CONNECT WITH US  

ಗಜೇಂದ್ರಗಡದಲ್ಲಿ ಚುನಾವಣಾ ಬೆಟ್ಟಿಂಗ್‌ ಜೋರು!

ಸೋಲು-ಗೆಲುವಿನ ಲೆಕ್ಕಾಚಾರ ಶುರು

ಗಜೇಂದ್ರಗಡ: ಲೋಕಲ್‌ ವಾರ್‌ ಎಂದೇ ಬಿಂಬಿತವಾಗಿರುವ ಸ್ಥಳೀಯ ಸಂಸ್ಥೆ ಮತ ಸಮರ ಅಂತ್ಯಗೊಂಡಿದೆ. ಈಗ ಎಲ್ಲೆಲ್ಲೂ ಸೋಲು, ಗೆಲುವಿನ ಲೆಕ್ಕಾಚಾರ ಶುರುವಾಗಿದೆ.

ಪಟ್ಟಣದ 23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಹಿಂದೆಂದು ಕಾಣದಷ್ಟು ತುರುಸಿನ ಪ್ರಚಾರ ಈ ಬಾರಿ ನಡೆದಿತ್ತು. ವೈಯಕ್ತಿಕ ಪ್ರತಿಷ್ಟೆ ಪಣಕಿಟ್ಟು ಚುನಾವಣೆ ಮಿನಿ ಮಹಾ ಸಮರ ನಡೆಸಿದ ಜಟ್ಟಿಗಳ ಹಣೆ ಬರಹ ಈಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇದು ಬಾಜಿದಾರರಿಗೆ ಬಂಡವಾಳವಾಗಿದೆ. ಸೆ. 3ರಂದು ಮತ ಎಣಿಕೆ ನಡೆಯಲಿದ್ದು, ಯಾರಿಗೆ ಅಧಿಕಾರದ ಗದ್ದುಗೆ ಒಲಿಯಲಿದೆಎಂಬುದು ಕಾದು ನೋಡಬೇಕಿದೆ. ಈ ಮಧ್ಯೆ ಪಟ್ಟಣದಲ್ಲಿ ಪುರಸಭೆ ಚುನಾವಣೆ ಅಭ್ಯರ್ಥಿಗಳ ಜಯಾಪಜಯ ಲೆಕ್ಕಾಚಾರಬಿರುಸುಗೊಂಡಿವೆ. ಹೀಗಾಗಿ ಪ್ರಮುಖಅಭ್ಯರ್ಥಿಗಳ ಪರ, ವಿರೋಧ ಬಾಜಿ ವ್ಯವಹಾರ ಜೋರಾಗಿಯೇ ನಡೆದಿದೆ.

ಈ ಬಾರಿಯ ಚುನಾವಣೆಯಲ್ಲಿ ಶಿವರಾಜ ಘೋರ್ಪಡೆ, ಅಂಬರೀಶ ಬಳಿಗೇರ, ಕನಕಪ್ಪ ಅರಳಿಗಿಡದ ಸೇರಿದಂತೆ ಹಲವು ಘಟನಾನುಘಟಿಗಳು ಚುನಾವಣೆಯಲ್ಲಿ ಸ್ಪರ್ಧಿಸಿರುವುದರಿಂದ ಫಲಿತಾಂಶ ಸಹಜವಾಗಿ ಎಲ್ಲರಲ್ಲಿ ಕುತೂಹಲ ಕೆರಳಿಸಿದೆ. ಹೇಗಾದರೂ ಮಾಡಿ ಪುರಸಭೆ ಆಡಳಿತದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎನ್ನುವ ಹುಮ್ಮಸ್ಸಿನಲ್ಲಿ ಕಾಂಗ್ರೆಸ್‌ ಗೆ ಇದೆ. ಪುರಸಭೆ ಚುನಾವಣಾ ಅಬ್ಬರದ ಪ್ರಚಾರದಲ್ಲಿ ಹೀರೊ ಆಗಿ ಮಿಂಚಿದವರು ಬೆಟ್ಟಿಂಗ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಬಿಜೆಪಿ ಪರ ಹೆಚ್ಚು ಬೆಟ್ಟಿಂಗ್‌: ಒಂದೇ ಸ್ಥಾನಕ್ಕೆ ಕೆಲ ಓಣಿಯಲ್ಲಿ ಇಬ್ಬರು, ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹೀಗಾಗಿ ಯಾರೇ ಗೆದ್ದರೂ ಬೆರಳೆಣಿಕೆ ಮತ ಅಂತರದಲ್ಲಿ ಜಯಶಾಲಿಯಾಗುವುದು ನಿಶ್ಚಿತ. ಗುಟ್ಟು ಬಿಟ್ಟು ಕೊಡದ ಮತದಾರರ ನಿರ್ಧಾರ ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಕೆಲ ಪಕ್ಷೇತರ ಸ್ಪರ್ಧೆ ನಡೆಸಿದವರ ಅಭ್ಯರ್ಥಿಗಳು ಬಾಜಿಗಾರರಿಗೆ ಆಹಾರವಾಗಿದ್ದಾರೆ. ರೋಣ ಕ್ಷೇತ್ರದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿಯು ಪಟ್ಟಣದ ಪುರಸಭೆಯ ಅ ಧಿಕಾರ ಗದ್ದುಗೆ ಹಿಡಿಯಲಿದೆ ಎಂದು ಹೆಚ್ಚಿನವರು ಬಿಜೆಪಿ ಅಭ್ಯರ್ಥಿಗಳ ಪರಬಾಜಿ ಕಟ್ಟುತ್ತಿದ್ದಾರೆ. ರೇಸ್‌ನಲ್ಲಿ ಬಿಜೆಪಿಯೇ ಮುಂದಿದೆ.

ಎಲ್ಲರ ಚಿತ್ತ ಫಲಿತಾಂಶ ದತ್ತ 
ತೀವ್ರ ಕುತೂಹಲ ಕೆರಳಿಸಿದ ಚುನಾವಣೆ ಚಿತ್ತ ಈಗ ಸೆ. 3 ಪ್ರಕಟಗೊಳ್ಳುವ ಫಲಿತಾಂಶದತ್ತವಾಲಿದೆ. ಹೀಗಾಗಿ ವಾಣಿಜ್ಯ ನಗರಿ ಖ್ಯಾತಿಯ ಗಜೇಂದ್ರಗಡದ ಹೋಟೆಲ್‌ಗ‌ಳು, ಗೂಡಂಗಡಿಗಳು, ಅಂಗಡಿ-ಮುಂಗಟ್ಟುಗಳು ಜನನಿಬಿಡಸ್ಥಳಗಳಾದ ಕಾಲಕಾಲೇಶ್ವರ ವೃತ್ತ, ದುರ್ಗಾ ವೃತ್ತ, ಕೊಳ್ಳಿಯವರ ಕತ್ರಿ, ಬಸ್‌ ನಿಲ್ದಾಣ, ಸರಕಾರಿ ಕಚೇರಿಗಳು ಹೀಗೆ ಎಲ್ಲಿ ಹೋದರೂ ಕುಂತಲ್ಲಿ, ನಿಂತಲ್ಲಿ ಯಾರು ಗೆಲ್ತಾರೆ ಅನ್ನೋದೇ ಜನರಲ್ಲಿ ದೊಡ್ಡ ಚರ್ಚೆಯಾಗಿದೆ. ಇದು ಬೆಟ್ಟಿಂಗ್‌ ಭರಾಟೆ ಹೆಚ್ಚಿಸಲು ಮುಖ್ಯ ಕಾರಣವಾಗಿದೆ. ಮಟ್ಕಾ ಜೂಜಾಟದಲ್ಲಿ ತೊಡಗಿದ್ದವರು ಈಗ ಚುನಾವಣಾ ಫಲಿತಾಂಶವನ್ನು ಬೆಟ್ಟಿಂಗ್‌ ಸ್ವರೂಪದಲ್ಲಿ ಬಳಕೆ ಮಾಡಲು ಶುರುವಿಟ್ಟುಕೊಂಡಿದ್ದಾರೆ. ಪುರಸಭೆ ಚುನಾವಣೆಯ ಅನೇಕ ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್‌ ನಡೆಸುತ್ತಿದ್ದಾರೆ. ಪಕ್ಷೇತರರ ಪರ ಬೆಟ್ಟಿಂಗ್‌ ಕಟ್ಟಿರುವುದು ಮಾತ್ರ ಇಲ್ಲಿ ಎಲ್ಲಿಯೂ ಕಂಡುಬಂದಿಲ್ಲ. ಹೀಗಾಗಿ ಬೆಟ್ಟಿಂಗ್‌ನಲ್ಲಿ ಬಿಜೆಪಿ, ಕಾಂಗ್ರೆಸ್‌ ರೇಸ್‌ನಲ್ಲಿದೆ

ಡಿ.ಜಿ. ಮೋಮಿನ್‌


Trending videos

Back to Top