CONNECT WITH US  

ಸೂಲಹಳ್ಳಿ ಬಲಭೀಮೇಶ್ವರ ಜಾತ್ರೆ: ಪಲ್ಲಕ್ಕಿ ಉತ್ಸವ

ವಾಡಿ: ಸೂಲಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಬಲಭೀಮೇಶ್ವರ ಜಾತ್ರೆ ಸಂಭ್ರಮದಿಂದ ನಡೆಯಿತು. ಭಕ್ತರು
ಹಳ್ಳದ ನೀರಿಗೆ ನೈವೇದ್ಯ ಹರಿಬಿಟ್ಟರು. ನಂತರ ನಡೆದ ಅನ್ನ ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿದರು.

ಗ್ರಾಮದ ಅಗಸಿ ಬಾಗಿಲಿಂದ ವಾದ್ಯ-ಮೇಳಗಳೊಂದಿಗೆ ಹೊರಟ ಪಲ್ಲಕ್ಕಿ ಮೆರವಣಿಗೆ ನೂರಾರು ಜನ ಭಕ್ತರ ಎರಡು
ಕಿ.ಮೀ ಪಾದಯಾತ್ರೆಗೆ ಸಾಕ್ಷಿಯಾಯಿತು. ದೇವಸ್ಥಾನಕ್ಕೆ ಪಲ್ಲಕ್ಕಿ ಪ್ರದಕ್ಷಿಣೆ ಹಾಕಿದ ಬಳಿಕ ವಿಶೇಷ ಪೂಜೆ ನಡೆದವು.

ದೇವಸ್ಥಾನಕ್ಕೆ ಹೊಂದಿಕೊಂಡೇ ಹರಿಯುವ ಹಳ್ಳದತ್ತ ಜಮಾಯಿಸಿದ್ದ ಮಹಿಳಾ ಭಕ್ತರು, ತಂದಿದ್ದ ನೈವೇದ್ಯವನ್ನು
ಹಳ್ಳದ ನೀರಿಗೆ ಬಾಗೀನ ರೂಪದಲ್ಲಿ ಹರಿಬಿಟ್ಟು ಭಕ್ತಿ ಸಮರ್ಪಿಸಿದರು. ಸಕಾಲಕ್ಕೆ ಮಳೆ ಬೆಳೆಯಾಗಿ ರೈತರು ಸಂತಸದಿಂದ ಇರಲಿ ಎಂದು ಪ್ರಾರ್ಥಿಸಿದರು.
 
ನೂರು ಮನೆಯ ಅಡುಗೆ ಭಕ್ತರಿಗೆ ಪ್ರಸಾದ: ಜಾತ್ರೆಗೆಂದು ಮನೆಯಿಂದ ತರಲಾಗಿದ್ದ ನೂರಾರು ಜನ ಭಕ್ತರ ರೊಟ್ಟಿ ಬುತ್ತಿ ಹಾಗೂ ನೈವೇದ್ಯವೇ ಇಲ್ಲಿ ಪ್ರಸಾದವಾಗಿ ಬಡಿಸಿದ್ದು ವಿಶೇಷವಾಗಿತ್ತು. ಅರಿಶಿಣ ಮಿಶ್ರಣದ ಹಳದಿ ರೊಟ್ಟಿಗಳು, ಬಿಳಿ ಜೋಳದ ರೊಟ್ಟಿ, ವಿವಿಧ ಬಗೆಯ ಅನ್ನ, ವಿವಿಧ ರೀತಿಯ ತರಕಾರಿ ಪಲ್ಲೆ, ಖಾರದ ಹಿಂಡಿ, ಗೋಧಿಯಿಂದ ಸಿದ್ದಪಡಿಸಲಾದ ಸಿಹಿ ಸಜ್ಜಕ, ರೊಟ್ಟಿ ಮತ್ತು ಬೆಲ್ಲದಿಂದ ಮಾಡಿದ ಮಾಲ್ದಿ ಸ್ವೀಟ್‌, ಹೀಗೆ ಭಕ್ತರೆಲ್ಲರ ಅಡುಗೆಯನ್ನು ಮಿಶ್ರಣ ಮಾಡಿ ದಾಸೋಹ ಮಾಡಿದ್ದು ಜಾತ್ರೆಯಲ್ಲಿನ ವಿಶೇಷವಾಗಿತ್ತು. 

ದೊಡ್ಡಯ್ಯಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ಅಶೋಕ ಸಗರ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮಲ್ಲಿನಾಥ ಇಂದೂರ, ಕಮರವಾಡಿ ಗ್ರಾಪಂ ಅಧ್ಯಕ್ಷ ಮರಿಗೌಡ ಪಾಟೀಲ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ಮುಖಂಡರಾದ ಸಿದ್ದಣ್ಣಗೌಡ ಪೊಲೀಸ್‌ ಪಾಟೀಲ, ಪಂಡಿತಪ್ಪಗೌಡ ಮಾಲಿ ಪಾಟೀಲ, ಶ್ರೀಮಂತ ಸಾಹು, ಶಿವರಾಜ ಪಾಟೀಲ, ಭೀಮಶಾ ಜಿರೊಳ್ಳಿ, ರವಿ ನಾಯಕ, ಮಲ್ಲಿನಾಥ ಸಾಹು, ಹಣಮಂತರಾಯ ನಾಯಕೋಡಿ, ಬಸವರಾಜ ಹಡಪದ, ಶರಣಪ್ಪ ಸಿರೂರ, ಹಣಮಂತ ಮಡಿವಾಳ, ವೀರಣ್ಣ ರಾವೂರಕರ ಹಾಗೂ ದೌಲತರಾವ ಚಿತ್ತಾಪುರಕರ ಅವರನ್ನು ಧರ್ಮ ಸಭೆಯಲ್ಲಿ ಸನ್ಮಾನಿಸಲಾಯಿತು.

Trending videos

Back to Top