CONNECT WITH US  

ನಿಧಿಗಾಗಿ ಭೂಮಿ ಅಗೆದರು

ಗದಗ: ಲಕ್ಕುಂಡಿ ಸಮೀಪದ ಐತಿಹಾಸಿಕ ಸೋಮೇಶ್ವರ ದೇವಸ್ಥಾನದಲ್ಲಿ ನಿಧಿ ಆಸೆಗಾಗಿ ಬಸವಣ್ಣ ಮೂರ್ತಿ ಕೆಳಗೆ ಭೂಮಿ ಅಗೆಯಲಾಗಿದೆ.

ಗದಗ: ನಿಧಿ ಆಸೆಯಿಂದ ದುಷ್ಕರ್ಮಿಗಳು ತಾಲೂಕಿನ ಲಕ್ಕುಂಡಿ ಸಮೀಪದ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಬಸವಣ್ಣ ಮೂರ್ತಿ ಕೆಳಗೆ ಭೂಮಿಯನ್ನು ಅಗೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕದಾಂಪುರ ರಸ್ತೆಯಲ್ಲಿರುವ ಸೋಮೇಶ್ವರ ದೇವಸ್ಥಾನದ ಈಶ್ವರ ಲಿಂಗದ ಮುಂಭಾಗದಲ್ಲಿ ಪ್ರತಿಷ್ಠಾಪಿತ ಬಸವಣ್ಣನ ಮೂರ್ತಿಯ ಕೆಳಗೆ ಭೂಮಿಯನ್ನು ಅಗೆಯಲಾಗಿದೆ. ಲಕ್ಕುಂಡಿ ಗ್ರಾಮದ ಅರ್ಚಕ ಸಿದ್ದರಾಮಯ್ಯ ಮಾಯಾಕರಮಠ ಅವರು ಪ್ರತಿನಿತ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ, ಲಕ್ಕುಂಡಿ ಗ್ರಾಮದಲ್ಲಿ ಹಾಲಗೊಂಡ ಬಸವೇಶ್ವರ ಜಾತ್ರೆ ನಿಮಿತ್ತ ಒಂದು ದಿನ ದೇವಸ್ಥಾನಕ್ಕೆ ಬಂದಿರಲಿಲ್ಲ. ಈ ಮಧ್ಯೆ ಯಾರೋ ದುಷ್ಕರ್ಮಿಗಳು ದೇವಸ್ಥಾನದಲ್ಲಿರುವ ಬಸವೇಶ್ವರ ಮೂರ್ತಿಯನ್ನು ತೆಗೆದು, ಅದರ ಕೆಳಗೆ ಸುಮಾರು 12 ಅಡಿ ಆಳಕ್ಕೆ ತೋಡಿದ್ದಾರೆ. ಬಳಿಕ ಎಂದಿನಂತೆ ಅರ್ಚಕರು ಗುರುವಾರ ದೇವಸ್ಥಾನಕ್ಕೆ ಭೇಟಿ ನಿಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುವ ಸೋಮೇಶ್ವರ ದೇವಸ್ಥಾನದ ಒಳಗೆ ಸುಂದರ ಕೆತ್ತನೆಯಿಂದ ಕೂಡಿದೆ. ಆದರೆ, ಘಟನೆ ಬಗ್ಗೆ ಪೊಲೀಸ್‌ ಪ್ರಕರಣ ದಾಖಲಾಗಿಲ್ಲ.


Trending videos

Back to Top