CONNECT WITH US  

ಚಾಲೂ ಆಗದ ತ್ರಿಚಕ್ರ ವಾಹನ!

ಫಲಾನುಭವಿಗಳ ಕೈಸೇರುವ ಮುನ್ನವೇ ತುಕ್ಕು ಹಿಡಿಯುತ್ತಿವೆ ವಾಹನ

ಗದಗ: ತ್ರಿಚಕ್ರ ವಾಹನಗಳು ವಿತರಣೆಯಾಗದೇ ಕಸಾಪ ಭವನನದಲ್ಲಿ ಧೂಳು ತಿನ್ನುತ್ತಿರುವುದು.

ಗದಗ: ಸ್ಥಳೀಯ ಶಾಸಕರಿಗೆ ಸಮಯ ಸಿಗದಿರುವುದು ಹಾಗೂ ಚುನಾವಣಾ ನೀತಿ ಸಂಹಿತೆಯಿಂದ ಮೂರು ತಿಂಗಳು ಕಳೆದರೂ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತಣೆಯಾಗಿಲ್ಲ. ಹೀಗಾಗಿ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ನಿಲ್ಲಿಸಿರುವ 70ಕ್ಕೂ ಹೆಚ್ಚು ವಾಹನಗಳು ಫಲಾನುಭವಿಗಳ ಕೈಸೇರುವ ಮುನ್ನವೇ ತುಕ್ಕು ಹಿಡಿಯುತ್ತಿವೆ!

ಕರ್ನಾಟಕ ಸರಕಾರದ ವಿಕಲಚೇತನ ಹಾಗೂ ಹಿರಿಯ ನಾಗಕರಿಕರ ಸಬಲೀಕರಣ ಇಲಾಖೆಯಿಂದ 2017-18ನೇ ಸಾಲಿಗೆ ಗದಗ ವಿಧಾನಸಭಾ ಕ್ಷೇತ್ರಕ್ಕೆ 78 ಯಂತ್ರಚಾಲಿತ ತ್ರಿಚಕ್ರ ವಾಹನಗಳು ಬಿಡುಗಡೆಯಾಗಿವೆ. ವಾಹನಗಳ ವಿತರಣೆಗೆ ಶಾಸಕರ ದಿನಾಂಕ ನಿಗದಿಯಾಗದೇ ಧೂಳು ತಿನ್ನುತ್ತಿವೆ.

ಗದಗ ಕ್ಷೇತ್ರದಲ್ಲೇ ಬಾಕಿ: ವಿಕಲಚೇತನ ಹಾಗೂ ಹಿರಿಯ ನಾಗಕರಿಕರ ಸಬಲೀಕರಣ ಇಲಾಖೆಯಿಂದ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ವಾರ್ಷಿಕ 18-20 ತ್ರಿಚಕ್ರ ವಾಹನ ಬಿಡುಗಡೆಯಾಗುತ್ತವೆ. ಆದರೆ, 2017-18ನೇ ಸಾಲಿನಲ್ಲಿ ಗದಗಿನ 78 ಸೇರಿದಂತೆ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಿಗೆ ಒಟ್ಟು 138 ತ್ರಿಚಕ್ರ ವಾಹನಗಳು ಮಂಜೂರಾಗಿದ್ದವು. ಮಾರಾಟ ಮಳಿಗೆಯಿಂದ ಕಳೆದ ಜೂನ್‌ ತಿಂಗಳಲ್ಲೇ ಪೂರೈಕೆಯಾಗಿದ್ದು, ಗದಗ ಕ್ಷೇತ್ರದಲ್ಲಿ ಮಾತ್ರ ವಿತರಣೆಯಾಗಿಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. 

ಗದುಗಿಗೆ ಹೆಚ್ಚು ವಾಹನ: ಕಳೆದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಥ್‌ ರಾಜ್‌ ಸಚಿವರೂ ಆಗಿದ್ದ ಸ್ಥಳೀಯ ಶಾಸಕ ಎಚ್‌. ಕೆ. ಪಾಟೀಲ, ತಮ್ಮ ಸ್ವಕ್ಷೇತ್ರದ ವಿಕಲಚೇತನರಿಗೆ ಗರಿಷ್ಠ ಸಂಖ್ಯೆಯಲ್ಲಿ ತ್ರಿಚಕ್ರ ವಾಹನ ಒದಗಿಸಲು ಉದ್ದೇಶಿಸಿದ್ದರು. ಅದರಂತೆ ವಿಕಲಚೇತನ ಹಾಗೂ ಹಿರಿಯ ನಾಗಕರಿಕರ ಸಬಲೀಕರಣ ಇಲಾಖೆಯಿಂದ ಗದುಗಿಗೆ ಹೆಚ್ಚುವರಿಯಾಗಿ 60 ಸೇರಿದಂತೆ ಒಟ್ಟು 78 ವಾಹನಗಳನ್ನು ಮಂಜೂರು ಮಾಡಿಸಿದ್ದರು.

ಕಳೆದ ಮಾರ್ಚ್‌ನಲ್ಲೇ ಬಿಡುಗಡೆ ಆಗಬೇಕಿದ್ದ ತ್ರಿಚಕ್ರ ವಾಹನಗಳು ವಿಧಾನಸಭಾ ಚುನಾವಣೆ ಘೋಷಣೆಯಿಂದಾಗಿ ಜೂನ್‌ನಲ್ಲಿ ಬಂದಿವೆ. ಈ ವೇಳೆಗೆ ನೂತನ ಸರಕಾರ ಅಧಿಕಾರಕ್ಕೆ ಬಂದಿದ್ದರೂ ಸಚಿವ ಸಂಪುಟ ರಚನೆ, ಮತ್ತಿತರೆ ಕಾರಣಗಳಿಂದಾಗಿ ತ್ರಿಚಕ್ರ ವಾಹನಗಳ ವಿತರಣೆ ನೆನೆಗುದಿಗೆ ಬಿದ್ದಿತ್ತು. ಆನಂತರ ಆ. 15ರ ಸ್ವಾತಂತ್ರ್ಯೋತ್ಸವ ದಿನದಂದು ವಿತರಣೆಗೆ ಇಲಾಖೆಯಿಂದ ಸಿದ್ಧತೆ ನಡೆದಿತ್ತಾದರೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಡ್ಡಿಯಾಗಿ ಮತ್ತಷ್ಟು ವಿಳಂಬವಾಗುತ್ತಿದೆ ಎನ್ನಲಾಗಿದೆ.

ನಿಂತಲ್ಲೇ ತುಕ್ಕು ಹಿಡಿಯುತ್ತಿವೆ
ವಿಕಲಚೇತನರಿಗೆ ಆಸರೆಯಾಗಲಿ ಎಂಬ ಉದ್ದೇಶದಿಂದ ಮಂಜೂರಾಗಿರುವ ತ್ರಿಚಕ್ರ ವಾಹನಗಳು ಫಲಾನುಭವಿಗಳ ಕೈಸೇರುವ ಮುನ್ನವೇ ಕಳೆಗುಂದುತ್ತಿವೆ. ಕಸಾಪ ಭವನದ ಆವರಣದಲ್ಲಿ ನಿಲ್ಲಿಸಿರುವ ವಾಹನಗಳಿಗೆ ನೆರಳಿಲ್ಲದೇ ಬಿಸಿಲಿಗೆ ಬಣ್ಣ ಮಾಸುತ್ತಿದೆ. ಮಳೆಯಿಂದಾಗಿ ವಾಹನಗಳ ಕಬ್ಬಿಣದ ಬಿಡಿ ಭಾಗಗಳು ತುಕ್ಕು ಹಿಡಿಯುತ್ತಿವೆ. ಅಲ್ಲದೇ ಕಿಡಿಕೇಡಿಗಳ ಕೃತ್ಯದಿಂದ ಸಣ್ಣಪುಟ್ಟ ಬಿಡಿಭಾಗಗಳು ಜಖಂಗೊಂಡಿವೆ. ಇನ್ನೂ ಕೆಲ ವಾಹನಗಳ ನಂಬರ್‌ ಪ್ಲೇಟ್‌ಗಳೇ ಕಣ್ಮರೆಯಾಗಿರುವುದು ವಿಪರ್ಯಾಸ.

ತ್ರಿಚಕ್ರ ವಾಹನಗಳಿಗಾಗಿ ಪ್ರತಿನಿತ್ಯ ಫಲಾನುಭವಿಗಳು ಕಚೇರಿಗೆ ಅಲೆಯುತ್ತಾರೆ. ವಾಹನಗಳು ಬಂದಾಗಿನಿಂದ ಶಾಸಕ ಎಚ್‌.ಕೆ. ಪಾಟೀಲ ಅವರ ದಿನಾಂಕ ನಿಗದಿಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಆದರೆ, ವಿತರಣಾ ಸಮಾರಂಭಕ್ಕೆ ದಿನಾಂಕ ನಿಗದಿಯಾಗುತ್ತಿಲ್ಲ. ಶಾಸಕರು ಒಪ್ಪಿದರೆ ಸೆ. 4 ಅಥವಾ 5ರಂದು ವಿತರಿಸಲು ಚಿಂತನೆ ನಡೆಸಿದ್ದೇವೆ.
ಆಶು ನದಾಫ್‌, 
ವಿಕಲಚೇತನ ಹಾಗೂ ಹಿರಿಯ ನಾಗಕರಿಕರ
ಸಬಲೀಕರಣ ಇಲಾಖೆ ಅಧಿಕಾರಿ

ತ್ರಿಚಕ್ರ ವಾಹನಕ್ಕಾಗಿ ಕಳೆದ ಬಾರಿಯೂ ಅರ್ಜಿ ಹಾಕಿದ್ದೆ, ಬಂದಿರಲಿಲ್ಲ. ಈ ಬಾರಿ ಮಂಜೂರಾಗಿದ್ದರೂ ವಿತರಣೆಯಾಗುತ್ತಿಲ್ಲ. ಬೈಕ್‌ ಕೋಡ್ರಿ ಅಂತಾ ಕೇಳ್ಳೋದ್ಕ ವಾರದಲ್ಲಿ ಎರಡು ದಿನ ವಿಕಲಚೇತನರ ಕಚೇರಿಗೆ ಬರುತ್ತಾ ಇದ್ದೇನೆ. ಅದ್ಯಾವಾಗ ಕೊಡ್ತಾರೋ ಗೊತ್ತಿಲ್ಲ.
ಫಲಾನುಭವಿ

ವೀರೇಂದ್ರ ನಾಗಲದಿನ್ನಿ 


Trending videos

Back to Top