CONNECT WITH US  

ಉತ್ತಮ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಆಶಯ

ಗದಗ: ಸಮಾಜದಲ್ಲಿ ಬಡವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನಿಗದಿತ ಸಮಯದಲ್ಲಿ ದೊರಕಬೇಕು ಎಂಬುದು ರಾಜ್ಯ ಸರಕಾರದ ಆಶಯ. ಈ ನಿಟ್ಟಿನಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಅಗತ್ಯವಿರುವ ಎಂಆರ್‌ಐ, ಸಿಟಿ ಸ್ಕಾನ್‌ಗಳನ್ನು ತಿಂಗಳಲ್ಲಿ ಪೂರೈಸಲಾಗುವುದು ಎಂದು ಆರೋಗ್ಯ ಸಚಿವ ಕೆ.ಆರ್‌.  ರಮೇಶ್‌ ಕುಮಾರ ಭರವಸೆ ನೀಡಿದರು. 

ನಗರದ ರಾಣಿ ಕಿತ್ತೂರ ಚೆನ್ನಮ್ಮ ರಸ್ತೆಯಲ್ಲಿನ 19 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನೂತನ ಕಟ್ಟಡ  ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ವೈದ್ಯಕೀಯ ಹಾಗೂ ಶೈಕ್ಷಣಿಕ  ಸೇವೆಗಳು ಸಾರ್ವಜನಿಕವಾಗಬೇಕಿದ್ದು, ಇದು ಖಾಸಗಿಯಾಗುತ್ತಿವೆ.

ಕೃಷಿ ಪ್ರಧಾನವಾದ ದೇಶದಲ್ಲಿ ಕೃಷಿಕನ ಬದುಕು ಉತ್ತಮವಾಗಬೇಕಿತ್ತು.  ಆದರೆ ದಿನದಿಂದ ದಿನಕ್ಕೆ ರೈತ ಆರ್ಥಿಕ ಬಲ ಕುಂದುತ್ತಿದೆ. ದೇಶದ ಸ್ವಾತಂತ್ರದ ಹೊಸತರಲ್ಲಿ ಅಧಿಕಾರಕ್ಕೆ ಬಂದ ರಾಜಕಾರಣಿಗಳು ದೇಶವನ್ನು ಸಾಕಷ್ಟು  ಮುನ್ನಡೆಸಿದ್ದಾರೆ. ಆದರೆ ಇತ್ತೀಚಿನ ರಾಜಕಾರಣಿಗಳಲ್ಲಿ ಸಾಮಾಜಿಕ ಕಳಕಳಿ ಮಾಯವಾಗಿದೆಯೇ ಎಂಬ ಸಂಶಯ ಕಾಡುತ್ತಿದೆ.

ಅಲ್ಲದೇ ಇತ್ತೀಚೆಗೆ  ಸಂಸತ್ತಿನಲ್ಲಿ ಯಾವ ರೀತಿಯ ಭಾಷೆ ಬಳಸಬೇಕು, ಹಿರಿಯರ ಬಗ್ಗೆ ಯಾವ ಭಾಷೆ ಬಳಸಬೇಕು ಎಂಬುದರ ಕುರಿತು ಇಂದಿನ ಜನಪ್ರತಿನಿಧಿಗಳು  ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ವೈದ್ಯಕೀಯ  ರಂಗದಲ್ಲಿ ಗಮನಾರ್ಹ ಸಾಧನೆ ಆಗುತ್ತಿದ್ದು,

ಗದಗ  ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜೊತೆಗೆ ಖಾಸಗಿ ವೈದ್ಯಕೀಯ ರಂಗವೂ ಜನರಿಗೆ  ಉತ್ತಮ ಸೌಲಭ್ಯ ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ನವೀಕೃತಗೊಂಡ ಹಿಂದಿನ ಹೆರಿಗೆ ಆಸ್ಪತ್ರೆಯ ಪಾರಂಪರಿಕ ಕಟ್ಟಡವನ್ನು ಉಳಿಸಿಕೊಂಡು, ಹೊಸ  ಸೌಲಭ್ಯಗಳನ್ನು ಒದಗಿಸುವ ಕಟ್ಟಡವನ್ನು ರೂಪಿಸಿಕೊಳ್ಳಲಾಗಿದೆ. ಆಸ್ಪತ್ರೆಗೆ ಅಗತ್ಯವಾದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಶೀಘ್ರ ನೇಮಿಸಬೇಕು. 

ಉತ್ತರ ಕರ್ನಾಟಕ ಭಾಗಕ್ಕೆ ಇದೊಂದು ಉತ್ತಮ ಆಸ್ಪತ್ರೆ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ, ಉಪಾಧ್ಯಕ್ಷೆ  ರೂಪಾ ಅಂಗಡಿ, ತಾ.ಪಂ. ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಉಪಾಧ್ಯಕ್ಷ ಎ. ಆರ್‌. ನದಾಫ್‌ , ನಗರಸಭೆ ಅಧ್ಯಕ್ಷ ಬಿ.ಬಿ. ಅಸೂಟಿ, ಉಪಾಧ್ಯಕ್ಷ  ಪ್ರಕಾಶ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಭು ಬುರಬುರೆ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ,

ಜಿ.ಪಂ. ಸದಸ್ಯ  ಸಿದ್ದು ಪಾಟೀಲ, ನಗರಸಭೆ ಸದಸ್ಯರಾದ ಮಂಜುನಾಥ ಪೂಜಾರ, ಭೂಧಾನ ಮಾಡಿದ ದುಂಡಪ್ಪ ಮಾನ್ವಿಯವರ ಪುತ್ರ ಅನ್ನದಾನೇಶ್ವರ ಮಾನ್ವಿ, ಗದಗ  ಜಿಲ್ಲಾಧಿಕಾರಿ ಮನೋಜ್‌ ಜೈನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಸಂತೋಷ ಬಾಬು ಇದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಪಿ.ಎಚ್‌. ಕಬಾಡಿ ಸ್ವಾಗತಿಸಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಜಿ.ಎಸ್‌.  ಪಲ್ಲೇದ ವಂದಿಸಿದರು.  

Trending videos

Back to Top