CONNECT WITH US  

ಪುಸ್ತಕ ಪ್ರಧಾನ ನುಡಿ ಜಾತ್ರೆಗಳಾಗಲಿ

ವಾಡಿ: ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪುಸ್ತಕ ಖರೀದಿದಾರರ ಕೊರತೆ ಎದ್ದು ಕಾಣುತ್ತಿದೆ. ಪುಸ್ತಕ ಪ್ರಧಾನ
ನುಡಿ ಜಾತ್ರೆಗಳಾದಾಗ ಮಾತ್ರ ಸಮ್ಮೇಳನಕ್ಕೆ ಅರ್ಥ ಬರುತ್ತದೆ ಎಂದು ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತು ವಲಯ ಘಟಕದ ವತಿಯಿಂದ ನಾಲವಾರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಜನರಲ್ಲಿ ಪುಸ್ತಕ ಓದುವ ಅಭಿರುಚಿ ಕಡಿಮೆಯಾಗುತ್ತಿದೆ. ವಿದ್ಯಾರ್ಥಿ ಸಮುದಾಯದಲ್ಲಿ ಸಾಹಿತ್ಯ ಪ್ರೀತಿ ಬೆಳೆಸಲು ಶಾಲೆಗಳಲ್ಲಿನ ಗ್ರಂಥಾಲಯಗಳು ಜೀವ ಚೈತನ್ಯ ಪಡೆದುಕೊಳ್ಳಬೇಕು. ಗೃಹಿಣಿಯರು ದೃಶ್ಯ ಮಾಧ್ಯಮಗಳಿಂದ ತುಸು ದೂರ ಸರಿದು ಪುಸ್ತಕಗಳ ಜತೆ ಸಮಯ ಕಳೆಯುವಂತಾಗಬೇಕು. ಸುಳ್ಳೊ ಗೊಳ್ಳೊ ಹೇಳಿ ಜನರು ದಾರಿ ತಪ್ಪಿಸಬಲ್ಲರು. ಆದರೆ ಒಳ್ಳೆಯ ಪುಸ್ತಕಗಳು ಯಾವತ್ತೂ ದಾರಿ ತಪ್ಪಿಸಲಾರವು ಎಂದರು.
 
ಕಸಾಪ ಕಲಬುರಗಿ ತಾಲೂಕು ಅಧ್ಯಕ್ಷ ಸಿ.ಎಸ್‌. ಮಾಲಿಪಾಟೀಲ ಮಾತನಾಡಿ, ಮೊಬೈಲ್‌ಗ‌ಳು ನಮ್ಮನ್ನು
ನಿಯಂತ್ರಿಸುತ್ತಿವೆ. ಸಾಂಸ್ಕೃತಿಕ ನಿಲುವುಗಳು ನಮ್ಮ ಹಿಡಿತದಲ್ಲಿರಬೇಕು. ಪಟ್ಟಣದ ಯುವಕರು ಫ್ಯಾಶನ್‌
ಸಂಸ್ಕೃತಿ ಮೈಗೂಡಿಸಿಕೊಂಡರೆ ಕ್ರಿಯಾಶೀಲ ಪ್ರತಿಭೆಗಳು ಹಳ್ಳಿಗಳಿಂದ ಹೊರ ಬರುತ್ತವೆ. ಆದ್ದರಿಂದ ಪರಿಷತ್ತು ಕನ್ನಡದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಹೇಳಿದರು.

ಕಸಾಪ ಚಿತ್ತಾಪುರ ತಾಲೂಕು ಅಧ್ಯಕ್ಷ ಕಾಶೀನಾಥ ಗುತ್ತೇದಾರ ಮಾತನಾಡಿ, ಭವಿಷ್ಯ ರೂಪಿಸಿಕೊಳ್ಳಬೇಕಾದಯುವಜನರು ಫೇಸ್‌ಬುಕ್‌ ಮತ್ತು ವ್ಯಾಟ್ಸಾಪ್‌ ಹುಚ್ಚಿನಲ್ಲಿ ಮುಳುಗಿದ್ದಾರೆ. ಮಾತು ಕಡಿಮೆ ಎಸ್ಸೆಮ್ಮೆಸ್‌ ಜಾಸ್ತಿ ಎಂಬಂತಾಗಿ ಫೇಸ್‌ ಬುಕ್‌ ಬರ್ಥಡೇ ಸಂಸ್ಕೃತಿ ಬೆಳೆಯುತ್ತಿದೆ. ಹೀಗಾಗಬಾರದು ದೌರ್ಬಲ್ಯಗಳನ್ನು ಮೀರಿ ಬದುಕು ರೂಪಿಸಿಕೊಳ್ಳಲು ಮುಂದೆ ಬರಬೇಕು ಎಂದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ಮೀನಾಕ್ಷಿ ಶೇಖಪ್ಪ, ದತ್ತಾತ್ರೇಯ ಶರಣಪ್ಪ, ಶನ್ನು ನಜೀರ್‌ ಅಹ್ಮದ್‌, ನೇಹಾ ಫಾತಿಮಾ, ಭಾಗ್ಯಶ್ರೀ ಈರಣ್ಣ, ಪ್ರಶಾಂತ ತಿಪ್ಪಣ್ಣ, ವಿಷ್ಣು, ಚಂದ್ರಶೇಖರ, ರಾಹುಲ್‌, ಸವಿತಾ, ಅಯ್ಯಮ್ಮ, ನೀಲಕಂಠ, ತನ್ವೀರಪಾತಿಮಾ ಅವರನ್ನು ಸನ್ಮಾನಿಸಿ, ಪ್ರಶಸ್ತಿಪತ್ರ ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷ ಸಾಬಣ್ಣ ಆನೇಮಿ, ಹಿರಿಯ ಮುಖಂಡ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಭೀಮರೆಡ್ಡಿ ಪಾಟೀಲ ಕುರಾಳ,
ರಾಯಚೂರು ಕೃಷಿ ವಿವಿ ನಿದೇರ್ಶಕ ವೀರಣ್ಣಗೌಡ ಪರಸರೆಡ್ಡಿ, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಸಿದ್ದಲಿಂಗ ಬಾಳಿ, ಪ್ರಾಂಶುಪಾಲ ಹಣಮಂತರಾಯ ದಿಗಸಂಗಿ, ಉಪನ್ಯಾಸಕಿ ಶೈಲಜಾ ಆರ್‌. ಪಾಟೀಲ, ದುರ್ಗಮ್ಮ, ಸುಚೇತನಾ, ಈರಣ್ಣ ಮಲಕಂಡಿ ಪಾಲ್ಗೊಂಡಿದ್ದರು. 

ಕಸಾಪ ಗೌರವ ಕಾರ್ಯದರ್ಶಿ ಶಾಂತಕುಮಾರ ಎಣ್ಣಿ ಸ್ವಾಗತಿಸಿದರು, ಕಸಾಪ ವಲಯ ಅಧ್ಯಕ್ಷ ಸಾಹೇಬರೆಡ್ಡಿ ಬಂಗಾರಿ ನಿರೂಪಿಸಿದರು, ರವಿ ಎಸ್‌. ಪಾಟೀಲ ವಂದಿಸಿದರು.

Trending videos

Back to Top