CONNECT WITH US  

ತಿಂಗಳಾದ್ರೂ ಶಾಲೆ ಮಕ್ಕಳಿಗಿಲ್ಲ ಹಾಲು

ಆಳಂದ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭಗೊಂಡು ಒಂದೂವರೆ ತಿಂಗಳಕಾಲ ಸಮೀಪಿಸಿದರು ಸಹ ಕ್ಷೀರಭಾಗ್ಯ ಯೋಜನೆ ಅಡಿ ಶಾಲೆಯಲ್ಲಿ ದೊರಕಬೇಕಾಗಿದ್ದ ಹಾಲು ದೊರೆಯದೆ ಮಕ್ಕಳು ವಂಚಿತರಾಗಿದ್ದಾರೆ.

ಮತ್ತೂಂದಡೆ ಶಾಲೆ ಬಿಸಿಯೂಟದ ಆಹಾರ ಧಾನ್ಯ ಪೂರೈಕೆ ಇಲ್ಲದೆ ಅದನ್ನು ತರಲು ಮುಖ್ಯ ಶಿಕ್ಷಕರುಗಳೇ ಸಂಬಂಧಿಸಿದ ಕಚೇರಿಗೆ ಎಡತಾಕುತ್ತಿದ್ದಾರೆ. ಶಾಲೆ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆ ಹಾಲಿನ ಪುಡಿ ಸರಬರಾಜು ಮಾಡಲು ಜಿಪಂ ಹಂತದಲ್ಲಿ ಟೆಂಡರ್‌‌ ಪ್ರಕ್ರಿಯೆ ಮುಗಿದಿದೆ ಎಂದು ಹೇಳಲಾಗುತ್ತಿದೆ.

ಆದರೆ ಇನ್ನೊಂದೆಡೆ ಮಕ್ಕಳಿಗೆ ಹಾಲಿನ ಪುಡಿ ಸರಬರಾಜು ಮಾಡುತ್ತಿಲ್ಲ. ಆಹಾರ ಧಾನ್ಯ ಸರಬರಾಜು ಮಾಡಲು ಇನ್ನೂ ಟೆಂಡರ್‌ ಪ್ರಕ್ರಿಯೇ ನಡದೇ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಶಾಲೆಗಳಿಗೆ ಆಹಾರಧಾನ್ಯ ಇಲ್ಲದೆ ತಮ್ಮ ಕೆಲಸ ಬದಿಗಿಟ್ಟು ಬರೀ ಬಿಸಿಯೂಟದ ಸಿದ್ಧತೆಗಾಗಿಯೇ ಸಮಯ ವ್ಯಯವಾಗತೊಡಗಿದೆ ಎಂದು ಮುಖ್ಯ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ. 

ತಾಲೂಕಿನಲ್ಲಿ 260 ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 31080 ಮಕ್ಕಳು. 19 ಅನುದಾನಿತ ಶಾಲೆಯಲ್ಲಿ 5219 ಮಕ್ಕಳು. 48 ಸರಕಾರಿ ಪ್ರೌಢಶಾಲೆಯಲ್ಲಿ 6653 ಮಕ್ಕಳು, 11 ಅನುದಾನಿತ ಪ್ರೌಢಶಾಲೆಯಲ್ಲಿ 2173 ಮಕ್ಕಳು, 3 ಖಾಸಗಿ ಸಂಸ್ಥೆಯ ವ್ಯಾಪ್ತಿಯ 9 ಶಾಲೆಯಲ್ಲಿ 1870 ಮಕ್ಕಳು. ಒಟ್ಟು 46, 995 ಮಕ್ಕಳಿಗಾಗಿ 312 ಅಡುಗೆ ಕೇಂದ್ರದಲ್ಲಿ 807 ಅಡುಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಮಕ್ಕಳಿಗಾಗಿ ವಿವಿಧ ಯೊಜನೆಗಳೊಂದಿಗೆ ಬಿಸಿಯೂಟ ಅಧಿಕಾರಿಗಳ ಹಂತದಲ್ಲಿ ಸರಿಯಾದ ಸಮಯಕ್ಕೆ ತಾಂತ್ರಿಕ ತೊಂದರೆ ನಿವಾರಿಸಲು ಮುಂದಾಗದೆ ಮಕ್ಕಳನ್ನು ಹಾಲು ಕುಡಿಯುವ ಯೋಜನೆಯಿಂದ ವಂಚಿಸಲಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. 

ಜಿಪಂ ಮಟ್ಟದಲ್ಲಿ ಈ ಕುರಿತು ಟೆಂಡರ್‌ ಕಾರ್ಯ ಮುಗಿಯದೆ ಹಾಗೂ ಮುಗಿದರೂ ಗುತ್ತಿಗೆದಾರರ ಮೇಲೆ ಮೇಲ್ವಿಚಾರಣೆ ಮಾಡದೆ ಇರುವುದಕ್ಕಾಗಿ ತಾಲೂಕಿನಲ್ಲಿ ಅಷ್ಟೆ ಅಲ್ಲ ಜಿಲ್ಲೆಯ 7 ತಾಲೂಕಿನ ಶಾಲಾ ಮಕ್ಕಳಿಗೆ ಹಾಲು ದೊರೆತ್ತಿಲ್ಲ ಎನ್ನಲಾಗಿದೆ. ಈ ಕುರಿತು ವಿದ್ಯಾರ್ಥಿಗಳಿಗೆ ಹಾಲು ವಿತರಿಸದೇ ಇರುವುದಕ್ಕೆ ಯಾರು ಹೊಣೆ ಎಂಬುದನನ್ನು ಜಿಲ್ಲೆಯ ಅಧಿಕಾರಿಗಳು ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳಬೇಕು.

ಹಾಲು ವಿತರಣೆಯಿಲ್ಲ
ಪ್ರಸಕ್ತ ಶೈಕ್ಷಣಿಕ ಸಾಲಿಗಾಗಿ ಮಕ್ಕಳಿಗೆ ಬೇಕಾಗುವ ಕ್ಷೀರಭಾಗ್ಯ ಯೊಜನೆ ಕುರಿತು ಜಿಪಂಗೆ ಪತ್ರ ಬರೆಯಲಾಗಿದೆ. ಟೆಂಡರ್‌ ಪ್ರಕ್ರಿಯೆ ಜಿಪಂ ಮಟ್ಟದಲ್ಲಿರುವುದರಿಂದ ವಿಳಂಬವಾಗಿದೆ. ಪ್ರಕ್ರಿಯೇ ಮುಗಿದ ನಂತರ ಮಕ್ಕಳಿಗೆ ಹಾಲು ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. 
ಅನಿತಾ ಕುಂದಾಪುರ, ಅಕ್ಷರ ದಾಸೋಹ ಯೋಜನೆ ಅನುಷ್ಠಾನ ಅಧಿಕಾರಿ ಹಾಗೂ ತಾಪಂ ಇಒ


Trending videos

Back to Top