CONNECT WITH US  

ಶರಣಬಸವ ವಿವಿಯಲ್ಲಿಬಿ.ಆರ್ಕ್‌ಗೆ ಅನುಮತಿ

ಕಲಬುರಗಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಿರುವ ಶರಣಬಸವ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ವರ್ಷದಿಂದಲೇ ವಾಸ್ತುಶಿಲ್ಪ ತಂತ್ರಜ್ಞಾನದ ಅಂದರೆ ಆರ್ಕಿಟೆಕ್ಚರ್‌ (ಬಿ.ಆರ್ಕ್‌) ಕೋರ್ಸ್‌ ಆರಂಭಗೊಳ್ಳಲಿದೆ. ದೇಶದಲ್ಲಿ ವಾಸ್ತುಶಿಲ್ಪ ಶಿಕ್ಷಣದ ಕೋರ್ಸ್‌ಗಳನ್ನು ನಡೆಸುವ ಅತ್ಯುನ್ನತ ಸಂಸ್ಥೆಯಾದ "ಕೌನ್ಸಿಲ್‌ ಆಫ್‌ ಆರ್ಕಿಟೆಕ್ಚರ್‌ (ಸಿಒಎ)' ಬಿ.ಆರ್ಕ್‌ ಕೋರ್ಸ್‌ ಆರಂಭಿಸುವುದಕ್ಕೆ ಹಸಿರು ನಿಶಾನೆ ತೋರಿದೆ. ಇದರೊಂದಿಗೆ ಶರಣಬಸವ ವಿಶ್ವವಿದ್ಯಾಲಯವು ಈ ಭಾಗದ ಶೈಕ್ಷಣಿಕ ವಲಯದಲ್ಲಿ ಮತ್ತೂಂದು ದಾಪುಗಾಲು ಇರಿಸಿದಂತಾಗಿದೆ.

2018-19ನೇ ಶೈಕ್ಷಣಿಕ ಸಾಲಿನಿಂದ ಬಿ.ಆರ್ಕ್‌ ಕೋರ್ಸ್‌ ಮಂಜೂರಾಗಿದ್ದು, 40 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಉತ್ತರ ಕರ್ನಾಟಕದ ಪ್ರಪ್ರಥಮ ಖಾಸಗಿ ವಿಶ್ವವಿದ್ಯಾಲಯವೆಂದು ಖ್ಯಾತಿಗೆ ಪಾತ್ರವಾಗಿರುವ ಶರಣಬಸವ ವಿಶ್ವವಿದ್ಯಾಲಯವು ಬಿ.ಆರ್ಕ್‌ ಕೋರ್ಸ್‌ ಆರಂಭಕ್ಕೆ ಅನುಮತಿ ಪಡೆದ ಈ ಭಾಗದ ಮೊದಲ ಖಾಸಗಿ
ವಿಶ್ವವಿದ್ಯಾಲಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ| ನಿರಂಜನ್‌ ನಿಷ್ಠಿ ಹಾಗೂ ಕುಲಸಚಿವ ಅನಿಲಕುಮಾರ ಬಿಡ್ವೆ ತಿಳಿಸಿದ್ದಾರೆ.

ಕೌನ್ಸಿಲ್‌ ಆಫ್‌ ಆರ್ಕಿಟೆಕ್ಚರ್‌ (ಸಿಒಎ)ದಿಂದ ಈ ಬಗ್ಗೆ ಮಾಹಿತಿ ಬಂದಿದೆ. ಬಿ.ಆರ್ಕ್‌ ಕೋರ್ಸ್‌ ಆರಂಭದಿಂದಾಗಿ ಹೈ.ಕ. ಪ್ರದೇಶದ ಬಡ ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲಕವಾಗಲಿದೆ. ಇದು 10 ಸೆಮಿಸ್ಟರ್‌ಗಳಿರುವ 5 ವರ್ಷಗಳ ಕೋರ್ಸ್‌ ಆಗಿದ್ದು, ಪಿಯುಸಿ ಪಾಸಾಗಿರುವುದರ ಜೊತೆಗೆ "ನಾಟಾ' ಅರ್ಹತೆ ಹೊಂದಿರಬೇಕಾಗುತ್ತದೆ. ಶೇ. 40ರಷ್ಟು ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಇಎ-ಸಿಇಟಿ)ಯ ಕೇಂದ್ರೀಕೃತ ಕೌನ್ಸೆಲಿಂಗ್‌ ಮೂಲಕವೂ ಇನ್ನುಳಿದ ಶೇ. 60ರಷ್ಟು ಸೀಟುಗಳನ್ನು ಮ್ಯಾನೇಜ್‌ಮೆಂಟ್‌ ಕೋಟಾದಡಿಯೂ ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಹೊಸ ಕೋರ್ಸ್‌ ನಡೆಸುವುದಕ್ಕೆ ಅತ್ಯಗತ್ಯವಾದ ಮೂಲಸೌಕರ್ಯಗಳ ಜೊತೆಗೆ ತಜ್ಞ, ಪರಿಣತ ಬೋಧಕ
ವರ್ಗವನ್ನೂ ವಿಶ್ವವಿದ್ಯಾಲಯವು ಹೊಂದಿದೆ. ಸಿಒಎದಿಂದ ನಿಯೋಜಿಸಲ್ಪಟ್ಟಿದ್ದ ಪರಿಶೀಲನಾ ತಂಡವು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಲಭ್ಯವಿರುವ ಮೂಲಸೌಲಭ್ಯ ವೀಕ್ಷಿಸಿ ತೃಪ್ತಿ ವ್ಯಕ್ತಪಡಿಸಿ ಬಿ.ಆರ್ಕ್‌ ಕೋರ್ಸ್‌ ಆರಂಭಿಸಬಹುದೆಂದು ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಅನುಮತಿ ದೊರಕಿದೆ ಎಂದು ಮಾಹಿತಿ ನೀಡಿದ್ದಾರೆ.

ಶರಣಬಸವ ವಿಶ್ವವಿದ್ಯಾಲಯದಲ್ಲಿ ಬಿ.ಆರ್ಕ್‌ ಕೋರ್ಸ್‌ ಆರಂಭಿಸಲು ಅನುಮತಿ ಸಿಕ್ಕಿರುವುದಕ್ಕೆ ವಿ.ವಿ. ಕುಲಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಈ ಭಾಗದ ವಿದ್ಯಾರ್ಥಿಗಳು ವಾಸ್ತುಶಿಲ್ಪ ಕ್ಷೇತ್ರದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಲಿದೆ ಎಂದಿದ್ದಾರೆ. ಅನುಮತಿ ಪಡೆದುಕೊಳ್ಳುವಲ್ಲಿ  ಯಶಸ್ವಿಯಾಗಿದ್ದಕ್ಕಾಗಿ ಉಪ ಕುಲಪತಿ, ಕುಲಸಚಿವರು, ಸಹ ಉಪ ಕುಲಪತಿಗಳು, ಡೀನ್‌ ಹಾಗೂ ಇತರೆ, ಅಧಿಕಾರಿ-ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದ್ದಾರೆ.

Trending videos

Back to Top