CONNECT WITH US  

ಅಭ್ಯರ್ಥಿಗಳ ಬೆಂಬಲಿಗರನ್ನು ಹೊರಹಾಕಿದ ಪೊಲೀಸರು

ಚಿಂಚೋಳಿ: ಸ್ಥಳೀಯ ಪುರಸಭೆ 23 ವಾರ್ಡ್‌ಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ. 70.44 ರಷ್ಟು ಮತದಾನವಾಗಿದೆ. ಚುನಾವಣೆಗೆ ಒಟ್ಟು 81 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 14276 ಮತದಾರರಿದ್ದಾರೆ. ಇದರಲ್ಲಿ ಪುರಷರು 7006, ಮಹಿಳೆಯರು 7269, ಇತರೆ ಒಬ್ಬರಿದ್ದಾರೆ.

ಶುಕ್ರವಾರ ಒಟ್ಟು 10056 ಜನರು ಮತ ಚಲಾಯಿಸಿದ್ದಾರೆ. ಇದರಲ್ಲಿ ಪುರುಷರು 7006, ಮಹಿಳೆಯರು 7269 ಹಾಗೂ ಇತರೆ ಒಬ್ಬರ ಮತ ಚಲಾಯಿಸಿದ್ದಾರೆ. ಬಡಿದರ್ಗಾ, ಜ್ಯೋಶಿ ಗಲ್ಲಿ, ಸುಂದರ ನಗರ, ಹರಿಜನವಾಡ, ಮೋಮಿನಪುರ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದರೂ ಯಾವುದೇ ರೀತಿಯ ಅಹಿತಕರ ಘಟನೆಗಳು ಘಟಿಸಲಿಲ್ಲ.

ಬಡಿದರ್ಗಾ, ಜ್ಯೋಶಿಗಲ್ಲಿ, ಹರಿಜನವಾಡ, ಮೋಮಿನಪುರ, ಗಡಿಏರಿಯಾ, ಚಂದಾಪುರ, ಗಂಗುನಾಯಕ ತಾಂಡಾ ಮತದಾನ ಕೇಂದ್ರಗಳಲ್ಲಿ ಬೆಳಗ್ಗೆಯಿಂದಲೇ ಮತದಾರರು ಮತ ಚಲಾಯಿಸಲು ಆಗಮಿಸಿದ್ದರು. ಚಂದಾಪುರ ಬಸವ ನಗರ ವಾರ್ಡ್‌ನಲ್ಲಿ ಹೆಚ್ಚಾಗಿ ಮಹಿಳೆಯರು ಸಾಲಾಗಿ ನಿಂತು ತಮ್ಮ ಮತದಾನ ಹಕ್ಕು ಚಲಾಯಿಸಿದರು.

ಬಡಿದರ್ಗಾ ವಾರ್ಡ್‌ 2ರಲ್ಲಿ ಬೆಳಗ್ಗೆಯಿಂದಲೇ ಕಾಂಗ್ರೆಸ್‌ ಮತ್ತು ಪಕ್ಷೇತರ ಅಭ್ಯರ್ಥಿ ತಮಗೆ ಸಂಬಂಧಪಟವರನ್ನು ಮತದಾನ ಕೇಂದ್ರಕ್ಕೆ ವಾಹನಗಳ ಮೂಲಕ ಕರೆತಂದರು. ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆ ಮತದಾನ ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳು ಆಟೋಗಳಲ್ಲಿ ಮತದಾರರನ್ನು ಕರೆ ತಂದು ಮತದಾನ ಕೇಂದ್ರದೊಳಗೆ ಕರೆದ್ಯೊಯುತ್ತಿದ್ದರು. ಪೊಲೀಸರು ಅವರನ್ನು ತಡೆಹಿಡಿದು ಹೊರಗೆ ಕಳಿಸಿದರು.

ಚಂದಾಪುರ ವಾರ್ಡ್‌ ನಂ.16 ಬಸವ ನಗರದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರನ್ನು ಕರೆ ತಂದು ಮತದಾನ ಮಾಡಿಸುತ್ತಿರುವುದರಿಂದ ಕೆಲ ಸಮಯ ಭಾರಿ ಗೊಂದಲಮಯ ವಾತಾವರಣ ಉಂಟಾಯಿತು. ಆಗಾಗ ಪೊಲೀಸರು ಆಗಮಿಸಿ ಜನರನ್ನು ಹೊರ ಹಾಕುತ್ತಿದ್ದರು. ಹರಿಜನವಾಡ ವಾರ್ಡ್‌ 7ಮತ್ತು ಸುಂದರ ನಗರ ವಾರ್ಡ್‌ ನಂ.8ರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತ ಚಲಾಯಿಸಿದರು.

ವಾರ್ಡ್‌ ನಂ.5 ಮತ್ತು 6ಕ್ಕೆ ಸ್ಪರ್ಧಿಸಿದ ಕಾಂಗ್ರೆಸ್‌, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪೈಪೋಟಿಯಿಂದ ತಮ್ಮ ಬೆಂಬಲಿಗರನ್ನು ಆಟೋ ಮತ್ತು ಜೀಪುಗಳಲ್ಲಿ ಕರೆ ತರುತ್ತಿದ್ದುದರಿಂದ ಗೊಂದಲಮಯ ವಾತಾವರಣ ಉಂಟಾಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಎಲ್ಲರನ್ನು ಕೇಂದ್ರದಿಂದ ಹೊರ ಹಾಕಿದರು. ಪುರಸಭೆ ಚುನಾವಣೆಯಲ್ಲಿ ಸಣ್ಣಪುಟ್ಟ ಜಗಳ ನಡೆದರೂ ಎಲ್ಲ ವಾರ್ಡ್‌ಗಳಲ್ಲಿ ಶಾಂತಿಯುತವಾಗಿ ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಪಂಡಿತ ಬಿರಾದಾರ ತಿಳಿಸಿದ್ದಾರೆ.

23 ವಾರ್ಡ್‌ಗಳ ಮತದಾನ ವಿವರ: ವಾರ್ಡ್‌ ನಂ.1 ಭೋಗಾಲಿಂಗದಳ್ಳಿ ಆಶ್ರಯ ಕಾಲೋನಿ ಶೇ. 79.07, ವಾರ್ಡ್‌ ನಂ.2 ಬಡಿದರ್ಗಾ ಶೇ. 69.85, ವಾರ್ಡ್‌ ನಂ. 3 ಶೇ. 72.13, ವಾರ್ಡ್‌ ನಂ. 4 ಕೋಮಟಿಗಲ್ಲಿ ಶೇ. 64.25, ವಾರ್ಡ್‌ ನಂ. 5 ಶೇ. 64.97, ವಾರ್ಡ್‌ ನಂ.6 ಗಡಿ ಏರಿಯಾ ಶೇ. 70.69, ವಾರ್ಡ್‌ ನಂ. 7 ಹರಿಜನವಾಡ 77.85, ವಾರ್ಡ್‌ ನಂ. 8 ಸುಂದರ ನಗರ ಶೇ. 80.64, ವಾರ್ಡ್‌ ನಂ.9 ಮೋಮಿನಪುರ ಶೇ. 66.95, ವಾರ್ಡ್‌ ನಂ.10 ಕಲ್ಯಾಣಗಡ್ಡಿ ಶೇ. 70.73, ವಾರ್ಡ್‌ ನಂ.11 ಧನಗರ ಗಲ್ಲಿ ಶೇ. 73.05, ವಾರ್ಡ್‌ ನಂ.12 ಜ್ಯೋಶಿಗಲ್ಲಿ ಶೇ. 69.19, ವಾರ್ಡ್‌ ನಂ.13 ಬೈವಾಡ ಶೇ. 72.70, ವಾರ್ಡ್‌ ನಂ. 14 ಹಿರೇಅಗಸಿ ಶೇ. 71.29, ವಾರ್ಡ್‌ ನಂ.15 ಪಟೇಲ್‌ ಕಾಲೋನಿ ಚಂದಾಪುರ ಶೇ. 64.66, ವಾರ್ಡ್‌ ನಂ.16 ಬಸವನಗರ ಚಂದಾಪುರ ಶೇ. 63.65, ವಾರ್ಡ್‌ ನಂ.17ಆಶ್ರಯ ಕಾಲೋನಿ ಚಂದಾಪುರ ಶೇ. 67.77, ವಾರ್ಡ್‌ ನಂ.18 ದರ್ಗಾ ಏರಿಯಾ ಚಂದಾಪುರ ಶೇ. 68.12, ವಾರ್ಡ್‌ ನಂ. 19 ಮದೀನಾ ಮಸೀದ ಏರಿಯಾ ಚಂದಾಪುರ ಶೇ. 72.50, ವಾರ್ಡ್‌ ನಂ. 20 ಭವಾನಿ ಮಂದಿರ ಚಂದಾಪುರ ಶೇ. 75.99, ವಾರ್ಡ್‌ ನಂ.21 ಗಂಗು ನಾಯಕ ತಾಂಡಾ ಚಂದಾಪುರ ಶೇ. 81.85, ವಾರ್ಡ್‌ ನಂ.22 ಗಣೇಶ ಮಂದಿರ ಚಂದಾಪುರ ಶೇ. 67.49, ವಾರ್ಡ್‌ ನಂ.23 ಶ್ರೀರಾಮ ನಗರ ಚಂದಾಪುರ ಶೇ. 63.43 ಮತದಾನವಾಗಿದೆ. 

Trending videos

Back to Top