾದರೂ ನಾನು ಗುಣಮಟ್ಟದ ಹಾಡುಗಳನ್ನು ಕೊಡಬೇಕೆಂದುಕೊಂಡಿದ್ದೇನೆ. ಹಾಡುಗಳು ಜನರಿಗೆ ಇಷ್ಟವಾಗುವ ಮೊದಲು, ಆ ಹಾಡನ್ನು ಸಂಗೀತ ನಿರ್ದೇಶಕ ಇಷ್ಟಪಟ್ಟಿರಬೇಕು. ಏನೋ ಹೊಸತನವಿದೆ ಎಂದು ಆತನಿಗೆ ಅನಿಸಿರಬೇಕು.

ಮಿಕ್ಕಿದ್ದು ಕೇಳುಗರಿಗೆ ಬಿಟ್ಟಿದ್ದು. ಅದೇ ಕಾರಣದಿಂದ ನಾನು ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ ಪ್ರೋಗ್ರಾಮಿಂಗ್‌ ಕೂಡಾ ನಾನೇ ಮಾಡುವುದರಿಂದ ಸ್ವಲ್ಪ ಹೆಚ್ಚು ಸಮಯ ಹಿಡಿಯುತ್ತದೆ. ತುಂಬಾ ಸಿನಿಮಾಗಳನ್ನು ಒಪ್ಪಿಕೊಂಡು, ಕೊನೆಗೆ ಯಾವುದಕ್ಕೂ ನ್ಯಾಯ ಕೊಡಲಾಗದಿದ್ದರೆ ಅದು ನಾವು ಆತ್ಮವಂಚನೆ ಮಾಡಿಕೊಂಡಂತೆ. ಆ ಕಾರಣದಿಂದಲೇ ನನ್ನ ಸಾಮರ್ಥ್ಯದಲ್ಲಿ ಎಷ್ಟು ಸಿನಿಮಾಗಳನ್ನು ಮಾಡಬಹುದೋ ಅಷ್ಟನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದೇನೆ' ಎನ್ನುವ ಮೂಲಕ ನಿಧಾನವೇ ಪ್ರಧಾನ ಎನ್ನುತ್ತಾರೆ ಚರಣ್‌.

ಸ್ಟಾರ್‌ ವರ್ಸಸ್‌ ಹೊಸಬರು: ಚರಣ್‌ರಾಜ್‌ ಚಿತ್ರರಂಗದಲ್ಲಿ ಈಗಷ್ಟೇ ಬೆಳೆಯುತ್ತಿರುವ ಸಂಗೀತ ನಿರ್ದೇಶಕ. ಆದರೆ, ತಮ್ಮ ಹಾಡುಗಳ ಮೂಲಕ ಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದಾರೆ. ಸ್ಟಾರ್‌ಗಳ ಸಿನಿಮಾದಿಂದ ಹಿಡಿದು ಹೊಸಬರ ಸಿನಿಮಾದವರೆಗೂ ಚರಣ್‌ರಾಜ್‌ಗೆ ಅವಕಾಶ ಸಿಗುತ್ತಿದೆ. ಹಾಗಾದರೆ ಚರಣ್‌ಗೆ ಯಾವುದು ಸುಲಭ, ಸ್ಟಾರ್‌ಗಳ ಸಿನಿಮಾಕ್ಕೆ ಸಂಗೀತ ನೀಡೋದಾ ಅಥವಾ ಹೊಸಬರಿಗಾ ಎಂದರೆ, ವಿಭಿನ್ನವಾಗಿದ್ದರೆ ಎರಡೂ ಕಡೆ ಸುಲಭ ಎನ್ನುತ್ತಾರೆ. "ಸ್ಟಾರ್‌ಗಳ ಸಿನಿಮಾಕ್ಕೆ ಸಂಗೀತ ನೀಡುವಾಗ ಸ್ವಲ್ಪ ಟೆನನ್‌, ಒತ್ತಡ ಜಾಸ್ತಿ ಇರುತ್ತದೆ.

ಏಕೆಂದರೆ ಅವರಿಗೊಂದು ಇಮೇಜ್‌ ಇರುತ್ತದೆ, ದೊಡ್ಡ ಅಭಿಮಾನಿ ವರ್ಗವಿರುತ್ತದೆ. ಅವೆಲ್ಲವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಸ್ಟಾರ್‌ ಸಿನಿಮಾಗಳ ನಿರ್ದೇಶಕರ ಬೆಂಬಲವಿದ್ದರೆ "ಟಗರು' ಸಿನಿಮಾದಂತೆ ವಿಭಿನ್ನ ಹಾಡುಗಳನ್ನು ನೀಡಲು ಸಾಧ್ಯ. ಇನ್ನು ಹೊಸಬರು ಸಹಜವಾಗಿಯೇ ಹೊಸತನ ಕೇಳುತ್ತಿದ್ದಾರೆ' ಎನ್ನುತ್ತಾರೆ. ಚರಣ್‌ರಾಜ್‌ ಬಳಿ ಬರುವ ಬಹುತೇಕ ನಿರ್ದೇಶಕರು ಏನಾದರೂ ವಿಭಿನ್ನವಾಗಿ ಹೊಸ ಪ್ರಯೋಗ ಮಾಡಿ ಎಂದು ಹೇಳಿ ಪ್ರೋತ್ಸಾಹಿಸುತ್ತಿದ್ದಾರಂತೆ. 

ಮೆಲೋಡಿಯೇ ಶಾಶ್ವತ: ಸಂಗೀತ ನಿರ್ದೇಶಕನಾದವನು ತನ್ನ ವೈಯಕ್ತಿಕ ಇಷ್ಟ ಏನೇ ಇದ್ದರೂ ಅಂತಿಮವಾಗಿ ಒಬ್ಬ ನಿರ್ದೇಶಕನ ಕಲ್ಪನೆ, ಆತನ ಇಷ್ಟಕ್ಕೆ ತಕ್ಕಂತೆ ಕೆಲಸ ಮಾಡಬೇಕಾಗುತ್ತದೆ. ಈ ವಿಷಯವನ್ನು ಚರಣ್‌ ಕೂಡಾ ಒಪ್ಪುತ್ತಾರೆ. ವೈಯಕ್ತಿಕವಾಗಿ ಹೇಳುವುದಾದರೆ ಚರಣ್‌ಗೆ ಮೆಲೋಡಿ ಎಂದರೆ ತುಂಬಾ ಇಷ್ಟವಂತೆ. ಕೊನೆವರೆಗೆ ನಿಲ್ಲೋದು ಮೆಲೋಡಿಯೇ ಹೊರತು ಮಾಸ್‌ ಅಲ್ಲ ಎನ್ನುತ್ತಾರೆ ಅವರು. "ನನಗೆ ವೈಯಕ್ತಿಕವಾಗಿ ಮೆಲೋಡಿ ತುಂಬಾ ಇಷ್ಟ. ಯಾವುದೇ ಸಿನಿಮಾದಲ್ಲೂ ಮೆಲೋಡಿ ಹಾಡು ಪ್ರಮುಖ ಪಾತ್ರವಹಿಸುತ್ತದೆ.

ಏನೇ ಮಾಸ್‌ ಸಾಂಗ್‌, ಟಪ್ಪಾಂಗುಚ್ಚಿ ಹಾಡು ಇದ್ದರೂ, ಅಂತಿಮವಾಗಿ ನಿಲ್ಲೋದು ಮೆಲೋಡಿ' ಎಂಬುದು ಚರಣ್‌ ಮಾತು. ಹಾಗಂತ ತಮ್ಮ ವೈಯಕ್ತಿಕ ಆಸೆಯನ್ನು ಸಿನಿಮಾದಲ್ಲಿ ತೋರಿಸಲ್ಲ ಅಂತಾರೆ. "ಪ್ರತಿ ಸಿನಿಮಾ ಕೂಡಾ ನಿರ್ದೇಶಕನ ಕಲ್ಪನೆ. ಆತ ಒಂದು ಕಲ್ಪನೆ ಇಟ್ಟುಕೊಂಡು ನಮ್ಮ ಬಳಿ ಬಂದಿರುತ್ತಾನೆ. ಆ ನಿರ್ದೇಶಕನ ಆಸೆ, ಕಥೆಯ ಆಶಯಕ್ಕೆ ತಕ್ಕಂತೆ ಸಂಗೀತ ನೀಡೋದು ನಮ್ಮ ಜವಾಬ್ದಾರಿ' ಎನ್ನಲು ಚರಣ್‌ ಮರೆಯುವುದಿಲ್ಲ. 

ಕೈ ತುಂಬಾ ಸಿನಿಮಾ: ಚರಣ್‌ರಾಜ್‌ ಸದ್ಯ ಒಪ್ಪಿಕೊಂಡ ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಸದ್ಯ ರಕ್ಷಿತ್‌ ಶೆಟ್ಟಿ ನಾಯಕರಾಗಿರುವ "ಅವನೇ ಶ್ರೀಮನ್ನಾರಾಯಣ', ಹೇಮಂತ್‌ ನಿರ್ದೇಶನದ "ಕವಲುದಾರಿ' ಚಿತ್ರಗಳು ನಡೆಯುತ್ತಿವೆ. ಇದಲ್ಲದೇ ಇನ್ನೂ ಹೆಸರಿಡದ ಒಂದೆರಡು ಸಿನಿಮಾಗಳನ್ನು ಕೂಡಾ ಚರಣ್‌ ಕೈಯಲ್ಲಿವೆ. "ಅವನೇ ಶ್ರೀಮನ್ನಾರಾಯಣ' ಚಿತ್ರ 80ರ ದಶಕದ ಹಿನ್ನೆಲೆ ಇರುವುದರಿಂದ ಅದರ ಹಾಡು, ಸಂಗೀತ ಹಿನ್ನೆಲೆ ಕೂಡಾ ಭಿನ್ನವಾಗಿರಲಿದೆಯಂತೆ.

ಇನ್ನು, ಪುನೀತ್‌ರಾಜಕುಮಾರ್‌ ಬ್ಯಾನರ್‌ನ "ಕವಲುದಾರಿ' ಕೂಡಾ ಒಂದು ಹೊಸ ಪ್ರಯೋಗದ ಚಿತ್ರವಾಗಿದ್ದು, ಅಲ್ಲೂ ವಿಭಿನ್ನತೆ ನೀಡಲು ಪ್ರಯತ್ನಿಸಿದ್ದಾರಂತೆ ಚರಣ್‌. "ಒಪ್ಪಿಕೊಂಡ ಸಿನಿಮಾಗಳೆಲ್ಲವೂ ನನಗೆ ಖುಷಿ ಕೊಡುತ್ತಿದೆ. ಬೆಳಗ್ಗೆಯಿಂದ ರಾತ್ರಿವರೆಗೆ ಸ್ಟುಡಿಯೋದಲ್ಲಿ ಬಿಝಿ. ಈ ಮಧ್ಯೆ ಮೈಂಡ್‌ ಫ್ರೀ ಆಗಲು ಸಣ್ಣಪುಟ್ಟ ಆಟಗಳೊಂದಿಗೆ ಜೀವನ ಸಾಗುತ್ತಿದೆ' ಎನ್ನುತ್ತಾರೆ ಚರಣ್‌ರಾಜ್‌. ಅಂದಹಾಗೆ, ಚರಣ್‌ರಾಜ್‌ ಈಗಾಗಲೇ "ಪುಷ್ಪಕ ವಿಮಾನ', "ಜಿರ್‌ಜಿಂಬೆ', "ದಳಪತಿ', "ಹರಿವು' ಹಾಗೂ "ಟಗರು' ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. 

ಬರಹ: ರವಿ ರೈ


Trending videos

Back to Top