CONNECT WITH US  

ಹಣ ವಸೂಲಿಗೆ ಒಕ್ಕೂಟ ನಿರ್ಧಾರ

ಕಲಬುರಗಿ: ಖೊಟ್ಟಿ ಹಾಲು ಉತ್ಪಾದಕರ ಸಂಘಗಳು ಹಾಗೂ ಹಾಲು ಪೂರೈಸಲಾಗಿದೆ ಎಂಬುದಾಗಿ ದಾಖಲೆಗಳನ್ನು ಸೃಷ್ಟಿಸಿ 4 ರೂ. ಹಾಲಿನ ಪ್ರೋತ್ಸಾಹ ಧನದಲ್ಲಿ ಗೋಲ್‌ಮಾಲ್‌ ಎಸಗಿರುವ ತಪ್ಪಿತಸ್ಥ ಅಧಿಕಾರಿಗಳಿಂದ ಹಾಗೂ ಸಿಬ್ಬಂದಿಗಳಿಂದ ಸಂಪೂರ್ಣ ಹಣ ವಸೂಲಿ ಮಾಡಲು ಗುರುವಾರ ನಡೆದ ಕಲಬುರಗಿ, ಬೀದರ್‌-ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಒಕ್ಕೂಟದ ಅಧ್ಯಕ್ಷ ರೇವಣಸಿದ್ದಪ್ಪ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಲಿನ ಪ್ರೋತ್ಸಾಹ ಧನದಲ್ಲಿ ಗೋಲ್‌ಮಾಲ್‌ ಎಸಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಹಣ ವಸೂಲಿ ಮಾಡುವಂತೆ ಸಹಕಾರ ಸಂಘಗಳ ಜಂಟಿ ನಿಬಂಧಕರು ಕಲಬುರಗಿ ಹಾಲು ಒಕ್ಕೂಟದ ವ್ಯವಸ್ಥಾಪಕರಿಗೆ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. 

ಇದು ಹಿಂದಿನ ಆಡಳಿತದ ಅವಧಿಯಲ್ಲಿ ನಡೆದಿರುವುದರಿಂದ ಆಗಲೇ ಕ್ರಮ ಕೈಗೊಳ್ಳಬೇಕಿತ್ತು. ಈಗ ಹಿಂದೆ ಮುಂದೆ ನೋಡದೇ ಕ್ರಮ ಕೈಗೊಳ್ಳುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಗೋಲ್‌ಮಾಲ್‌ ವಿಷಯ ಅರಿವಿಗೆ ಬರುತ್ತಿದ್ದಂತೆ ತಾವು ಅಧ್ಯಕ್ಷರಾದ ಆರಂಭದಲ್ಲಿ 64 ಲಕ್ಷ ರೂ. ಹಂಚಿಕೆಯಾಗಬೇಕಿದ್ದನ್ನು ತಡೆಹಿಡಿದಿದ್ದೇವೆ ಎಂದು ಅಧ್ಯಕ್ಷ ರೇವಣಸಿದ್ದಪ್ಪ ಪಾಟೀಲ ಸಭೆ ಗಮನಕ್ಕೆ ತಂದರು.

ಖಾಲಿ ಹುದ್ದೆಗಳ ನೇಮಕಾತಿ: ಒಕ್ಕೂಟದಲ್ಲಿ ಖಾಲಿ ಇರುವ ವಿವಿಧ ರ್ಜೆಯ 37 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯ ನೀಡುವ ಆದೇಶದಂತೆ ನಡೆದುಕೊಳ್ಳಲು ಹಾಗೂ ಅದನ್ನು ಶೀಘ್ರ ಕಾರ್ಯರೂಪಕ್ಕೆ ತರಲು ಚರ್ಚಿಸಿ, ನಿರ್ಧರಿಸಲಾಯಿತು.

ಹುದ್ದೆಗಳ ನೇಮಕಾತಿ ಬಯಸಿ ಬಂದಿರುವ ಅರ್ಜಿಗಳ ವಿಲೇವಾರಿ ಮಾಡುವ ಹಾಗೂ ಒಂದು ಹುದ್ದೆಗಾಗಿ ಐವರಿಗೆ ಸಂದರ್ಶನ ಕರೆಯುವುದು ಸೇರಿದಂತೆ ಇತರ ಕಾರ್ಯಗಳ ಹೊಣೆಯನ್ನು ಮೈಸೂರಿನ ಡೆಲ್ಟಾ ಸಂಸ್ಥೆಗೆ ನೀಡಲಾಗಿದೆ ಎಂದು ಅಧ್ಯಕ್ಷರು ವಿವರಿಸಿದರು.

ಒಕ್ಕೂಟದ ನೌಕರರಿಗೆ ಶೇ. 2.ರಷ್ಟು ತುಟ್ಟಿಭತ್ಯೆ ನೀಡುವುದು ಸೇರಿದಂತೆ ಇತರ ನಿರ್ಣಯಗಳಿಗೆ ಸಭೆ ಒಪ್ಪಿಗೆ ನೀಡಿತು.
ಒಕ್ಕೂಟದ ರಾಜ್ಯ ನಿರ್ದೇಶಕರಾದ ಅರುಣ ವ್ಹಿ. ಗುತ್ತೇದಾರ, ನಿರ್ದೇಶಕರುಗಳಾದ ಚಂದ್ರಕಾಂತ ಜಿ. ಭೂಸನೂರ, ಮಾರುತಿ ಕಾಶಂಪೂರ, ಮಲ್ಲಿಕಾರ್ಜುನ ಬಿರಾದಾರ, ರವೀಂದ್ರ ಕೆ. ಪಾಟೀಲ, ದಿವಾಕರರಾವ್‌ ಜಹಾಗೀರದಾರ, ರಾಮರಾವ್‌ ಸಿರಿಗೊಂಡ, ವಿಜಯಲಕ್ಷ್ಮೀ ಪಾಟೀಲ, ಖಂಡುರಾವ್‌ ಕೆ. ಕುಲಕರ್ಣಿ, ಶಾಂತಕುಮಾರ ಚಳಕಾಪುರ, ಸಿದ್ರಾಮಪ್ಪ ಹಾಗೂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ| ಚಂದ್ರಶೇಖರ ಕಮಕೇರಿ ಮುಂತಾದವರಿದ್ದರು.

ಪ್ರಾಂತ ರೈತ ಸಂಘ ಪ್ರತಿಭಟನೆ: ಕಲಬುರಗಿ,ಬೀದರ್‌-ಯಾದಗಿರಿ ಹಾಲು ಒಕ್ಕೂಟದಲ್ಲಿ 1.36 ಕೋಟಿ ರೂ. ಅವ್ಯವಹಾರ ಸಾಬೀತಾಗಿದ್ದರಿಂದ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌) ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದವರು ಒಕ್ಕೂಟದ ಸಾಮಾನ್ಯ ಸಭೆ ನಡೆಯುತ್ತಿದ್ದ ಸಭಾಂಗಣದ ಎದುರು ಪ್ರತಿಭಟನೆ ನಡೆಸಿದರು.ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಹಾಗೂ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Trending videos

Back to Top