CONNECT WITH US  

ಕೈ ಮೇಲುಗೈ-ಬಿಜೆಪಿ ಹೆಚ್ಚಳ-ಮೇಲೆಳದ ದಳ

ಕಲಬುರಗಿ: ಜಿಲ್ಲೆಯ ಆರು ಪುರಸಭೆ ಹಾಗೂ ಶಹಾಬಾದ ನಗರಸಭೆ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಗಳಿಸಿದೆ ಅಲ್ಲದೇ ನಗರಸಭೆ ಹಾಗೂ ಅಫಜಲಪುರ, ಚಿಂಚೋಳಿ ಹಾಗೂ ಚಿತ್ತಾಪುರದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.

ಬಿಜೆಪಿ ಜೇವರ್ಗಿ ಹಾಗೂ ಸೇಡಂ ಪುರಸಭೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದರೆ ಆಳಂದದಲ್ಲೂ ಸಹ ಅಧಿಕಾರಕ್ಕೇರುವುದು ಖಚಿತವಾಗಿದೆ. ಒಟ್ಟಾರೆ ಆರು ಪುರಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ತಲಾ ಮೂರರಲ್ಲಿ ಅಧಿಕಾರಕ್ಕೆ ಬಂದಂತಾಗಿದೆ. ಜೆಡಿಎಸ್‌ ಅಧಿಕಾರಕ್ಕೆ ಬರುವುದು ಒತ್ತಟ್ಟಿಗಿರಲಿ, ಎಲ್ಲೂ ಕಿಂಗ್‌ ಮೇಕರ್‌ದ ಸ್ಥಾನಗಳನ್ನು ಸಹ ಗಳಿಸಲು ಶಕ್ತವಾಗಿಲ್ಲ. ಜಿಲ್ಲೆಯ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯ ಪುರಸಭೆಯಲ್ಲಿ ಪ್ರಭುತ್ವ ಸಾಧಿಸಿದ್ದರೆ, ಜೇವರ್ಗಿ ಪುರಸಭೆ ಹಾಗೂ ಶಹಾಬಾದ ನಗರಸಭೆಯಲ್ಲಿ ಹಾಲಿ ಶಾಸಕರು ತೀವ್ರ ಹಿನ್ನೆಡೆ ಅನುಭವಿಸಿದ್ದಾರೆ. ಜೇವರ್ಗಿಯಲ್ಲಿ ಕಾಂಗ್ರೆಸ್‌ ಕೇವಲ ಮೂರು ಹಾಗೂ ಶಹಾಬಾದನಲ್ಲಿ ಬಿಜೆಪಿ ಕೇವಲ 5 ಸ್ಥಾನಗಳಲ್ಲಿ ಜಯಗಳಿಸಿದೆ. ಹೀಗಾಗಿ ಶಾಸಕರಾದ ಡಾ| ಅಜಯಸಿಂಗ್‌ ಹಾಗೂ ಬಸವರಾಜ ಮತ್ತಿಮೂಡ ಅವರಿಗೆ ತೀವ್ರ ಹಿನ್ನೆಡೆಯಾಗಿದೆ. ಟಿಕೆಟ್‌ ಹಂಚಿಕೆ ಸಮರ್ಪಕವಾಗಿ ಹಂಚದಿರುವುದೇ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಜಿಲ್ಲೆಯ ಒಟ್ಟ 168 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 90 ಮತ್ತು ಬಿಜೆಪಿ 63 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್‌ ಕೇವಲ 6 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಬಿಎಸ್‌ಪಿ ಒಂದರಲ್ಲಿ ಗೆದ್ದರೆ ಪಕ್ಷೇತರರೇ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
 
ಕಳೆದ 2013ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟಾರೆ 158 ಸ್ಥಾನಗಳಲ್ಲಿ ಕಾಂಗ್ರೆಸ್‌ 62 ಸ್ಥಾನಗಳು, ಬಿಜೆಪಿ 21, ಕೆಜೆಪಿ 42, ಜೆಡಿಎಸ್‌ 26 ಹಾಗೂ ಪಕ್ಷೇತರರು 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಕೆಜೆಪಿ ಹಾಗೂ ಬಿಜೆಪಿಯ ಎರಡೂ ಸ್ಥಾನಗಳನ್ನು ಕೂಡಿಸಿದರೆ 63 ಆಗುತ್ತದೆ. ಈ ಸಲದ ಚುನಾವಣೆಯಲ್ಲಿ ಬರೊಬ್ಬರಿ ಬಿಜೆಪಿ 63 ಸ್ಥಾನ ಪಡೆದಿದೆ. ಕಳೆದ ಸಲ ಜೆಡಿಎಸ್‌ ಆಳಂದಲ್ಲಿ 10, ಜೇವರ್ಗಿ ಹಾಗೂ ಸೇಡಂನಲ್ಲಿ ಜೆಡಿಎಸ್‌ ತಲಾ 5 ಹಾಗೂ ಜೆಡಿಎಸ್‌ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

ಅದೇ ರೀತಿ ಆಳಂದದಲ್ಲಿ 13, ಸೇಡಂ ಹಾಗೂ ಜೇವರ್ಗಿಯಲ್ಲಿ ತಲಾ 5 ಸ್ಥಾನಗಳು ಹಾಗೂ ಶಹಾಬಾದ ನಗರಸಭೆಯಲ್ಲಿ ಮೂರು ಸ್ಥಾನಗಳಲ್ಲಿ ಜಯಗಳಿಸಿತ್ತು. ಅದೇ ರೀತಿ ಕೆಜೆಪಿ ಅಫಜಲಪುರದಲ್ಲಿ 14, ಆಳಂದದಲ್ಲಿ 8, ಚಿಂಚೋಳಿಯಲ್ಲಿ 6, ಚಿತ್ತಾಪುರದಲ್ಲಿ 5, ಸೇಡಂದಲ್ಲಿ 1, ಜೇವರ್ಗಿಯಲ್ಲಿ 4 ಹಾಗೂ ಶಹಾಬಾದ ನಗರಸಭೆಯಲ್ಲಿ 4 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಲೋಕಸಭೆಯಲ್ಲಿನ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು. ಬಿಜೆಪಿಯಿಂದ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಇತರರು ಸಭೆ ನಡೆಸಿ ಚರ್ಚೆ ನಡೆಸಿದ್ದರು. ಜೆಡಿಎಸ್‌ ಪರವಾರಿ ಯಾರೂ ಪ್ರಚಾರ ನಡೆಸಿರಲಿಲ್ಲ.

Trending videos

Back to Top