CONNECT WITH US  

ರಫೆಲ್‌ ಯುದ್ಧ ವಿಮಾನ ಖರೀದಿ ಅವ್ಯವಹಾರ ವಿರುದ್ಧ ಹೋರಾಟ

ಕಲಬುರಗಿ: ಕೇಂದ್ರ ಸರ್ಕಾರವು ರಫೆಲ್‌ ಯುದ್ಧ ವಿಮಾನ ಖರೀದಿಯಲ್ಲಿ 41 ಸಾವಿರ ಕೋಟಿ ರೂ.ಗಳನ್ನು ಬೊಕ್ಕಸಕ್ಕೆ ಹಾನಿ ಮಾಡಿದ್ದಲ್ಲದೇ, ಅವ್ಯವಹಾರ ಎಸಗಿದೆ. ಅಲ್ಲದೆ ಇತರೆ ಜನವಿರೋಧಿ ನೀತಿಗಳನ್ನು ಹಮ್ಮಿಕೊಂಡಿದೆ.

ಇವೆಲ್ಲವುಗಳ ವಿರುದ್ದ ಯುವ ಕಾಂಗ್ರೆಸ್‌ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಕಾಂಗ್ರೆಸ್‌ ಯುವ ಘಟಕದ ಪದಾಧಿಕಾರಿಗಳು ತಿಳಿಸಿದರು. ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಯುವ ಘಟಕದ ಸಭೆಯಲ್ಲಿ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ನಡೆದ ಅವ್ಯವಹಾರ ಕುರಿತಾದ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದ ಪದಾಧಿಕಾರಿಗಳು ಇದೇ ವೇಳೆ ಹೋರಾಟದ ನಿರ್ಧಾರವನ್ನು ಪ್ರಕಟಿಸಿದರು.

ಕೇಂದ್ರ ರಕ್ಷಣಾ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ರಫೆಲ್‌ ವಿಮಾನ ಖರೀದಿ ಮಾಡಲಾಗಿದೆ. ಈ ಕುರಿತು ಸಂಸತ್ತು ಹಾಗೂ ರಾಜ್ಯಸಭೆಯಲ್ಲೂ ವಿಪಕ್ಷ ಕಾಂಗ್ರೆಸ್‌ ಪ್ರಶ್ನೆ ಕೇಳಿದ್ದಲ್ಲದೇ ವಾಗ್ಧಾಳಿ ನಡೆಸಿದ್ದರೂ ಪ್ರಧಾನಿಯಾಗಲಿ, ರಕ್ಷಣಾ ಸಚಿವರಾಗಲಿ ಬಾಯಿ ಬಿಟ್ಟಿಲ್ಲ. ಈ ವಿಷಯವನ್ನು ಜನತೆ ಮುಂದಿಡಲು ಯುವ ಕಾಂಗ್ರೆಸ್‌ ಹೋರಾಟಕ್ಕೆ ಇಳಿದಿದೆ ಎಂದು ಯುವ ಘಟಕದ ಜಿಲ್ಲಾಧ್ಯಕ್ಷ ಈರಣ್ಣ ಝಳಕಿ ತಿಳಿಸಿದರು. 

ಹಿಂದಿನ ಸರ್ಕಾರ 126 ವಿಮಾನಗಳನ್ನು ಖರೀದಿಸಲು ನಿರ್ಧರಿಸಿತ್ತು. ಆದರೆ ಈಗಿನ ಕೇಂದ್ರ ಸರ್ಕಾರ ಏಕಾಏಕಿ ರಕ್ಷಣಾ ಇಲಾಖೆಯ ಎಲ್ಲ ನಿಯಮ ಉಲ್ಲಂಘಿಸಿ ದುಬಾರಿ ದರದಲ್ಲಿ ಒಂದೊಂದು ವಿಮಾನಕ್ಕೆ 529 ಕೋ.ರೂ.
ನೀಡಿ 36 ವಿಮಾನಗಳನ್ನು ಪಡೆದಿರುವುದು ಹಾಗೂ ಯಾವುದೇ ಅನುಭವ ಇಲ್ಲದ ಅನೀಲ ಅಂಬಾನಿಯ ರಿಲಾಯನ್ಸ್‌ ಕಂಪನಿಗೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದೊಂದು ರಕ್ಷಣಾ ಇಲಾಖೆಯಲ್ಲಿ ದೊಡ್ಡ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿದರು.

ಎಲ್ಲ ತಾಲೂಕು ಕೇಂದ್ರಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಈ ಕುರಿತು ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಮುಖಂಡರಾದ ಡಾ| ಕಿರಣ ದೇಶಮುಖ, ಸಂತೋಷ ದಣ್ಣೂರ, ಮಜಹರ್‌ ಅಲ್ಲಂಖಾನ್‌, ಪ್ರವೀಣ ಪಾಟೀಲ ಹರವಾಳ, ಪ್ರಶಾಂತ ಮಾಲಿಪಾಟೀಲ, ಚೇತನ ಸೋಮಶೇಖರ ಗೋನಾಯಕ, ಫಾರುಕ್‌ ಮನಿಯಾರ್‌, ವಿಶಾಲ ಪಾಟೀಲ, ಶಿವಾನಂದ ಹೊನಗುಂಟಿ, ಶರಣು ವಾರದ ಮುಂತಾದವರಿದ್ದರು.

Trending videos

Back to Top